ಬೆಂಗಳೂರಿನಿಂದ ಮಂತ್ರಾಲಯ, ಹಂಪಿಗೆ ಕೆಎಸ್‌ಟಿಡಿಸಿ ಬಸ್ ಟೂರ್ ಪ್ಯಾಕೇಜ್; ಎಷ್ಟು ದಿನ, ಯಾವೆಲ್ಲಾ ಜಾಗ ನೋಡಬಹುದು, ಇಲ್ಲಿದೆ ವಿವರ
ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವ ಜೊತೆಗೆ ಐಸಿಹಾಸಿಕ ತಾಣ ಹಂಪಿ ಹಾಗೂ ತುಂಗಭದ್ರಾ ಡ್ಯಾಂ ನೋಡಿ ಬರುವ ಆಸೆ ಇದ್ಯಾ, ನೀವು ಬೆಂಗಳೂರಿನಲ್ಲಿದ್ರೆ ಕೆಎಸ್‌ಟಿಡಿಸಿ ನಿಮಗಾಗಿ ವಿಶೇಷ ಟೂರ್ ಪ್ಯಾಕೇಜ್‌ವೊಂದನ್ನು ಘೋಷಿಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು, ಎಷ್ಟು ದಿನಗಳ ಟ್ರಿಪ್, ದರ ಎಷ್ಟು ವಿವರ ಇಲ್ಲಿದೆ.
ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ತಾಣ ಹಂಪಿ ನೋಡುವ ಆಸೆ ಯಾರಿಗಿಲ್ಲ ಹೇಳಿ. ಹಂಪಿಯ ವೈಭೋಗವನ್ನು ಕಣ್ತುಂಬಿಕೊಳ್ಳುವ ಜೊತೆಗೆ ತುಂಗಭದ್ರ ಡ್ಯಾಂ, ಮಂತ್ರಾಲಯ ಗುರು ರಾಘವೇಂದ್ರನ ಸನ್ನಿಧಿಗೂ ಹೋಗಿ ಬರುವ ಅವಕಾಶ ಇಲ್ಲಿದೆ. ನೀವು ಬೆಂಗಳೂರಿನ ನಿವಾಸಿಗಳಾಗಿದ್ದರೆ ನಿಮಗಾಗಿ ಕೆಎಸ್‌ಟಿಡಿಸಿ ಹೆರಿಟೇಜ್ ಹಾಲಿಡೇಸ್ ಟೂರ್ ಪ್ಯಾಕೇಜ್‌ವೊಂದನ್ನು ಘೋಷಿಸಿದೆ.
ಮಂತ್ರಾಲಯ, ಹಂಪಿ, ತುಂಗಭದ್ರಾ ಡ್ಯಾಮ್ ಜೊತೆಗೆ ಸುತ್ತಲಿನ ಇನ್ನೂ ಹಲವು ಜಾಗಗಗಳನ್ನು ನೀವು ನೋಡಿ ಬರುವ ಅವಕಾಶ ಈ ಟೂರ್ ಪ್ಯಾಕೇಜ್ ಕಲ್ಪಿಸುತ್ತದೆ. ಏಸಿ ಡಿಲಕ್ಸ್ ಬಸ್‌ನಲ್ಲಿ ನಿಮ್ಮ ಪಯಣ ಸಾಗುತ್ತದೆ. ಒಟ್ಟು ಮೂರು ರಾತ್ರಿಗಳ ಟೂರ್ ಪ್ಯಾಕೇಜ್ ಇದಾಗಿದೆ.
ಪ್ರತಿದಿನ ಶುಕ್ರವಾರ ಈ ಟೂರ್ ಪ್ಯಾಕೇಜ್ ಇರುತ್ತದೆ. ಶುಕ್ರವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ನೋಡಬಹುದು, ದರ ಎಷ್ಟು ವಿವರ ಇಲ್ಲಿದೆ ನೋಡಿ.
ಟೂರ್ ಪ್ಯಾಕೇಜ್ ಪಯಣ ಹೀಗಿರುತ್ತೆ
- ಮೊದಲ ದಿನ: ಯಶವಂತಪುರ ಬಿಎಂಟಿಸಿ ಬಸ್‌ಸ್ಟ್ಯಾಂಡ್‌ನಿಂದ ರಾತ್ರಿ 8 ಗಂಟೆಗೆ ಹೊರಡುವುದು
- ಎರಡನೇ ದಿನ: ಬೆಳಿಗ್ಗೆ 5.30ಕ್ಕೆ ಮಂತ್ರಾಲಯ ತಲುಪುವುದು. ಬೆಳಿಗ್ಗೆ 9.30ರವರೊಳಗೆ ದರ್ಶನ ಮುಗಿಸಿಕೊಂಡು ಹೊಸಪೇಟೆಗೆ ಹೊರಡುವುದು. ರಾತ್ರಿ ತುಂಗಭದ್ರಾ ಡ್ಯಾಂ ನೋಡಿಕೊಂಡು ಅಲ್ಲೇ ಉಳಿಯುವುದು
- ಮೂರನೇ ದಿನ: ಹಂಪಿಯ ವಿರೂಪಾಕ್ಷ ದೇವಾಲಯ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಲಕ್ಷ್ಮೀ ನರಸಿಂಹ, ಬಡವಿ ಲಿಂಗ, ಲೋಟಸ್ ಮಹಲ್, ಹಜಾರಾ ರಾಮ ದೇವಸ್ಥಾನ, ಅರಮನೆ ಪ್ರದೇಶ, ಮಹಾನವಮಿ ದಿಬ್ಬ ಮುಂತಾದ ಸ್ಥಳಗಳನ್ನು ನೋಡುವುದು. ಮಧ್ಯಾಹ್ನ 1.30 ರಿಂದ 2.30 ಊಟ. 2.30 ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ. 4.30 ರಿಂದ 6 ಗಂಟೆ ವಿಜಯ ವಿಠಲ ದೇವಸ್ಥಾನ (ಕಲ್ಲಿನ ರಥ), ರಾಜನ ತಕ್ಕಡಿ, ಪುರಂದರ ಮಂಟಪ, ಹಳೆಯ ಸೇತುವೆಯ ಕಂಬಗಳನ್ನು ನೋಡುವುದು. ಅಲ್ಲಿಂದ ಊಟ ಮಾಡಿ ರಾತ್ರಿ ಹೊರಡುವುದು
- ನಾಲ್ಕನೇ ದಿನ: ಬೆಳಿಗ್ಗೆ ಬೆಂಗಳೂರು ತಲುಪುವುದು.
ದರ, ಸಂಪರ್ಕ ಸಂಖ್ಯೆ
ಈ ಟೂರ್ ಪ್ಯಾಕೇಜ್‌ನಲ್ಲಿ ಬಸ್, ಊಟ, ವಸತಿ ಎಲ್ಲವೂ ಲಭ್ಯವಿದ್ದು ಒಬ್ಬರಿಗೆ 7910 ರೂ, ಇಬ್ಬರಿಗಾದರೆ 6260 ರೂ ಹಾಗೂ ಮೂವರಿಗಾದರೆ 5930 ರೂ ಇರುತ್ತದೆ. ಈ ಟೂರ್ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗಾಗಿ 91 80-4334 4334 ಇವರನ್ನು ಸಂಪರ್ಕಿಸಿ.
ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಹಂಪಿಯನ್ನ ಜೀವನದಲ್ಲಿ ನೀವು ಒಮ್ಮೆಯಾದ್ರೂ ನೋಡಲೇಬೇಕು. ವಿಜಯನಗರ ಸಾಮ್ರಾಜ್ಯದ ವೈಭೋಗ, ದೇಗುಲಗಳು, ಮನುಷ್ಯನಿಗೆ ವಿಸ್ಮಯ ಎನ್ನಿಸುವ ಹಲವು ವಿಚಾರಗಳನ್ನ ನೀವು ಹಂಪಿಯಲ್ಲಿ ಕಣ್ತುಂಬಿಕೊಳ್ಳಬಹುದು. ತುಂಗಭದ್ರಾ ಡ್ಯಾಂ ಕೂಡ ಒಮ್ಮೆ ನೋಡಲೇಬೇಕಾದ ತಾಣವಾಗಿದೆ. ರಾಘವೇಂದ್ರನ ಭಕ್ತರು ನೀವಾಗಿದ್ದರೆ ಈ ಟೂರ್‌ಪ್ಯಾಕೇಜ್ ಖಂಡಿತ ನಿಮಗೆ ಇಷ್ಟವಾಗುತ್ತದೆ. ಈ ನಿಮ್ಮ ಬಳಿ ಹಣ, ಸಮಯ ಎರಡೂ ಇದ್ದರೆ ಮೂರು ದಿನಗಳ ಕಾಲ ಹಂಪಿ, ಮಂತ್ರಾಲಯ ಸುತ್ತಾಡಿ ಬರಬಹುದು ನೋಡಿ.