Music Stipend: ಸಂಗೀತದಲ್ಲಿ ಆಸಕ್ತಿಯಿದೆಯೇ, ಶಿಷ್ಯ ವೇತನಕ್ಕೆ ಅವಕಾಶವಿದೆ, ಅರ್ಜಿ ಸಲ್ಲಿಕೆಗೆ ಆಗಸ್ಟ್ 12 ಕೊನೆ ದಿನ
Aug 07, 2024 02:08 PM IST
ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
- Music Dance Academy ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯು ಅರ್ಹ ಕಲಾವಿದರಿಗೆ ಶಿಯ ವೇತನ ನೀಡಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಇಲ್ಲಿದೆ ವಿವರ.
ಬೆಂಗಳೂರು: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 2023-24 ಮತ್ತು 2024-25ನೇ ಸಾಲಿನಿಂದ ಶಿಷ್ಯವೇತನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮೊಬೈಲ್, ವಿಡಿಯೋ ಚಿತ್ರೀಕರಣದ ಮೂಲಕ ಆಯ್ಕೆ ಮಾಡಲು ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿ ತೀರ್ಮಾನಿಸಿದೆ.
ಶಿಷ್ಯವೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಪೇಸ್‍ಬುಕ್ (face book: com/karnatakasangeeta1978) ಮೂಲಕ ಪಡೆದು ವೆಬ್‍ಸೈಟ್ sangeetanrityaacademy.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಬಂದ ಅರ್ಜಿಗಳನ್ನಾಧರಿಸಿ, ಕೇಂದ್ರಗಳನ್ನು ನಿಗದಿಪಡಿಸಿ, ಆಯಾ ಕಲಾಪ್ರಕಾರಗಳಲ್ಲಿ 3 ಮಂದಿ ತಜ್ಞರಿಂದ ಸಂದರ್ಶನವನ್ನು ಹಮ್ಮಿಕೊಂಡು, ಸಂದರ್ಶನವನ್ನು ನಡೆಸಲಾಗುವುದು. ತಜ್ಞರ ತೀರ್ಮಾನದಂತೆ ಪ್ರಸಕ್ತ ಸಾಲಿಗೆ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳು ಸೇರಿದಂತೆ ಒಟ್ಟು 200 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ತಲಾ ರೂ.10,000-00 ಗಳ ಶಿಷ್ಯವೇತನ ಮೊತ್ತವನ್ನು ನೀಡುವುದರ ಮೂಲಕ ಯುವ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು.
ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್/ ವಿಡಿಯೋ ಚಿತ್ರೀಕರಿಸಿ, ಪೆನ್‍ಡ್ರೈವ್‍ನಲ್ಲಿ ಅಳವಡಿಸಿ, ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಕಾರ್ಯಾಲಯಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು.
ಈ ರೀತಿಯಾಗಿ ಬಂದ ಅರ್ಜಿಗಳನ್ನು ಆಯಾಯ ಕಲಾ ಪ್ರಕಾರಕ್ಕೆ ಅನುಗುಣವಾಗಿ ತೀರ್ಪುಗಾರರು ಅಭ್ಯರ್ಥಿಗಳು ಚಿತ್ರೀಕರಿಸಿ, ಕಳುಹಿಸಿಕೊಟ್ಟಿರುವ ಪೆನ್‍ಡ್ರೈವ್ ಅನ್ನು ಪರಿಶೀಲಿಸಿ, ಶಿಷ್ಯವೇತನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪಠ್ಯಕ್ರಮ ಚಿತ್ರೀಕರಿಸಿದ ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ಸ್ವೀಕರಿಸಲು ಆಗಸ್ಟ್, 12 ಕೊನೆಯ ದಿನವಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.
ಆಸಕ್ತ ಅರ್ಹ ಕಲಾವಿದರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹಾಗೂ ಸಿಬ್ಬಂದಿಗಳನ್ನು ಕಚೇರಿ ವೇಳೆಯಲ್ಲಿ ಭೇಟಿ ಮಾಡಬಹುದು.