ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ: ಕಿವಿ, ಪಪ್ಪಾಯಿ ಹಣ್ಣು ಖರೀದಿಗೆ ಮುಗಿಬಿದ್ದ ಜನ, ವೈದ್ಯರು ಸಲಹೆ ಏನು
Jul 12, 2024 02:08 PM IST
ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ: ಕಿವಿ, ಪಪ್ಪಾಯಿ ಹಣ್ಣು ಖರೀದಿಗೆ ಮುಗಿಬಿದ್ದ ಜನ, ವೈದ್ಯರ ಸಲಹೆ ಏನು?
- ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಕಿವಿ ಹಾಗೂ ಪಪ್ಪಾಯಿ ಹಣ್ಣಿನ ಖರೀದಿಗೆ ಮುಗಿಬಿದ್ದಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಈ ಹಣ್ಣುಗಳ ಬೆಲೆಯಲ್ಲೂ ದಿಢೀರ್ ಏರಿಕೆಯಾಗಿದೆ. ಇನ್ನು ಈ ಹಣ್ಣುಗಳ ಸೇವನೆಯಿಂದ ನಿಜಕ್ಕೂ ಡೆಂಗ್ಯೂ ಕಡಿಮೆಯಾಗುತ್ತಾ, ಈ ಬಗ್ಗೆ ವೈದ್ಯರು ಏಳು ಹೇಳುತ್ತಾರೆ? ಇಲ್ಲಿದೆ ಮಾಹಿತಿ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Dengue Cases in Bangalore) ಡೆಂಗ್ಯೂ ಹಾವಳಿ ಹೆಚ್ಚುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗ ಇದಾಗಿದ್ದು, ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳುವುದರಿಂದ ಜನತೆ ಆದಷ್ಟು ಜಾಗರೂಕತೆಯಿಂದ ಇರಬೇಕು. ಈ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪಪ್ಪಾಯಿ (Papaya) ಮತ್ತು ಕಿವಿ ಹಣ್ಣಿಗೆ (Kiwi Fruit) ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಡೆಂಗ್ಯ ರೋಗ ಲಕ್ಷಣಗಳನ್ನು ಎದುರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಕಿವಿ ಹಾಗೂ ಪಪ್ಪಾಯಿ ಹಣ್ಣಿಗಿದೆ. ಹೀಗಾಗಿ ಈ ಹಣ್ಣುಗಳ ಬೇಡಿಕೆ ಹೆಚ್ಚುತ್ತಿದ್ದು, ಬೆಲೆಯಲ್ಲೂ ಹೆಚ್ಚಳವಾಗಿದೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಪಾಲಿಫಿನಾಲ್ ಮತ್ತು ಆಂಟಿ ಆಕ್ಸಿಡೆಂಟ್‍ಗಳಿದ್ದು, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಜನರ ನಂಬಿಕೆ. ಹೀಗಾಗಿ ಈ ಹಣ್ಣುಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ.
ಕಿವಿ ಹಣ್ಣು ಕೆಜಿಗೆ ರೂ. 140 ರಿಂದ 300 ರೂ. ವರೆಗೆ ಮಾರಾಟವಾಗುತ್ತಿದ್ದರೆ, ಪಪ್ಪಾಯಿ ಕೆಜಿಗೆ ರೂ. 33 ರಿಂದ 50 ರೂ. ಗಳವರೆಗೆ ಮಾರಾಟವಾಗುತ್ತಿದೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಿವಿ ಹಣ್ಣಿನ ಬೆಲೆ ಪ್ರತಿ ಕೆಜಿಗೆ ರೂ. 240 ರಿಂದ ರೂ. 380ಕ್ಕೆ ಏರಿಕೆಯಾಗಿದ್ದರೆ, ಪಪ್ಪಾಯಿ ಬೆಲೆಯಲ್ಲಿ ಸಾಮಾನ್ಯ ದರಕ್ಕಿಂತ 5 ರೂಪಾಯಿ ಹೆಚ್ಚಾಗಿದೆ. ಕೆಜಿಗೆ 40 ರೂ.ಗಳಿದ್ದ ಪಪ್ಪಾಯಿ ಹಣ್ಣನ್ನು ಇದೀಗ 45 ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಹಣ್ಣಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ‘ದಿ ಹಿಂದೂ’ ವರದಿ ಉಲ್ಲೇಖಿಸಿದೆ.
ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿಯಲ್ಲಿ (HOPCOMS), ಪಪ್ಪಾಯಿ ಹಣ್ಣು ಕೆಜಿಗೆ ರೂ. 33 ರಷ್ಟಿದ್ದರೆ, ಕಿವಿ ಕೆಜಿಗೆ 140 ರೂ. ಗಳಿತ್ತು. ಸಾಮಾನ್ಯವಾಗಿ ಕಿವಿ ಹಣ್ಣಿಗೆ ಬಾಳೆಹಣ್ಣು ಅಥವಾ ಸೇಬಿಗೆ ಇರುವ ಬೇಡಿಕೆಯಿಲ್ಲ. ಆದರೆ, ಕಳೆದ ಎರಡು ವಾರಗಳಿಂದ ಕಿವಿ ಹಣ್ಣಿನ ಖರೀದಿ ಹೆಚ್ಚಾಗುತ್ತಿದೆ. ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ, ಕಿವಿ ಹಣ್ಣಿನ ಬೆಲೆ ಕೆಜಿಗೆ ರೂ. 150 ರಷ್ಟಿದೆ. ಆದರೆ ಸ್ಟಾಕ್ ಇಲ್ಲ.
ಪಪ್ಪಾಯಿ, ಕಿವಿ ಹಣ್ಣಿನಿಂದ ಡೆಂಗ್ಯೂ ಕಡಿಮೆಯಾಗುತ್ತೆ ಅನ್ನೋ ನಂಬಿಕೆ ಮುನ್ನ ಇರಲಿ ಎಚ್ಚರ
ಪಪ್ಪಾಯಿ ಮರದ ಎಲೆಯ ರಸವನ್ನು ಸೇವಿಸುವುದರಿಂದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ ಹಾಗೂ ಡೆಂಗ್ಯೂ ವಿರುದ್ಧ ಹೋರಾಡಲು ಸಹಾಯಕವಾಗಿದೆ ಎಂದು ಹಲವರು ನಂಬಿದ್ದಾರೆ. ಡೆಂಗ್ಯೂ ಸೋಂಕುಗೆ ಸರಿಯಾದ ಚಿಕಿತ್ಸೆ ಮಾಡಬೇಕು. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ತುರ್ತು ಚಿಕಿತ್ಸಕ, ಹಿರಿಯ ಸಲಹೆಗಾರ ಹಾಗೂ ವಿಭಾಗದ ಮುಖ್ಯಸ್ಥ ಡಾ.ನಿಶಾಂತ್ ಹಿರೇಮಠ ಹೇಳಿದ್ದಾರೆ.
ಡೆಂಗ್ಯೂ ರೋಗಿಗಳು ಪಪ್ಪಾಯಿಯನ್ನು ಅತಿಯಾಗಿ ಸೇವಿಸುವ ಬದಲು ಪರಿಣಾಮಕಾರಿ ಚಿಕಿತ್ಸೆ ಕೈಗೊಳ್ಳಬೇಕು. ಕೂಡಲೇ ಆಸ್ಪತ್ರೆಗೆ ದಾಖಲಾಗಿ ಸರಿಯಾದ ಚಿಕಿತ್ಸೆ ಪಡೆಯಬೇಕು. ದೇಹವನ್ನು ಸಮರ್ಪಕವಾಗಿ ಹೈಡ್ರೀಕರಿಸಬೇಕು. ಡ್ರ್ಯಾಗನ್ ಹಣ್ಣು ಡೆಂಗ್ಯೂ ವಿರುದ್ಧ ಹೋರಾಡುತ್ತದೆ ಅನ್ನೋ ಗಾಳಿಮಾತನ್ನು ತಳ್ಳಿಹಾಕಿದ ವೈದ್ಯರು, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ತಪ್ಪು ಮಾಹಿತಿಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಅತಿಯಾಗಿ ಪಪ್ಪಾಯಿ ಹಣ್ಣು ಸೇವಿಸುವುದಕ್ಕಿಂತ ಸುತ್ತಮುತ್ತ ಪರಿಸರದ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಳೆ ಬಂದು ನಿಂತ ಮೇಲೆ, ಅಲ್ಲಲ್ಲಿ ಸಂಗ್ರಹವಾಗಿರುವ ಕೊಳಕು ನೀರು, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವತ್ತ ಜನರು ಗಮನಹರಿಸಬೇಕು ಎಂದು ಡಾ. ನಿಶಾಂತ್ ಹಿರೀಮಠ ಒತ್ತಿ ಹೇಳಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)