ಕರ್ನಾಟಕ ರಾಜ್ಯ ಪಕ್ಷಿ ನೀಲಕಂಠನಿಗೆ ರಾಮಮಂದಿರ ಉದ್ಘಾಟನೆ ದಿನ ನಮನ, ಚಂಬಲ್ ಕಣಿವೆ ಕಾಡಲ್ಲಿ ಗೌರವ, ರಾಮಾಯಣಕ್ಕೂ ಉಂಟು ನಂಟು -Forest Tales
ಕರ್ನಾಟಕದ ರಾಜ್ಯಪಕ್ಷಿ ನೀಲಕಂಠನಿಗೆ ಉತ್ತರ ಭಾರತದಲ್ಲಿಯೇ ಅಪಾರ ಗೌರವ. ದಸರಾ ಮಾತ್ರವಲ್ಲದೇ ಕೆಲವೆಡೆ ಹಬ್ಬ ಹರಿದಿನಗಳಲ್ಲಿ ಈ ಪಕ್ಷಿಗಳಿಗೆ ಆಹಾರ ನೀಡಿ ಆರೈಕೆ ಮಾಡುವುದು ವಾಡಿಕೆ. ದಾಸಮಗರೆ, ಇಂಡಿಯನ್ ರೋಲರ್ ಎಂತಲೂ ಕರೆಯಲಾಗುವ ಈ ಹಕ್ಕಿ ರೈತಮಿತ್ರ ಎಂದೇ ಗುರುತಿಸಿಕೊಂಡಿದೆ.ರಾಮಮಂದಿರ ಉದ್ಘಾಟನೆ ವೇಳೆಯೂ ಈ ಹಕ್ಕಿ ಕಂಡು ನಮಸ್ಕರಿಸಿದವರು ಅನೇಕ.
ಉತ್ತರ ಪ್ರದೇಶದ ಐತಿಹಾಸಿಕ ನಗರಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಡಗರ ಜೋರಾಗಿದ್ದರೆ ಅಲ್ಲಿಂದ ಒಂದು ಸಾವಿರ ಕಿ.ಮಿ ದೂರದ ಚಂಬಲ್ ಜನ ನೀಲಕಂಠ ಹಕ್ಕಿಯನ್ನು ಹುಡುಕುತ್ತಿದ್ದರು.
ಅಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಖುಷಿಯಲ್ಲಿತ್ತು. ಅಯೋಧ್ಯೆಯಲ್ಲಿದ್ದವರು ಬಾಲರಾಮನ ಮೂರ್ತಿ ದರ್ಶನ ಮಾಡುವ ತವಕದಲ್ಲಿದ್ದರೆ, ಮನೆಯಲ್ಲಿಯೇ ಕೂತವರು ಮಾಧ್ಯಮಗಳ ಮೂಲಕ ರಾಮನನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅದೇ ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶದ ಹಲವಾರು ಗ್ರಾಮಗಳ ಜನ ಹಕ್ಕಿಯೊಂದರ ದರ್ಶನ ಮಾಡುವ ಭಕ್ತಿಭಾವದಲ್ಲಿದ್ದರು. ಇದಕ್ಕಾಗಿ ಅವರು ಮಧ್ಯಪ್ರದೇಶ- ಉತ್ತರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಚಂಬಲ್ ವನ್ಯಜೀವಿ ಉದ್ಯಾನವನದ ಕಡೆ ತೆರಳಿದ್ದರು. ಕಾಡಿನಲ್ಲಿ ಹಕ್ಕಿಯನ್ನು ಕಾಣಬೇಕು. ದೂರದಿಂದಲೇ ನಮಸ್ಕರಿಸಿ ಆ ಹಕ್ಕಿಯಲ್ಲಿ ರಾಮನನ್ನು ಕಾಣಬೇಕು ಎನ್ನುವುದು ಅವರ ಉದ್ದೇಶವಾಗಿತ್ತು.
ನಾಲ್ಕು ರಾಜ್ಯಗಳ ರಾಜ್ಯ ಪಕ್ಷಿ
ಅದು ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ. ಕರ್ನಾಟಕ ಮಾತ್ರವಲ್ಲದೇ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಸಹಿತ ಭಾರತದ ನಾಲ್ಕು ರಾಜ್ಯಗಳ ರಾಜ್ಯಪಕ್ಷಿಯೂ ಹೌದು ಈ ನೀಲಕಂಠ. ಅರಣ್ಯ ಮಾತ್ರವಲ್ಲದೇ ಊರುಗಳಲ್ಲೂ ನೀಲಿ ಬಣ್ಣದ ಈ ಹಕ್ಕಿ ಕಾಣ ಸಿಗುತ್ತದೆ. ಧಾರ್ಮಿಕವಾಗಿ ಕರ್ನಾಟಕದಲ್ಲಿ ನೀಲಕಂಠನಿಗೆ ಅಂತಹ ಮಹತ್ವವೇನೂ ಇಲ್ಲ. ಶಿವನ ಹೆಸರು ಹೊಂದಿರುವ ಹಕ್ಕಿ ಎನ್ನುವ ಗೌರವದ ಭಾವನೆ ಮಾತ್ರ ಇದೆ. ಆದರೆ ಉತ್ತರಭಾರತದಲ್ಲಿ ನೀಲಕಂಠನಿಗೆ ದಸರಾದಲ್ಲೂ ದರ್ಶನದ ಗೌರವ. ಈಗಲೂ ಚಂಬಲ್ ಪ್ರದೇಶ, ಆಗ್ರಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ರಾಮಮಂದಿರ ಉದ್ಘಾಟನೆ ದಿನ ನೀಲಕಂಠನ ದರ್ಶನ ಮಾಡಲು ಜನ ಅಲ್ಲಲ್ಲಿ ಸಾಲು ಗಟ್ಟಿ ನಿಂತಿದ್ದರು.
ಶಿವನ ಹೆಸರು
ಈ ಪಕ್ಷಿ ಕುತ್ತಿಗೆ ಭಾಗದಲ್ಲಿ ನೀಲಿ ಬಣ್ಣವಿಲ್ಲ. ಆದರೂ ಇವುಗಳನ್ನು ನೀಲಕಂಠ (ಶಿವನ ಹೆಸರು) ಎಂದು ಕರೆಯುತ್ತಾರೆ. ಈ ಪಕ್ಷಿಯು ವಿಷ್ಣುವಿಗೆ ಶ್ರೇಷ್ಠವಾದ ಪಕ್ಷಿ ಎಂಬ ನಂಬಿಕೆಯಿಂದ, ಭಾರತದ ಕೆಲವೆಡೆ ದುರ್ಗಾಷ್ಟಮಿಯ ದಿನ ಈ ಪಕ್ಷಿಯನ್ನು ಹಿಡಿದು, ಜನರಿಗೆ ತೋರಿಸಿ, ಹಾರಿ ಬಿಡುವ ಪದ್ದತಿ ಇದೆ. ಈ ಹಕ್ಕಿಯ ಕತ್ತರಿಸಿದ ಗರಿಗಳನ್ನು ಹುಲ್ಲಿಗೆ ಸೇರಿಸಿ ಹಸುಗಳಿಗೆ ಆಹಾರ ನೀಡುವುದರಿಂದ ಅವುಗಳ ಹಾಲಿನ ಇಳುವರಿ ಹೆಚ್ಚಾಗುತ್ತದೆ ಎನ್ನುವುದು ಅಪಾರ ನಂಬಿಕೆ.
ದೆಹಲಿ ಮೂಲದ ಪರಿಸರವಾದಿ ಹಾಗೂ ವನ್ಯಜೀವಿ ತಜ್ಞ ದೇವಶೀಶ್ ಭಟ್ಟಾಚಾರ್ಯ ಹೇಳುವುದು ಹೀಗೆ: ರಾಮಾಯಣದ ಬಗ್ಗೆ ಜನರಿಗೆ ಈಗಲೂ ಗೌರವವಿದೆ. ರಾಮಾಯಣದಲ್ಲಿನ ಹಲವಾರು ಘಟನಾವಳಿಗಳನ್ನು ಆದರಿಸುತ್ತಾರೆ. ಹಲವರು ತಮ್ಮ ಬದುಕಿನಲ್ಲೂ ಅನುಸರಿಸುತ್ತಾರೆ. ಇದರಲ್ಲಿ ಮುಖ್ಯವಾಗಿ ನೀಲಕಂಠ ಹಕ್ಕಿಯನ್ನು ಉತ್ತರ ಭಾರತದ ಭಾಗದಲ್ಲಿ ಪವಿತ್ರ ಹಕ್ಕಿ ಎಂದೇ ಗುರುತಿಸಲಾಗುತ್ತಿದೆ. ಚಂಬಲ್ ಭಾಗದಲ್ಲೂ ನೀಲಕಂಠ ಹಕ್ಕಿಗಳು ಯಥೇಚ್ಛವಾಗಿ ಇವೆ. ನೀಲಕಂಠ ಹಕ್ಕಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಂತೂ ಕಂಡು ಬಂದಿದೆ. ಶೇ. ನಾಲ್ಕರಷ್ಟು ನೀಲಕಂಠ ಸಂತತಿಯಲ್ಲಿ ಹೆಚ್ಚಾಗಿದೆ.
ರಾಮಾಯಣದ ನಂಟು
ರಾವಣ ವಧೆ ಮಾಡುವ ಮೊದಲು ಯುದ್ದಕ್ಕೆ ಹೊರಟಾಗ ಶಮೀ ಮರಕ್ಕೆ ಪೂಜೆ ಮಾಡಿದ್ದು, ರಾವಣನ ಲಂಕೆಯನ್ನು ರಾಮ ವಶಪಡಿಸಿಕೊಳ್ಳುವ ಮುನ್ನಾ ದರ್ಶನ ಮಾಡಿದ್ದು ನೀಲಕಂಠ ಹಕ್ಕಿಯನ್ನೇ ಎನ್ನುವುದು ಈ ಭಾಗದವರ ನಂಬಿಕೆ. ಇನ್ನೂ ಕೆಲವರು ನೀಲಕಂಠ ಎನ್ನುವ ಹೆಸರು ಇರುವ ಕಾರಣಕ್ಕೆ ಅದನ್ನು ಶಿವನ ರೂಪದಲ್ಲಿ ನೋಡುತ್ತಾರೆ. ಕಂಡ ತಕ್ಷಣ ನಮಸ್ಕರಿಸುತ್ತಾರೆ. ವಿಜಯದಶಮಿ ಸಮಯದಲ್ಲಂತೂ ಕಡ್ಡಾಯವಾಗಿ ದರ್ಶನ ಮಾಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯ ಉಪಾಧ್ಯಾಯ ನೀಲಕಂಠದ ಹಿಂದಿನ ಧಾರ್ಮಿಕ ಮಹತ್ವವನ್ನು ಬಿಡಿಸಿಡುತ್ತಾರೆ.
ಬಗೆಬಗೆಯ ವ್ಯಾಖ್ಯಾನ
ರಾವಣನನ್ನು ರಾಮ ಕೊಂದಾಗ ಬ್ರಾಹ್ಮಣನೊಬ್ಬನನ್ನು ಕೊಂದ ಪಾಪ ನಿನ್ನನ್ನು ಸುತ್ತಿಕೊಳ್ಳಲಿದೆ ಎಂದು ಕೆಲವರು ಹೇಳಿದರು. ಆಗ ಶಿವನನ್ನು ರಾಮ ಆರಾಧಿಸಿದ. ರಾಮನ ಭಕ್ತಿಗೆ ಮೆಚ್ಚಿ ಶಿವ ನೀಲಕಂಠ ರೂಪದಲ್ಲಿ ಬಂದ. ಇದನ್ನು ಈಗಲೂ ರಾಮ ಶಿವನ ನಂಟನ್ನು ನೀಲಕಂಠನ ರೂಪದಲ್ಲಿಯೇ ಜನ ನೆನಪಿಸಿಕೊಳ್ಳುತ್ತಾರೆ. ಇದು ಜನರ ನಂಬಿಕೆ ಹಾಗೂ ನೀಲಕಂಠ ಹಕ್ಕಿಯ ಮೇಲೆ ಇರುವ ಗೌರವ ಎನ್ನುವ ಇಂತಹ ಹತ್ತಾರು ವ್ಯಾಖ್ಯಾನಗಳನ್ನು ಈಗಲೂ ನೀಡಲಾಗುತ್ತದೆ.
ಉತ್ತರ ಭಾರತದಲ್ಲಿ ಜನರು ಅದನ್ನು ಗುರುತಿಸಿದಾಗ ಈ ರೀತಿ ಹೇಳುವುದೂ ಜನಪ್ರಿಯವಾಗಿದೆ: "ನೀಲಕಂಠ ತುಮ್ ನೀಲೆ ರಹಿಯೋ, ದೂದ್ ಭಾತ್ ಕಾ ಭೋಜ್ ಕರಿಯೋ, ಹಮ್ರಿ ಬಾತ್ ರಾಮ್ ಸೆ ಕಹಿಯೋ, ನೀಲಕಂಠ, ನೀವು ನೀಲಿಯಾಗಿರಿ, ಅಕ್ಕಿ ಮತ್ತು ಹಾಲಿನೊಂದಿಗೆ ಔತಣ ಮಾಡಿ ಮತ್ತು ರಾಮನಿಗೆ ನಮ್ಮ ಶುಭಾಶಯಗಳನ್ನು ತಿಳಿಸಿ ಎನ್ನುವುದು ಅದರ ಭಾವಾನುವಾದ.
ನೀಲಕಂಠನ ಪ್ರವರ
ಬಹಳಷ್ಟು ಜನ ನೀಲಕಂಠ ಹಕ್ಕಿಯನ್ನು ಕಿಂಗ್ ಫಿಶರ್ ಹಕ್ಕಿ ಎಂದು ತಿಳಿದು ಬಿಡುತ್ತಾರೆ. ನೀಲಿ ಬಣ್ಣದ ಕಾರಣಕ್ಕೆ ಎರಡೂ ಹಕ್ಕಿಗಳು ಒಂದೆ ಎನ್ನಿಸಬಹುದು. ಒಮ್ಮೆಲೆ ನೋಡಿದಾಗ ಒಂದೇ ಎನ್ನಿಸಿದರೂ ಇವೆರೆಡೂ ಹಕ್ಕಿಗಳು ಬೇರೆಯೇ.
ಇಂಡಿಯನ್ ರೋಲರ್ ಎಂದೂ ಕರೆಯಲ್ಪಡುವ ನೀಲಕಂಠ ಗುಂಪಾಗಿ ಹಾರಾಡುವುದು ಕಡಿಮೆ. ಇವು ಕುಟುಂಬದ ಬಳಗ ಹೊಂದಿದ್ದು, ಆಗಾಗ ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಗಡುಸಾದ ಧ್ವನಿಯ ಮೂಲಕ ಒಂದಕ್ಕೊಂದು ಸಂದೇಶ ರವಾನಿಸುವುದು ನೀಲಕಂಠನ ವಿಶೇಷ ಸಂಪರ್ಕ ಜಾಲ.
ಇದು ಪಾರಿವಾಳಕ್ಕಿಂತ ಚಿಕ್ಕದಾಗಿದೆ. ನೆತ್ತಿ, ರೆಕ್ಕೆ ತಿಳಿ ನೀಲಿಯಾಗಿದ್ದರೆ ಕತ್ತು, ಎದೆ ಬೆನ್ನು ಕಂದು ಬಣ್ಣವಿದೆ. ಕುತ್ತಿಗೆ ಮತ್ತು ಗಂಟಲಿನ ಬಳಿ ನೇರಳೆ ಬಣ್ಣದ ಮುಳ್ಳಿನಂತಹ ಗರೆಗಳಿರುವಂತೆ ಕಂಡು ಬರುತ್ತದೆ. ಕಂದು ಬಣ್ಣದ ಕಣ್ಣು. ಕಪ್ಪು ಕೊಕ್ಕು ನೀಲಕಂಠನ ಪ್ರವರ. ಗಾತ್ರದಲ್ಲಿ 25ರಿಂದ 28 ಸೆಂ.ಮೀ ಉದ್ದವಿರಬಹುದು. ನೋಡಲು ಗಂಡು ಹೆಣ್ಣು ಒಂದೇ ರೀತಿ ಇರುವುದರಿಂದ ಒಮ್ಮಲೆ ಗುರುತಿಸುವುದು ಕಷ್ಟ. ಈ ಹಕ್ಕಿಯ ಜೀವಮಾನದ ವಯಸ್ಸು 17 ವರ್ಷ.
ಎಲ್ಲೆಂದರಲ್ಲಿ ಸುತ್ತಾಡಿಕೊಂಡು ಆಕಾಶದಲ್ಲಿ ಗಿರಕಿ ಹೊಡೆಯುತ್ತಾ ಕಾಲ ಕಳೆಯುವ ಈ ಹಕ್ಕಿ ಸೌಂದರ್ಯದಿಂದಲೇ ಗಮನ ಸೆಳೆಯುತ್ತದೆ. ನೀಲಿ ಬಣ್ಣದಿಂದ ಇದಕ್ಕೆ ನೀಲಕಂಠ ಎನ್ನುವ ಹೆಸರು ಬಂದಿದೆ. ಇಂಗ್ಲಿಷ್ನಲ್ಲಿ ಇದಕ್ಕೆ ಎರಡು ಹೆಸರುಗಳಿವೆ. ನೀಲಿ ಬಣ್ಣದಿಂದ ಬ್ಲೂ ಜೇ ಮತ್ತು ಹಾರಾಡುವಾಗ ಪಲ್ಟಿ ಹೊಡೆಯುವ ಕಾರಣಕ್ಕೆ ಇಂಡಿಯನ್ ರೋಲರ್ ಎಂದು ಗುರುತಿಸಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಕ್ಕಿ ರೋಲರ್ ಹಕ್ಕಿಗಳ ವಂಶಕ್ಕೆ ಸೇರಿದೆ.
ಬದುಕೇ ಸುಂದರ, ಸುಮಧುರ
ನೀಲಕಂಠ ಸಂಗಾತಿಯನ್ನು ಆಕರ್ಷಿಸಲು ಆಕಾಶದಲ್ಲಿ ಗಿರಕಿ ಹೊಡೆದು ಮಾಡುವ ತನ್ನ ಚಮತ್ಕಾರಗಳನ್ನು ನೋಡುವುದು ರಮಣೀಯ. ತೀಕ್ಷ್ಣ ಸ್ವರದಲ್ಲಿ ಅರಚುತ್ತಾ, ಸುರಳಿ ಸುರಳಿ ರೂಪದಲ್ಲಿ ಹಾರುವುದು, ದೊಪ್ಪನೆ ಬೀಳುವುದು ನೋಡಲು ಸಂತಸ ದಾಯಕ. ಗಂಡು ಹಕ್ಕಿ ಸಂತಾನೋತ್ಪತ್ತಿಯ ಋತುವಿನಲ್ಲಿ ವಿಶಿಷ್ಟ ಮತ್ತು ಚಕಿತಗೊಳಿಸುವ ಲೈ೦ಗಿಕ ಪ್ರದರ್ಶನಕ್ಕೆ ಹೆಸರುವಾಸಿ. ಈ ಸಂದರ್ಭದಲ್ಲಿ ಇಂಡಿಯನ್ ರೋಲರ್ ಎತ್ತರದಲ್ಲಿ ಹಾರಾಡುತ್ತಲೇ ವೇಗವಾಗಿ ರೆಕ್ಕೆ ಬಡಿಯುತ್ತಾ ವೃತ್ತಾಕಾರವಾಗಿ ಕೆಳಕ್ಕೆ ಇಳಿಯುವುದನ್ನು ಗಮನಿಸಬಹುದು.. ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡು ಕಟ್ಟಿ 4 ಇಲ್ಲವೇ 5 ಮೊಟ್ಟೆಗಳನ್ನು ಇರಿಸಿ 12 ದಿನಗಳವರೆಗೆ ಕಾವುಕೊಟ್ಟು ಮರಿ ಮಾಡುವುದು ನೀಲಕಂಠದ ಜೀವನಯಾನ.
ರೈತನ ಮಿತ್ರ
ನೀಲಕಂಠನನ್ನು ರೈತ ಮಿತ್ರ ಎಂತಲೇ ಕರೆಯಲಾಗುತ್ತದೆ. ಕಾಡಿನ ಅಂಚು, ಕೃಷಿ ಭೂಮಿ ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಬೇಟೆಗಾರ ಪಕ್ಷಿಗಳು. ತಂತಿ, ಮರ, ಬಂಡೆ, ಹಾಗೂ ಕಂಬಗಳಲ್ಲಿ ಕುಳಿತು ಬೇಟೆಗಾಗಿ ಹೊಂಚು ಹಾಕಿ ಕಾಯುತ್ತವೆ.. ನೆಲದ ಮೇಲೆ ಹರೆದಾಡುವ ಜಂತು, ಹಾರುವ ಕೀಟಗಳೆ ನೀಲಕಂಠನ ಮುಖ್ಯ ಆಹಾರ. ಮೇಲಿನಿಂದ ಒಮ್ಮಲೇ ಇಳಿದು ಬಂದು ಆಹಾರ ಕಚ್ಚಿಕೊಂದು ಮೇಲಕ್ಕೆ ಹಾರುತ್ತದೆ. ಕೆಲವೊಮ್ಮೆ ಎಲ್ಲಾ ರೀತಿ ಕೀಟ, ಸರೀಸೃಪಗಳು, ಕಪ್ಪೆಗಳನ್ನೂ ಬೇಟೆಯಾಡುತ್ತದೆ. ಎತ್ತರದಿಂದ ನೀರಿಗೆ ಹಾರಿ ಸ್ನಾನ ಮಾಡುತ್ತವುದನ್ನು ನೋಡುವುದೇ ಖುಷಿದಾಯಕ.
ಕರ್ನಾಟಕದಲ್ಲಿ ನೀಲಕಂಠ ಹಕ್ಕಿಯ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಇದೇನೂ ಅಳಿವಿನಂಚಿನ ಪಕ್ಷಿಯೇನಲ್ಲ. ನೀವು ಅರಣ್ಯ ಮಾತ್ರವಲ್ಲದೇ ಊರುಗಳಲ್ಲೂ ನೀಲಕಂಠನನ್ನು ಕಾಣಬಹುದು. ಪಕ್ಷಿ ಪ್ರಪಂಚದಲ್ಲಿ ಅಷ್ಟೇನೂ ಮಹತ್ವ ಈ ಪಕ್ಷಿಗೆ ಇಲ್ಲ. ಶಿವನ ಹೆಸರು ಇರುವ ನೀಲಕಂಠ ಎಂದು ಬಂದಿದೆ ಎನ್ನುವುದು ಮೈಸೂರು ಜಿಲ್ಲೆ ಹನಗೋಡಿನ ಛಾಯಾಗ್ರಾಹಕಿ ಛಾಯಾ ಸುನೀಲ್ ಅವರ ಅಭಿಮತ.
ನೀಲಕಂಠನಿಗೆ ಬ್ಲೂ ಜೇ ಎಂದು ಹೆಸರು ಕೊಟ್ಟು ಅದರ ಮಹತ್ವವನ್ನು ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಹಕ್ಕಿಪುಕ್ಕ ಕೃತಿಯಲ್ಲೂ ಮನೋಜ್ಞವಾಗಿಯೇ ಚಿತ್ರಿಸಿದ್ದಾರೆ. ನಮ್ಮ ನೀಲಕಂಠನಿಗೆ ಉತ್ತರ ಭಾರತದಲ್ಲಿ ಅಪಾರ ಗೌರವ. ಅದೇ ನೀಲಕಂಠನ ಗರಿಮೆ. ಅದು ಕರ್ನಾಟಕದ ಹಿರಿಮೆಯೂ ಹೌದು.