ಬೆಂಗಳೂರಿನ 3 ಇಂಜಿನಿಯರಿಂಗ್ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ; ಆತಂಕದಲ್ಲಿ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ
Oct 04, 2024 09:37 PM IST
ಬೆಂಗಳೂರಿನ 3 ಇಂಜಿನಿಯರಿಂಗ್ ಕಾಲೇಜುಗಳಿಗೆ ಹುಸಿ ಬಾಂವ್ ಬೆದರಿಕೆ
- Hoax bomb Call: ಬೆಂಗಳೂರಿನ ಪ್ರಮುಖ 3 ಇಂಜಿನಿಯರಿಂಗ್ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪ್ರಕರಣ ದಾಖಲಾಗಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ನಗರದ ಮೂರು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ವಿದ್ಯಾರ್ಥಿಗಳು ಮತ್ತು ಕಾಲೇಜುಗಳಲ್ಲಿ ಆತಂಕ ಮೂಡಿಸಿತ್ತು. ಬೆಂಗಳೂರಿನ ದಕ್ಷಿಣ ಭಾಗದ ಎರಡು ಕಾಲೇಜುಗಳಾದ ವಿವಿಪುರಂನ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಹನುಮಂತನಗರದ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಬೆಂಗಳೂರು ಉತ್ತರ ಭಾಗದ ಎಂಎಸ್ ರಾಮಯ್ಯ ನಗರದ ಎಂಎಸ್ ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುಗಳಿಗೆ ಈ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೊವೈನಲ್ಲಿರುವ ಪಾಕ್ ನ ಐಎಸ್ ಐ ಸೆಲ್ ಗಳ ಮೂಲಕ ಹೈಡ್ರೋಜನ್ ಆಧಾರಿತ ಸುಧಾರಿಸಿದ ಬಾಂಬ್ ಇರಿಸಲಾಗಿದೆ ಎಂದು ಮೇಲ್ ನಲ್ಲಿ ಹೇಳಲಾಗಿತ್ತು. S_VE_SEKAR@HOTMAIL.COM ಮೇಲ್ನಿಂದ ಸಂದೇಶ ಬಂದಿದೆ.
ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆಯಾ ಕಾಲೇಜುಗಳ ಪ್ರಾಂಶುಪಾಲರ ಇ-ಮೇಲ್ ವಿಳಾಸಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರೂ ಕಾಲೇಜುಗಳಿಗೆ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆ ದಳ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಕಾಲೇಜು ಆವರಣದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ನಂತರ ಇವೆಲ್ಲವೂ ಹುಸಿ ಬಾಂಬ್ ಸಂದೇಶ ಎನ್ನುವುದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಹೊರಗೆ ಕಳುಹಿಸಲಾಗಿತ್ತು. ವಿಷಯ ಹರಡುತ್ತಿದ್ದಂತೆ ಅನೇಕ ಪೋಷಕರೂ ಕಾಲೇಜು ಬಳಿ ಜಮಾಯಿಸಿದ್ದರು. ಕುಮಾರಸ್ವಾಮಿ ಲೇಔಟ್ ಹನುಮಂತನಗರ, ಸದಾಶಿವನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ತಮಿಳುನಾಡಿನಲ್ಲೂ ಹುಸಿ ಬಾಂಬ್ ಬೆದರಿಕೆ
ಕಳೆದ ವಾರ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಬಾಂಬ್ ಬೆದರಿಕೆಯ ಇ-ಮೇಲ್ ಮೂಲಕ ಸಂದೇಶ ಬಂದಿತ್ತು. ಆಗಸ್ಟ್ ತಿಂಗಳಲ್ಲಿ ವೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ಮಾಲ್ವೊಂದಕ್ಕೆ ಇದೇ ರೀತಿಯ ಬಾಂಬ್ ಬೆರದರಿಕೆಯ ಸಂದೇಶ ಬಂದಿತ್ತು. ಶುಕ್ರವಾರ ಬೆಳಗ್ಗೆ ಬೆಂಗಳೂರು ಮಾತ್ರವಲ್ಲದೆ ತಮಿಳುನಾಡಿನ ತಿರುಚನಾಪಳ್ಳಿಯ ಹಲವಾರು ಶಾಲೆಗಳಿಗೂ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಗುರುವಾರವೂ ತಿರುಚಾನಪಳ್ಳಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ತಪಾಸಣೆ ನಡೆಸಿದ ನಂತರ ಇದೊಂದು ಹುಸಿ ಬಾಂಬ್ ಸಂದೇಶ ಎಂದು ತಿಳಿದು ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.