logo
ಕನ್ನಡ ಸುದ್ದಿ  /  ಕರ್ನಾಟಕ  /  ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ, ಗಮನಸೆಳೆದ 5 ಮುಖ್ಯ ಅಂಶಗಳು

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ, ಗಮನಸೆಳೆದ 5 ಮುಖ್ಯ ಅಂಶಗಳು

Umesh Kumar S HT Kannada

Dec 15, 2024 06:11 PM IST

google News

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. (ಸಾಂಕೇತಿಕ ಚಿತ್ರ)

  • Covid-19 FIR; ಕರ್ನಾಟಕದಲ್ಲಿ ಕೋವಿಡ್ 19 ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಂತೆ, ಮೊದಲ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಏನು, ಇದರಲ್ಲಿ ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. (ಸಾಂಕೇತಿಕ ಚಿತ್ರ)
ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. (ಸಾಂಕೇತಿಕ ಚಿತ್ರ) (Canva)

Covid-19 FIR: ಕರ್ನಾಟಕದಲ್ಲಿ ಕೋವಿಡ್ ಸಂಕಷ್ಟ ಉಂಟಾಗಿದ್ದ ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಮಾಸ್ಕ್ ಸೇರಿ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರು ದಾಖಲಾದ ಹಿನ್ನೆಲೆಯಲ್ಲಿ ಮೊದಲ ಎಫ್‌ಐಆರ್‌ ಅನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಪತ್ರ ಅಧಿಕಾರಿ ಡಾ ಎಂ ವಿಷ್ಣು ಪ್ರಸಾದ್‌ ದೂರು ನೀಡಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಡಾ. ಪಿ. ಗಿರೀಶ, ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದ ಜಿ.ಪಿ. ರಘು, ಆರೋಗ್ಯ ಇಲಾಖೆಯ ಆರೋಗ್ಯ ಸಲಕರಣೆ ಅಧಿಕಾರಿಯಾಗಿದ್ದ ಎನ್. ಮುನಿರಾಜು, ಲಾಜ್ ಎಕ್ಸಪೋರ್ಟ್, ಎಂಎಸ್‌ ಪ್ರೊಡೆಂಟ್ ಮ್ಯಾನೇಜ್‌ಮೆಂಟ್, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ

1) ಕೋವಿಡ್ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆಗೆ ಅವಶ್ಯ ಬೇಕಾಗಿದ್ದ ಎನ್-95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಾಮಗ್ರಿಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಖರೀದಿಸಲಾಗಿದೆ. ಬಳಿಕ ಇದನ್ನು ದುರ್ಬಳಕೆ ಮಾಡಲಾಗಿದೆ. ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ನಡೆದ ಈ ಅಕ್ರಮದಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಈ ಅಪರಾಧ ಕೃತ್ಯವನ್ನು ಷಡ್ಯಂತ್ರ ರೂಪಿಸಿ ದೊಡ್ಡ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಪತ್ರ ಅಧಿಕಾರಿ ಡಾ ಎಂ ವಿಷ್ಣು ಪ್ರಸಾದ್‌ ದೂರಿನಲ್ಲಿ ಆರೋಪಿಸಿದ್ದಾರೆ.

2) ಕೋವಿಡ್ ಕಾಲಘಟ್ಟದಲ್ಲಿ 15, 51, 713 ಪಿಪಿಇ ಕಿಟ್ ಹಾಗೂ 9.75 ಕೋಟಿ ರೂ ಮೊತ್ತದ 42,15,047 ಮಾಸ್ಕ್‌ಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಸಂಗ್ರಹಿಸಿ, ಸ್ವಂತ ಲಾಭಕ್ಕೆ ಬಳಸಿಕೊಂಡಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರದ ಅನುಮೋದನೆ ಪಡೆದು ಒಟ್ಟು 41.35 ಕೋಟಿ ರೂ ಮೊತ್ತದ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಕಿಟ್‌ಗಳನ್ನು ಬಳಸುವುದಕ್ಕೆ ಅನುಮೋದನೆ ನೀಡಲಾಗಿತ್ತು. 41.35 ಕೋಟಿ ರೂ ಮೌಲ್ಯದ ಮೇಲೆ ಆಗಬಾರದು ಎಂಬ ಷರತ್ತು ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

3) ಕೋವಿಡ್ ಕಾಲದ ಹಗರಣ ತನಿಖೆಗೆ ಎಸ್‌ಐಟಿ ರಚಿಸಬೇಕಾದ ಅಗತ್ಯವಿದೆ. ಈಗಾಗಲೇ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೋವಿಡ್ ಹಗರಣ ಕುರಿತಾದ ಪ್ರಕರಣಗಳು ಒಂದೊಂದಾಗಿ ದಾಖಲಾಗುತ್ತಿವೆ. ಎಲ್ಲವನ್ನೂ ಸೇರಿಸಿ ತನಿಖೆ ನಡೆಸುವುದಕ್ಕೆ ಎಸ್‌ಐಟಿ ರಚಿಸುವ ಅಗತ್ಯವಿದೆ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದ್ದಾರೆ.

4) ಮುಡಾ ಪ್ರಕರಣ, ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋವಿಡ್ ಪ್ರಕರಣದಲ್ಲಿ ಎಫ್‌ಐಆ‌ರ್‌ ದಾಖಲಿಸುವ ಮೂಲಕ ಬಿಜೆಪಿಯನ್ನು ಹೆದರಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

5) ಕರ್ನಾಟಕ ವಿಧಾನಸಭೆಯಲ್ಲಿ ಗುರುವಾರ (ಡಿಸೆಂಬರ್ 12) ಸಿಎಜಿ ವರದಿ ಸಲ್ಲಿಕೆಯಾಗಿದ್ದು, ಕೋವಿಡ್ 19 ಸಂದರ್ಭದಲ್ಲಿ ಕರ್ನಾಟಕದ ಖಾಸಗಿ ಅನುದಾನರಹಿತ ಶಾಲೆಗಳು 345.80 ಕೋಟಿ ರೂಪಾಯಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿವೆ. ಶಾಲಾ ಶುಲ್ಕ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವರದಿ ಟೀಕಿಸಿದೆ.

ನ್ಯಾಯಮೂರ್ತಿ ಕುನ್ಹಾ ಅಂತಿಮ ವರದಿ ಸಲ್ಲಿಸುವ ಮೊದಲೇ ಸರ್ಕಾರ ರಾಜಕೀಯವಾಗಿ ಪ್ರಕರಣವನ್ನು ಮುನ್ನಡೆಸುತ್ತಿದೆ. ಇದು ದ್ವೇಷದ ರಾಜಕಾರಣ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ