ಕಾರು ನಿಲ್ಲಿಸುವಷ್ಟು ಸ್ಥಳವಿದ್ರೆ 300 ರೂಪಾಯಿ ತೆರಿಗೆ, ಪಾರ್ಕಿಂಗ್, ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್‌ಗೂ ಟ್ಯಾಕ್ಸ್; ಬಿಬಿಎಂಪಿ ಹೊಸ ಕಾನೂನ
Feb 23, 2024 09:28 AM IST
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ-ಬಿಬಿಎಂಪಿ ನಗರದಲ್ಲಿ ಹೊಸದಾಗಿ ತೆರಿಗೆ ಕಾನೂನನ್ನು ಜಾರಿಗೆ ತಂದಿದೆ. ಇದರಿಂದ ಒಂದು ಕಾರುನಿಲ್ಲಿಸುವಷ್ಟು ಸ್ಥಳವಿದ್ದರೆ 300 ರೂಪಾಯಿ ತೆರಿಗೆ ಪಾವತಿಸಬೇಕು.
- BBMP Tax: ಪಾರ್ಕಿಂಗ್, ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್, ಹೆಲ್ತ್ ಕ್ಲಬ್ ಕ್ಯಾಂಟೀನ್‌ಗೂ ಬಿಬಿಎಂಪಿ ತೆರಿಗೆ ವಿಧಿಸಿದೆ. ಹೊಸ ಕಾನೂನಿನಲ್ಲಿ 1 ಕಾರು ನಿಲ್ಲಿಸುವಷ್ಟು ಸ್ಥಳವಿದ್ದರೂ 300 ರೂಪಾಯಿ ಟ್ಯಾಕ್ಸ್ ಕಟ್ಟಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಮಿತಿ ಹೆಚ್ಚಿಸಿರುವುದರಿಂದ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಅಭಿವೃದ್ದಿ ವೆಚ್ಚಕ್ಕೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಹೊಸ ಮಾರ್ಗ ಕಂಡುಕೊಂಡಿದೆ.
ಇದೀಗ ಬಿಬಿಎಂಪಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ವಾಹನ ನಿಲುಗಡೆ ಪ್ರದೇಶ, ಕ್ಲಬ್‌ಹೌಸ್, ಈಜುಕೊಳ, ಹೆಲ್ತ್ ಕ್ಲಬ್ ಮತ್ತು ಕ್ಯಾಂಟೀನ್‌ಗಳಿಗೆ ಶುಲ್ಕ ವಿಧಿಸಲು ತೀರ್ಮಾನಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳಿಗೆ ಮಾರ್ಗಸೂಚಿ ದರ ಹಾಗೂ ಕಟ್ಟಡ ವೆಚ್ಚದ ಆಧಾರದಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದೆ.
ಬಾಡಿಗೆದಾರರು ಪಾರ್ಕಿಂಗ್ ಶುಲ್ಕ ಕಟ್ಟಬೇಕಾ?
ವಸತಿ ಕಟ್ಟಡದಲ್ಲಿ ವಾಹನ ನಿಲುಗಡೆ ಪ್ರದೇಶವನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರೆ ವಸತಿ ಪ್ರದೇಶ ವರ್ಗದಲ್ಲಿ ಪ್ರತಿ ಚದರ ಅಡಿಗೆ ಮಾರ್ಗಸೂಚಿ ದರದಲ್ಲಿ ಶೇ 20ರಷ್ಟನ್ನು ಶುಲ್ಕವಾಗಿ ಪಾವತಿಸಬೇಕು. ಬಾಡಿಗೆದಾರರು ವಾಹನ ನಿಲುಗಡೆ ಪ್ರದೇಶ ಬಳಸಿಕೊಳ್ಳುತ್ತಿದ್ದರೆ, ವಾಣಿಜ್ಯ ಪ್ರದೇಶ ವರ್ಗದ ದರದಲ್ಲಿ ಶೇ 20ರಷ್ಟು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಈ ನೂತನ ತೆರಿಗೆ ಸಂಗ್ರವನ್ನು 2024–25ನೇ ಆರ್ಥಿಕ ವರ್ಷದಿಂದಲೇ ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾಗಳಾದ ವ್ಯವಸ್ಥಾಪಕರ ಕಚೇರಿ, ಕ್ಲಬ್‌ಹೌಸ್, ಈಜುಕೊಳ, ಹೆಲ್ತ್ ಕ್ಲಬ್, ಕ್ಯಾಂಟೀನ್‌ಗಳಿಗೆ ಮಾರ್ಗಸೂಚಿ ದರದಲ್ಲಿ ಪ್ರತಿ ಚದರ ಅಡಿಗೆ ಶೇ 50ರಷ್ಟು ತೆರಿಗೆ ವಿಧಿಸಲಾಗುತ್ತದೆ. ಉದ್ಯಾನ ಹಾಗೂ ಇತರೆ ತೆರೆದ ಪ್ರದೇಶಗಳಿಗೆ ಖಾಲಿ ಇರುವ ಪ್ರದೇಶಕ್ಕೂ ನಿಗದಿಪಡಿಸಿರುವ ಶುಲ್ಕ ತೆರಬೇಕಾಗಿದೆ.
ಪ್ರತಿ ಕಟ್ಟಡದಲ್ಲಿ ಒಂದು ಕಾರು ನಿಲ್ಲಿಸುವ ಸ್ಥಳವಿದ್ದರೆ 300 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರತಿ ಚದರ ಅಡಿಗೆ 2 ಸಾವಿರ ಮಾರ್ಗಸೂಚಿ ದರವಿರುವ ಪ್ರದೇಶವಿದ್ದು, ಅದನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರೆ ವರ್ಷಕ್ಕೆ 300 ರೂಪಾಯಿ ಪಾವತಿಸಬೇಕು. ವಾಹನ ನಿಲುಗಡೆ ಪ್ರದೇಶವನ್ನು ಬಾಡಿಗೆ ನೀಡಿದ್ದರೆ 1,500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಹೊರಾಂಗಣ ಕ್ರೀಡಾಂಗಣಗಳಿಗೆ ವಸತಿಯೇತರ ವರ್ಗದಲ್ಲಿ ಆಸ್ತಿ ದರದ ಶೇ 20ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ಬಹು ಅಂತಸ್ತಿನ ವಾಹನ ನಿಲುಗಡೆ ಕಟ್ಟಡಗಳಿಗೆ ಶೇ 50, ಗ್ರಾನೈಟ್, ಟಿಂಬರ್, ಇಟ್ಟಿಗೆ, ಟೈಲ್ಸ್‌ನಂತಹ ಸಾಮಗ್ರಿ ದಾಸ್ತಾನಿನ ಪ್ರದೇಶಗಳಿಗೆ ವಸತಿಯೇತರ ವರ್ಗದಲ್ಲಿ ಶೇ 50ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಹೊಸ ತೆರಿಗೆ ಪದ್ಧತಿ ಯಾವಾಗನಿಂದ ಜಾರಿಯಾಗುತ್ತದೆ?
ಗಾಲ್ಫ್ ಕೋರ್ಸ್, ರೇಸ್ ಕೋರ್ಸ್, ಬಸ್ ನಿಲ್ದಾಣಗಳಲ್ಲಿ ತೆರೆದ ಪ್ರದೇಶಗಳ ಹಾಗೂ ಇತರೆ ತೆರೆದ ವಾಣಿಜ್ಯ ಪ್ರದೇಶಗಳಿಗೆ ಖಾಲಿಯಿರುವ ವಾಣಿಜ್ಯ ಪ್ರದೇಶಗಳಿಗೆ ವಿಧಿಸಲಾಗುವ ತೆರಿಗೆಯನ್ನು ನಿಗದಿಪಡಿಸಲಾಗಿದೆ. ಮಾರ್ಗಸೂಚಿ ದರ ಹೆಚ್ಚಳವಾಗದೇ ಇರುವ ವರ್ಷದಲ್ಲಿ, ಆಸ್ತಿ ತೆರಿಗೆಯನ್ನು ಬಿಬಿಎಂಪಿ ಶೇ 5ರಷ್ಟು ಹೆಚ್ಚಿಸುತ್ತದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಶೇ 5ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ. ಇದು 2025ರ ಏಪ್ರಿಲ್‌ನಿಂದಲೇ ಜಾರಿಯಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಟ್ಟಡ ನಿರ್ಮಾಣ ವೆಚ್ಚವನ್ನೂ ಪ್ರತಿ ವರ್ಷ ಶೇ 5ರಷ್ಟು ಹೆಚ್ಚಳ ಮಾಡಲಿದ್ದು , 2025–26 ರಿಂದ ಜಾರಿಗೆ ಬರಲಿದೆ. ಎ ಮತ್ತು ಬಿ ಖಾತಾ ಸೇರಿ ಎಲ್ಲ ಆಸ್ತಿಗಳಿಗೂ ಏಕರೂಪದ ತೆರಿಗೆ ವಿಧಿಸಲಾಗುತ್ತದೆ.
ಶೇ 20ರಷ್ಟು ಮಾತ್ರ ಹೆಚ್ಚಳ; ಬಿಬಿಎಂಪಿ ಸಮರ್ಥನೆ
ಪ್ರಸ್ತುತ ಪಾವತಿಸುತ್ತಿರುವ ಆಸ್ತಿ ತೆರಿಗೆಗಿಂತ ಹೊಸ ವಿಧಾನದಂತೆ ತೆರಿಗೆಯಲ್ಲಿ ಹೆಚ್ಚಳವಾದರೆ, ಅದರಲ್ಲಿನ ಶೇ 20 ರಷ್ಟನ್ನು ಮಾತ್ರ 2024-25ನೇ ಸಾಲಿನಲ್ಲಿ ಪಾವತಿಸಿ ಉಳಿದ ತೆರಿಗೆಯನ್ನು ಪ್ರತಿ ವರ್ಷ ಶೇ. 20ರಂತೆ ಮುಂದಿನ 4 ವರ್ಷಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಮಾರ್ಚ್ ಮಧ್ಯಭಾಗದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಆ ಪ್ರಕಾರ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಮೊದಲು ವಲಯ ಅಧಾರದಲ್ಲಿ ಅಸ್ತಿ ತೆರಿಗೆ ನಿಗದಿಯಾಗಿತ್ತು. ಎ ಮತ್ತು ಡಿ ವಲಯದಲ್ಲಿರುವ ಪ್ರದೇಶದ ಕಟ್ಟಡದಲ್ಲಿ 150 ಚದರ ಅಡಿ ವಾಹನ ನಿಲುಗಡೆ ಅಗಲ ಮಾರ್ಗಸೂಚಿ ದರ ರೂ. 10 ಸಾವಿರ ಇದ್ದರೂ ಎ ವಲಯದವರು ಹೆಚ್ಚಿನ ಆಸ್ತಿ ತೆರಿಗೆ ಮತ್ತು ಡಿ ವಲಯದವರು ಕಡಿಮೆ ತೆರಿಗೆ ಪಾವತಿಸುತ್ತಿದ್ದರು, ಆದರೆ, ಇದೀಗ ಆಸ್ತಿಯ ಮಾರ್ಗಸೂಚಿ ದರದಂತೆಯೇ ಎಲ್ಲ ನಿರ್ಧಾರವಾಗುವುದರಿಂದ ಹೆಚ್ಚು, ಕಡಿಮೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪಾಲಿಕೆ ಹೇಳಿದೆ.
ಸ್ಟಾರ್ ಹೋಟೆಲ್, ಕೈಗಾರಿಕೆ, ವಸತಿ, ವಾಣಿಜ್ಯ ಎಂದು ನಾಲ್ಕು ವರ್ಗಗಳಲ್ಲಿ ಆಸ್ತಿ ತೆರಿಗೆ ವಿಧಿಸಲಾಗುತ್ತಿತ್ತು. ಇದರಿಂದ ಕೆಲವು ಕಟ್ಟಡಗಳಿಗೆ ಆಸ್ತಿ ತೆರಿಗೆ ನಿಗದಿಪಡಿಸುವ ಸಂದರ್ಭದಲ್ಲಿ ಉಂಟಾಗುತ್ತಿದ್ದ ಗೊಂದಲ ನಿವಾರಣೆಯಾಗಿದೆ. ಹೊಸ ನಿಯಮ ಸರಳವಾಗಿದ್ದು, ಕೆಎಂಸಿ ಕಾಯಿದೆ ಪ್ರಕಾರ ಇದೇ ರೀತಿಯಲ್ಲಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ಬಿಬಿಎಂಪಿಗೆ ಪ್ರತ್ಯೇಕ ಕಾಯ್ದ ಇರುವುದರಿಂದ ಇದೀಗ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com )