Forest Tales: ಹುಲಿ ಹೆಜ್ಜೆ; 11 ವರ್ಷದ ಅಂತರದಲ್ಲೇ ಭಾರತದಲ್ಲಿ 1348 ಹುಲಿಗಳ ಸಾವು, ಕರ್ನಾಟಕಕ್ಕೆ ಮೂರನೇ ಸ್ಥಾನ, ಕಾರಣವಾದರೂ ಏನು?
Jul 29, 2024 05:56 PM IST
ಭಾರತದಲ್ಲಿ ಹುಲಿಗಳ ಸಾವಿನ ಸಂಖ್ಯೆ ದಶಕದ ಅವಧಿಯಲ್ಲಿ ಕೊಂಚ ಹೆಚ್ಚೇ ಇದೆ
- International Tiger Day 2024 ಹುಲಿ ಯಾವುದೇ ದೇಶದ ಹೆಮ್ಮೆಯ ಪ್ರಾಣಿ. ಭಾರತಕ್ಕೂ ಕೂಡ ಅಂತಹ ಹೆಮ್ಮೆಯ ಸನ್ನಿವೇಶವಿದೆ. ಆದರೆ ಹಲವು ಕಾರಣಗಳಿಂದ ಹುಲಿಗಳ ಸಾವಿನ ಸಂಖ್ಯೆಯೂ(Tigers death) ಅಧಿಕವಾಗಿರುವುದು ಆತಂಕದ ವಿಷಯವೇ.
ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ(International Tiger Day 2024). ಪ್ರತಿ ವರ್ಷ ಹುಲಿಯ ಸಂರಕ್ಷಣೆ, ಅದರ ಆಗುಹೋಗುಗಳ ಸುತ್ತಲೇ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯೂ ಹುಲಿ ದಿನ ಯಥಾರೀತಿ ಜಾಗೃತಿ ಚಟುವಟಿಕೆಗಳೊಂದಿಗೆ ಹುಲಿ ಹೆಜ್ಜೆ ಗುರುತು ಇರುವ ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಹುಲಿ ದಿನ ಆಚರಣೆಯಂತೂ ಆಗಿದೆ. ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯೇನೋ ಕಂಡು ಬಂದಿದೆ. ಖುಷಿಯನ್ನು ಇಷ್ಟಕ್ಕೆ ಸೀಮಿತ ಮಾಡಿಕೊಳ್ಳುವ ಅಗತ್ಯವೇನಿಲ್ಲ. ಏಕೆಂದರೆ ಹುಲಿಗಳ ಸಾವಿನ ಸಂಖ್ಯೆಯೂ ಭಾರತದಲ್ಲಿ ಏರುಗತಿಯಲ್ಲೇ ಇದೆ. ಒಂದು ದಶಕದ ಅಂತರದಲ್ಲಿ ಭಾರತದಲ್ಲಿ ಅಂದಾಜು 1348 ಹುಲಿಗಳು ಸಾವನ್ನಪ್ಪಿವೆ. ಇದರಲ್ಲಿ ಸಹಜ ಸಾವಿನ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದರೂ ಬೇರೆ ಬೇರೆ ಕಾರಣಗಳಿಂದಲೂ ಹುಲಿಗಳು ಜೀವ ಕಳೆದುಕೊಂಡಿವೆ. ಇದು ಕೂಡ ಚರ್ಚಾಸ್ಪದ ವಿಚಾರವೇ.
ಭಾರತದಲ್ಲಿ ಅತಿ ಹೆಚ್ಚು ಇರುವುದು ರಾಯಲ್ ಬೆಂಗಾಲ್ ಹುಲಿಗಳೇ. ಇವುಗಳೇ ಬಹುತೇಕ ಎಲ್ಲಾ ದೇಶದಲ್ಲಿರುವ 54 ಹುಲಿಧಾಮಗಳಲ್ಲಿ ಬದುಕು ಕಂಡುಕೊಂಡಿವೆ. ಇದರಲ್ಲಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮೊದಲ ಮೂರನೇ ಸ್ಥಾನದಲ್ಲಿವೆ. ಹತ್ತು ವರ್ಷದ ಅಂತರದಲ್ಲಿ ನಡೆದಿರುವ ಸುಮಾರು ಮೂರು ಹುಲಿ ಗಣತಿಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯೇನೋ ಕಂಡು ಬಂದಿದೆ. ಅದರ ಪ್ರಮಾಣಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಪ್ರಮಾಣವೂ ಹೆಚ್ಚಾಗುತ್ತಲೇ ಇದೆ. ಹುಲಿಗಳು ಹೆಚ್ಚಾಗಿರುವುದರಿಂದ ಸಾವಿನ ಪ್ರಮಾಣ ಏರಿಕೆಯಾಗಿರಬಹುದು. ಇದು ನೈಸರ್ಗಿಕ ಸಹಜವಾದ ಪ್ರಕ್ರಿಯೆ ಎಂದು ಒಂದು ಸಾಲಿನಲ್ಲಿ ಹೇಳಿ ಬಿಡಬಹುದಾದರೂ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆ ಕಂಡಿರುವುದು, ಅಸಹಜ ಸಾವಿನ ಪ್ರಮಾಣವೂ ಹೆಚ್ಚಾಗಿರುವುದು ಮಹತ್ವವನ್ನು ಒತ್ತಿ ಹೇಳುತ್ತದೆ.
ಹನ್ನೊಂದು ವರ್ಷದಲ್ಲಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಹುಲಿಗಳು ಮೃತಪಟ್ಟಿರುವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ( NTCA) ಬಿಡುಗಡೆ ಮಾಡಿರುವ ವರದಿಯಲ್ಲಿಯೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶದಲ್ಲಿ 370 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರದಲ್ಲಿ 269 ಹುಲಿಗಳು ಜೀವ ಕಳೆದುಕೊಂಡಿವೆ. ಕರ್ನಾಟಕದಲ್ಲಿ ಈ ಪ್ರಮಾಣ 190. ಆ ಎರಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಮಾಣ ಕೊಂಚ ಕಡಿಮೆಯೇ. ಅಲ್ಲಿ ಅರಣ್ಯ ಪ್ರದೇಶ, ಹುಲಿಧಾಮಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಸಾವಿನ ಪ್ರಮಾಣವೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷವಂತೂ ಅತಿ ಹೆಚ್ಚು 182 ಹುಲಿಗಳು ದೇಶದಲ್ಲಿ ಮೃತಪಟ್ಟಿದ್ದವು. ಈ ವರ್ಷದ ಜುಲೈ 29ರವರೆಗೂ 81 ಹುಲಿಗಳು ಮೃತಪಟ್ಟಿವೆ. ಹಿಂದಿನ ವರ್ಷ ಕರ್ನಾಟಕದಲ್ಲಿ 19, ಈ ವರ್ಷ 11 ಹುಲಿಗಳು ಮೃತಪಟ್ಟಿರುವುದು ಕಂಡು ಬಂದಿದೆ.
ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹಾಗೂ ತೆಲಂಗಾಣದಲ್ಲೂ ಹುಲಿಗಳ ಸಂಖ್ಯೆ ಕಡಿಮೆಯಿದ್ದು, ಸಾವಿನ ಪ್ರಮಾಣವೂ ಅದೇ ಪ್ರಮಾಣದಲ್ಲಿದೆ. ಹನ್ನೊಂದು ವರ್ಷದಲ್ಲಿ ತನಾಡಲ್ಲಿ 66, ಕೇರಳದಲ್ಲಿ 55, ಆಂಧ್ರದಲ್ಲಿ 11, ತೆಲಂಗಾಣದಲ್ಲಿ 9 ಹುಲಿಗಳ ಸಾವಾಗಿದೆ.
ಕರ್ನಾಟಕದಲ್ಲಿಯೇ ನಾಗರಹೊಳೆ(51), ಬಂಡೀಪುರ(49) ಹುಲಿಗಳು ಸಾವನಪ್ಪಿವೆ. ಬಿಆರ್‌ಟಿ, ಭದ್ರಾ, ಅಣಶಿ ದಾಂಡೇಲಿಯಲ್ಲಿ ಪ್ರಮಾಣ ಕಡಿಮೆಯಿದೆ.
ಅತಿಹೆಚ್ಚು ಹುಲಿಗಳಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕವು, ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯಲ್ಲಿ ತೀರಾ ದೊಡ್ಡಮಟ್ಟದ ಪ್ರಗತಿಯನ್ನೇನು ದಶಕದಲ್ಲಿ ಸಾಧಿಸಿಲ್ಲ. ಹುಲಿಗಳ ಸಂಖ್ಯೆ ಏರಿಕೆಯಲ್ಲಿ ಕರ್ನಾಟಕವು ಸ್ಥಿರತೆ ಕಾಯ್ದುಕೊಂಡಿಲ್ಲ ಎಂಬುದರತ್ತ ಹುಲಿಗಣತಿ ವರದಿಗಳ ದತ್ತಾಂಶಗಳು ಹೇಳುತ್ತವೆ.
ಕರ್ನಾಟಕದಲ್ಲಿ 2014ರಲ್ಲಿ 406 ಹುಲಿಗಳಿದ್ದವು ಎಂದು ಅಂದಾಜಿಸಲಾಗಿತ್ತು. 2018ರ ವೇಳೆಗೆ, ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ 118ರಷ್ಟು ಏರಿಕೆ ಕಂಡುಬಂದಿತ್ತು. 2010ಕ್ಕೆ ಹೋಲಿಸಿದರೆ 2014ರಲ್ಲಿ ಹುಲಿಗಳ ಸಂಖ್ಯೆಯಲ್ಲಿ 106ರಷ್ಟು ಏರಿಕೆಯಾಗಿತ್ತು 2010–2018ರ ಮಧ್ಯೆ ಹುಲಿಗಳ ಸಂಖ್ಯೆಯ ಏರಿಕೆಯಲ್ಲಿ ಸಾಧ್ಯವಾಗಿದ್ದ ಪ್ರಗತಿಯನ್ನು, 2018–2022ರ ಅವಧಿಯಲ್ಲಿ ಕಾಯ್ದುಕೊಳ್ಳುವಲ್ಲಿ ಕರ್ನಾಟಕ ವಿಫಲವಾಗಿದೆ. ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ, ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು 39 ಮಾತ್ರ. ಆದರೆ ಸಾವಿನ ಪ್ರಮಾಣ ನಾಲ್ಕು ವರ್ಷದಲ್ಲಿ 75. ಅಂದರೆ ಕರ್ನಾಟಕದಲ್ಲಿ ಹುಟ್ಟಿದ ಹುಲಿಗಳಿಂತ ಎರಡು ಪಟ್ಟು ಹುಲಿಗಳು ನಾಲ್ಕು ವರ್ಷದಲ್ಲಿ ಮೃತಪಟ್ಟಿರುವುದು ಕಂಡು ಬರುತ್ತದೆ.
ಒಂದು ಕಾಲಕ್ಕೆ ಹುಲಿಗಳ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದು. ನಂತರ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇರಲೇಬೇಕಾಗಿರುವ ವನ್ಯಜೀವಿ ಕಾರಿಡಾರ್‌ಗಳನ್ನು ಒತ್ತಟ್ಟಿಗೆ ಕಾಯ್ದುಕೊಳ್ಳದೇ ಇರುವುದು, ಹುಲಿ ಸಂರಕ್ಷಿತ ಪ್ರದೇಶಗಳನ್ನು ಹಾದುಹೋಗುವ ಹೆದ್ದಾರಿಗಳ ವಿಸ್ತರಣೆ ನಿರಂತರ ನಡೆದಿರುವುದು, ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಪ್ರದೇಶಗಳಲ್ಲಿ ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳು ಹುಲಿಗಳ ಸಂಖ್ಯೆ ಏರಿಕೆಗೆ ಅಡ್ಡಿಯಾಗಿರಬಹುದು ಎನ್ನುವುದನ್ನು ಎರಡು ವರ್ಷದ ಹಿಂದಿನ ಹುಲಿ ಗಣತಿಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿರಿ: ಹುಲಿದಿನ: ವಿವಿಧ ರಾಜ್ಯಗಳಲ್ಲಿ ಎಷ್ಟು ಹುಲಿಗಳಿವೆ ನೋಡಿ
ಹುಲಿಗಳು ಅರಣ್ಯದಲ್ಲಿ ಹೆಚ್ಚು ಎಂದರೆ 10 ಬದುಕಬಲ್ಲವು. 7 ರಿಂದ 8 ವರ್ಷದಲ್ಲೇ ಅವುಗಳ ಆಯಸ್ಸು ಮುಗಿಯುತ್ತಾ ಬಂದಿರುತ್ತದೆ.ಅಲ್ಲಿನ ವಾತಾವರಣ, ಆಹಾರ ಲಭ್ಯತೆ, ಹುಲಿ ಸಾಂಧ್ರತೆ ಮೇಲೆ ಅವುಗಳ ಬದುಕು ನಿಂತಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಲವು ಕಾರಣಗಳಿಂದ ಅರಣ್ಯ ಪ್ರದೇಶ ಕಡಿಮೆಯಾಗಿದೆ. ಒತ್ತಡವೂ ಹೆಚ್ಚಿದೆ. ಇದರಿಂದ ಹುಲಿ ಆವಾಸ ಸ್ಥಾನವೂ ತಗ್ಗಿ ಅವುಗಳ ಸಾವಿನ ಪ್ರಮಾಣವೂ ಹೆಚ್ಚಿದೆ. ಕಳ್ಳಬೇಟೆ, ವಿಷವಿಕ್ಕಿ ಕೊಲ್ಲುವುದು, ಗುಂಡೇಟು, ವಿದ್ಯುತ್ ದುರಂತದ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ ಎನ್ನುವುದು ತಜ್ಞರ ನುಡಿ.
ಕರ್ನಾಟಕವನ್ನು ಮತ್ತೆ ನಂಬರ್ ಹುಲಿ ರಾಜ್ಯವಾಗಿಸುವ ಗುರಿಯನ್ನಂತೂ ಕರ್ನಾಟಕ ಅರಣ್ಯ ಇಲಾಖೆ ಹೊಂದಿದೆ. ಇದೇ ನೆಲೆಯಲ್ಲೂ ಹುಲಿ ಧಾಮಗಳಲ್ಲಿ ಸುರಕ್ಷಿತೆಗೆ ಒತ್ತು ನೀಡುವ, ಅರಣ್ಯ ವಿಸ್ತರಿಸುವ ಪ್ರಯತ್ನಗಳು ನಡೆದಿವೆ. ನಾಗರಹೊಳೆಯಲ್ಲೇ ಸುಮಾರು 200 ಚದರ ಕಿ.ಮಿ ಪ್ರದೇಶ ವಿಸ್ತರಣೆಯಾಗಿದೆ. ಭದ್ರಾ, ಅಣಶಿಯಲ್ಲೂ ಹುಲಿಗಳ ಸಂಖ್ಯೆ ಹೆಚ್ಚಿಸುವ ಚಟುವಟಿಕೆಗಳು ನಡೆದಿವೆ. ಕರ್ನಾಟಕದಲ್ಲೇ ಕುದುರೆಮುಖ, ಮಲೈಮಹದೇಶ್ವರ ಬೆಟ್ಟ ವನ್ಯಧಾಮಗಳನ್ನು ಹುಲಿಧಾಮಗಳಾಗಿ ಪರಿವರ್ತಿಸುವ ಪ್ರಯತ್ನಗಳೂ ಆಗಿವೆ. ಒಂದು ಕಡೆ ಹುಲಿ ಆವಾಸ ಸ್ಥಾನಗಳನ್ನು ಗಟ್ಟಿಗೊಳಿಸಿ ಹುಲಿ ಪ್ರದೇಶ ವಿಸ್ತರಣೆಯಾದರೆ ಅವುಗಳ ಬದುಕುವ ಪ್ರಮಾಣವೂ ಹೆಚ್ಚಬಹುದು. ಈಗಾಗಲೇ ಸರಿದಾರಿಯಲ್ಲೇ ಇರುವ ಸಂರಕ್ಷಣಾ ಚಟುವಟಿಕೆ, ಗಸ್ತು ಸಹಿತ ಅರಣ್ಯ ಕಾಯುವಿಕೆಯನ್ನು ಇನ್ನಷ್ಟು ತಂತ್ರಜ್ಞಾನ ಸ್ನೇಹಿಯಾಗಿ ರೂಪಿಸಿಕೊಂಡರೂ ಹುಲಿ ಸಾವು ತಗ್ಗಿಸಬಹುದು ಮಾತ್ರವಲ್ಲ. ಕರ್ನಾಟಕವೇ ನಂಬರ್ ಹುಲಿ ರಾಜ್ಯವಾಗಿ ಮರಳಬಹುದು ಎನ್ನುವುದೂ ನಿಜವೇ. ಇದು ಇನ್ನೆರಡು ವರ್ಷದಲ್ಲಿ ಕೊಂಚವಾದರೂ ಹೆಚ್ಚಿ. ಅದು ಹುಲಿ ಸಮೃದ್ದತೆಯಲ್ಲಿ ಕಾಣೋಣ. ನಿರೀಕ್ಷೆ ಮಾತ್ರ ನಮ್ಮದಲ್ಲ. ಸಹಕಾರವೂ !