ವಿದ್ಯಾರ್ಥಿಗಳೇ, ಮಕ್ಕಳ ದಿನಾಚರಣೆಗೆ ಶಾಲೆಯಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಿದ್ದರೆ ಗಮನಿಸಿ, ಈ ಅಂಶಗಳನ್ನು ಪರಿಗಣಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿದ್ಯಾರ್ಥಿಗಳೇ, ಮಕ್ಕಳ ದಿನಾಚರಣೆಗೆ ಶಾಲೆಯಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಿದ್ದರೆ ಗಮನಿಸಿ, ಈ ಅಂಶಗಳನ್ನು ಪರಿಗಣಿಸಿ

ವಿದ್ಯಾರ್ಥಿಗಳೇ, ಮಕ್ಕಳ ದಿನಾಚರಣೆಗೆ ಶಾಲೆಯಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಿದ್ದರೆ ಗಮನಿಸಿ, ಈ ಅಂಶಗಳನ್ನು ಪರಿಗಣಿಸಿ

ನವೆಂಬರ್ 14 ಭಾರತದಲ್ಲಿ ಮಕ್ಕಳ ದಿನಾಚರಣೆ, ಈ ದಿನ ನೆಹರೂ ಚಾಚಾ ಅವರ ಜನ್ಮದಿನವೂ ಹೌದು. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜವಾಹರ ಲಾಲ್‌ ನೆಹರೂ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಕೇಳಿಕೊಂಡಿದ್ದರು. ಈ ವರ್ಷ ಮಕ್ಕಳ ದಿನಾಚರಣೆಗೆ ಶಾಲೆಯಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದರೆ ಈ ಅಂಶಗಳು ನಿಮಗೆ ಸಹಾಯವಾಗಬಹುದು ನೋಡಿ.

ಮಕ್ಕಳ ದಿನಾಚರಣೆ ಭಾಷಣ
ಮಕ್ಕಳ ದಿನಾಚರಣೆ ಭಾಷಣ (PC: Canva)

ಭಾರತದಲ್ಲಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವು ಭಾರತದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್ ನೆಹರೂ ಅವರ ಜನ್ಮದಿನ. ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ್ದ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಕರೆ ಕೊಟ್ಟಿದ್ದರು.

ನೆಹರೂ ಅವರನ್ನು ಪ್ರೀತಿಯಿಂದ ಚಾಚಾ ಎಂದು ಕರೆಯಲಾಗುತ್ತದೆ. ಅವರು ಮಕ್ಕಳಿಗೆ ಶಿಕ್ಷಣ ನೀಡುವುದರ ಅಗತ್ಯವನ್ನು ಒತ್ತಿ ಹೇಳಿದ್ದರು. ತಮ್ಮ ಜನ್ಮದಿನವನ್ನು ಆಚರಿಸುವುದಾದರೆ ಮಕ್ಕಳ ದಿನವನ್ನಾಗಿ ಆಚರಿಸಿ ಎಂದು ನೆಹರೂ ಅವರೇ ಕೇಳಿಕೊಂಡಿದ್ದರು. ಈ ಬಾರಿ ನೆಹರೂ ಅವರ 134ನೇ ಜನ್ಮದಿನ. ಪಂಡಿತ್ ಜವಾಹರ ಲಾಲ್ ನೆಹರೂ ಅವರು 1889ರ ನವೆಂಬರ್‌ 14ರಂದು ಜನಿಸಿದ್ದರು.

ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ, ಅಭಿಮಾನ ಹೊಂದಿದ್ದ ನೆಹರೂ ಅವರು ಮಕ್ಕಳನ್ನು ಭವಿಷ್ಯ ಆಸ್ತಿ ಎಂದು ಪರಿಗಣಿಸಿದ್ದರು. ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದೇ ಅವರು ಪ್ರತಿಪಾದಿಸುತ್ತಿದ್ದರು. 1955ರಲ್ಲಿ ನೆಹರೂ ಅವರು ಭಾರತೀಯ ಮಕ್ಕಳನ್ನು ಪ್ರತಿನಿಧಿಸಲು ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಇಂಡಿಯಾವನ್ನು ಸ್ಥಾಪಿಸಿದ್ದರು. 1954 ರಲ್ಲಿ ಮೊದಲ ಬಾರಿ ನೆಹರೂ ಅವರ ಜನ್ಮದಿನದ ಸಲುವಾಗಿ ಮಕ್ಕಳ ದಿನವನ್ನ ಆಚರಿಸಲಾಗಿತ್ತು.

ಇಂದಿನ ಮಕ್ಕಳು ನಾಳಿನ ಉಜ್ವಲ ಭಾರತವನ್ನು ನಿರ್ಮಾಣ ಮಾಡುತ್ತಾರೆ. ಇಂದು ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ, ಮಕ್ಕಳಿಗೆ ಎಂಥ ಶಿಕ್ಷಣ ನೀಡುತ್ತೇವೆಯೋ ಅಷ್ಟೇ ಉತ್ತಮ ರಾಷ್ಟ್ರವನ್ನು ಮಕ್ಕಳು ನಿರ್ಮಾಣ ಮಾಡುತ್ತಾರೆ ಎಂದು ಚಾಚಾ ಮೊದಲಿನಿಂದಲೂ ಹೇಳುತ್ತಿದ್ದರು. ಒಂದು ರಾಷ್ಟ್ರದ ಭವಿಷ್ಯ ನಿಂತಿರುವುದು ಮಕ್ಕಳ ಶಿಕ್ಷಣದ ಮೇಲೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ರಾಷ್ಟ್ರವು ಉಜ್ವಲವಾಗುತ್ತದೆ ಎಂದು ಅವರು ಮಕ್ಕಳ ಶಿಕ್ಷಣ ಹಾಗೂ ಹಕ್ಕನ್ನು ಎತ್ತಿ ಹಿಡಿದಿದ್ದರು. ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು. ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಅವಕಾಶ ಹಾಗೂ ಶಿಕ್ಷಣ ನೀಡುವುದರ ಬಗ್ಗೆಯೂ ನೆಹರೂ ಅವರು ಮಾತನಾಡಿದ್ದರು.

ಮಕ್ಕಳಿಗೆ ನಾಳೆ ನಿಮ್ಮದು ಎಂದ ನೆಹರೂ ಚಾಚಾ ಅವರ ಕನಸನ್ನು ನನಸು ಮಾಡೋಣ, ಇಂದಿನ ಮಕ್ಕಳೇ ನಾಳೆಯ ಭವಿಷ್ಯ ಎಂಬ ಘೋಷ ವಾಕ್ಯವನ್ನು ನಿಜ ಮಾಡೋಣ. ಮಕ್ಕಳಿಗಾಗಿ ಬದುಕಿದ ದೇಶದ ಧೀಮಂತ ‍ಪ್ರಧಾನಿ ನೆಹರೂ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಾ ಮಕ್ಕಳ ದಿನಾಚರಣೆಯ ಸಂಭ್ರಮ ಆಚರಿಸೋಣ. 

Whats_app_banner