‘ಕಣಾದ’ ಸಂಚಿಕೆಗೆ ಐವತ್ತರ ಸಂಭ್ರಮ: ಜಗತ್ತಿನ ವೈಜ್ಞಾನಿಕ ವಿದ್ಯಮಾನಗಳನ್ನ ಕನ್ನಡದಲ್ಲೇ ಪರಿಚಯಿಸುತ್ತಿರುವ ಪತ್ರಿಕೆಯಿದು-mangaluru news celebrating 50th of kanaada a magazine introducing global scientific phenomena in kannada ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ‘ಕಣಾದ’ ಸಂಚಿಕೆಗೆ ಐವತ್ತರ ಸಂಭ್ರಮ: ಜಗತ್ತಿನ ವೈಜ್ಞಾನಿಕ ವಿದ್ಯಮಾನಗಳನ್ನ ಕನ್ನಡದಲ್ಲೇ ಪರಿಚಯಿಸುತ್ತಿರುವ ಪತ್ರಿಕೆಯಿದು

‘ಕಣಾದ’ ಸಂಚಿಕೆಗೆ ಐವತ್ತರ ಸಂಭ್ರಮ: ಜಗತ್ತಿನ ವೈಜ್ಞಾನಿಕ ವಿದ್ಯಮಾನಗಳನ್ನ ಕನ್ನಡದಲ್ಲೇ ಪರಿಚಯಿಸುತ್ತಿರುವ ಪತ್ರಿಕೆಯಿದು

ವಿಜ್ಞಾನ,ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನ ವಿದ್ಯಮಾನಗಳನ್ನುಕನ್ನಡ ಭಾಷೆಯಲ್ಲೇ ಒದಗಿಸುತ್ತಿರುವ‘ಕಣಾದ’ ಎಂಬ ವಿಜ್ಞಾನ ಪತ್ರಿಕೆಯು ಐವತ್ತು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಈ ಕುರಿತು ಇಲ್ಲಿದೆ ವರದಿ. (ವರದಿ:ಹರೀಶ ಮಾಂಬಾಡಿ,ಮಂಗಳೂರು)

ಜಗತ್ತಿನ ವಿದ್ಯಮಾನಗಳನ್ನು ಕನ್ನಡ ಭಾಷೆಯಲ್ಲೇ ಒದಗಿಸುತ್ತಿರುವ ‘ಕಣಾದ’ ವಿಜ್ಞಾನ ಪತ್ರಿಕೆ ಐವತ್ತರ ಸಂಭ್ರಮದಲ್ಲಿದೆ.
ಜಗತ್ತಿನ ವಿದ್ಯಮಾನಗಳನ್ನು ಕನ್ನಡ ಭಾಷೆಯಲ್ಲೇ ಒದಗಿಸುತ್ತಿರುವ ‘ಕಣಾದ’ ವಿಜ್ಞಾನ ಪತ್ರಿಕೆ ಐವತ್ತರ ಸಂಭ್ರಮದಲ್ಲಿದೆ.

ಮಂಗಳೂರು: ಮಕ್ಕಳಲ್ಲಷ್ಟೇ ಅಲ್ಲ, ಹಿರಿಯರಲ್ಲೂ ವೈಜ್ಞಾನಿಕ ಮನೋಭಾವನೆ ಮೂಡಿಸುವುದು, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನ ವಿದ್ಯಮಾನಗಳನ್ನು ಒದಗಿಸಲು ಕನ್ನಡ ಭಾಷೆಯನ್ನೇ ಉಪಯೋಗಿಸಿ, ಸತತ 49 ವರ್ಷಗಳಿಂದ ಇಡೀ ರಾಜ್ಯದಲ್ಲಿ ಗಮನ ಸೆಳೆಯುವಂತೆ ಮಾಡುತ್ತಿರುವುದು ‘ಕಣಾದ’ ಎಂಬ ವಿಜ್ಞಾನ ಪತ್ರಿಕೆ.

ಬೆಂಗಳೂರಿನ ರಾಷ್ಟ್ರೀಯ ವೈಮಾನಾಂತರಿಕ್ಷ ಪ್ರಯೋಗಶಾಲೆಗಳ ಸಿಬ್ಬಂದಿಗಳೆಲ್ಲ ಕನ್ನಡ ಸಾಂಸ್ಕೃತಿಕ ಸಂಘ ಹೆಸರಲ್ಲಿ ಆರಂಭಿಸಿದ ಬಳಿಕ ಕನ್ನಡದ ಮಕ್ಕಳಿಗೆ ನೆಲದ ಭಾಷೆಯಲ್ಲಿ ಜಗತ್ತಿನ ವಿಜ್ಞಾನ ವಿಶೇಷಗಳನ್ನು ಒದಗಿಸಬೇಕು ಎಂಬ ಹಂಬಲದೊಂದಿಗೆ ಕನ್ನಡಾಭಿಮಾನಿ ವಿಜ್ಞಾನಿಗಳ ಉತ್ಸಾಹದಿಂದ 1975ರಲ್ಲಿ ವಾರ್ಷಿಕ ವಿಜ್ಞಾನ ಪತ್ರಿಕೆ ಕಣಾದ ಪ್ರಾರಂಭಗೊಂಡಿತ್ತು. ಇದೀಗ 49 ಸಂಚಿಕೆಗಳನ್ನು ಹೊರತಂದಿದೆ. ಕ್ರಿ.ಪೂ.600ರ ಅವಧಿಯಲ್ಲಿ ಜೀವಿಸಿದ್ದು, ಅಣು ವಿಜ್ಞಾನಕ್ಕೆ ಆದ್ಯ ಪ್ರವರ್ತಕ ಎನಿಸಿಕೊಂಡಿರುವ ಪ್ರಾಚೀನ ವಿಜ್ಞಾನಿ ಕಣಾ ಅವರ ಹೆಸರಲ್ಲಿ ಈ ಸಂಚಿಕೆ ಪ್ರಕಟಗೊಳ್ಳುತ್ತಿದೆ. ಇದು ಭಾರತೀಯ ವಿಜ್ಞಾನಕ್ಕೆ ದೊಡ್ಡ ಕೊಡುಗೆ ನೀಡಿದ ವಿಜ್ಞಾನಿಗಳ ಹೆಸರನ್ನು ಅಚ್ಚಳಿಯದೆ ನೆಲೆಸುವಂತೆ ಮಾಡುತ್ತಿದೆ. ವಿಶೇಷವೆಂದರೆ ಲೇಖನಗಳಲ್ಲಿ ಕನ್ನಡ ಶಬ್ಧಗಳಿಗೆ ಪ್ರಾಧಾನ್ಯತೆ ನೀಡುವುದರ ಜತೆಗೆ, ಅಂಕೆಗಳೂ, ಪುಟಸಂಖ್ಯೆಗಳಲ್ಲಿ ನಮೂದಾಗಿರುವ ಅಂಕೆಗಳೂ ಕನ್ನಡದಲ್ಲೇ ಇವೆ.

ಕಣಾದ ಬೆಳವಣಿಗೆ

ಈ ಕುರಿತು HT ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ಹಿರಿಯ ವಿಜ್ಞಾನಿ ಹಾಗೂ ಅಲ್ಲಿನ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡದ ಪುತ್ತೂರು ಮೂಲದ ರಾಯಸ ರಾಮಚಂದ್ರ ರಾವ್, ʼಪ್ರಾರಂಭದ ದಿನಗಳಲ್ಲಿ ಕ್ಲಿಷ್ಟಕರವಾದ ಆಂಗ್ಲ ಪದಗಳಿಗೆ ಕನ್ನಡದ ಸಮಾನ ಅರ್ಥ ಕೊಡುವ ಶಬ್ಧಗಳನ್ನು ಹುಡುಕುವುದು, ಶಬ್ಧಗಳನ್ನು ಪೋಣಿಷಿ, ವಾಕ್ಯರಚನೆ ಹಾಗೂ ಲೇಖನಗಳ ತಯಾರಿ ಮಾಡುವುದು, ಮುದ್ರಣಾಲಯದಲ್ಲಿ ಅಲ್ಲಿನ ನೌಕರರ ಜೊತೆ ಅಕ್ಷರ ಜೋಡಣೆಯನ್ನು ಮಾಡಿ, ಕಣಾದ ಪತ್ರಿಕೆಯನ್ನು ಹೊರತರುವಲ್ಲಿ ನಮ್ಮ ಹಿರಿಯರು ಶ್ರಮಿಸಿದ್ದಾರೆ. ಅಂದಿನಿಂದ ನಿರಂತರವಾಗಿ ನಡೆದ ಈ ಕಾಯಕ ಸುಮಾರು ಎರಡು ತಲೆಮಾರಿನಿಂದ ನಡೆದುಬಂದು, ಇಂದು ಮುದ್ರಣದ ಹೊಸ ತಂತ್ರಜ್ಞಾನಗಳ ಸಮ್ಮಿಲನದೊಂದಿಗೆ ವರ್ಣಮಯವಾಗಿ ಮೂಡಿಬರುತ್ತಿದೆ. ಕಣಾದಕ್ಕೆ ವಿದ್ಯಾರ್ಥಿಗಳು, ವಿಜ್ಞಾನ ಲೇಖಕರು, ಸಂಶೋಧಕರು, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ವಿಜ್ಞಾನಿಗಳು ನಾನಾ ಲೇಖನಗಳನ್ನು ಒದಗಿಸಿದ್ದಾರೆʼ ಎಂದರು.

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜನೆ

ಕಣಾದ ರಾಜ್ಯಮಟ್ಟದ ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜಿಸುತ್ತದೆ. ಪ್ರಾರಂಭ ವರ್ಷಗಳಲ್ಲಿ ವಿದ್ಯಾರ್ಥಿಗಳ ವಿಭಾಗದಿಂದ ಪ್ರಬಂಧ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನ ಪಡೆದ ಅನೇಕರು ಖ್ಯಾತ ವಿಜ್ಞಾನ ಲೇಖಕರೂ ಆಗಿದ್ದಾರೆ. ಅಂಥವರಲ್ಲಿ ಡಾ. ನಾ. ಸೋಮೇಶ್ವರ ಹಾಗು ಡಾ. ಎ.ಪಿ.ರಾಧಾಕೃಷ್ಣ ಅವರು ಪ್ರಮುಖರು. ಈಗಲೂ ಕಣಾದಕ್ಕೆ ಲೇಖನಗಳನ್ನು ಅವರು ಬರೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಪರಿಚಯಿಸುವಲ್ಲಿ ಕಣಾದ ಮಹತ್ವದ ಸಾಧನೆ ಮಾಡಿದ್ದು, ಇದಕ್ಕೆ ಪ್ರಬಂಧ ಸ್ಪರ್ಧೆಯೂ ಪೂರಕವಾಗಿದೆ. ರಾಜ್ಯ ಶಿಕ್ಷಣ ಇಲಾಖೆ ಅಧಿಸೂಚನೆಯಂತೆ ರಾಜ್ಯದ ಎಲ್ಲ ಪ್ರೌಢಶಾಲೆ, ಶಿಕ್ಷಣ ಸಂಸ್ಥೆ, ಕಾಲೇಜುಗಳಲ್ಲಿ ಕಣಾದವನ್ನು ಕೊಳ್ಳಬೇಕು ಹಾಗೂ ಅದರಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ರಾಜ್ಯ ಸರಕಾರ ಸುತ್ತೋಲೆಯನ್ನು ಮೊದಲೇ ಹೊರಡಿಸಿತ್ತು.

50ನೇ ವರ್ಷದ ಸ್ಪರ್ಧೆಗೆ ಲೇಖನಗಳ ಆಹ್ವಾನ

ಸಿಎಸ್‍ಐಆರ್ - ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಕನ್ನಡ ಸಾಂಸ್ಕೃತಿಕ ಸಂಘವು ಪ್ರಕಟಿಸುತ್ತಿರುವ ಕಣಾದ ವಾರ್ಷಿಕ ವಿಜ್ಞಾನ ಪತ್ರಿಕೆಯ ಸುವರ್ಣ (50ನೆಯ) ಸಂಚಿಕೆಗಾಗಿ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಈ ಮೂರೂ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಆಯ್ಕೆಯಾಗುವ ಲೇಖನಗಳಿಗೆ ಸೂಕ್ತ ಬಹುಮಾನ ಇದೆ. ವಿಷಯಗಳು ಹೀಗಿವೆ..

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ

1. ಕಡಲ ನೀರಿನಿಂದ ಕುಡಿಯುವ ನೀರು ಪಡೆಯಲು ಸಹಾಯಕ ತಂತ್ರಜ್ಞಾನಗಳು.

2. ಹಣ್ಣು, ತರಕಾರಿ, ಧಾನ್ಯಗಳ ಸಂರಕ್ಷಣಾ ವಿಧಾನಗಳಲ್ಲಿ ಪ್ರಗತಿ.

3. ಹಿಮಪದರ ಸಾಹಿತ್ಯಕ್ಕಾಗಿ (ಡಿ-ಐಸಿಂಗ್) ವೈಮಾನಿಕ ಕ್ಷೇತ್ರದಲ್ಲಿ ಹೊಚ್ಚಹೊಸ ತಂತ್ರಜ್ಞಾನಗಳು

ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ

1. ನೂತನ ಬಾಹ್ಯಾಕಾಶ ಪರಿಶೋಧನಾ ತಂತ್ರಜ್ಞಾನಗಳು

2. ಚ್ಯಾಟ್‌ಜಿಪಿಟಿ ಸಂವಹನ - ಸಾಧಕ-ಬಾಧಕಗಳು

3. ಭಾರತೀಯ ಸೇನಾಪಡೆ- ಸಿಬ್ಬಂದಿಯ ಆಹಾರ ಪೊಟ್ಟಣಗಳ ವಿಶೇಷ ವಿನ್ಯಾಸ ಮತ್ತು ಪ್ರಯೋಜನಗಳು

ಸಾರ್ವಜನಿಕ ವಿಭಾಗ:

ವಿಜ್ಞಾನ ಹಾಗೂ ತಂತ್ರಜ್ಞಾನದ ಯಾವುದಾದರೂ ಒಂದು ವಿಷಯ.

ಬಹುಮಾನಿತ ಹಾಗೂ ಮೆಚ್ಚುಗೆ ಪಡೆದ ಲೇಖನಗಳನ್ನು ಈ ವರ್ಷದ ಕಣಾದದಲ್ಲಿ ಪ್ರಕಟಿಸಲಾಗುವುದು. ಬಹುಮಾನ ವಿತರಣೆ ನಮ್ಮ ಪ್ರಯೋಗಶಾಲೆ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಂದು ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸ್ಪರ್ಧೆಗೆ ಲೇಖನಗಳನ್ನು ಕಳುಹಿಸಲು ಅಂತಿಮ ದಿನಾಂಕ: 31.08.2024 ಆಗಿದೆ. ಲೇಖನವು ಕನ್ನಡದಲ್ಲಿದ್ದು, 4-5 ಪುಟಗಳಿಗೆ ಮೀರದಂತೆ ಇದ್ದು, ಸೂಕ್ತವಾದ ಚಿತ್ರ ಮತ್ತು ನಕ್ಷೆಗಳನ್ನು ಬಳಸಬೇಕು. ಕನ್ನಡದ ‘ನುಡಿ’ ಅಥವಾ ‘ಯುನಿಕೋಡ್’ ತಂತ್ರಾಂಶವನ್ನು ಬಳಸಿ ಕೀಲಿಸಿದ ಲೇಖನವನ್ನು ಇ-ಮೇಲ್ ಮೂಲಕ ಕಳುಹಿಸಬಹುದು.

ಕಳುಹಿಸಬೇಕಾದ ವಿಳಾಸ: ಡಾ. ಸಂಧ್ಯಾರಾವ್/ಶ್ರೀಮತಿ ಎ. ರೇವತಿ, ಸಂಪಾದಕರು, ಕಣಾದ, ಎಡಿಸಿ ವಿಭಾಗ, ಸಿಎಸ್.ಐ.ಆರ್ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು, ಅಂಚೆ ಪೆಟ್ಟಿಗೆ 1779, ಬೆಂಗಳೂರು, 560017. ದೂರವಾಣಿ: 080-25086722/9880145152/9343770394 ಈ ಮೈಲ್ ವಿಳಾಸ : sandhya.rao@nal.res.in, revs@nal.res.in, revathi.jay@gmail.com