Indian Railways: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಹುಬ್ಬಳ್ಳಿ, ಕಲಬುರಗಿಗೆ ವಿಶೇಷ ರೈಲು
Oct 24, 2024 05:38 PM IST
ಈ ಬಾರಿ ದೀಪಾವಳಿಗೆ ನಾನಾ ಕಡೆಗಳಿಂದ ವಿಶೇಷ ರೈಲು ಬೆಂಗಳೂರಿನಿಂದ ಹೊರಡಲಿದೆ.
- ದೀಪಾವಳಿಗೆ ಪ್ರಯಾಣಿಕರ ಭಾರೀ ಬೇಡಿಕೆ ಇರುವುದರಿಂದ ಬೆಂಗಳೂರಿನಿಂದ ಚೆನ್ನೈ, ಹುಬ್ಬಳ್ಳಿ, ಮಂಗಳೂರು ಹಾಗೂ ಕಲಬುರರಿಗೆ ವಿಶೇಷ ರೈಲು ಸೇವೆ ಇರಲಿದೆ.
ಬೆಂಗಳೂರು: ಈ ಬಾರಿಯ ದೀಪಾವಳಿಗೆ ಜನ ಊರು ಕಡೆ ತೆರಳುವ ಕಾರಣದಿಂದ ಭಾರತೀಯ ರೈಲ್ವೆ ಹುಬ್ಬಳ್ಳಿ ಕೇಂದ್ರ ನೈರುತ್ಯ ವಿಭಾಗವು ಬೆಂಗಳೂರಿನಿಂದ ನಾನಾ ಕಡೆಗಳಿಗೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಚೆನ್ನೈ, ಹುಬ್ಬಳ್ಳಿ, ಮಂಗಳೂರು ಹಾಗೂ ಕಲಬುರಗಿಗೆ, ಮಂಗಳೂರಿನಿಂದ ಹುಬ್ಬಳ್ಳಿಗೆ ವಿಶೇಷ ರೈಲು ಸಂಚರಿಸಲಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದ್ದು ಮುಂಗಡ ಬುಕ್ಕಿಂಗ್ ಕೂಡ ಶುರು ಮಾಡಿದೆ. ದೀಪಾವಳಿ ವೇಳೆ ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ಹೋಗಿ ಬರುವವರಿಗೂ ಈ ವಿಶೇಷ ರೈಲು ಸಂಚಾರದಿಂದ ಉಪಯೋಗವಾಗಲಿದೆ. ಪ್ರಯಾಣಿಕರು www.enquiry.indianrail.gov.in ಅಥವಾ NTES ಅಪ್ಲಿಕೇಷನ್ ಅಥವಾ 139 ಸಂಖ್ಯೆ ಕರೆ ಮಾಡಿ ಇತರೆ ವಿವರ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು ಚೆನ್ನೈ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ನಿಭಾಯಿಸಲು ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಚೆನ್ನೈನ ಎಗ್ಮೋರ್‌ಗೆ ಎರಡು ಟ್ರಿಪ್ ರೈಲು ಓಡಲಿದೆ.
ರೈಲು ಗಾಡ್ ಸಂಖ್ಯೆ 06209ಯು 2024 ಅಕ್ಟೋಬರ್ 30 ಹಾಗೂ ನವೆಂಬರ್ 3 ರಂದು ಬೆಳಿಗ್ಗೆ8.05 ಕ್ಕೆ ಬೆಂಗಳೂರಿನಿಂದ ಹೊರಟು ಅದೇ ದಿನ ಮಧ್ಯಾಹ್ನ 2.30ಚೆನ್ನೈ ಎಗ್ಮೋರ್ ನಿಲ್ದಾಣ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಗಾಡಿ ಸಂಖ್ಯೆ 06210 ಚೆನ್ನೈ ಎಗ್ಮೋರ್ ನಿಂದ 2024 ಅಕ್ಟೋಬರ್ 30 ಹಾಗೂ ನವೆಂಬರ್ 3 ರಂದು ಮಧ್ಯಾಹ್ನ3.55ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ
ಈ ರೈಲು ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ಅರಕ್ಕೋಣಂ, ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲು ಒಂದು ಎಟಿ 2 ಟಯರ್, ಒಂದು ಎಸಿ 3 ಟೈಯರ್, 11 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ, 2 ಸೆಕೆಂಡ್ ಕ್ಲಾಸ್ ಲಗೇಜ್/ ಬ್ರೇಕ್ ವ್ಯಾನ್ ಸೇರಿ ಬೋಗಿ ಹೊಂದಿರಲಿದೆ.
ಹುಬ್ಬಳ್ಳಿ- ಬೆಂಗಳೂರು-ಮಂಗಳೂರು
ನೈರುತ್ಯ ರೈಲ್ವೆ ವಲಯ ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹಾಗು ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೆ ವಿಶೇಷ ರೈಲು ಓಡಿಸಲಿದೆ.
2024 ರ ನವೆಂಬರ್ 02ರ ಶನಿವಾರ ರೈಲು ಸಂಖ್ಯೆ 07311 ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4 ಹೊರಟು ಅದೇ ದಿನ ರಾತ್ರಿ 11:25ಕ್ಕೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ನವೆಂಬರ್ 03ರ ಭಾನುವಾರವಾರ ಬೆಳಗ್ಗೆ 11:45ಕ್ಕೆ ಮಂಗಳೂರಿನ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ದಿನ ಅಂದರೆ ನವೆಂಬರ್ 3ರ ಭಾನುವಾರ ರೈಲು ಸಂಖ್ಯೆ 07312 ಮಂಗಳೂರು ಜಂಕ್ಷನ್-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1:00ಕ್ಕೆ ಹೊರಟು ರಾತ್ರಿ 10 ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 10:30ಕ್ಕೆ ಹೊರಟು ಮರುದಿನ ನವೆಂಬರ್ 4ರ ಸೋಮವಾರ ಬೆಳಗ್ಗೆ 7:00ಕ್ಕೆ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗು ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಶ್ರೀ ಮಹಾದೇವಪ್ಪ ಮಲ್ಲಾರ ಹಾವೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ರೈಲಿನಲ್ಲಿ 2 ಜನರಲ್ ಕೋಚ್,5 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ, 1 ಪ್ರಥಮ ದರ್ಜೆ/ಕ್ಯಾಬಿನ್ ಎಸಿ ಕೋಚುಗಳು ಇರಲಿದೆ.
ಹಬ್ಬದ ಸಮಯದಲ್ಲಿ ಊರಿಗೆ ಬಂದು ಮನೆಯವರ ಜೊತೆಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವವರಿಗೆ ಊರಿಗೆ ಬಂದು ಹಿಂದಿರುಗಲು ಇದು ಒಂದು ಉತ್ತಮ ರೈಲು ಸೇವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಈಗಾಗಲೇ ನೈರುತ್ಯ ರೈಲ್ವೆ ವಲಯ ಅಕ್ಟೋಬರ್ 30ರಂದು ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಖ್ಯೆ 06565 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಹಾಗು ಅಕ್ಟೋಬರ್ 31ರಂದು ಮಂಗಳೂರಿನಿಂದ ಬೆಂಗಳೂರಿಗೆ ರೈಲು ಸಂಖ್ಯೆ 06566 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಓಡಿಸುತ್ತಿದೆ. ಇದರ ಜೊತೆಗೆ ಅದೇ ದಿನ ಬೆಂಗಳೂರು ಹಾಗು ಕಾರವಾರ ಮಧ್ಯೆ ಪಡೀಲು ಬೈಪಾಸ್ ಮಾರ್ಗವಾಗಿ ರೈಲು ಸಂಖ್ಯಿ 06597/98 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಾರವಾರ ವಿಶೇಷ ರೈಲು ಓಡಿಸುತ್ತಿದೆ.
ಕಲಬುರಗಿ– ಬೆಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು
ದೀಪಾವಳಿ ಹಬ್ಬದ ಅಂಗವಾಗಿ ಬೆಂಗಳೂರಿನ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಿಲ್ದಾಣದಿಂದ ಕಲಬುರಗಿ ರೈಲು ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಕಲ್ಪಿಸಿದೆ. ಅಕ್ಟೋಬರ್ 31ರಂದು ಎಸ್‌ಎಂವಿಟಿ ಬೆಂಗಳೂರು– ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು (06217) ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.40ಕ್ಕೆ ಕಲಬುರಗಿ ರೈಲು ನಿಲ್ದಾಣ ತಲುಪಲಿದೆ.
ನವೆಂಬರ್ 1ರಂದು 06218 ಸಂಖ್ಯೆಯ ರೈಲು ಕಲಬುರಗಿಯಿಂದ ಬೆಳಿಗ್ಗೆ 9.35ಕ್ಕೆ ಹೊರಟು, ರಾತ್ರಿ 8ಕ್ಕೆ ಬೆಂಗಳೂರು ಎಸ್‌ಎಂವಿಟಿ ತಲುಪಲಿದೆ. ಯಲಹಂಕ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಹಾಗೂ ಶಹಾಬಾದ್‌ನಲ್ಲಿ ನಿಲುಗಡೆಯಾಗಲಿದೆ.