ದಸರಾ ರಜೆ ಹಿನ್ನೆಲೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ, ಬೆಂಗಳೂರು-ಮೈಸೂರು ವಿಶೇಷ ಸಾರಿಗೆ; ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸ
Dasara Tourism: ದಸರಾ ರಜೆ ಹಿನ್ನೆಲೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಸಾರಿಗೆ, ಮೈಸೂರಿನಿಂದ ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೇಕೆ ತಡ, ಹೊರಡೋಣ ಬನ್ನಿ. (ವರದಿ-ಎಚ್. ಮಾರುತಿ)
ಬೆಂಗಳೂರು: ದಸರಾ ರಜೆ ಆರಂಭವಾಗಿದ್ದು, ಮೈಸೂರು ದಸರಾ ರಾಜ್ಯ ಹೊರ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಹೋಗಲು ಚಿಂತನೆ ಮಾಡುತ್ತಿದ್ದೀರಾ? ಯೋಚಿಸಬೇಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು, ಮೈಸೂರು ಸೇರಿದಂತೆ ಹಲವು ಭಾಗಗಳಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಮೈಸೂರಿನಿಂದ ಒಂದು ದಿನದ ಪ್ಯಾಕೇಜ್ ಟೂರ್ ಕೂಡಾ ಲಭ್ಯವಿದೆ.
ಈಗಾಗಲೇ ಕಾರ್ಯಾಚರಣೆ ಮಾಡಲಾಗುತ್ತಿರುವ ವೇಗದೂತ, ರಾಜಹಂಸ, ಸ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದೆ. 2000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು ಈ ಬಸ್ಗಳು ಅಕ್ಟೋಬರ್ 9ರಿಂದ 12 ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ನಡೆಸಲಿವೆ.
ಈ ಬಸ್ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡಲಿವೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅಕ್ಟೋಬರ್ 13 ಮತ್ತು 14 ರವರೆಗೆ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.
ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.
ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಸಾರಿಗೆ
ದಸರಾ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ 660 ವಿಶೇಷ ಸಾರಿಗೆ ಮತ್ತು ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆಆರ್ಎಸ್, ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್ಡಿ ಕೋಟೆ, ಚಾಮರಾಜನಗರ, ಹುಣಸೂರು, ಕೆಆರ್ ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ವಾಹನಗಳು ಸೇರಿ ಒಟ್ಟಾರೆ 660 ದಸರಾ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸ
ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸ ಆಯೋಜಿಸಲಾಗಿದೆ.
1. ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ: ರೂ.400 ಮತ್ತು ಮಕ್ಕಳಿಗೆ: ರೂ.250.
2. ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. (ಪ್ರಯಾಣ ದರ ವಯಸ್ಕರಿಗೆ: ರೂ.450 ಮತ್ತು ಮಕ್ಕಳಗೆ: ರೂ.300)
3. ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: ರೂ.300 ಮತ್ತು ಮಕ್ಕಳಿಗೆ: ರೂ.200)
ಈ ಪ್ಯಾಕೇಜ್ ಪ್ರವಾಸ ಅಕ್ಟೋಬರ್ 3 ರಿಂದ 15 ರವರೆಗೆ ಇರಲಿದೆ. ಬೆಳಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ನಂತರ ಸಾಯಂಕಾಲ ಮೈಸೂರಿಗೆ ಮರಳುತ್ತವೆ.
• ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಅಥವಾ ಮೊಬೈಲ್ ಮುಖಾಂತರ ಮಾಡಬಹುದಾಗಿದೆ. ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದೆ.