World Music Day: ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ; ವಿಶ್ವ ಸಂಗೀತ ದಿನದ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿದೆ
Jun 21, 2023 06:15 AM IST
ವಿಶ್ವ ಸಂಗೀತ ದಿನ
- World Music Day: ಪ್ರಪಂಚದಾದ್ಯಂತ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸುಮಾರು 120 ದೇಶಗಳು ಈ ದಿನದಂದು ಸಂಗೀತ ಕಾರ್ಯಕ್ರಮಗಳು, ಸಂಗೀತ ರಸಸಂಜೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ ದಿನವನ್ನು ಆಚರಿಸುತ್ತವೆ.
ಸಂಗೀತ... ಬಹುಶಃ ಸಂಗೀತವನ್ನು ಇಷ್ಟಪಡದ ವ್ಯಕ್ತಿಗಳು ಇಲ್ಲವೇ ಎನ್ನಬಹುದು. ನಮ್ಮ ಖುಷಿ, ದುಃಖ, ಒಂಟಿತನದಲ್ಲಿ ಜೊತೆಯಾಗುವುದು ಸಂಗೀತ. ಸ್ನೇಹಿತರ ಜೊತೆ ನಲಿದಾಡುವಾಗಲೂ ಜೊತೆಯಾಗುವುದು ಸಂಗೀತ. ಪ್ರಯಾಣ ಮಾಡುವಾಗ, ಮನೆಗೆಲಸ ಮಾಡುವುದು ಹಿನ್ನೆಲೆಯಲ್ಲಿ ಸಂಗೀತದ ಆಲಾಪ ಕೇಳುತ್ತಿದ್ದರೆ ಅದರ ಒಲವೇ ಬೇರೆ. ಹೀಗೆ ಸಂಗೀತ ನಮ್ಮೆಲ್ಲರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಇದು ನಮ್ಮನ್ನು ಸಂಭ್ರಮಿಸುವಂತೆ ಮಾಡುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ, ಮನಸ್ಸಿಗೆ ಸಂತೋಷ ಸಿಗುವಂತೆ ಮಾಡುತ್ತದೆ. ಸಂಗೀತವು ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಯಾವುದೇ ಕಲಾ ಪ್ರಕಾರದಂತೆ ಸಂಗೀತವು ಭಾಷೆಯ ಅಡೆತಡೆಗಳನ್ನು ಮೀರಿದ್ದು, ಸಂಗೀತದ ಲಯವೇ ಹಾಗೆ ಎಂತಹವರನ್ನೂ ಸೆಳೆಯುವ ಗುಣ ಇದಕ್ಕಿದೆ.
ಸಂಗೀತವು ಮನಸ್ಸಿನ ನೋವನ್ನು ಮರೆಸುತ್ತದೆ ಮತ್ತು ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಪ್ರತಿ ವರ್ಷ ಸಂಗೀತ ಸೊಬಗನ್ನು ವೀಕ್ಷಿಸಲು ಮತ್ತು ಸಂಗೀತಕಾರರನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.
ಪ್ರಪಂಚದಾದ್ಯಂತ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಂಗೀತ ದಿನದ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
ದಿನ
ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸುಮಾರು 120 ದೇಶಗಳು ಈ ದಿನದಂದು ಸಂಗೀತ ಕಾರ್ಯಕ್ರಮಗಳು, ಸಂಗೀತ ರಸಸಂಜೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ ದಿನವನ್ನು ಆಚರಿಸುತ್ತವೆ.
ಇತಿಹಾಸ
ಫೆಟೆ ಡೆ ಲಾ ಮ್ಯೂಸಿಕ್, 1982ರಲ್ಲಿ ಫ್ರಾನ್ಸ್‌ನಲ್ಲಿ ಪ್ರಾರಂಭವಾದ ಸಂಗೀತ ಉತ್ಸವ. ಇದರಿಂದ ವಿಶ್ವ ಸಂಗೀತ ದಿನದ ಆಚರಣೆ ಅಸ್ತಿತ್ವಕ್ಕೆ ಬಂತು ಎನ್ನಲಾಗುತ್ತದೆ. ಜಾಕ್ ಲ್ಯಾಂಗ್ ಎಂಬ ಫ್ರೆಂಚ್‌ನ ಸಾಂಸ್ಕೃತಿಕ ಮಂತ್ರಿ 1981ರಲ್ಲಿ ಸಂಗೀತ ದಿನವನ್ನು ಆಚರಿಸುವ ಕಲ್ಪನೆಯನ್ನು ರೂಪಿಸಿದರು. ಮತ್ತೊಂದು ಹೇಳಿಕೆಯ ಪ್ರಕಾರ 1976ರಲ್ಲಿ ಜೋಯಲ್ ಕೊಹೆನ್ ಬೇಸಿಗೆಯ ಅಯನ ಸಂಕ್ರಾಂತಿಯ ಆರಂಭವನ್ನು ಗುರುತಿಸಲಿ ರಾತ್ರಿಯಿಡೀ ಸಂಗೀತ ಆಚರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು ಮತ್ತು ಅಂದಿನಿಂದ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ ಎನ್ನಲಾಗುತ್ತದೆ.
ಮಹತ್ವ
ವಿಶ್ವ ಸಂಗೀತ ದಿನವು ಸಂಗೀತವನ್ನು ಒಂದು ಕಲಾ ಪ್ರಕಾರವಾಗಿ ಯುವ ಪೀಳಿಗೆಯನ್ನು ಹೆಚ್ಚು ಸೆಳೆಯುವ ಗುರಿಯನ್ನು ಹೊಂದಿದೆ. ಸಂಗೀತದ ವಿವಿಧ ಪ್ರಕಾರಗಳನ್ನು ಅನ್ವೇಷಿಸಲು ಮತ್ತು ಹೊಸ ತಲೆಮಾರುಗಳ ಸಂಗೀತ ಪ್ರಕಾರಗಳನ್ನು ಜನರನ್ನು ಸ್ವಾಗತಿಸಲು ಹಾಗೂ ಅದನ್ನು ಪ್ರೇರೇಪಿಸುವ ಉದ್ದೇಶದಿಂದ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.
ಆಚರಣೆ
ಸಂಗೀತಗಾರರು ಮತ್ತು ಗಾಯಕರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಪ್ರೇಕ್ಷಕರಿಗೆ ಪ್ರದರ್ಶನ ನೀಡುವ ಮೂಲಕ ಸಂಗೀತಕ್ಕೆ ತಮ್ಮ ಗೌರವವನ್ನು ಕಲಾ ಪ್ರಕಾರವಾಗಿ ಸಲ್ಲಿಸುವ ಮೂಲಕ ದಿನವನ್ನು ಆಚರಿಸುತ್ತಾರೆ. ಈ ದಿನದ ಆಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಸಂಗೀತ ಕಚೇರಿಗಳು, ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ವಿಭಾಗ