ಧಾರವಾಡ: ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ಬಂಧನ, 97 ಲಕ್ಷ ಚಿನ್ನಾಭರಣ ಜಪ್ತಿ; ಉಡುಪಿಯಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥ
Karnataka Crime News: ಧಾರವಾಡದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಉಡುಪಿಯಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥಗೊಂಡಿದ್ದಾರೆ.
ಧಾರವಾಡ: ದಾಖಲೆಗಳಿಲ್ಲದ 97 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಪುಣೆ-ಬೆಂಗಳೂರು ರಸ್ತೆಯಲ್ಲಿನ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ಬಳಿ ಖಾಸಗಿ ಬಸ್ನಲ್ಲಿ ಗುರುವಾರ (ಅ.3) ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ವಿಕಾಸ್ ಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿ ಮೂಲದ ಭವರಸಿಂಗ್ ವಿಜಯಸಿಂಗ್ ಚೌಹ್ಹಾಣ್ ಮತ್ತು ನರಪತ್ ಸಿಂಗ್ ರತನಸಿಂಗ್ ಬಾಲೋತ್ ಬಂಧಿತರು. ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ನೇತೃತ್ವದಲ್ಲಿ ಈ ದಾಳಿ ನಡೆಯಿತು.
ಖಾಸಗಿ ಮಾಲಿಕತ್ವದ ವಿಜಯಾನಂದ ಟ್ರಾವೆಲ್ಸ್ನ ಬಸ್ ಅನ್ನು ನರೇಂದ್ರ ಕ್ರಾಸ್ ಬಳಿ ಬೆಳಗ್ಗೆ 9.35ರ ಸುಮಾರಿಗೆ ತಪಾಸಣೆ ನಡೆಸಿದ ವೇಳೆ ಬ್ಯಾಗ್ನಲ್ಲಿ ಇಡಲಾಗಿದ್ದ 1237 ಗ್ರಾಂ ಚಿನ್ನ, 15.174 ಕಿ.ಗ್ರಾಂ ಬೆಳ್ಳಿ, ಬಿಸ್ಕತ್, ನಾಣ್ಯಗಳು ಸೇರಿ ಒಟ್ಟು 97,97,64 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಿಪಿಐ ಕಮತಗಿ, ಪಿಎಸ್ಐ ಬಸನಗೌಡ ಮೆಳ್ಳೆಪ್ಪನವರ, ಆರ್ವಿ ಕುಂಬಾರ, ನಾಗರಾಜ ಹಾಲವರ, ಎಆರ್ ಜಾಧವ, ಮಂಜುನಾಥ ಚಿಕ್ಕಬಿ, ಕೃಷ್ಣ ವಿಭೂತಿ, ಮಲ್ಲೇಶ ಕಡತಿ, ಚನಬಸಪ್ಪ ಅರಳಿಮರದ ಮತ್ತು ತಂಡಕ್ಕೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಅಣ್ಣಿಗೇರಿ ಹೆಸರು ಕಾಳು ಕಳ್ಳತನ: ಉಗ್ರಾಣ ಪ್ರಭಾರಿ ಸೇರಿ ಇಬ್ಬರ ಸೆರೆ
ಧಾರವಾಡ: ಅಣ್ಣಿಗೇರಿ ಗೋದಾಮಿನಲ್ಲಿ ನಡೆದ ಹೆಸರು ಕಾಳು ಕಳ್ಳತನ ಪ್ರಕರಣಕ್ಕೆ ಈಗಾಗಲೇ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು ರೈತರು ಪ್ರತಿಭಟನೆ ಸಹ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಲಯ ಐಜಿಪಿ ವಿಕಾಸಕುಮಾರ ಹೇಳಿದ್ದಾರೆ. ಪ್ರಭಾರಿ ಉಗ್ರಾಣ ವ್ಯವಸ್ಥಾಪಕ ಆಕಾಶ ಸುಭಾಶ ಮುಶಣ್ಣವರ ಹಾಗೂ ಸಹೋದ್ಯೋಗಿ ಶಶಿಕುಮಾರ ಬಸಯ್ಯ ಹಿರೇಮಠ ಎಂಬಿಬ್ಬರನ್ನು ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 70 ಲಕ್ಷ ರೂ. ಮೌಲ್ಯದ 1859 ಹೆಸರು ಕಾಳು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಸ್ಪಿ ನೇತೃತ್ವದಲ್ಲಿ ನವಲಗುಂ ಸಿಪಿಐ ರವಿ ಕಪ್ಪತ್ತನವರ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಪಿಐ ಮುರಗೇಶ ಚನ್ನಣ್ಣವರ ಮತ್ತಿತರರು ಕಾರ್ಯಾಚರಣೆ ಕೈಗೊಂಡಿದ್ದರು.
ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥ, ಇಬ್ಬರು ಆಸ್ಪತ್ರೆಗೆ ದಾಖಲು
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಉಪ್ಪುಂದ ಬಳಿ ಕಲುಷಿತ ನೀರು ಸೇವಿಸಿ ಸುಮಾರು ನೂರರಷ್ಟು ಮಂದಿ ಅಸೌಖ್ಯಗೊಂಡ ಘಟನೆ ನಡೆದಿದ್ದು, ಅವರನ್ನು ಇಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಿದೆ. ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಮತ್ತು 7ನೇ ವಾರ್ಡಿನಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಹಲವು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಪ್ರತಿ ಮನೆಯಲ್ಲಿ ವಾಂತಿ ಭೇದಿ ಆಗಿದೆ ಎನ್ನಲಾಗಿದ್ದು, ಬಳಿಕ ಸುಧಾರಿಸಿಕೊಂಡಿದ್ದಾರೆ. ಆದರೆ 80 ವರ್ಷದವರೊಬ್ಬರ ಸ್ಥಿತಿ ಹದಗೆಟ್ಟ ಕಾರಣ, ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆ ನಡೆದು 3 ದಿನಗಳಾಗಿದ್ದು, ಇದೀಗ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ.