ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ: ನವೆಂಬರ್ 14ರ ವಿಶೇಷ ದಿನಕ್ಕಾಗಿ ವಿದ್ಯಾರ್ಥಿಗಳಿಗಾಗಿ 400 ಪದಗಳ ನಿಬಂಧ, ಪೀಠಿಕೆಯಿಂದ ಉಪಸಂಹಾರ ತನಕ
Nov 08, 2024 05:41 PM IST
ನವೆಂಬರ್ 14 ಮಕ್ಕಳ ದಿನಾಚರಣೆ ಪ್ರಬಂಧ: ವಿದ್ಯಾರ್ಥಿಗಳಿಗಾಗಿ 400 ಪದಗಳ ನಿಬಂಧ
- ಮಕ್ಕಳ ದಿನಾಚರಣೆ ಪ್ರಬಂಧ: ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ. ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ 400 ಪದಗಳ ಪ್ರಬಂಧ ಇಲ್ಲಿದೆ.
Children's Day Essay: ಮಕ್ಕಳ ದಿನಾಚರಣೆ ಪ್ರಬಂಧ: ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ. ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ 400 ಪದಗಳ ಪ್ರಬಂಧ ಇಲ್ಲಿ ನೀಡಲಾಗಿದೆ. ಮಕ್ಕಳ ದಿನಾಚರಣೆ 2024ರ ಪ್ರಯುಕ್ತ ನಿಮ್ಮ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅಥವಾ ಇತರೆ ಸಂಸ್ಥೆಗಳು ಪ್ರಬಂಧ ಸ್ಪರ್ಧೆ ಆಯೋಜಿಸಿದ್ದರೆ ಈ ಪ್ರಬಂಧದಿಂದ ಪೂರಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ನವೆಂಬರ್ 14 ಮಕ್ಕಳ ದಿನಾಚರಣೆ ಪ್ರಬಂಧ
ಪೀಠಿಕೆ: ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಅಲಹಾಬಾದ್‌ನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರಿಗೆ ಮಕ್ಕಳ ಕುರಿತು ಅಪಾರ ಪ್ರೀತಿ. ಇವರ ಜನ್ಮ ದಿನವನ್ನೇ ಮಕ್ಕಳ ದಿನಾಚರಣೆಯಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಈ ದಿನ ಮೀಸಲಿರಿಸಲಾಗಿದೆ. ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ನಡೆಸಲಾಗುತ್ತದೆ.
ಇತಿಹಾಸ: ಜಾಗತಿಕವಾಗಿ ಮಕ್ಕಳ ದಿನಾಚರಣೆಯು ನವೆಂಬರ್ 5, 1948ರಂದು ಹೂವಿನ ದಿನ/ ಫ್ಲವರ್ಸ್ ಡೇ ಎಂದು ಆಚರಿಸಲಾಯಿತು. 30 ಜುಲೈ 1949 ರಂದು ಮಕ್ಕಳ ದಿನ ಹೆಸರಿನಲ್ಲಿ ಆರಂಭಿಸಲಾಯಿತು. 1951ರಲ್ಲಿ ವಿಶ್ವಸಂಸ್ಥೆಯ ಸಮಾಜ ಕಲ್ಯಾಣ ಫೆಲೋ ಆಗಿದ್ದ ವಿಎಂ ಕುಲಕರ್ಣಿಯವರು ಮಕ್ಕಳ ದಿನಕ್ಕೆ ಪಂಡಿತ್ ನೆಹರು ಅವರ ಜನ್ಮದಿನವನ್ನು ಧ್ವಜ ದಿನವೆಂದು ಗುರುತಿಸಬಹುದು ಎಂದು ಶಿಫಾರಸು ಮಾಡಿದರು. ಭಾರತದಲ್ಲಿ ನೆಹರೂ ಅವರ ಒಪ್ಪಿಗೆ ಕೇಳಿದಾಗ ಮೊದಲು ಒಪ್ಪಲಿಲ್ಲ. ಬಳಿಕ ಮನಸ್ಸಿಲ್ಲದೆ ಒಪ್ಪಿಕೊಂಡರು. ಬಳಿಕ ಇದು ಮಕ್ಕಳ ದಿನಾಚರಣೆಯಾಗಿ ಜನಪ್ರಿಯತೆ ಪಡೆಯಿತು. 1954ರಲ್ಲಿ ಮೊದಲ ಬಾರಿಗೆ ಮಕ್ಕಳ ದಿನ ಎಂದು ಆಚರಿಸಲಾಯಿತು. ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 50,000 ಕ್ಕೂ ಹೆಚ್ಚು ಶಾಲಾ ಮಕ್ಕಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಆದರೆ, ಅಧಿಕೃತವಾಗಿ ಮಕ್ಕಳ ದಿನಾಚರಣೆ ಆರಂಭವಾದದ್ದು 1957ರಲ್ಲಿ ಎಂದು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ನವೆಂಬರ್ 14, 1957 ರಂದು ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಲವಾರು ಬಿಳಿ ಪಾರಿವಾಳಗಳನ್ನು ಹಾರಿ ಬಿಡಲಾಯಿತು. ಒಂದು ಪಾರಿವಾಳವು ಹಿಂತಿರುಗಿ ಬಂದು ನೆಹರು ಅವರ ತಲೆಯ ಮೇಲೆ ಕುಳಿತಿತು. 1957ರಲ್ಲಿ ವಿಶೇಷ ಸರ್ಕಾರಿ ಸುಗ್ರೀವಾಜ್ಞೆಯ ಮೂಲಕ 14 ನವೆಂಬರ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಮಕ್ಕಳ ದಿನವೆಂದು ಘೋಷಿಸಲಾಯಿತು.
ಶಿಕ್ಷಣ ಸಂಸ್ಥೆಗಳಲ್ಲಿ ಸಂಭ್ರಮ: ಭಾರತದ ಪ್ರತಿಶಾಲೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಕ್ಕಳ ದಿನ ಆಚರಿಸಲಾಗುತ್ತದೆ. ರಸಪ್ರಶ್ನೆ, ಚರ್ಚೆಗಳು, ನೃತ್ಯ, ಸಂಗೀತ ಮತ್ತು ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಪ್ರದರ್ಶಿಸುತ್ತಾರೆ. ಮಗುವು ನಾಳಿನ ಭವಿಷ್ಯ ಎಂದು ಚಾಚಾ ನೆಹರು ಯಾವಾಗಲೂ ನಂಬಿದ್ದರು. ನಾಟಕ ಮತ್ತು ಆಟದ ಮೂಲಕ ಶಿಕ್ಷಕರು ಮಕ್ಕಳಿಗೆ ಈ ದಿನದಂದು ಮಕ್ಕಳ ಉತ್ತಮ ನಾಳೆಗೆ ನೆರವು ನೀಡಬೇಕೆಂದು ಹೇಳಿದ್ದರು. ಅನೇಕ ಶಾಲೆಗಳು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನವನ್ನು ಆಚರಿಸುತ್ತವೆ. ಶಾಲೆಯ ಶಿಕ್ಷಕರು ಸಾಮಾನ್ಯವಾಗಿ ಹತ್ತಿರದ ಅನಾಥಾಶ್ರಮ ಅಥವಾ ಕೊಳೆಗೇರಿಯ ಮಕ್ಕಳನ್ನು ಆಹ್ವಾನಿಸುತ್ತಾರೆ. ಮಕ್ಕಳು ತಮ್ಮೊಂದಿಗೆ ಸಮಾಜದ ಎಲ್ಲರನ್ನು ಹಂಚಿಕೊಳ್ಳಲು ಮತ್ತು ಹೊಂದಿಕೊಳ್ಳಲು ಕಲಿಯಬೇಕೆನ್ನುವುದು ಇದರ ಉದ್ದೇಶ. ಇದರೊಂದಿಗೆ ಶಿಕ್ಷಣದ ಮಹತ್ವವನ್ನು ಹೇಳಲಾಗುತ್ತದೆ. ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮನರಂಜನಾ ಕ್ಷೇತ್ರದಂತಹ ವಿವಿಧ ಕ್ಷೇತ್ರಗಳ ಸ್ಪೂರ್ತಿದಾಯಕ ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಪ್ರೇರಕ ಭಾಷಣಗಳನ್ನು ನೀಡುತ್ತಾರೆ.
ಹಲವಾರು ಎನ್‌ಜಿಒಗಳು ಈ ದಿನವನ್ನು ಅವಕಾಶ ವಂಚಿತ ಮಕ್ಕಳಿಗೆ ಸಹಾಯ ಹಸ್ತ ನೀಡಲು ಬಳಸುತ್ತವೆ. ಹಿಂದುಳಿದ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಸಾಮಾನ್ಯವಾಗಿ ಪುಸ್ತಕಗಳು, ಆಹಾರ, ಚಾಕೊಲೇಟ್‌ಗಳು, ಆಟಿಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ವಿತರಿಸುತ್ತಾರೆ. ಮಕ್ಕಳಿಗೆ ಬಹುಮಾನ, ಪ್ರಶಸ್ತಿಗಳನ್ನು ಸಹ ವಿತರಿಸಲಾಗುತ್ತದೆ. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸರ್ಕಾರವು ಜಾರಿಗೊಳಿಸಿದ ಅಥವಾ ಘೋಷಿಸಿದ ವಿವಿಧ ಯೋಜನೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನವನ್ನೂ ಮಕ್ಕಳ ದಿನದಂದು ಮಾಡಲಾಗುತ್ತದೆ.
ಉಪಸಂಹಾರ: ಜವಾಹರಲಾಲ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ನೆಹರೂ ಹುಟ್ಟುಹಬ್ಬವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಶಾಲೆಗೆ ರಜೆ ನೀಡದೆ ಈ ದಿನದ ಮಹತ್ವ ಸಾರುವಂತಹ ಕೆಲಸ ನಡೆಯಬೇಕು. ವಿದ್ಯಾರ್ಥಿಗಳು ಭವಿಷ್ಯದ ಕುರಿತು ಉತ್ತಮ ಕನಸು ಕಾಣುವಂತಹ ದಿನವಾಗಿ ರೂಪಿಸಬೇಕು. ಇಂದು ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿಯು ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ಈ ದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ ಚಾಚಾ ನೆಹರೂ ಅವರ ಕನಸಿನಂತೆ ಮಕ್ಕಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವಂತೆ ಮಾಡಬೇಕು.