High School Students Trip: ಕರ್ನಾಟಕದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಷ್ಟವಾಗುವ ಸ್ಥಳಗಳು; ಈ 10 ತಾಣಗಳನ್ನು ಮಿಸ್ ಮಾಡ್ಕೋಬೇಡಿ
Nov 28, 2024 09:41 PM IST
ಕರ್ನಾಟಕದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಟ್ರಿಪ್‌ಗೆ ಹಲವು ಪ್ರವಾಸಿ ತಾಣಗಳಿವೆ.
- High School Students Trip: ನೀವು ಪ್ರೌಢಶಾಲೆ ವಿದ್ಯಾರ್ಥಿಗಳೆ. ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದೀರಾ, ಕರ್ನಾಟಕದ ಪ್ರಮುಖ ಹತ್ತು ಜಿಲ್ಲೆಗಳಲ್ಲಿ ತಪ್ಪಿಸಿಕೊಳ್ಳದೇಬಾರದ ತಾಣಗಳಿವೆ. ಅವುಗಳ ವಿವರ ಇಲ್ಲಿದೆ.
High School Students Trip: ಈಗ ಶಾಲಾ ವಿದ್ಯಾರ್ಥಿಗಳ ಪ್ರವಾಸದ ಸಮಯ. ಅದರಲ್ಲೂ ಎಲ್ಲವನ್ನೂ ತಿಳಿದುಕೊಳ್ಳಬೇಕು ಎನ್ನುವ ಕುತೂಹಲದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರವಾಸ ಆಸಕ್ತಿದಾಯಕ, ಮಾಹಿತಿ ಪೂರ್ಣವಾಗಿರಬೇಕು ಎನ್ನುವ ಅವಧಿ. ಇದಕ್ಕಾಗಿ ಕರ್ನಾಟಕದ ನಾನಾ ಜಿಲ್ಲೆಗಳ ಪ್ರಮುಖ ತಾಣಗಳು, ಅಲ್ಲಿನ ಕೃಷಿ ಬೆಳೆ, ದೇಗುಲ, ಜ್ಞಾನ ವಿಸ್ತರಿಸುವ ಕೇಂದ್ರಗಳಿಗೆ ಭೇಟಿ ನೀಡಬಹುದು. ಅಂತಹ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
1.ಬೆಂಗಳೂರು
ಬೆಂಗಳೂರು ಎಂದರೆ ಏನುಂಟು ಏನಿಲ್ಲ. ಮುಖ್ಯವಾಗಿ ಇಲ್ಲಿ ಜ್ಞಾನದ ಕೇಂದ್ರದಂತಿರುವ ಜವಾಹರ್‌ಲಾಲ್ ನೆಹರು ತಾರಾಲಯವು ವಿಜ್ಞಾನದ ಬೆಳವಣಿಗೆಯ ಮಾಹಿತಿಯನ್ನು ನೀಡಲಿದೆ. ಹಲವು ಕೌತುಕಗಳಿಗೆ ಇಲ್ಲಿ ಉತ್ತರ ಪ್ರಯೋಗಾತ್ಮಕವಾಗಿಯೇ ಸಿಗಲಿದೆ. ಸಾಕಷ್ಟುವಿಚಾರಗಳನ್ನು ತಿಳಿದುಕೊಳ್ಳಲು ಈ ಪ್ರವಾಸ ಸಹಕಾರಿಯಾಗಲಿದೆ. ಬೆಂಗಳೂರಿನ ಲಾಲ್ ಬಾಗ್ ಇಲ್ಲವೇ ಕಬ್ಬನ್ ಪಾರ್ಕ್ ಕೂಡ ತೋಟಗಾರಿಕೆ, ಸಸ್ಯೋದ್ಯಾನದ ತಾಣಗಳು. ಬೆಂಗಳೂರಿನ ಬನ್ನೇರಘಟ್ಟ ಉದ್ಯಾನ ಭೇಟಿ ಕೂಡ ಅಲ್ಲಿನ ವನ್ಯಜೀವಿಗಳು, ಪಕ್ಷಿ ಲೋಕ, ಮರಗಳ ಕುರಿತಾಗಿ ಮಾಹಿತಿ ನೀಡಲಿದೆ. ಅಲ್ಲಿನ ಸಫಾರಿ ವಿಶೇಷ ಅನುಭವವನ್ನು ನೀಡಲಿದೆ. ಚಿಟ್ಟೆ ಉದ್ಯಾನ ಸಹಿತ ಹಲವು ಆಕರ್ಷಣೆಗಳು ಅಲ್ಲಿವೆ.
2. ಉಡುಪಿ
ಉಡುಪಿ ಹಲವು ವೈವಿಧ್ಯಗಳ ಸಂಗಮ. ಉಡುಪಿಯಲ್ಲಿ ಕೃಷ್ಣ ದೇಗುಲ ವಿಶೇಷ ಆಕರ್ಷಣೆ. ಕೃಷ್ಣಮಠದಲ್ಲಿ ಕೃಷ್ಣನ ದರ್ಶನ, ಕನಕನ ಕಿಂಡಿ ವೀಕ್ಷಣೆಯೂ ಪ್ರಮುಖವೇ. ದೇಗುಲದ ಜತೆಗೆ ಅಷ್ಟ ಮಠಗಳಿಗೆ ಭೇಟಿಯೂ ವಿಶೇಷ ಎನ್ನಿಸಲಿದೆ. ಉಡುಪಿಯೆಂದರೆ ಬೀಚ್‌ಗಳಿಗೆ ಬಲು ಜನಪ್ರಿಯ. ಅದರಲ್ಲೂ ಮಲ್ಪೆ ಬೀಚ್ ಚೆನ್ನಾಗಿದೆ. ಬೀಚ್ ನಲ್ಲಿ ಸ್ವಚ್ಛಂದವಾಗಿ ಆಟವಾಡುವ ನೈಸರ್ಗಿಕ ವ್ಯವಸ್ಥೆಯಿದೆ. ಅಲ್ಲಿಯೇ ಬೋಟಿಂಗ್ ಜತೆಗೆ ಸಾಹಸ ಮಯ ಕ್ರೀಡೆಗಳೂ ನಿಮಗೆ ಖುಷಿ ಕೊಡಬಹುದು. ಅಲ್ಲಿಂದಲೇ ಸೆಂಟ್ ಮೇರಿಸ್ ದ್ವೀಪದ ಬೀಚ್‌ಗೂ ಬೋಟ್‌ನಲ್ಲಿ ಹೋಗಿ ಅಲ್ಲಿ ಕೆಲ ಹೊತ್ತು ಕಳೆದು ಬರಬಹುದು. ಬೀಚ್‌ನಲ್ಲಿ ಕಳೆಯಲು ಅರ್ಧ ದಿನವಾದರೂ ಬೇಕಾಗಬಹುದು.
3. ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕ ಹಾಗೂ ಪ್ರವಾಸಿ ತಾಣಗಳ ಮಿಶ್ರಣ. ದಾಂಡೇಲಿಯಲ್ಲಿನ ಕಾಳಿ ನದಿ ತೀರದ ಆಟ, ಕುಳಗಿ ನೈಸರ್ಗಿಕ ಶಿಬಿರ ಮುಗಿಸಿಕೊಂಡು ಕಾಡಿನ ಮಧ್ಯದ ಮೂಲಕವೇ ಹೋಗುವ ಮಾರ್ಗದಲ್ಲಿ ಸಂಚರಿಸಬಹುದು. ಗೌಳಿ ಕುಟುಂಬಗಳ ಬದುಕಿನ ಕ್ರಮ ತಿಳಿದುಕೊಳ್ಳಬಹುದು,. ಕಾರವಾರದ ರವೀಂದ್ರನಾಥ್ ಕಡಲತೀರ, ಗೋಕರ್ಣ ದೇಗುಲ ಹಾಗೂ ಬೀಚ್ ಕೂಡ ಇಲ್ಲಿ ಆಕರ್ಷಕ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲ ಉತ್ಪಾದನಾ ಘಟಕಗಳಿದ್ದು. ಅವುಗಳ ಮೂಲಕವೇ ಹೇಗೆ ವಿದ್ಯುತ್ ಉತ್ಪಾದನೆಯಾಗಲಿದೆ ಎನ್ನುವ ಮಾಹಿತಿಯನ್ನು ಕಣ್ಣಾರೆ ಕಂಡು ತಿಳಿದುಕೊಳ್ಳಲು ಅವಕಾಶವಿದೆ. ಇದರೊಟ್ಟಗೆ ಯಾಣದಂತ ವಿಶಿಷ್ಟ ಪ್ರವಾಸಿ ತಾಣ, ಅಲ್ಲಿನ ಆಹಾರ ಸಂಸ್ಕೃತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದು,.
4. ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆ ಬೆಟ್ಟದ ತಾಣಗಳಿಗೆ ಹೆಸರುವಾಸಿ,. ಜತೆಗೆ ಪ್ರಮುಖ ದೇಗುಲಗಳಿಂದ ಆಕರ್ಷಿಸುವ ಜಿಲ್ಲೆಯೂ ಹೌದು. ಅತೀ ಎತ್ತರದ ಬೆಟ್ಟಗಳಲ್ಲಿ ಒಂದಾದ ಮುಳ್ಳಯ್ಯನಗಿರಿ, ಆನಂತರ ಕೆಮ್ಮಣ್ಣುಗುಂಡಿಯ ತೋಟಗಾರಿಕೆ ಸಸ್ಯೋದ್ಯಾನ, ಬೆಟ್ಟಗಳ ಸಾಲು ನೋಡಬಹುದು. ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ಮಸಾಲ ಮಂಡಳಿ ಕಚೇರಿಯಿದ್ದು. ಮಸಾಲೆಯ ಮಹತ್ವದ ವಸ್ತು ಪ್ರದರ್ಶನ ವೀಕ್ಷಿಸಬಹುದು. ಶೃಂಗೇರಿ ಶಾರದಾಂಬೆಯ ದೇಗುಲ, ಅಲ್ಲಿಯೇ ಹರಿಯುವ ತುಂಗಾ ತಟದಲ್ಲೂ ಕುಳಿತು ನಿರುಮ್ಮಳರಾಗಿ ಬರಬಹುದು. ಸಮೀಪವೇ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲವೂ ಇರುವುದರಿಂದ ಅಲ್ಲಿಗೆ ಹೋಗಿ ಬರಲು ಯೋಜಿಸಿಕೊಳ್ಳಬಹುದು.
5. ವಿಜಯಪುರ
ವಿಜಯಪುರದಲ್ಲಿ ಮೂರು ನೂರು ವರ್ಷಕ್ಕೂ ಹಳೆಯದಾದ ಗೋಳಗುಮ್ಮಟ ಈಗಲೂ ಆಕರ್ಷಣೆ. ಒಂದೇ ಒಂದೂ ಕಂಬವೂ ಇಲ್ಲದ ಹಾಗೆ ವಿಶೇಷವಾಗಿ ಧ್ವನಿಸುವ ವ್ಯವಸ್ಥೆಯೊಂದಿಗೆ ಇಡೀ ಕಟ್ಟಡ ನಿರ್ಮಿಸಲಾಗಿದೆ. ಗೋಳಗುಮ್ಮನ ನಿಜಕ್ಕೂ ವಿದ್ಯಾರ್ಥಿಗಳ ಕುತೂಹಲ ತಣಿಸುವ ಕಟ್ಟಡ. ವಿಜಯಪುರ ದ್ರಾಕ್ಷಿಗೆ ಹೆಸರುವಾಸಿ. ಭಾರತದಲ್ಲಿಯೇ ಶ್ರೇಷ್ಠ ದ್ರಾಕ್ಷಿ ಬೆಳೆಯುವುದು ವಿಜಯಪುರದಲ್ಲಿಯೇ. ದ್ರಾಕ್ಷಿ ತೋಟಗಳಿಗೆ ಹೋದರೆ ದ್ರಾಕ್ಷಿ ಹೇಗೆ ಬೆಳೆಯಲಾಗುತ್ತದೆ ಎನ್ನುವ ವಿವರ ಪಡೆಯಬಹುದು. ಬಳಿಕ ಆಲಮಟ್ಟಿಗೆ ಹೋದರೆ ಅಲ್ಲಿನ ಲಾಲ್ ಬಹದ್ದೂರು ಶಾಸ್ತ್ರಿ ಜಲಾಶಯ, ಮೊಗಲ್ ಗಾರ್ಡನ್, ಲವಕುಶ ಉದ್ಯಾನ ಸಹಿತ ಹಲವು ತಾಣಗಳನ್ನು ನೋಡಬಹುದು. ಸಮೀಪವೇ ಇರುವ ಯಲಗೂರು ಆಂಜನೇಯನ ದರ್ಶನ ಮಾಡಬಹುದು.
6.ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಇದರಲ್ಲಿ ಬೆಂಗಳೂರಿನಿಂದ 60 ಕಿ.ಮಿ. ದೂರ ಇರುವ ನಂದಿಬೆಟ್ಟ ಪ್ರಮುಖ ಆಕರ್ಷಣೆ. ಬೆಟ್ಟದಲ್ಲಿ ನಿಂತು ಸುತ್ತಮುತ್ತಲಿನ ಸೌಂದರ್ಯ ಸವಿಯುವುದೇ ಚಂದ. ಅಲ್ಲಿನ ತೋಟಗಾರಿಕಾ ಪ್ರದರ್ಶನ ಸಹಿತ ಹಲವು ತಾಣಗಳೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬೆಸ್ಟ್. ಅಲ್ಲಿಂದ ಕೆಳಕ್ಕೆ ಇಳಿದರೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟೂರು ಮುದ್ದೇನಹಳ್ಳಿ. ಅಲ್ಲಿ ಅವರ ಸ್ಮಾರಕವಿದ್ದು, ಸಾಕಷ್ಟು ಮಾಹಿತಿ ನಿಮಗೆ ಸಿಗಲಿದೆ. ಬಳಿಕ ವಿಜಯಪುರದ ದೇಗುಲ ನೋಡಿಕೊಂಡು ಬಳಿಕ ಚಿಕ್ಕಬಳ್ಳಾಪುರ ಸಮೀಪ ಇರುವ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್, ಆದಿಯೋಗಿ ಮೂರ್ತಿಯನ್ನು ನೋಡಿಕೊಂಡು ಬರಬಹುದು.
7. ಹಂಪಿ
ಹಂಪಿ ಕರ್ನಾಟಕದ ಪ್ರಮುಖ ಇತಿಹಾಸ ಕೇಂದ್ರ, ವಿಜಯನಗರ ಆಡಳಿತ ಕಾಲದ ರಾಜಧಾನಿಯಾಗಿದ್ದ ಹಂಪಿಯಲ್ಲಿನ ಒಂದೊಂದು ದೇಗುಲ, ತಾಣಗಳು ಹತ್ತಾರು ಮಾಹಿತಿ ನೀಡುತ್ತವೆ. ಯುನೆಸ್ಕೋ ತಾಣಗಳ ಪಟ್ಟಿಯಲ್ಲಿರುವ ಹಂಪಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ವೀಕ್ಷಿಸುವಂತದ್ದು. ಅಲ್ಲಿಂದ ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ವಿರೂಪಾಕ್ಷ ದೇಗುಲವೂ ಪುರಾತನವಾದದ್ದು. ದೇಗುಲದ ನಂತರ ಹಂಪಿ ಸಮೀಪವೇ ಇರುವ ಉತ್ತರ ಕರ್ನಾಟಕದ ಅತಿ ದೊಡ್ಡ ಮೃಗಾಲಯ ವೀಕ್ಷಿಸಬಹುದು. ಅಲ್ಲಿ ಜಿರಾಫೆ. ಹುಲಿ ಸಹಿತ ಪ್ರಮುಖ ವನ್ಯಜೀವಿಗಳಿವೆ. ಹೊಸಪೇಟೆ ಸಮೀಪವೇ ಇರುವ ತುಂಗಭದ್ರಾ ಜಲಾಶಯ ವೀಕ್ಷಣೆಗೂ ಅವಕಾಶ ಉಂಟು.
8.ಮೈಸೂರು
ಮೈಸೂರು ಪ್ರಮುಖ ಪಾರಂಪರಿಕ ಹಾಗೂ ಜ್ಞಾನದ ತಾಣ. ಮೈಸೂರಿನಲ್ಲಿ ಅರಮನೆ ವೀಕ್ಷಣೆ ಇತಿಹಾಸದ ಗತವೈಭವನ್ನು ತಿಳಿಸಿಕೊಡಲಿದೆ. ಅಲ್ಲಿನ ಮ್ಯೂಸಿಯಂಗಳು ಕೂಡ ವಿಶೇಷವೇ. ಅಲ್ಲಿಂದ ಸಿಎಫ್‌ಟಿಆರ್‌ಐ. ಡಿಎಫ್‌ಆರ್ ಎಲ್ ಸಹಿತ ಆಹಾರಕ್ಕೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳು. ಅದರಲ್ಲೂ ಸಿಎಫ್‌ಟಿಆರ್‌ಐ ನಾವು ಖರೀದಿಸುವ ಚಿಪ್ಸ್ ಸಹಿತ ಬಹುತೇಕ ಆಹಾರ ವಸ್ತುಗಳ ಸುರಕ್ಷತೆ ಖಚಿತಪಡಿಸುವ ಸಂಸ್ಥೆ,. ಇಲ್ಲಿಗೂ ಹೋಗಬಹುದು, ಮೈಸೂರು ಮೃಗಾಲಯವೂ ಹತ್ತಾರು ಬಗೆಬಗೆಯ ವನ್ಯಜೀವಿಗಳು, ಪಕ್ಷಿಗಳ ತಾಣ. ಈ ಪ್ರವಾಸ ಮಕ್ಕಳಿಗೆ ಜ್ಞಾನದ ಅರಿವು ನೀಡಲಿದೆ. ಚಾಮುಂಡಿಬೆಟ್ಟ ವೀಕ್ಷಣೆ, ಹಲವಾರು ಮ್ಯೂಸಿಯಂಗಳ ಭೇಟಿ, ಸೆಂಟ್ ಫಿಲೋಮಿನಾ ಚರ್ಚ್ ಕೂಡ ಆಕರ್ಷಕ ಪ್ರವಾಸಿ ಕೇಂದ್ರವೇ.
9. ಶ್ರೀರಂಗಪಟ್ಟಣ
ಕಾವೇರಿ ತೀರದ ಐತಿಹಾಸಿಕ ಪಟ್ಟಣ, ಕಾವೇರಿ ಎರಡು ಹೋಳಾಗಿ ಇಡೀ ಊರು ದ್ವೀಪವಾಗಿ ಮಾರ್ಪಟ್ಟಿದೆ. ಇಲ್ಲಿನ ರಂಗನಾಥ ಸ್ವಾಮೀಜಿ ದೇಗುಲ, ಟಿಪ್ಪು ಕಾಲದ ಕೋಟೆ,, ಡಂಜನ್, ಟಿಪ್ಪು ಬೇಸಿಗೆ ಅರಮನೆ, ಕುಟುಂಬದ ಸಮಾಧಿ, ಘೋಸಾಯಿ ಘಟ್ಟ, ಸಂಗಮ ಇವೆ. ನಿಮಿಷಾಂಬ ದೇಗುಲವೂ ಕಾವೇರಿ ತೀರದ ಪ್ರಮುಖ ದೇಗುಲ. ಪಕ್ಕದಲ್ಲೇ ಇರುವ ಕರಿಘಟ್ಟ ಹತ್ತುವ ಖುಷಿಯೇ ಬೇರೆ. ಶ್ರೀರಂಗಪಟ್ಟಣದಿಂದ ಅನತಿ ದೂರದಲ್ಲಿ ಕೆಆರ್ ಎಸ್‌ಗೆ ಹೋಗುವ ಮಾರ್ಗದಲ್ಲಿದೆ ರಂಗನತಿಟ್ಟು ಪಕ್ಷಿಧಾಮ. ಇಲ್ಲಿ ನೂರಾರು ಹಕ್ಕಿಗಳು, ವಿದೇಶಿ ಬಾನಾಡಿಗಳನ್ನು ನೋಡಿ ಮಾಹಿತಿ ಪಡೆಯಬಹುದು. ಸಂಜೆ ನಂತರ ಕೃಷ್ಣರಾಜಸಾಗರ ಬೃಂದಾವನ, ಕಾರಂಜಿ ನಿಜಕ್ಕೂ ಖುಷಿ ನೀಡುವ ತಾಣಗಳು.
10.ತುಮಕೂರು
ತುಮಕೂರು ಪ್ರಮುಖ ತಾಣಗಳಲ್ಲಿ ಸಿದ್ದಗಂಗಾ ಮಠ ಪ್ರಮುಖವಾದದ್ದು. ಅಕ್ಷರ ಹಾಗೂ ಅನ್ನ ದಾಸೋಹಕ್ಕೆ ಹೆಸರುವಾಸಿಯಾದ ಮಠದಲ್ಲಿ ಒಂದು ಸುತ್ತು ಹಾಕಿ ಬರುವುದು ಮಠ ನಡೆದುಕೊಂಡು ಬಂದ ಹಾದಿ, ಶ್ರೀ ಶಿವಕುಮಾರಸ್ವಾಮಿ ಅವರ ಅನನ್ಯ ಸೇವೆಯ ಅನುಭವಕ್ಕೆ ಬರುತ್ತದೆ. ಈಗಲೂ ಅಲ್ಲಿ ನಿತ್ಯ ನೂರಾರು ಮಕ್ಕಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಶಿಕ್ಷಣದ ಮಹತ್ವ ಅರಿಯುವ ಪ್ರವಾಸ ಇದಾಗಲಿದೆ. ತುಮಕೂರು ನಗರದಲ್ಲಿಯೇ ಕೆರೆ ಬೋಟಿಂಗ್‌ಗೆ ಅವಕಾಶವಿದೆ. ತುಮಕೂರು ಜಿಲ್ಲೆಯಲ್ಲಿಯೇ ಸಿದ್ದರಬೆಟ್ಟ, ದೇವರಾಯನದುರ್ಗ ಬೆಟ್ಟಗಳು ಇವೆ. ಇವುಗಳನ್ನು ಏರಿ ಅಲ್ಲಿಂದ ಸ್ವಚ್ಛಂದ ಗಾಳಿಯನ್ನು ಸೇವಿಸಿ ಮೈಮನ ಪುಳಿಕಿತಗೊಳಿಸಿಕೊಂಡು ಬರುವುದು ವಿಭಿನ್ನ ಅನುಭವವಾಗಲಿದೆ.