Cauvery Water: ಮತ್ತೆ ಕಾವೇರಿ ಆಘಾತ, ನ.1 ರಿಂದ 15ರ ತನಕ ನಿತ್ಯ 2600 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಸೂಚನೆ
ಮುಂದಿನ 15 ದಿನಗಳವರೆಗೆ ಅಂದರೆ ನವೆಂಬರ್ 1ರಿಂದ 15ರ ತನಕ ನಿತ್ಯವೂ ತಲಾ 2,600 ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ನವದೆಹಲಿ: ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ. ಮುಂದಿನ 15 ದಿನಗಳವರೆಗೆ ಅಂದರೆ ನವೆಂಬರ್ 1ರಿಂದ 15ರ ತನಕ ನಿತ್ಯವೂ ತಲಾ 2,600 ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ಕಾವೇರಿ ನೀರು ನಿಯಂತ್ರಣಾ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು. ತಮಿಳುನಾಡು ಅಧಿಕಾರಿಗಳು ಮುಂದಿನ 15 ದಿನಗಳವರೆಗೆ ಕರ್ನಾಟಕವು ದಿನ ನಿತ್ಯ 13,000 ಕ್ಯೂಸೆಕ್ (16.90 ಟಿಎಂಸಿ) ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕವನ್ನು ಪ್ರತಿನಿಧಿಸಿದ್ದ ಎಸಿಎಸ್ ರಾಕೇಶ್ ಸಿಂಗ್, ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರು ಭರ್ತಿಯಾಗಿಲ್ಲ. ಆದ್ದರಿಂದ ಬೇಡಿಕೆ ಇಟ್ಟಷ್ಟು ನೀರು ಹರಿಸಲು ಸಾಧ್ಯವಾಗುವುದಿಲ್ಲ. ಅನಿಯಂತ್ರಿತವಾಗಿ ಜಲಾಶಯದಿಂದ ಹೊರಹೋಗುವ ನೀರನ್ನು ಮಾತ್ರ ಸದ್ಯ ಹರಿಸುತ್ತೇವೆ ಎಂದು ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಕರ್ನಾಟಕದ ಬರ ಪರಿಸ್ಥಿತಿ ಪರಿಗಣಿಸದ ಕಾವೇರಿ ನೀರು ನಿಯಂತ್ರಣಾ ಸಮಿತಿ
ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ ಕಾವೇರಿ ನೀರು ನಿಯಂತ್ರಣಾ ಸಮಿತಿಯು ನವದೆಹಲಿಯಲ್ಲಿ ಸೋಮವಾರ ನಡೆಸಿದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಆನ್‌ಲೈನ್ ಮೂಲಕ ಭಾಗವಹಿಸಿದ್ದರು.
ಮಳೆಯ ಕೊರತೆಯ ಕಾರಣ ಕರ್ನಾಟಕದ ಜಲಾಶಯಗಳು ಭರ್ತಿ ಆಗಿಲ್ಲ. ನೀರಿನ ಕೊರತೆಯನ್ನು ಕರ್ನಾಟಕ ಎದುರಿಸುತ್ತಿದೆ ಎಂಬುದನ್ನು ಸಮಿತಿಗೆ ಮನವರಿಕೆ ಮಾಡಿಕೊಡುವಲ್ಲಿ ಕರ್ನಾಟಕದ ಅಧಿಕಾರಿಗಳು ಬಹಳ ಪ್ರಯತ್ನ ನಡೆಸಿದರಾದರೂ ಅದು ಫಲ ನೀಡಿಲ್ಲ.
ಕರ್ನಾಟಕ ಹಾಗೂ ತಮಿಳುನಾಡು ಪ್ರತಿಪಾದನೆಗಳನ್ನು ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಅಂದರೆ ನವೆಂಬರ್ 1ರಿಂದ 15ರ ತನಕ ನಿತ್ಯವೂ 2,6000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ.
ಹಿಂದಿನ ಸಭೆಯಲ್ಲಿ ನಿತ್ಯ 3,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದ ಕಾವೇರಿ ನೀರು ನಿಯಂತ್ರಣಾ ಸಮಿತಿ
ಕಾವೇರಿ ನೀರು ಹಂಚಿಕೆ ಪ್ರಮಾಣ ನಿರ್ಧರಿಸುವ ಕಾವೇರಿ ನೀರು ನಿಯಂತ್ರಣಾ ಸಮಿತಿಯು ಈ ಹಿಂದಿನ ಸಭೆಯಲ್ಲಿ ಅಕ್ಟೋಬರ್ 16 ರಿಂದ ಅಕ್ಟೋಬರ್ 31 ರವರೆಗೆ ನಿತ್ಯ 3000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು.
ಕಾವೇರಿ ನೀರು ನಿಯಂತ್ರಣ ಸಮಿತಿ ಅಕ್ಟೋಬರ್ 11ರಂದು ತನ್ನ 88 ನೇ ಸಭೆಯಲ್ಲಿ ಚಾಲ್ತಿಯಲ್ಲಿರುವ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿ ಈ ನಿರ್ಧಾರವನ್ನು ಪ್ರಕಟಿಸಿತ್ತು.
ತನ್ನ ಜಲಾಶಯಗಳಿಗೆ ಅಕ್ಟೋಬರ್ 10 ರವರೆಗೆ ಸಂಚಿತ ಒಳಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ 50.891 ರಷ್ಟು ಕೊರತೆಯನ್ನು ಸೂಚಿಸುವ ಸಂಬಂಧಿತ ವರದಿಯನ್ನು ಕರ್ನಾಟಕವು ಪ್ರಸ್ತುತಪಡಿಸಿತ್ತು. ಈ ಕೊರತೆಯು ತೀವ್ರ ಜಲ ಕೊರತೆಯ ಪರಿಸ್ಥಿತಿಗಳಿಗೆ ಕಾರಣವಾಗಿದೆ ಎಂದು ಅದು ಪ್ರತಿಪಾದಿಸಿತ್ತು.