logo
ಕನ್ನಡ ಸುದ್ದಿ  /  ಕರ್ನಾಟಕ  /  New Year 2025: ಹೊಸ ವರ್ಷ ಸಂಭ್ರಮಾಚರಣೆ ಎಂದರೆ ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸುವುದು ಅಷ್ಟೇ ಅಲ್ಲ, ಬೇರೆ ಹೇಗೆಲ್ಲಾ ಆಚರಿಸಬಹುದು

New year 2025: ಹೊಸ ವರ್ಷ ಸಂಭ್ರಮಾಚರಣೆ ಎಂದರೆ ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸುವುದು ಅಷ್ಟೇ ಅಲ್ಲ, ಬೇರೆ ಹೇಗೆಲ್ಲಾ ಆಚರಿಸಬಹುದು

Umesha Bhatta P H HT Kannada

Dec 12, 2024 02:22 PM IST

google News

ನಿಮ್ಮ ಹೊಸ ವರ್ಷದ 2025 ಸಂತಸದ ಕ್ಷಣಗಳು ಹೇಗಿದ್ದರೆ ಚೆನ್ನ

    • New year 2025: ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ದಿನಗಳು ಸಮೀಪಿಸುತ್ತಿವೆ. ಇದಕ್ಕಾಗಿ ಈಗಿನಿಂದಲೇ ತಯಾರಿಯೂ ನಡೆದಿದೆ. ಕುಡಿದು, ಕುಣಿದು ಕುಪ್ಪಳಿಸುವ ಖುಷಿಯನ್ನು ಬಿಟ್ಟರೆ ಈ ರೀತಿಯಲ್ಲಿ ಸಂತಸ ಹಂಚಿಕೊಂಡರೆ ಹೇಗಿರುತ್ತದೆ. ಇಲ್ಲಿವೆ ಅಂತಹ 10 ಮಾರ್ಗಗಳು.
ನಿಮ್ಮ ಹೊಸ ವರ್ಷದ 2025 ಸಂತಸದ ಕ್ಷಣಗಳು ಹೇಗಿದ್ದರೆ ಚೆನ್ನ
ನಿಮ್ಮ ಹೊಸ ವರ್ಷದ 2025 ಸಂತಸದ ಕ್ಷಣಗಳು ಹೇಗಿದ್ದರೆ ಚೆನ್ನ

New year 2025: ಬಹು ನಿರೀಕ್ಷೆಗಳೊಂದಿಗೆ 2024 ವರ್ಷ ಮುಗಿದು 2025 ವರ್ಷವನ್ನು ಬರ ಮಾಡಿಕೊಳ್ಳುವ ದಿನಗಳ ಕೌಂಟ್‌ ಡೌನ್‌ ಶುರುವಾಗಿದೆ. ಪ್ರತಿಯೊಬ್ಬರಿಗೆ ಹಳೆಯ ವರ್ಷಗಳ ಸ್ಮರಣೀಯ ನೆನಪುಗಳೊಂದಿಗೆ ಬೀಳ್ಕೊಟ್ಟು ಹೊಸ ವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳುವ ಮನಸು ಇದ್ದೇ ಇರುತ್ತದೆ. ಹೊಸ ವರ್ಷವನ್ನು ಬರ ಮಾಡಿಕೊಳ್ಳುವುದು ಹೇಗೆ ಎನ್ನುವ ಯೋಚನೆಯೂ ಹಲವರಲ್ಲಿ ಇರುತ್ತದೆ. ಬಹುತೇಕರು ಹೊಸ ವರ್ಷ ಎಂದರೆ ಪಾರ್ಟಿ ಮಾಡುವುದು. ಎಣ್ಣೆ ಹೊಡೆದು ಸಂಭರಮಿಸುವುದು, ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷದ ಮೊದಲ ದಿನ ಹಾಗೂ ಗಳಿಗೆಯನ್ನು ಸ್ವಾಗತಿಸುವುದು ಎಂದುಕೊಳುತ್ತಾರೆ. ಅದನ್ನು ಕೆಲವರು ಹೌದು ಎನ್ನಬಹುದು. ಇನ್ನು ಕೆಲವರು ಅ ಕ್ಷಣದ ಖುಷಿಯಷ್ಟೇ, ಆದರೆ ಹೊಸ ವರ್ಷ ಎನ್ನುವುದು ನಮ್ಮ ಬದುಕಿನ ಮತ್ತೊಂದು ಪರ್ವದ ಆರಂಭ. ಅದನ್ನು ವಿಭಿನ್ನವಾಗಿಯೇ ಆಚರಿಸಬೇಕು ಎಂದುಕೊಳ್ಳುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸುವ ರಾತ್ರಿ, ಆ ದಿನವನ್ನು ಬರ ಮಾಡಿಕೊಳ್ಳುವ ಸಂದರ್ಭವನ್ನು ಬೇರೆ ಹೇಗೆ ಆಚರಿಸಬಹುದು ಎನ್ನುವ ಹತ್ತು ಸಲಹೆಗಳು ಇಲ್ಲಿವೆ

  1. ನಿಮ್ಮ ಪ್ರೀತಿಯ ಕುಟುಂಬದೊಂದಿಗೆ

ವರ್ಷವಿಡೀ ಕೆಲಸ ಇಲ್ಲವೇ ಹಲವು ಕಾರಣಗಳಿಂದ ಕುಟುಂಬದವರೊಂದಿಗೆ ಕಳೆಯಲು ಆಗುವುದೇ ಇಲ್ಲ. ಸಂಜೆಯ ಹೊತ್ತಲ್ಲಿ ಹೊರಗೆ ಹೋಗೋಣ ಎಂದರೂ ಬಿಡಲಾರದ ಕೆಲಸದ ನಂಟು. ಒತ್ತಡದ ಕ್ಷಣ. ಹೊಸ ವರ್ಷದಲ್ಲಿ ಕುಟುಂಬದವರಿಗೆ ಕೆಲವು ಹೊತ್ತನ್ನು ಮನೆಯಲ್ಲಿಯೇ ಖುಷಿಯಿಂದ ಕಳೆಯಬಹುದು. ಇಲ್ಲವೇ ನೀವು ಇಷ್ಟಪಡುವ ಮಾರ್ಗದಲ್ಲಿ ಒಂದು ಡ್ರೈವ್‌ ಕೂಡ ಹೋಗಬಹುದು. ಎಲ್ಲೋ ಒಂದು ಕಡೆ ಹೊಟೇಲ್‌ಗೆ ಹೋಗಿರಲು ಆಗಿದಿದ್ದಲ್ಲೆ ಅಲ್ಲಿ ಕುಟುಂಬದೊಂದಿಗೆ ಸವಿಯಾದ ಊಟವನ್ನೂ ಮಾಡಬಹುದು.

2. ಹುಟ್ಟೂರಲ್ಲಿ ಸಂತಸ

ಬಹುತೇಕರಿಗೆ ಹುಟ್ಟೂರೇ ಜೀವ ಸೆಲೆ. ಅದರಲ್ಲೂ ಎಲ್ಲೆ ಇದ್ದರೂ ಹುಟ್ಟಿದ ಊರಿಗೆ ಹೋಗುವುದೆಂದರೆ ಅದೊಂದು ಜಗತ್ತಿನಲ್ಲಿಯೇ ಮಿಂದೆದ್ದಂತೆ. ಅಲ್ಲಿ ಸಿಗುವ ವಾತಾವರಣ, ಖುಷಿ ಬೇರೆಲ್ಲೂ ಸಿಗುವುದಿಲ್ಲ. ಹೊಸ ವರ್ಷದ ವೇಳೆ ನಿಮ್ಮೂರಲ್ಲೇ ಇದ್ದು, ನೀವು ಬಾಲ್ಯದಲ್ಲಿ ಕಳೆದ ಶಾಲೆಯ ಆವರಣ, ನಿಮ್ಮೂರಿನ ದೇವಸ್ಥಾನ ಇಲ್ಲವೇ ಪ್ರೀತಿಯ ಕಟ್ಟೆಯ ಮೇಲೆ ಕುಳಿತು ಕಳೆದಾಗ ಸಿಗುವ ಸಂತಸಕ್ಕೆ ಪಾರವೇ ಇಲ್ಲ. ಅಪ್ಪ ಅಮ್ಮ ಸಹೋದರ ಸಹೋದರಿಯರು, ಅಜ್ಜ ಅಜ್ಜಿಯವರ ಜತೆಯಲ್ಲೂ ಹೆಚ್ಚಿನ ಸಮಯ ಕಳೆಯಲು ಇದೊಂದು ಒಳ್ಳೆಯ ಅವಕಾಶ.

3. ಸ್ನೇಹಿತರೊಂದಿಗೆ ಕ್ಷಣ

ಯಾರಿಗೆ ಆದರೂ ಸ್ನೇಹಿತರೇ ಶಕ್ತಿ. ಸ್ನೇಹಿತರ ಸಂಗ ಎಂತವರ ಬದುಕಿಗೆ ಚೈತನ್ಯ ನೀಡಬಲ್ಲದು. ನಿಮ್ಮ ಊರಿನಲ್ಲಿಯೇ ಸ್ನೇಹಿತರೊಂದಿಗೆ ಸೇರಿ ಕೆಲವು ಹೊತ್ತು ಒಡನಾಡಬಹುದು. ಹಿಂದಿನ ಘಟನೆಗಳು, ಬದುಕಿನ ಖುಷಿ, ಬೇಸರ, ಕಹಿ ಅನುಭವಗಳನ್ನು ಹಂಚಿಕೊಳ್ಳಬಹುದು. ಅವರೊಂದಿಗೆ ನಿಮ್ಮೆಲ್ಲ ವಿಚಾರಗಳನ್ನು ಹಂಚಿಕೊಂಡಾಗ ನಿರಾಳತೆಯೂ ಸಿಗಬಹುದು. ಮುನ್ನುಗ್ಗಲು ಶಕ್ತಿಯೂ ಬರಬಹುದು. ಯಾರಿಗೆ ಆದರೂ ಇರಬಹುದಾದ ಶುದ್ದ ಮನಸಿನ ಗೆಳೆಯ ಗೆಳತಿಯರ ಬಳಗದೊಂದಿಗೆ ಕಳೆದಾಗ ವರ್ಷವಿಡೀ ಅದು ನಿಮ್ಮನ್ನು ಮುಂದೆ ತೆಗೆದುಕೊಂಡು ಹೋಗಲಿದೆ

4. ನಿಮಗಿಷ್ಷವಾದ ಪುಸ್ತಕ

ಪ್ರತಿಯೊಬ್ಬರೂ ಸಮಯ ಸಿಕ್ಕಾಗ ಓದುವವರೇ. ಕೆಲವರು ನಿಯಮಿತವಾಗಿಯೂ ಓದುವವರು ಇದ್ದಾರೆ. ಅಯ್ಯೋ ಇಂದು ಏನನ್ನೂ ಓದಲು ಆಗಲೇ ಇಲ್ಲ. ಈ ವರ್ಷ ಓದಲು ಎಷ್ಟೊಂದು ಪುಸ್ತಕ ಬಂದರೂ ಕೆಲವನ್ನು ನೋಡಲು ಆಗಿಲ್ಲ ಎನ್ನುವ ಹಳಹಳಿ ಹಲವರಲ್ಲಿ ಇದ್ದೇ ಇರುತ್ತದೆ. ಇದಕ್ಕಾಗಿ ನೀವು ಇಷ್ಟಪಡುವ ಲೇಖಕರ ಕೃತಿಗಳನ್ನು ಓದಿ ಮುಗಿಸಬಹುದು. ಇಲ್ಲವೇ ಹೊಸದಾಗಿ ಪ್ರಕಟವಾಗಿರುವ ಸಾಹಿತಿಗಳ ಕಾದಂಬರಿ.ಕೃತಿಯನ್ನು ಆಸ್ವಾದಿಸಬಹುದು. ಈ ಮೂಲಕ ಹೊಸ ವರ್ಷದಲ್ಲಿ ಮತ್ತಷ್ಟು ಓದಲು ಇದು ಪ್ರೇರಣೆಯನ್ನು ನೀಡಬಹುದು.

5. ಸಾಹಿತಿ/ ಲೇಖಕರೊಂದಿಗೆ

ಕೆಲವರಿಗೆ ಕೃತಿ ಓದುವುದು ಇಷ್ಟು ಪ್ರಿಯಕರವೂ ಅವರೊಂದಿಗೆ ಕೆಲ ಹೊತ್ತು ಕಳೆಯುವುದು. ಅವರ ಅನುಭವಗಳನ್ನು ಆಲಿಸುವುದು. ಬರವಣಿಗೆ ಹಿಂದೆ ಇದ್ದ ಆ ಕ್ಷಣಗಳನ್ನು ಆಸ್ವಾದಿಸುವ ಖುಷಿ ಇದ್ದೇಹೊಸ ವರ್ಷದ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ ಪ್ರಸಿದ್ಧ ತಾಣಗಳಿವು; ಈ ನ್ಯೂ ಇಯರ್‌ಗೆ ಪ್ಲಾನ್ ಮಾಡಿ ಇರುತ್ತದೆ. ವರ್ಷದಲ್ಲಿ ನಾನಾ ಕಾರಣಗಳಿಂದ ಅವರ ಬಳಿ ಹೋಗಲು ಆಗಿರುವುದಿಲ್ಲ. ಅಂತವರೊಂದಿಗೆ ಮೊದಲೇ ಮಾತನಾಡಿ ಹೊಸ ವರ್ಷವನ್ನು ಸ್ವಾಗರಿಸುವ ವೇಳೆಯೂ ಅವರೊಂದಿಗೆ ಸೇರಿಕೊಳ್ಳಬಹುದು. ಇಲ್ಲವೇ ಹೊಸ ವರ್ಷದ ದಿನವೂ ಆಗಬಹುದು. ನೀವೊಬ್ಬರೇ ಅಲ್ಲದೇ ಸಮಾನ ಮನಸ್ಕ ಗೆಳೆಯರೂ ಕೂಡ ಜತೆಯಾಗಿ ಹೋಗಿ ಬರಬಹುದು.

6. ಬರವಣಿಗೆ ಖುಷಿ

ಹಲವರು ತಮ್ಮ ವೃತ್ತಿಯೊಂದಿಗೆ ಬರವಣಿಗೆಯ ಪ್ರವೃತ್ತಿ ಹೊಂದಿದವರೂ ಇದ್ದಾರೆ. ವರ್ಷದಲ್ಲಿ ಆಗಾಗ ಏನನ್ನಾದರೂ ಬರೆಯಬೇಕು ಅನ್ನಿಸಿದಾಗ ಅಡೆತಡೆಗಳೂ ಆಗಿರಬಹುದು. ಅಂತವರು ಹೊಸ ವರ್ಷದ ವೇಳೆ ಬರೆದು ಮುಗಿಸಿ ಆ ಕ್ಷಣವನ್ನು ಸ್ಮರಣೀಯವಾಗಿಸಿಕೊಳ್ಳಬಹುದು. ಹೊಸ ವರ್ಷದ ಹಿಂದಿನ ರಾತ್ರಿ ಹಾಗೂ ಹೊಸ ವರ್ಷದ ದಿನದಲ್ಲಿ ಹೀಗೆ ನಿಮ್ಮ ಮನಸಿನಾಳದ ಭಾವನೆಗಳಿಗೆ ಅಕ್ಷರ ರೂಪ ನೀಡಲು ಇದೂ ಒಳ್ಳೆಯ ಸಮಯವೇ ಆಗಲಿದೆ. ಸಮಾನ ಮನಸ್ಕರ ಸ್ನೇಹಿತರೊಂದಿಗೂ ಸೇರಿಕೊಂಡು ಬರವಣಿಗೆ ಕೃಷಿಯನ್ನು ನಿಮಗಿಷ್ಟವಾದ ಸ್ಥಳದಲ್ಲಿ ಮಾಡಬಹುದು.

7. ಗುರುಗಳ ಸಮ್ಮುಖದಲ್ಲಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಸಾಲುಗಳು ನಿಮಗೆ ಗೊತ್ತಿದೆ. ಈಗಂತೂ ಹಲವರು ಗೂಗಲ್‌ ಗುರುಗಳ ಭರಾಟೆಯಲ್ಲಿ ಮೂಲ ಗುರುಗಳನ್ನೇ ಮರೆತು ಬಿಟ್ಟಿರುತ್ತಾರೆ. ಅದು ನಿಮಗೆ ವಿದ್ಯೆ ಹೇಳಿಕೊಟ್ಟು ಗುರುವೂ ಆಗಬಹುದು, ಬದುಕಿಗೆ ಹೊಸ ರೂಪ ನೀಡಿದ ಮಾನಸಿಕ ಗುರುವೂ ಆಗಬಹುದು. ಅವರೊಂದಿಗೆ ಮೊದಲೇ ಸಮಯ ತೆಗೆದುಕೊಂಡು ಕೆಲ ಕ್ಷಣ ಅವರ ಜತೆ ಕಳೆಯ ಬಹುದು, ನಿಮ್ಮ ವೃತ್ತಿ, ಪ್ರವೃತ್ತಿ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಹೊಸ ಯೋಜನೆಗಳಿದ್ದರೆ ಅವರ ಮಾರ್ಗದರ್ಶನವನ್ನೂ ಪಡೆದುಕೊಳ್ಳಲು ಇದು ಸುಸಮಯ.

8. ಸಂಗೀತದ ಸಾಂಗತ್ಯ

ಸಂಗೀತ ಎನ್ನುವುದು ಹಲವು ಜನರ ಬದುಕಿನ ಸಂಗಾತಿ. ಸಂಗೀತ ಒಂದಿದ್ದರೆ ಜಗತ್ತನ್ನೇ ಗೆದ್ದ ಖುಷಿಯೂ ಕೆಲವರಿಗೆ ಆಗುತ್ತದೆ. ಸಂಗೀತ ಆಲಿಸುವ ಇಲ್ಲವೇ ತಾವೇ ನುಡಿಸುವ ಆ ಅನುಭೂತಿಯನ್ನು ಅನುಭವಿಸಬೇಕು. ಅಂತಹ ಶಕ್ತಿ ಖಂಡಿತಾ ಸಂಗೀತಕ್ಕಿದೆ. ಏಕೆಂದರೆ ಸಂಗೀತವೂ ಪ್ರಮುಖ ಥೆರೆಪಿಯೇ. ನಿಮಗೆ ಇಷ್ಟವಾದ ಕರ್ನಾಟಕ ಇಲ್ಲವೇ ಹಿಂದೂಸ್ತಾನಿ, ಆಯ್ದ ಕಲಾವಿದರ ಹಳೆಯ ಕಚೇರಿಗಳ ಸಂಗ್ರಹದ ವಿಡಿಯೋ ನೋಡಬಹುದು.ನಿಮಗಿಷ್ಟಾದ ಗಾಯಕರ ಹಾಡುಗಳನ್ನು ಆಲಿಸುತ್ತಲೂ ಹೊಸ ವರ್ಷವನ್ನು ಬರ ಮಾಡಿಕೊಳ್ಳುವುದು ಒಳ್ಳೆಯ ಆಯ್ಕೆಯೇ.

9. ಸೇವಾ ಚಟುವಟಿಕೆ ಸುಖ

ಮನುಷ್ಯನಿಗೆ ಸೇವೆ ಎನ್ನುವುದು ಜೀವನ ಭಾಗವೇ ಹೌದು. ತಾವು ದುಡಿದ ಇಲ್ಲವೇ ಗಳಿಸಿದ ಒಂದಷ್ಟನ್ನು ಸಮಾಜಕ್ಕಾಗಿ ನೀಡುವ ಯೋಜನೆಗಳನ್ನು ಹೊಂದಿರುವವರೂ ಇದ್ದಾರೆ. ಸಂಘ ಸಂಸ್ಥೆಗಳು ಇಲ್ಲವೇ ವಿವಿಧ ರೀತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವರು, ಸೇವಾ ಪರತೆ ಇರುವವರನ್ನು ನೀವು ಇಲ್ಲವೇ ಸ್ನೇಹಿತರು ಅಥವಾ ಕುಟುಂಬದವರು ಸೇರಿ ಭೇಟಿ ಮಾಡಬಹುದು. ಹಣ, ವಸ್ತುಗಳು, ಪುಸ್ತಕ ಇಲ್ಲವೇ ಅವರು ಬಯಸುವ ವಸ್ತುಗಳನ್ನು ಸಂಸ್ಥೆಗಳಿಗೆ ನೀಡಿ ಬಂದರೆ ಅದೂ ಕೂಡ ಮನಸಿಗೆ ಮುದ ನೀಡುತ್ತದೆ. ಹೊಸ ವರ್ಷದಲ್ಲಿ ಮತ್ತಷ್ಟು ಹುಮ್ಮಸ್ಸು ತರಬಹುದು. ಸಸಿ ನೆಟ್ಟು ಪರಿಸರ ಪ್ರೀತಿಯನ್ನೂ ಹೆಚ್ಚಿಸಿಕೊಳ್ಳಬಹುದು.

10.ನಿಮಗಿಷ್ಟವಾದ ತಾಣ ಪ್ರವಾಸ

ಪ್ರವಾಸ ಇಲ್ಲದ ಮನುಷ್ಯನೇ ಇಲ್ಲ. ಪ್ರವಾಸ ಆಗಾಗ ಆಗುತ್ತಲೇ ಇದ್ದರೂ ಹೊಸ ವರ್ಷದಲ್ಲಿ ಪ್ರವಾಸವನ್ನೂ ಮಾಡಬಹುದು. ಒಂದು ಎರಡು ಅಥವಾ ಮೂರು ದಿನಗಳ ಪ್ರವಾಸ ಆಗಬಹುದು. ಕುಟುಂಬದವರು, ಸ್ನೇಹಿತರು ಇಲ್ಲವೇ ಆತ್ಮೀಯರೊಂದಿಗೆ ಪ್ರವಾಸವನ್ನು ರೂಪಿಸಬಹುದು. ಅಲ್ಲಿಯೂ ಒಂದಿಷ್ಟು ಹೊಸತನ್ನು ತಿಳಿಯುವ, ಹೊಸ ಅನುಭವ ದಕ್ಕಿಸಿಕೊಳ್ಳುವ ಪ್ರವಾಸಿ ತಾಣಗಳಿಗೆ ಹೋದರೆ ಅದು ಕೂಡ ನಿಮ್ಮ ಬದುಕಿಗೆ ಪ್ರೇರಣೆ, ಚೈತನ್ಯದಾಯಕ ಮಾರ್ಗವನ್ನು ತಂದುಕೊಡಬಲ್ಲದು.\

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ