logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರು ನೀರಿನ ಸಮಸ್ಯೆ, ಮಾರ್ಚ್‌ 7ರೊಳಗೆ ನೋಂದಣಿ ಮಾಡಿಸಿಕೊಳ್ಳದ ಟ್ಯಾಂಕರ್‌ಗಳು ಸೀಜ್‌; ಡಿಸಿಎಂ ಡಿಕೆ ಶಿವಕುಮಾರ್

Bengaluru News: ಬೆಂಗಳೂರು ನೀರಿನ ಸಮಸ್ಯೆ, ಮಾರ್ಚ್‌ 7ರೊಳಗೆ ನೋಂದಣಿ ಮಾಡಿಸಿಕೊಳ್ಳದ ಟ್ಯಾಂಕರ್‌ಗಳು ಸೀಜ್‌; ಡಿಸಿಎಂ ಡಿಕೆ ಶಿವಕುಮಾರ್

Rakshitha Sowmya HT Kannada

Mar 05, 2024 08:39 AM IST

google News

ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌

  • Bengaluru Water Crises: ಬೆಂಗಳೂರು ಜನರ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಇದೀಗ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿದ್ದು ಮಾರ್ಚ್‌ 7 ಒಳಗೆ ರಿಜಿಸ್ಟರ್‌ ಮಾಡಿಸಿಕೊಳ್ಳದ ಟ್ಯಾಂಕರ್‌ಗಳನ್ನು ಸೀಜ್‌ ಮಾಡುವುದಾಗಿ ಡಿಸಿಎಂ ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.   

ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌
ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು: ನಗರದ ನೀರಿನ ಸಮಸ್ಯೆ ದಿನೇ ದಿನೆ ಉಲ್ಬಣಿಸುತ್ತಿದೆ. ಸರ್ಕಾರ ಕೂಡಾ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬೇಸಿಗೆ ಈಗಷ್ಟೇ ಆರಂಭವಾಗುತ್ತಿದೆ. ಈಗಲೇ ಈ ರೀತಿ ಸಮಸ್ಯೆ ಆದರೆ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗುತ್ತದೆ ಎಂದು ಬೆಂಗಳೂರಿನ ಜನತೆ ಭೀತಿಯಲ್ಲಿದ್ದಾರೆ. ಈ ನಡುವೆ ಟ್ಯಾಂಕರ್‌ ಮಾಫಿಯಾ ಕೂಡಾ ಮುನ್ನೆಲೆಗೆ ಬಂದಿದ್ದು ಸರ್ಕಾರವು ಇದಕ್ಕೆ ಕಡಿವಾಡ ಹಾಕಲು ಮುಂದಾಗಿದೆ.

ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿದ್ದರು. ಬಿಬಿಎಂಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ 3,500 ಟ್ಯಾಂಕರ್‌ಗಳು ಇದ್ದು, ಕೇವಲ 219 ಟ್ಯಾಂಕರ್‌ಗಳು, ಅಂದರೆ ಕೇವಲ ಶೇ 10 ರಷ್ಟು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಚಿಕ್ಕ, ದೊಡ್ಡ, ಹಾಲಿನ ಟ್ಯಾಂಕರ್‌ಗಳನ್ನು ಶೀಘ್ರ ಸರ್ಕಾರದ ವಶಕ್ಕೆ ಪಡೆಯಲಾಗುವುದು. ಬಿಡಬ್ಲ್ಯೂ ಎಸ್‌ಎಸ್‌ಬಿ ಅವರು 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ. ನಗರದ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಮಾರ್ಚ್‌ 7 ಒಳಗೆ ವೇಳೆಗೆ ನೋಂದಣಿ ಮಾಡಿಸದಿದ್ದರೆ ಸೀಜ್ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ನೀರು ಸರ್ಕಾರಕ್ಕೆ ಸೇರಿದ್ದು

ನೀರು ಸರ್ಕಾರಕ್ಕೆ ಸೇರಿದ್ದು. ಯಾವುದೇ ವೈಯಕ್ತಿಕ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರ ವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ದರಾಗಿ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ.

ಸಮಸ್ಯೆ ಬಗೆಹರಿಸಲು ರೂ. 556 ಕೋಟಿ ಮೀಸಲು

ಬೆಂಗಳೂರು ನಗರದ ಎಲ್ಲಾ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು 10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ, ಬಿಡಬ್ಲ್ಯೂ ಎಸ್‌ಎಸ್‌ಬಿ ಯಿಂದ 128 ಕೋಟಿ ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್‌ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ. ಹಿರಿಯ ಅಧಿಕಾರಿಗಳು ಸೇರಿದಂತೆ ನಾನು ಸಹ ಪದೇ,‌ ಪದೇ ಪರಿಶೀಲನೆ ನಡೆಸುತ್ತೇನೆ. ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ.

ನಗರದಲ್ಲಿವೆ 15 ಸಾವಿರ ಕೊಳವೆಬಾವಿಗಳು

ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು ಇದನ್ನು ಶೀಘ್ರ ಬಗೆಹರಿಸಲಾಗುವುದು.

ನೀರು ಪೂರೈಕೆಗೆ ಹಾಲಿನ ಟ್ಯಾಂಕರ್‌ಗಳು

ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಸೂಚಿಸಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲಾ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ಸ್ವಚ್ಚಗೊಳಿಸಿ ಬಳಸಲು ಸೂಚಿಸಲಾಗಿದೆ. ಈ ಟ್ಯಾಂಕರ್‌ಗಳನ್ನು ನೀರಿನ ಸಮಸ್ಯೆ ಬಗೆ ಹರಿಯುವ ತನಕ ಬಳಸಬೇಕು ಎಂದು ಸೂಚಿಸಲಾಗಿದೆ.

ಟ್ಯಾಂಕರ್ ನೀರು ಪೂರೈಕೆಗೆ 500 ರೂ.ನಿಂದ 2 ಸಾವಿರದವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿ.ಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು. 110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು ಪೂರೈಕೆ ಮಾಡಲಾಗುವುದು. 775 ಎಂಎಲ್‌ಡಿ ನೀರನ್ನು ಆದಷ್ಟು ಬೇಗ ಜನರಿಗೆ ಪೂರೈಸಲಾಗುವುದು. ನಿಷ್ಕ್ರಿಯವಾಗಿರುವ ಎಲ್ಲಾ ಶುದ್ದ ಕುಡಿಯುವ ನೀರಿನ ಘಟಕಗಳು ಚಾಲನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಮಸ್ಯೆ ನಿವಾರಣೆಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಂಬಂಧಪಟ್ಟ ಎಲ್ಲಾ ಇಲಾಖೆಯವರಿಗೆ ಮುಖ್ಯವಾಗಿ ಬೆಸ್ಕಾಂ ಅವರಿಗೆ ನಗರದಲ್ಲಿ ಚಾಲನೆಯಲ್ಲಿ ಇರುವ ಕೃಷಿ, ವಾಣಿಜ್ಯ ಬಳಕೆಯ ಕೊಳವೆ ಬಾವಿಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾಗರಿಕರು ಸಹ ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೆ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಭೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

ಪ್ರಶ್ನೋತ್ತರಗಳು

ಟ್ಯಾಂಕರ್ ದರ ನಿಗದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು ಟ್ಯಾಂಕರ್ ನೀರು ಪೂರೈಕೆ ಮಾಲೀಕರ ಸಭೆಯನ್ನು ಮಾ. 7 ರಂದು ನಿಗದಿ ಮಾಡಿದ್ದು, ಅಂದು ದರ ನಿಗದಿ ಮಾಡಲಾಗುವುದು ಎಂದರು. ಕಾವೇರಿ 5 ನೇ ಹಂತಕ್ಕೆ ತೊಡಕು ಉಂಟಾಗಿದೆಯೇ ಎಂಬ ಪ್ರಶ್ನೆಗೆ "2 ಕಿಮೀ ನಷ್ಟು ಸಮಸ್ಯೆ ಇದೆ. ಅರಣ್ಯ ಭೂಮಿ ಮತ್ತು ಒಂದು ಕಡೆ ಕಲ್ಲು ಅಡ್ಡ ಬಂದಿರುವ ಕಾರಣ ಸಮಸ್ಯೆ ಉಂಟಾಗಿದೆ. ಶೀಘ್ರ ಈ ತೊಡಕು ನಿವಾರಣೆಯಾಗುವುದು. ಮೇ ಅತ್ಯಂತ ವೇಳೆಗೆ ಪೂರೈಕೆಯಾಗುವುದು" ಎಂದು ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ