ಶೈಕ್ಷಣಿಕ ಪ್ರವಾಸಕ್ಕೆ ದಕ್ಷಿಣ ಕನ್ನಡ ಬೆಸ್ಟ್; ಕರಾವಳಿ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಶೈಕ್ಷಣಿಕ ಪ್ರವಾಸಕ್ಕೆ ದಕ್ಷಿಣ ಕನ್ನಡ ಬೆಸ್ಟ್; ಕರಾವಳಿ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ

ಶೈಕ್ಷಣಿಕ ಪ್ರವಾಸಕ್ಕೆ ದಕ್ಷಿಣ ಕನ್ನಡ ಬೆಸ್ಟ್; ಕರಾವಳಿ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ

Dakshina Kannada: ಮಕ್ಕಳಿಗೆ ಸುದೀರ್ಘ ರಜೆ ಇದ್ದಾಗ ಪ್ರವಾಸ ಕರೆದುಕೊಂಡು ಹೋಗುವುದು ಸಾಮಾನ್ಯ. ಶಾಲೆಗಳಲ್ಲೂ ನವೆಂಬರ್‌ ಬಂತೆಂದರೆ ಶೈಕ್ಷಣಿಕ ಪ್ರವಾಸ ಯೋಜನೆ ಶುರುವಾಗುತ್ತದೆ. ಈ ಬಾರಿ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಯೋಜನೆ ನಿಮ್ಮದಾಗಿದ್ದರೆ, 2 ದಿನಗಳ ಪ್ರವಾಸದಲ್ಲಿ ಮಕ್ಕಳು ನೋಡಲೇಬೇಕಾದ ಸ್ಥಳಗಳ ಪಟ್ಟಿ ಇಲ್ಲಿದೆ.

ದಕ್ಷಿಣ ಕನ್ನಡ ಬೆಸ್ಟ್ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ
ದಕ್ಷಿಣ ಕನ್ನಡ ಬೆಸ್ಟ್ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ

ಅತ್ತ ಕರಾವಳಿ, ಇತ್ತ ಪಶ್ಚಿಮ ಘಟ್ಟದ ನಡುವೆ ಹಚ್ಚಹಸುರಿನಿಂದ ಕಂಗೊಳಿಸುವ ಸುಂದರ ಜಿಲ್ಲೆ ದಕ್ಷಿಣ ಕನ್ನಡ. ಶಿಕ್ಷಣ, ಆರೋಗ್ಯ, ವಾಣಿಜ್ಯ, ಆಹಾರ, ಪ್ರವಾಸೋದ್ಯಮ, ನವೋದ್ಯಮ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಗುರುತಿಸಿಕೊಳ್ಳದ ಕ್ಷೇತ್ರವೇ ಇಲ್ಲ. ಹಲವು ಕ್ಷೇತ್ರದಲ್ಲಿ ಜಾಗತಿಕ ಆಕರ್ಷಣೆಯಾಗಿರುವ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಮಂಗಳೂರು ದಕ್ಷಿಣ ಕನ್ನಡದ ಹೆಮ್ಮೆಯ ಜಿಲ್ಲಾ ಕೇಂದ್ರಸ್ಥಳ. ಸಂಪೂರ್ಣ ಜಿಲ್ಲೆ ಶಾಲಾ ಮಕ್ಕಳ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಬಗೆಬಗೆಯ ಆಹಾರ, ಸಮುದ್ರಾಹಾರ ಸೇರಿದಂತೆ ಸ್ವಾದಿಷ್ಠ ಐಸ್‌ಕ್ರೀಮ್‌ಗೆ ಮಂಗಳೂರು ಜನಪ್ರಿಯ. ಭಾರತದ ಐಸ್‌ಕ್ರೀಮ್‌ ರಾಜಧಾನಿ, ಭಾರತದ ಬ್ಯಾಂಕಿಂಗ್‌ನ ತವರು, ಮಸೀದಿ-ಚರ್ಚ್‌ ಹಾಗೂ ದೇವಸ್ಥಾನಗಳ ನಗರಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯಲು ಪ್ರವಾಸ ಯೋಜನೆಯನ್ನು ನಾವು ಕೊಡುತ್ತಿದ್ದೇವೆ. ಮುಂಬರುವ ರಜಾ ಸಮಯದಲ್ಲಿ ಎರಡು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಅತ್ಯುತ್ತಮ ಸ್ಥಳಗಳ ಪಟ್ಟಿ ಇಲ್ಲಿದೆ ನೋಡಿ.

ಮೊದಲ ದಿನ

  • ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿ ಮೊದಲ ದಿನ ಮಂಗಳೂರು ನಗರ ದರ್ಶನ ಮಾಡಬಹುದು. ನಗರದಲ್ಲಿರುವ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಹೀಗೆ ಯಾವುದಾದರೂ ಒಂದು ಅಥವಾ ಎರಡು ದೇವಸ್ಥಾನಕ್ಕೆ ತೆರಳಿ ಪ್ರವಾಸ ಆರಂಭಿಸಬಹುದು. ಹಳೆಯ ದೇವಸ್ಥಾನಗಳು ಮಕ್ಕಳ ಮನಸ್ಸಿಗೆ ಖುಷಿ ಕೊಡುತ್ತದೆ.
  • ಇದಾದ ಬಳಿಕ ಬೆಳಗ್ಗಿನ ಉಪಾಹಾರ ಸೇವಿಸಿ, ಲೈಟ್‌ಹೌಸ್‌ ಹಿಲ್‌ನಲ್ಲಿರುವ ಸಂತ ಅಲೋಶಿಯಸ್‌ ಚರ್ಚ್‌ ಕಡೆಗೆ ಹೋಗಬಹುದು. 1880ರಲ್ಲಿ ನಿರ್ಮಾಣವಾದ ಈ ಚರ್ಚ್‌ನ ಪ್ರಾರ್ಥನಾ ಮಂದಿರದ ಒಳಭಾಗದಲ್ಲಿ ಆಕರ್ಷಕ ವರ್ಣಚಿತ್ರಗಳಿವೆ. ಇಲ್ಲೇ ಪಕ್ಕದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜ್ ಮ್ಯೂಸಿಯಂ ಇದೆ. ಇದು 1913ರಲ್ಲಿ ಆರಂಭವಾಯ್ತು. ನವಶಿಲಾಯುಗದ ಕಲ್ಲಿನ ಕೊಡಲಿ, ಹಿತ್ತಾಳೆ ಮತ್ತು ಕಂಚಿನ ವಸ್ತುಗಳು, ದೀಪಗಳು, ಆಫ್ರಿಕನ್ ಕಲಾಕೃತಿಗಳು, ಪುರಾತನ ಪಿಂಗಾಣಿ ಹೂದಾನಿಗಳು, ಕ್ಯಾಮೆರಾಗಳು ಸೇರಿದಂತೆ ಹಲವು ವಸ್ತುಗಳ ದೊಡ್ಡ ಸಂಗ್ರಹವಿದೆ.
  • ನಂತರ ನೇರವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತೆರಳಬಹುದು. ನಗರದಿಂದ ತುಸು ಹೊರಭಾಗದಲ್ಲಿರುವ ಪಿಲಿಕುಳದಲ್ಲಿ ದಿನವಿಡೀ ನೋಡುವಂಥ ಸ್ಥಳಗಳಿವೆ. ಜೀವವೈವಿಧ್ಯ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಆಸಕ್ತಿಯ ಅನೇಕ ಆಕರ್ಷಣೆಗಳು ಇಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಪಿಲಿಕುಳ ಹೇಳಿಮಾಡಿಸಿದ ಸ್ಥಳ. ಗುರುಪುರ ನದಿಯ ದಡದಲ್ಲಿ 400 ಎಕರೆ ಪ್ರದೇಶದಲ್ಲಿ ಪಿಲಿಕುಳ ಜೈವಿಕ ಉದ್ಯಾನವನ, ಪ್ರಾಣಿ ಸಂಗ್ರಹಾಲಯ ಇಲ್ಲಿದೆ. ಇಲ್ಲಿರುವ ಸ್ವಾಮಿ ವಿವೇಕಾನಂದ 3D ತಾರಾಲಯ ಮಕ್ಕಳು ನೋಡಲೇಬೇಕಾದ್ದು. ಇದು ಭಾರತದ ಮೊದಲ 3D ತಾರಾಲಯ. ಇನ್ನೂ ಸಮಯವಿದ್ದರೆ ಇಲ್ಲಿನ ಗುತ್ತುಮನೆಯ ದರ್ಶನ ಮಾಡಿ, ಕರಾವಾಳಿ ಭಾಗದ ಹಳೆಯ ಮನೆಯ ಸೊಬಗನ್ನು ಸವಿಯಬಹುದು.
  • ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಕೂಡಾ ಒಂದು. ಹೀಗಾಗಿ ಕರಾವಳಿಗೆ ಬಂದ ಮೇಲೆ ಸಮುದ್ರ ತೀರಕ್ಕೆ ಮಕ್ಕಳನ್ನು ಕರೆದೊಯ್ಯದಿದ್ದರೆ ದಕ್ಷಿಣ ಕನ್ನಡ ಪ್ರವಾಸವೇ ಅಪೂರ್ಣ. ಪಿಲಿಕುಳದಲ್ಲಿ ಒದು ದಿನ ನೋಡಲು ಸಾಧ್ಯವಾಗದಷ್ಟು ಸ್ಥಳಗಳಿವೆ. ಇದನ್ನು ಮುಗಿಸಿಕೊಂಡು ಸಂಜೆ ವೇಳೆ ಬೀಚ್‌ಗೆ ಹೋಗಬಹುದು. ಮಂಗಳೂರು ನಗರದ ಆಸುಪಾಸಿನಲ್ಲೇ ಹಲವಾರು ಬೀಚ್‌ಗಳಿವೆ. ಹೀಗಾಗಿ ಸಂಜೆ ವೇಳೆಗೆ ಪಣಂಬೂರು ಬೀಚ್‌ ಅಥವಾ ಸುರತ್ಕಲ್ ಬೀಚ್‌ಗೆ ಹೋಗಬಹುದು.
  • ಮೊದಲ ದಿನದ ಪ್ರವಾಸ ಮುಗಿಸಿ, ರಾತ್ರಿ ಮಂಗಳೂರಿನಲ್ಲಿ ತಂಗುವ ಯೋಜನೆ ರೂಪಿಸಬೇಕು. ಎರಡನೇ ದಿನ ಮತ್ತೆ ಪ್ರವಾಸ ಮುಂದುವರೆಸಬಹುದು.

ಎರಡನೇ ದಿನದ ಪ್ರವಾಸ

  • ಎರಡನೇ ದಿನ ಬೆಳಗ್ಗೆ ನಗರದಲ್ಲಿರುವ ಕದ್ರಿ ಪಾರ್ಕ್‌ಗೆ ಹೋಗಿ ದಿನದ ಪ್ರವಾಸಕ್ಕೆ ಚಾಲನೆ ನೀಡಬಹುದು. ಇಲ್ಲಿರುವ ಪುಟಾಣಿ ರೈಲಿನಲ್ಲಿ ಮಕ್ಕಳನ್ನು ಸುತ್ತಾಡಿಸಿ, ರೈಲು ಪ್ರಯಾಣದ ಅನುಭವ ಕೊಡಬಹುದು. ಇಲ್ಲಿ ಕರ್ನಾಕದ ಎರಡನೇ ಎತ್ತರದ ತ್ರಿವರ್ಣ ಧ್ವಜಸ್ತಂಭವಿದೆ. ಇದನ್ನೂ ನೋಡಿಕೊಂಡು ಹೋಗಬಹುದು.
  • ಕದ್ರಿಯಿಂದ ನೇರವಾಗಿ ಬೋಳೂರಿನಲ್ಲಿರುವ ಸುಲ್ತಾನ್‌ ಬತ್ತೇರಿಗೆ ತೆರಳಬಹುದು. ಇದು 1784ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ವೀಕ್ಷಣಾ ಗೋಪುರ. ಈ ವಾಚ್‌ ಟವರ್‌ ಅನ್ನು ಕಪ್ಪು ಕಲ್ಲುಗಳಿಂದ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲೇ ನದಿ ಮತ್ತು ಸಮುದ್ರವಿದ್ದು, ಯುದ್ಧನೌಕೆಗಳು ನದಿಗೆ ಪ್ರವೇಶಿಸುವುದನ್ನು ತಡೆಯಲು ನಿರ್ಮಿಸಲಾಯಿತು. ಬ್ರಿಟಿಷರು ಸಮುದ್ರದ ಮೂಲಕ ಮಂಗಳೂರಿಗೆ ಪ್ರವೇಶಿಸುವುದನ್ನು ತಪ್ಪಿಸಲು ಫಿರಂಗಿಗಳ ಇಡುವ ಕೋಟೆಯಾಗಿಯೂ ಇದನ್ನು ಬಳಸಲಾಗುತ್ತಿತ್ತು.
  • ಸುಲ್ತಾನ್‌ ಬತ್ತೇರಿಯಿಂದ ಬೋಟ್‌ ಮೂಲಕ ಗುರುಪುರ ನದಿ ದಾಟಿದರೆ, ಅರಬ್ಬೀ ಸಮುದ್ರ ನೋಡಬಹುದು. ಮಕ್ಕಳಿಗೆ ಬೋಟ್‌ ಪಯಣದ ಅನುಭವ ಸಿಗುವಂತಾಗಲು ಇದು ಸರಿಯಾದ ಸ್ಥಳ. ನದಿ ದಾಟಿದರೆ, ಸುಂದರ ತಣ್ಣಿರುಬಾವಿ ಬೀಚ್‌ ಸಿಗುತ್ತದೆ. ನೀವು ಮಧ್ಯಾಹ್ನ ಈ ಬೀಚ್‌ಗೆ ಹೋದರೂ, ತಣ್ಣನೆಯ ನೆರಳು ನೀಡುವ ಮರಗಳು ನಿಮಗೆ ಬಿಸಿಲಿನಿಂದ ರಕ್ಷಣೆ ನೀಡುತ್ತವೆ.
  • ಬೀಚ್‌ನಿಂದ ಮರಳಿ ಮೂಡಬಿದಿರೆ ಕಡೆ ಪ್ರಯಾಣಿಸಿದರೆ, ಸಾವಿರ ಕಂಬದ ಬಸದಿ ಇದೆ. ಜೈನ ಕಾಶಿ ಎನಿಸಿಕೊಳ್ಳುವ ಮೂಡುಬಿದಿರೆಯಲ್ಲಿ ಹಲವು ಪ್ರಾಚೀನ ಬಸದಿಗಳಿವೆ. ಅದರಲ್ಲಿ ಸಾವಿರ ಕಂಬದ ಬಸದಿ ಹೆಚ್ಚು ಪ್ರಸಿದ್ಧಿ ಪಡೆದಿದೆ.
  • ಮೂಡುಬಿದಿರೆಯಿಂದ ಹೊರಟು ಧರ್ಮಸ್ಥಳ ಕಡೆಗೆ ತುಸು ದೂರದ ಪ್ರಯಾಣ ಮಾಡಿದರೆ, ಒಂದಷ್ಟು ಸ್ಥಳಗಳನ್ನು ನೋಡಬಹುದು. ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ದೇವಾಲಯ ತುಂಬಾ ಪ್ರಸಿದ್ಧಿ. ಇಲ್ಲಿ ಮಧ್ಯಾಹ್ನದ ಭೋಜನವೂ ಸವಿಯಬಹುದು.
  • ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದು, ಇಲ್ಲಿರುವ ಅಪರೂಪದ ಕಾರು ಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು. ಜೊತೆಗೆ ದೇಗುಲದ ಎದುರು ಭಾಗದಲ್ಲಿ ಇರುವ ಮೀನಿನ ಅಕ್ವೇರಿಯಂನಲ್ಲಿ ಬಗೆಬಗೆಯ ಮೀನುಗಳಿವೆ. ಇದಲ್ಲದೆ ಇಲ್ಲಿ ಅಪರೂಪದ ವಸ್ತುಗಳ ಸಂಗ್ರಹ ಇರುವ ಮ್ಯೂಸಿಯಂ ಕೂಡಾ ಇದೆ. ಧರ್ಮಸ್ಥಳದ ಸಂಪೂರ್ಣ ಪ್ರವಾಸ ಮುಗಿಸಿಕೊಂಡು, ಮಕ್ಕಳನ್ನು ಅವರ ಊರಿಗೆ ಮರಳಿ ಕರೆದುಕೊಂಡು ಹೋಗಬಹುದು. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎರಡು ದಿನಗಳ ಪ್ರವಾಸ ಮಕ್ಕಳ ನೆನಪಿನಲ್ಲಿ ಸದಾ ಉಳಿಯುತ್ತದೆ.

ಇದನ್ನೂ ಓದಿ | Shimoga Tour Plan: ಮಲೆನಾಡಿನ ಹೃದಯಭಾಗ ಶಿವಮೊಗ್ಗ ಜಿಲ್ಲೆಯಲ್ಲಿ 2 ದಿನದ ಶೈಕ್ಷಣಿಕ ಪ್ರವಾಸಕ್ಕೆ ಇದು ಬೆಸ್ಟ್‌ ಮಾರ್ಗ

Whats_app_banner