logo
ಕನ್ನಡ ಸುದ್ದಿ  /  ಕರ್ನಾಟಕ  /  Pushpa Chilli Vs Byadagi Chilli: ಬ್ಯಾಡಗಿಯಲ್ಲಿ ಗುಜರಾತ್‌ನ ಪುಷ್ಪ ಮೆಣಸಿನಕಾಯಿ ಘಾಟು, ಕರ್ನಾಟಕದ ತಳಿಗಿದು ಸವಾಲು

Pushpa Chilli vs Byadagi Chilli: ಬ್ಯಾಡಗಿಯಲ್ಲಿ ಗುಜರಾತ್‌ನ ಪುಷ್ಪ ಮೆಣಸಿನಕಾಯಿ ಘಾಟು, ಕರ್ನಾಟಕದ ತಳಿಗಿದು ಸವಾಲು

HT Kannada Desk HT Kannada

Apr 14, 2023 05:36 PM IST

ಬ್ಯಾಡಗಿ ಮೆಣಸಿನಕಾಯಿ (ಸಂಗ್ರಹ ಚಿತ್ರ)

    • ಕರ್ನಾಟಕದ ದೇಸಿ ವಹಿವಾಟವನ್ನು ಗುಜರಾತ್ ಮೂಲಕ ಅಮೂಲ್ ಅಲುಗಾಡಿಸಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ದೊಡ್ಡ ಸದ್ದು ಮಾಡಿತ್ತು. ಈಗ ಮೆಣಸಿನಕಾಯಿ ಸರದಿ. ಮುಂದಿನ ದಿನಗಳಲ್ಲಿ ಇದು ದೊಡ್ಡಮಟ್ಟದ ಚರ್ಚೆ ಹುಟ್ಟುಹಾಕಬಹುದು ಎಂದು ಹೇಳಲಾಗುತ್ತಿದೆ.
ಬ್ಯಾಡಗಿ ಮೆಣಸಿನಕಾಯಿ (ಸಂಗ್ರಹ ಚಿತ್ರ)
ಬ್ಯಾಡಗಿ ಮೆಣಸಿನಕಾಯಿ (ಸಂಗ್ರಹ ಚಿತ್ರ) (Byadagi Chilli)

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ (Haveri District) ಬ್ಯಾಡಗಿ ಒಂದು ತಾಲ್ಲೂಕು ಕೇಂದ್ರ. ಭಾರತದ ಬಹುತೇಕ ರಾಜ್ಯಗಳು ವಿಶ್ವದ ಹಲವು ದೇಶಗಳ ಮಸಾಲೆ ಪ್ರಿಯರಿಗೆ ಬ್ಯಾಡಗಿ ಹೆಸರಿನ ಪಟ್ಟಣಕ್ಕಿಂತಲೂ ಇಲ್ಲಿ ಬೆಳೆಯುವ ಮೆಣಸಿನಕಾಯಿ ಗೊತ್ತು. 'ಖಾರಕ್ಕೆ ಗುಂಟೂರು, ಬಣ್ಣಕ್ಕೆ ಬ್ಯಾಡಗಿ' (Guntur Chilli and Byadagi Chilli) ಎನ್ನುವುದು ಜನಜನಿತವಾದ ಮಾತು. ಆಕರ್ಷಕ ಕೆಂಪು ಬಣ್ಣದ ಈ ಮೆಣಸಿನಕಾಯಿ ಇಲ್ಲದಿದ್ದರೆ ತಿಳಿಸಾರು, ಸಾಂಬಾರು, ಹುಳಿ, ಕೂಟು, ರಸಂ, ಗೊಜ್ಜು.. ಹೀಗೆ ಪ್ರತಿದಿನ ಬಳಕೆಯಾಗುವ ಎಷ್ಟೋ ಅಡುಗೆಗೆ ಆಕರ್ಷಣೆಯೇ ಇರುವುದಿಲ್ಲ. ಚುನಾವಣೆ ಕಾಲದಲ್ಲಿ ಮೆಣಸಿನಕಾಯಿ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ? ಎಂದುಕೊಂಡಿರಾ? ಕಾರಣವಿದೆ...

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ

ಗುಜರಾತ್ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರಾಂಡ್ 'ಅಮುಲ್' ಬೆಂಗಳೂರಿನಲ್ಲಿ ಮನೆಮನೆಗಳಿಗೆ ಹಾಲು-ಮೊಸರು ಮಾರಾಟ ಆರಂಭಿಸಿದ್ದು ದೊಡ್ಡ ವಿವಾದವಾಗಿತ್ತು. ಪ್ರತಿಪಕ್ಷಗಳು ಈ ನಡೆಯನ್ನು 'ಕೆಎಂಎಫ್‌ನ ಕತ್ತು ಹಿಸುಕುವ ಪ್ರಯತ್ನ' ಎಂದು ಟೀಕಿಸಿದ್ದವು. ಆಡಳಿತಾರೂಢ ಬಿಜೆಪಿಯ ನಾಯಕರು, 'ಹಾಗೆಲ್ಲಾ ಏನೂ ಇಲ್ಲ. ಅವು ಒಂದಕ್ಕೊಂದು ಪೂರಕ ಸಂಸ್ಥೆಗಳು' ಎಂದು ಸಮರ್ಥಿಸಕೊಂಡಿದ್ದರು. ಬ್ಯಾಡಗಿಯಲ್ಲಿ ಮಾರಾಟವಾಗುತ್ತಿರುವ ಗುಜರಾತ್‌ನ 'ಪುಷ್ಪ' (Pushpa Chilli) ತಳಿಯ ಮೆಣಸಿನಕಾಯಿ ಸಹ ಇಂಥದ್ದೇ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಈ 'ಪುಷ್ಪ' ಮೆಣಸಿನಕಾಯಿ ತಳಿಗೂ ಟಾಲಿವುಡ್‌ನ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾಗೂ ಯಾವುದೇ ಸಂಬಂಧವಿಲ್ಲ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡದು. ಇಲ್ಲಿಗೆ ಇತ್ತೀಚಿನ ತಿಂಗಳಲ್ಲಿ ಸುಮಾರು 20,000 ಕ್ವಿಂಟಲ್‌ನಷ್ಟುಗುಜರಾತ್ ಮೆಣಸಿನಕಾಯಿ ಆವಕವಾಗಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ. ವಾರ್ಷಿಕ 1,500 ಕೋಟಿಗೂ ಹೆಚ್ಚು ಮತ್ತದ ಒಣಮೆಣಸಿನಕಾಯಿ ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಸ್ಥಳೀಯ ಡಬ್ಬಿ ಮತ್ತು ಕಡ್ಡಿ ತಳಿಗಳು ಜನಪ್ರಿಯ. ಈ ಎರಡೂ ತಳಿಗಳಿಗೆ 'ಲಾಲಿ' ಎಂದು ಜನಜನಿತವಾಗಿರುವ ಗುಜರಾತ್‌ 'ಪುಷ್ಪ' ತಳಿಗಳು ಎಂದಿಗೂ ಸಾಟಿಯಲ್ಲ. ಆದರೆ ಗುಜರಾತ್‌ನಿಂದ ಇಲ್ಲಿಗೆ ಮೆಣಸಿನಕಾಯಿ ಬರುತ್ತಿರುವ ವಿದ್ಯಮಾನ ಮಾತ್ರ ಸ್ಥಳೀಯರ ನೆಮ್ಮದಿಯನ್ನು ಕದಡಿದೆ.

ಭಾರತದಲ್ಲಿ ಕರ್ನಾಟಕದೊಂದಿಗೆ ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಮೆಣಸಿನಕಾಯಿ ಬೆಳೆಯನ್ನು ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಾರೆ. ದೇಶದ ಒಟ್ಟು ಮೆಣಸಿನಕಾಯಿ ಉತ್ಪಾದನೆಗೆ ಈ ಎರಡೂ ರಾಜ್ಯಗಳ ಕೊಡುಗೆ ಶೇ 60. ಕರ್ನಾಟಕವು 4ನೇ ಅತಿದೊಡ್ಡ ಮೆಣಸಿನಕಾಯಿ ಉತ್ಪಾದಕ ರಾಜ್ಯವಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ 10ರಷ್ಟು ಪಾಲು ಹೊಂದಿದೆ. ದೇಶದ ಒಟ್ಟು ಮೆಣಸಿನಕಾಯಿಯಲ್ಲಿ ಶೇ 1ಕ್ಕಿಂತ ಸ್ವಲ್ಪವೇ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ಗುಜರಾತ್ 7ನೇ ಸ್ಥಾನದಲ್ಲಿದೆ.

ಗುಜರಾತ್ ಮೆಣಸಿನಕಾಯಿ ದಾಸ್ತಾನು

ಬ್ಯಾಡಗಿಯ ಸುಮಾರು 70 ಮೆಣಸಿನಕಾಯಿ ವ್ಯಾಪಾರಿಗಳು ಗುಜರಾತ್ ಮೆಣಸಿನಕಾಯಿಯನ್ನು ಶೀತಲಗೃಹಗಳಲ್ಲಿ ದಾಸ್ತಾನು ಮಾಡಿದ್ದಾರೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿರುವುದನ್ನು ಗುಜರಾತ್ ಮೆಣಸಿನಕಾಯಿ ಮಾರಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಗುಜರಾತ್‌ನಿಂದ ಎಷ್ಟು ಪ್ರಮಾಣದ ಮೆಣಸಿನಕಾಯಿ ಬಂದಿದೆ ಎನ್ನುವ ಬಗ್ಗೆ ಎಪಿಎಂಸಿ ಬಳಿ ಸಮರ್ಪಕ ಮಾಹಿತಿಯಿಲ್ಲ. ಏಕೆಂದರೆ ಆವಕವಾದ ಮೆಣಸಿನಕಾಯಿಯ ಸಿಂಹಪಾಲು ಎಪಿಎಂಸಿಯ ಹೊರಗೆ ವಹಿವಾಟು ಆಗಿದೆ.

ಈ ಹೊಸ ಬೆಳವಣಿಗೆ ಕುರಿತು ಟೈಮ್ಸ್‌ ಆಫ್ ಇಂಡಿಯಾ, ಕೃಷಿ ಜಾಗರಣ್, ವಿಜಯ ಕರ್ನಾಟಕ, ಸುವರ್ಣ ಸೇರಿದಂತೆ ಹಲವು ಮಾಧ್ಯಮಗಳು ವಿಶೇಷ ವರದಿ ಪ್ರಕಟಿಸಿವೆ. 'ಡಬ್ಬಿ ಮತ್ತು ಕಡ್ಡಿ ತಳಿಗಳನ್ನು ಆಧರಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ತನ್ನದೇ ಅಸ್ತಿತ್ವ ಕಂಡುಕೊಂಡಿದೆ. ಹಲವು ದೇಶಗಳ ಮತ್ತು ಪ್ರಭಾವಿ ಮಸಾಲೆ ಕಂಪನಿಗಳು ಹತ್ತಾರು ವರ್ಷಗಳಿಂದ ಬ್ಯಾಡಗಿ ಮೆಣಸಿನಕಾಯಿ ತಳಿಗಳನ್ನು ಅವಲಂಬಿಸಿವೆ. ಇಲ್ಲಿ ಮಾರಾಟವಾಗುವ ಮೆಣಸಿನಕಾಯಿಯನ್ನು 'ಬ್ಯಾಡಗಿ' ಎಂದೇ ಪರಿಗಣಿಸುವ ವಾಡಿಕೆಯಿದೆ. ಹೀಗಾಗಿ ತಳಿ ಶುದ್ಧತೆ ಮತ್ತು ಗುಣಮಟ್ಟ ಖಾತ್ರಿಯ ಬಗ್ಗೆ ಸರ್ಕಾರ ಕಾಳಜಿವಹಿಸಬೇಕು' ಎಂದು ರಾಣೆಬೆನ್ನೂರು ತಾಲ್ಲೂಕಿನ ರೈತರಾದ ರಾಮಣ್ಣ ಸುದಾಂಬಿ ಹೇಳುತ್ತಾರೆ. ಅವರ ಹೇಳಿಕೆಯನ್ನು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

'ಈ ವರ್ಷ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಪೂರೈಕೆ ಕಡಿಮೆಯಾಗಿದೆ. ಬ್ಯಾಡಗಿಯಲ್ಲಿ ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಮೆಣಸಿನಕಾಯಿ ಹರಾಜು ನಡೆಯುತ್ತದೆ. ಒಂದು ವಾರಕ್ಕೆ ಸರಾಸರಿ 1.5 ಲಕ್ಷ ಚೀಲ ಆವಕವಾಗುತ್ತಿತ್ತು. ಇದೀಗ ಈ ಪ್ರಮಾಣವು 50,000 ಚೀಲಗಳಿಗೆ ಕುಸಿದಿದೆ' ಎಂದು ವ್ಯಾಪಾರಿ ಅಕ್ಷಯ್ ಸತೀಜಾ ಹೇಳುತ್ತಾರೆ.

ಇಳುವರಿ ಕುಸಿತ, ಬೆಲೆ ಏರಿಕೆ

ಕರ್ನಾಟಕವೂ ಸೇರಿದಂತೆ ಮೆಣಸಿನಕಾಯಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿತ್ತು. ಕೀಟಬಾಧೆಯೂ ಹೆಚ್ಚಾದ ಕಾರಣ ಇಳುವರಿ ಕುಸಿದು ಮಾರುಕಟ್ಟೆಗೆ ಬರುವ ಬೆಳೆ ಪ್ರಮಾಣ ಕಡಿಮೆಯಾಗಿತ್ತು. ಬೆಲೆ ಶೇ 80ರಷ್ಟು ಏರಿಕೆ ಕಂಡಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಕಾಯ್ದೆ (APMC Act) ತಿದ್ದುಪಡಿಯ ನಂತರ ಖರೀದಿದಾರರು ದೇಶದ ಯಾವುದೇ ಮೂಲೆಯಿಂದ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಅವಕಾಶ ಸಿಕ್ಕಿದೆ. ಮಾರುಕಟ್ಟೆ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎನ್ನುವ ಷರತ್ತೂ ಈಗ ಸಡಿಲಿಕೆಯಾಗಿದೆ. ಈ ಬೆಳವಣಿಗೆಯ ನಂತರ ಗುಜರಾತ್‌ನಿಂದ ಮೆಣಸಿನಕಾಯಿ ತರಿಸುವುದು ಹೆಚ್ಚಾಗಿದೆ. ಗುಜರಾತ್‌ನ 'ಪುಷ್ಪ' ಬ್ಯಾಡಗಿ ರೈತರಿಗೆ ಸವಾಲು ಹಾಕುತ್ತದೆ ಎಂದು ನಂಬಲು ಆಗುವುದಿಲ್ಲ. ಇಲ್ಲಿನ ಡಬ್ಬಿ ಮತ್ತು ಕಡ್ಡಿ ತಳಿಗಳು ತಮ್ಮದೇ ಆದ ಘನತೆ ಉಳಿಸಿಕೊಂಡಿವೆ ಎನ್ನುತ್ತಾರೆ ಬ್ಯಾಡಗಿ ಎಪಿಎಂಸಿಯ ಹೆಚ್ಚುವರಿ ನಿರ್ದೇಶಕ ಮತ್ತು ಕಾರ್ಯದರ್ಶಿ ಎಚ್‌.ವೈ.ಸತೀಶ್.

ಸರಾಸರಿ ದರ

ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರಸ್ತುತ ಬ್ಯಾಡಗಿ ಮೆಣಸಿನಕಾಯಿ ಕನಿಷ್ಠ 44,000 ಗರಿಷ್ಠ 68,000 ರೂಪಾಯಿಗೆ ವಹಿವಾಟು ಆಗುತ್ತಿದೆ. ಬ್ಯಾಡಗಿ ಎಪಿಎಂಸಿಯಲ್ಲಿ ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 2,709, ಗರಿಷ್ಠ 67,711, ಸರಾಸರಿ 32,299, ಡಬ್ಬಿ ತಳಿ ಕನಿಷ್ಠ 4,009, ಗರಿಷ್ಠ 71,711, ಸರಾಸರಿ 39,000, ಗುಂಟೂರು ಕನಿಷ್ಠ 1,589, ಗರಿಷ್ಠ 22,389, ಸರಾಸರಿ 17,569 ರೂಪಾಯಿಗೆ ಮಾರಾಟವಾಗಿದೆ.

ಬೇಡಿಕೆ ಹೆಚ್ಚಿಸಿದ ಒಲಿಯೊರೆಜಿನ್ ದ್ರಾವಣ

ಒಂದುಕಾಲದಲ್ಲಿ ಬೇಡರಹಳ್ಳಿಯಾಗಿದ್ದ ಊರು ಇದೀಗ ವಿಶಿಷ್ಟ ತಳಿಯ ಮೆಣಸಿಕಾಯಿ ಮೂಲಕ ಜಾಗತಿಕ ಖ್ಯಾತಿ ಪಡೆದಿದೆ. ಬಹುಕಾಲದಿಂದಲೂ ಅಡುಗೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬಳಕೆ ರೂಢಿಯಲ್ಲಿತ್ತು. ಮೆಣಸಿನಕಾಯಿ ಬಳಸಿ 'ಒಲಿಯೊರೆಜಿನ್' (Oleoresin) ದ್ರಾವಣ ಉತ್ಪಾದನೆ ಆರಂಭವಾದ ಬಳಿಕ ಧಾರಣೆ ಹೆಚ್ಚಾಯಿತು. ಬ್ಯಾಡಗಿ ತಳಿಯ ಮೆಣಸಿನಕಾಯಿಯಲ್ಲಿರುವ ಇರುವ ವಿಶಿಷ್ಟ ಸ್ವಾದ, ವಿಶಿಷ್ಟ ಕೆಂಪು ಬಣ್ಣ ಹಾಗೂ ರುಚಿ ಇದನ್ನು ಜನಪ್ರಿಯಗೊಳಿಸಿತು. ದಾಸ್ತಾನು ಸಂದರ್ಭದಲ್ಲಿಯೂ ಮೆಣಸಿನಕಾಯಿಯ ಮೂಲ ಬಣ್ಣ ಹಾಳಾಗದಂತೆ ಕಾಪಾಡಲು ಶೀತಲಗೃಹಗಳು ಆರಂಭವಾಗಿವೆ.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು