ಡೆಂಗ್ಯೂ ಪರೀಕ್ಷೆಗೆ ಅಧಿಕ ಶುಲ್ಕ, ಬೆಂಗಳೂರಿನ 22 ಪ್ರಯೋಗಾಲಯಗಳಿಗೆ ನೋಟಿಸ್; ಈ ಮೊಬೈಲ್ ಸಂಖ್ಯೆಗೆ ದೂರು ಸಲ್ಲಿಸಲು ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಡೆಂಗ್ಯೂ ಪರೀಕ್ಷೆಗೆ ಅಧಿಕ ಶುಲ್ಕ, ಬೆಂಗಳೂರಿನ 22 ಪ್ರಯೋಗಾಲಯಗಳಿಗೆ ನೋಟಿಸ್; ಈ ಮೊಬೈಲ್ ಸಂಖ್ಯೆಗೆ ದೂರು ಸಲ್ಲಿಸಲು ಸೂಚನೆ

ಡೆಂಗ್ಯೂ ಪರೀಕ್ಷೆಗೆ ಅಧಿಕ ಶುಲ್ಕ, ಬೆಂಗಳೂರಿನ 22 ಪ್ರಯೋಗಾಲಯಗಳಿಗೆ ನೋಟಿಸ್; ಈ ಮೊಬೈಲ್ ಸಂಖ್ಯೆಗೆ ದೂರು ಸಲ್ಲಿಸಲು ಸೂಚನೆ

ಎಲಿಸಾ ಎನ್ಎಸ್ 1 ಪರೀಕ್ಷೆಗೆ 300 ರೂಪಾಯಿ, ಎಲಿಸಾ ಐಜಿಎಂ ಪರೀಕ್ಷೆಗೆ 300 ರೂಪಾಯಿ ನಿಗದಿಪಡಿಸಲಾಗಿದ್ದರೆ ರ‍್ಯಾಪಿಡ್ ಕಾರ್ಡ್ ಪರೀಕ್ಷೆಗೆ ರೂಪಾಯಿ 250 ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೂ ಕೆಲವು ಲ್ಯಾಬ್‌ಗಳು ದುಬಾರಿ ಶುಲ್ಕ ಪಡೆಯುತ್ತಿರುವ ಬಗ್ಗೆ ದೂರಗಳು ಕೇಳಿ ಬಂದಿವೆ. (ವರದಿ: ಎಚ್ ಮಾರುತಿ)

ಡೆಂಗ್ಯೂ ಪರೀಕ್ಷೆಗೆ ಅಧಿಕ ಶುಲ್ಕ, ಬೆಂಗಳೂರಿನ 22 ಪ್ರಯೋಗಾಲಯಗಳಿಗೆ ನೋಟಿಸ್; ಈ ಮೊಬೈಲ್ ಸಂಖ್ಯೆಗೆ ದೂರು ಸಲ್ಲಿಸಲು ಸೂಚನೆ
ಡೆಂಗ್ಯೂ ಪರೀಕ್ಷೆಗೆ ಅಧಿಕ ಶುಲ್ಕ, ಬೆಂಗಳೂರಿನ 22 ಪ್ರಯೋಗಾಲಯಗಳಿಗೆ ನೋಟಿಸ್; ಈ ಮೊಬೈಲ್ ಸಂಖ್ಯೆಗೆ ದೂರು ಸಲ್ಲಿಸಲು ಸೂಚನೆ

ಬೆಂಗಳೂರು: ಡೆಂಗಿ ಪರೀಕ್ಷೆಗೆ (Dengue Test) ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುತ್ತಿದ್ದ ಬೆಂಗಳೂರಿನ 22 ಪ್ರಯೋಗಾಲಯಗಳಿಗೆ (Bangalore Laboratories) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಆರೋಗ್ಯಾಧಿಕಾರಿಗಳ ತಂಡ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿನ 31 ಖಾಸಗಿ ಪ್ರಯೋಗಾಲಯಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಹೆಚ್ಚಿನ ದರ ವಿಧಿಸಿರುವುದು ಪತ್ತೆಯಾಗಿದೆ. ಪ್ರಯೋಗಾಲಯಗಳ ದಾಖಲೆಗಳನ್ನು ಪರಿಶೀಲಿಸಿದಾಗ ಹಲವು ಸಂಸ್ಥೆಗಳು ಅಧಿಕ ಶುಲ್ಕ ಪಡೆಯುತ್ತಿರುವುದು ದೃಢಪಟ್ಟಿದೆ. ಈ ರೀತಿ ಅಧಿಕ ಶುಲ್ಕ ಪಡೆದ ಪ್ರಯೋಗಾಲಯಗಳಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಕೆಪಿಎಂಇ ಕಾಯ್ದೆಯಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

ಖಾಸಗಿ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳು ಡೆಂಗಿ ಪರೀಕ್ಷೆಗೆ ಅಧಿಕ ಹಣ ವಸೂಲಿ ಮಾಡುತ್ತಿವೆ ಎಂದು ಸಾರ್ವಜನಿಕರು ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಈ ಪರೀಕ್ಷೆಗೆ ಸರ್ಕಾರವು ದರ ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಎಲಿಸಾ ಎನ್ಎಸ್ 1 ಪರೀಕ್ಷೆಗೆ 300 ರೂಪಾಯಿ, ಎಲಿಸಾ ಐಜಿಎಂ ಪರೀಕ್ಷೆಗೆ 300 ರೂಪಾಯಿ ನಿಗದಿಪಡಿಸಲಾಗಿದ್ದರೆ ರ‍್ಯಾಪಿಡ್ ಕಾರ್ಡ್ ಪರೀಕ್ಷೆಗೆ ರೂಪಾಯಿ 250 ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೂ ಕೆಲವು ಸಂಸ್ಥೆಗಳು ದುಬಾರಿ ಶುಲ್ಕ ಪಡೆಯುತ್ತಿವೆ (Overcharging for Dengue Test) ಎಂಬ ದೂರುಗಳು ಕೇಳಿ ಬಂದಿದ್ದವು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಲಾದ ಸಂಸ್ಥೆಗಳು

  • ಜೆ. ಪಿ.ನಗರದ ಕ್ರಿಯಾ ಆಸ್ಪತ್ರೆ, ಎಲೆಕ್ಟ್ರಾನಿಕ್
  • ಸಿಟಿಯ ಸ್ಪಿಂಗ್ ಲೈಫ್ ಹೆಲ್ತ್‌ ಕೇರ್
  • ಇ-ಸಿಟಿ ಆಸ್ಪತ್ರೆ
  • ಜಯನಗರದ ಬಯೋ ಲೈನ್
  • ಲ್ಯಾಬೊರೇಟರೀಸ್, ಆಂಕ್ವೆಸ್ಟ್, ಕಮ್ಮನಹಳ್ಳಿಯ
  • ಪ್ರಣವ್ ಡಯಾಸ್ಪೋಸ್ಟಿಕ್ಸ್
  • ಬಾಗಲೂರಿನ ಬಾಲಾಜಿ ಲ್ಯಾಬ್ ಡಯಾಗೋಸ್ಟಿಕ್ಸ್
  • ಎಸ್ಎಲ್‌ವಿ ಡಯಾಗೋಸ್ಟಿಕ್ಸ್
  • ನಾಗವಾರ ಮುಖ್ಯ ರಸ್ತೆಯಲ್ಲಿನ ಆಲ್ಟಿಸ್ ಆಸ್ಪತ್ರೆ,
  • ಕಾರ್ಟುಲಸ್ ಡಯಾಗೋಸ್ಟಿಕ್ಸ್
  • ಕಮ್ಮನಹಳ್ಳಿಯ ಈಶಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಯಲಹಂಕದ ಪ್ರೈಮ್ ಡಯಾಸ್ಪೋಸ್ಟಿಕ್ಸ್, ಆಸ್ಟರ್ ಕ್ಲಿನಿಕ್, ಸಿನ್ಮಾ ಡಯಾಗೋಸ್ಟಿಕ್ಸ್, ದೊಡ್ಡಬೊಮ್ಮಸಂದ್ರದ ಶ್ರೀ ರಾಘವ್ ಕ್ಲಿನಿಕ್, ವೈಟ್‌ಫೀಲ್ಡ್‌ನ ಡಾ. ಲಾಲ್ ಪ್ಯಾಥ್ ಲ್ಯಾಬ್, ಹೊರಮಾವಿನ ಟ್ರಸ್ಟ್ ಇನ್.ಆಸ್ಪತ್ರೆ, ಎಸ್‌ಜೆಪಿ ಆಸ್ಪತ್ರೆ, ಮೆಡಾಲ್ ಕ್ಲೂಮ್ಯಾಕ್ಸ್.ಡಯಾಗೋಸ್ಟಿಕ್ಸ್, ಹೊಸೂರು ರಸ್ತೆಯ ಟಿಕೆಎಸ್ ಡಯಾಸ್ಟೋಸ್ಟಿಕ್ ಸೆಂಟರ್, ವಿನೋದ್ ಡಯಾಗೋಸ್ಟಿಕ್ಸ್ ಮತ್ತು ಹೆಬ್ಬಗೋಡಿಯ ಮಹೇಶ ಹೆಲ್ತ್ ಕೇರ್ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಹೆಚ್ಚುವರಿ ದರ ಪಡೆದರೆ ದೂರು ಸಲ್ಲಿಸಲು ಕೋರಿಕೆ

ಡೆಂಗಿ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಶುಲ್ಕವನ್ನು ಪಡೆದರೆ ಅಂತಹ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಬೆಂಗಳೂರು ನಗರ ಜಿಲ್ಲೆ ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ ಹಳೆ ಮದ್ರಾಸ್ ರಸ್ತೆ ಇಂದಿರಾನಗರ ಬೆಂಗಳೂರು-38 ಈ ವಿಳಾಸಕ್ಕೆ ದೂರು ಸಲ್ಲಿಸಬಹುದಾಗಿದೆ. ಇ-ಮೇಲ್ ವಿಳಾಸ dhobangaloreurban@gmail.com ಅಥವಾ ಮೊ. 9449843037 ಕ್ಕೆ ದೂರು ಸಲ್ಲಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಗುರುವಾರ 381 ಡೆಂಗಿ ಪ್ರಕರಣ ಪತ್ತೆ

ರಾಜ್ಯದಲ್ಲಿ ಗುರುವಾರ (ಜುಲೈ 11) ಒಟ್ಟು 381 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯಾದ್ಯಂತ ಡೆಂಗಿ ಪ್ರಕರಣಗಳ ಪರೀಕ್ಷೆಯನ್ನು ಹೆಚ್ಚಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಡೆಂಗಿ ಪತ್ತೆಗಾಗಿ ಕಳೆದ 24 ಗಂಟೆಗಳಲ್ಲಿ 2,503 ಪರೀಕ್ಷೆಗಳನ್ನು ನಡೆಸಲಾಗಿತ್ತು. ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ ಡೆಂಗಿ ಪೀಡಿತರಾದವರಲ್ಲಿ ಒಂದು ವರ್ಷದೊಳಗಿನ ನಾಲ್ವರು, ಒಂದರಿಂದ 18 ವರ್ಷದೊಳಗಿನ 140 ಮಂದಿ ಇದ್ದಾರೆ. 237 ಮಂದಿ 18 ವರ್ಷ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 362 ಡೆಂಗಿ ಪೀಡಿತರು ಚಿಕಿತ್ಸೆ ಪಡಯುತ್ತಿದ್ದಾರೆ.

ಈ ವರ್ಷದಲ್ಲಿ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 8,221ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ಇದು ರಾಜ್ಯಾದ್ಯಂತ ಏಳು ಮಂದಿ ಮೃತಪಟ್ಟಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 481 ಪರೀಕ್ಷೆಗಳನ್ನು ನಡೆಸಲಾಗಿದ್ದು 171 ಮಂದಿಗೆ ಡೆಂಗಿ ದೃಢಪಟ್ಟಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2,463ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ವರದಿ: ಎಚ್ ಮಾರುತಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner