logo
ಕನ್ನಡ ಸುದ್ದಿ  /  ಕರ್ನಾಟಕ  /  ಕೋವಿಡ್ ಕಿಟ್‌ ಹಗರಣ; ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು

ಕೋವಿಡ್ ಕಿಟ್‌ ಹಗರಣ; ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು

Umesh Kumar S HT Kannada

Nov 09, 2024 04:18 PM IST

google News

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)

  • Covid-19 Equipment Scandal: ಕರ್ನಾಟಕ ಕೋವಿಡ್ ಕಿಟ್‌ ಹಗರಣಕ್ಕೆ ಸಂಬಂಧಿಸಿದ ತನಿಖಾ ಆಯೋಗ ನೀಡಿದ ವರದಿ ಪ್ರಕಾರ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದ್ಧಾರೆ. ಇದರ ವಿವರ ಇಲ್ಲಿದೆ. 

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ) (PTI)

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಕಿಟ್‌ ಮತ್ತು ಔಷಧ ಖರೀದಿಯಲ್ಲಿನ ಅವ್ಯವಹಾರಗಳ (Karnataka Covid-19 Equipment Scandal) ತನಿಖೆಗಾಗಿ ರಚಿಸಲಾದ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ತನಿಖಾ ಆಯೋಗವು ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ ಶ್ರೀರಾಮುಲು ಅವರನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಪ್ರಕಟಿಸಿದ್ದಾರೆ. “ಕೋವಿಡ್ ಹಗರಣ ವ್ಯಾಪಕವಾಗಿದ್ದು ಕಾನೂನಾತ್ಮಕವಾಗಿ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಕಾನೂನಿನ ಅಡಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿ ಈ ಲೂಟಿಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ” ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೋವಿಡ್ ಕಿಟ್‌ ಹಗರಣ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಿಷ್ಟು

"ಕೋವಿಡ್ ಸಂಕಷ್ಟದ ವೇಳೆ ಆ ಪರಿಸ್ಥಿತಿ ನಿರ್ವಹಣೆ ಮಾಡುವಾಗ ಸಾಕಷ್ಟು ಲೋಪಗಳು ಸಂಭವಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಯಾರೂ ಅವರನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಆ ಪರಿಸ್ಥಿತಿಯನ್ನು ಬಳಸಿಕೊಂಡು, ಅಂದಿನ ಸರ್ಕಾರವು ಲೂಟಿ ಮಾಡಿತು. ಅವರಿಗೆ ಅನುಕೂಲಕರ ನಿರ್ಧಾರಗಳನ್ನು ತೆಗೆದುಕೊಂಡಿತು. ನಿಯಮಗಳನ್ನು ಉಲ್ಲಂಘಿಸಿತು. ಆಗ ವಿರೋಧ ಪಕ್ಷವಾಗಿ ನಾವು (ಕಾಂಗ್ರೆಸ್ ) ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ತನಿಖೆ ನಡೆಸಿ ವರದಿ ಸಲ್ಲಿಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂ ರಾವ್ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್‌ ಅವರು, ಆಯೋಗವು ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಮತ್ತು ಪರಿಶೀಲಿಸಲು ಸಾಕಷ್ಟು ದಾಖಲೆಗಳಿರುವುದರಿಂದ ಆರು-ಏಳು ತಿಂಗಳಲ್ಲಿ ಎರಡನೇ ವರದಿಯನ್ನು ಸಲ್ಲಿಸಬಹುದು ಎಂದು ಹೇಳಿದರು.

14 ಕೋಟಿ ರೂಪಾಯಿ ಲೂಟಿ ಮಾಡಿದೆ ಹಿಂದಿನ ಸರ್ಕಾರ; ಸಚಿವ ಗುಂಡೂರಾವ್

ಕೋವಿಡ್ ಸಂದರ್ಭದಲ್ಲಿ ಮಾನವೀಯತೆ ಮರೆತು, ಜನರ ಕಷ್ಟಕಾಲವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಪಿಪಿಇ ಕಿಟ್ ಖರೀದಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಹೆಚ್ಚಿನ ಬೆಲೆಗೆ ಖರೀದಿಸಿ 14 ಕೋಟಿ ರೂಪಾಯಿ ಲೂಟಿ ಹೊಡೆಯಲಾಗಿದೆ. ಇದಕ್ಕೆ ನೇರ ಕಾರಣ ಹಿಂದಿನ ಮುಖ್ಯಮಂತ್ರಿಗಳೇ ಎಂಬುದು ನ್ಯಾಯಾಧೀಶರ ವರದಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನವೆಂಬರ್ 13 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆ ಪ್ರಚಾರದಿಂದ ದೂರ ಉಳಿಯುವಂತೆ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರಿಗೆ ಸಲಹೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ತನಿಖಾ ವರದಿಯಲ್ಲಿ ಅವರ ವಿರುದ್ಧದ ಗಂಭೀರ ಆರೋಪಗಳನ್ನು ಉಲ್ಲೇಖಿಸಿದ್ದಾರೆ. ಅಂದು ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರ ನಂತರ ಹಾಲಿ ಸಂಸದ ಕೆ ಸುಧಾಕರ್ ಅವರೂ ಇದ್ದರು. ಪೂರ್ಣ ವರದಿ ಬಂದ ಬಳಿಕ ಪೂರ್ತಿ ಚಿತ್ರಣ ಸಿಗಲಿದೆ ಎಂದು ಹೇಳಿದರು. ಪ್ರಾಥಮಿಕ ವರದಿಯನ್ನು ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರು ಆಗಸ್ಟ್ 31 ರಂದು ಸಲ್ಲಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ