ICF vs LHB: ಭಾರತೀಯ ರೈಲ್ವೆ ಐಸಿಎಫ್ ಬದಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಸುತ್ತಿರುವುದೇಕೆ; ಈ ಎರಡು ಕೋಚ್‌ಗಳ ವ್ಯತ್ಯಾಸವೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Icf Vs Lhb: ಭಾರತೀಯ ರೈಲ್ವೆ ಐಸಿಎಫ್ ಬದಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಸುತ್ತಿರುವುದೇಕೆ; ಈ ಎರಡು ಕೋಚ್‌ಗಳ ವ್ಯತ್ಯಾಸವೇನು?

ICF vs LHB: ಭಾರತೀಯ ರೈಲ್ವೆ ಐಸಿಎಫ್ ಬದಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಸುತ್ತಿರುವುದೇಕೆ; ಈ ಎರಡು ಕೋಚ್‌ಗಳ ವ್ಯತ್ಯಾಸವೇನು?

Linke Hofmann Busch vs Integral Coach Factory: ಭಾರತೀಯ ರೈಲ್ವೆಯಲ್ಲಿ ಹಲವು ದಶಕಗಳಿಂದ ಇರುವ ಐಸಿಎಫ್ ಕೋಚ್‌ಗಳು ನಿಧಾನವಾಗಿ ಮಾಯವಾಗುತ್ತಿವೆ. ಇದರ ಬದಲಿಗೆ ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಹಲವು ಕಾರಣಗಳೂ ಇವೆ.

ICF vs LHB: ಭಾರತೀಯ ರೈಲ್ವೆ ಐಸಿಎಫ್ ಬದಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಸುತ್ತಿರುವುದೇಕೆ?
ICF vs LHB: ಭಾರತೀಯ ರೈಲ್ವೆ ಐಸಿಎಫ್ ಬದಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಸುತ್ತಿರುವುದೇಕೆ?

ಸತತ 26 ವರ್ಷಗಳಿಂದ ಕರ್ನಾಟಕದ ಕರಾವಳಿ ಹಾಗೂ ವಾಣಿಜ್ಯ ನಗರಿ ಮುಂಬೈ ಜನರ ಪ್ರಯಾಣದ ಸಂಗಾತಿಯಾಗಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಹೊಸ ರೂಪ ಪಡೆಯಲಿದೆ. ಈ ರೈಲಿಗೆ 2025ರ ಆರಂಭದಲ್ಲಿ ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕೆ-ಹಾಫ್‌ಮನ್-ಬುಶ್) ಕೋಚ್‌ ಅಳವಡಿಸಲಾಗುತ್ತದೆ. ಈಗಾಗಲೇ ರೈಲ್ವೆ ಮಂಡಳಿ ಕೋಚ್‌ ಬದಲಾವಣೆಗೆ ಅನುಮತಿ ನೀಡಿದ್ದು, ಲಕ್ಷಾಂತರ ಪ್ರಯಾಣಿಕರು ಸುಖಕರ ಪ್ರಯಾಣ ಅನುಭವಿಸಲಿದ್ದಾರೆ. ರೈಲು ಸಂಖ್ಯೆ 12620 ಮಂಗಳೂರು ಸೆಂಟ್ರಲ್-ಮುಂಬೈ ಎಕ್ಸ್‌ಪ್ರೆಸ್ 2025ರ ಫೆಬ್ರವರಿ 17ರಿಂದ ಎಲ್‌ಎಚ್‌ಬಿ ಕೋಚ್‌ಗಳನ್ನು ಪಡೆದರೆ, 2025ರ ಫೆಬ್ರವರಿ 19ರಿಂದ ರೈಲು ಸಂಖ್ಯೆ 12619 ಎಲ್‌ಎಚ್‌ಬಿ ಕೋಚ್‌ ಜೊತೆಗೆ ಮುಂಬೈ-ಮಂಗಳೂರು ನಡುವೆ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ತಿಳಿಸಿದೆ.

ಭಾರತೀಯ ರೈಲ್ವೇಯು ICF ಕೋಚ್‌ಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಿದೆ. ಅದರ ಬದಲಿಗೆ ಅತ್ಯಾಧುನಿಕ LHB ಕೋಚ್‌ಗಳನ್ನು ಅಳವಡಿಸುತ್ತಿದೆ. LHB ಕೋಚ್‌ಗಳು ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆ ಮತ್ತು ಸೌಕರ್ಯ ಒದಗಿಸುತ್ತದೆ. ರೈಲು ವೇಗದಲ್ಲಿ ಸ್ಥಿರತೆ ಕಾಪಾಡಲು ಕೂಡಾ ಈ ಕೋಚ್‌ ಸಹಕಾರಿ. ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಸುವ ರೈಲು ಅಥವಾ ಹೊಸ ರೈಲುಗಳಿಗೆ LHB ಕೋಚ್‌ ಅನ್ನು ಆದ್ಯತೆಯಾಗಿ ಅಳವಡಿಸಲಾಗುತ್ತಿದೆ. ಹೀಗಾಗಿಯೇ 2025ರ ವೇಳೆಗೆ ಎಲ್ಲಾ ICF ಕೋಚ್‌ಗಳನ್ನು LHB ಕೋಚ್‌ಗಳೊಂದಿಗೆ ಬದಲಾಯಿಸಲು ಭಾರತ ಸರ್ಕಾರವು ಯೋಜಿಸಿದೆ.

ಹಾಗಿದ್ದರೆ ಈ ಎಲ್‌ಎಚ್‌ಬಿ ಕೋಚ್‌ನ ವಿಶೇಷತೆಗಳೇನು ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ICF (Integral Coach Factory) ಕೋಚ್‌ಗಳಿಂದ ಈ LHB (Linke Hofmann Busch) ಕೋಚ್‌ಗಳು ಹೇಗೆ ಭಿನ್ನ? ಇವುಗಳ ನಡುವಿನ ವ್ಯತ್ಯಾಸಗಳೇನು ಎಂಬುದು ನೋಡೋಣ.

ಐಸಿಎಫ್ ಕೋಚ್‌

ಹಲವು ದಶಕಗಳಿಂದ ಐಸಿಎಫ್ ಕೋಚ್‌ಗಳು ಭಾರತೀಯ ರೈಲ್ವೆಯ ಬೆನ್ನೆಲುಬಾಗಿದೆ. ಭಾರತೀಯ ರೈಲು ಎಂದಾಗ ಮೊದಲು ನೆನಪಿಗೆ ಬರುವುದೇ ಈ ಕೋಚ್‌ಗಳು. ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಈ ಕೋಚ್‌ಗಳನ್ನು ತಯಾರಿಸುತ್ತದೆ. ಉಕ್ಕಿನಿಂದ ಮಾಡಲ್ಪಟ್ಟ ಈ ಕೋಚ್‌ ದೃಢ ವಿನ್ಯಾಸವನ್ನು ಹೊಂದಿವೆ. ವಿಶಿಷ್ಟವಾದ ಕಿಟಕಿ ಗ್ರಿಲ್‌ ಹಾಗೂ ಹೊರವಿನ್ಯಾಸದಿಂದ ಅವುಗಳನ್ನು ಸುಲಭವಾಗಿ ಗುರುತಿಸಬಹುದು.

ಎಲ್‌ಎಚ್‌ಬಿ ಕೋಚ್‌ಗಳು

ಭಾರತೀಯ ರೈಲ್ವೇಯಲ್ಲಿ LHB ಕೋಚ್‌ಗಳನ್ನು ಇತ್ತೀಚೆಗೆ ಕಾಣಬಹುದು. ಸಾಂಪ್ರದಾಯಿಕ ಐಸಿಎಫ್ ಕೋಚ್‌ಗಳಿಂದ ಇವು ಭಿನ್ನ ಹಾಗೂ ಆಧುನಿಕ. ಜರ್ಮನ್ ಕಂಪನಿಯಾದ Linke Hofmann Busch ಈ ಕೋಚ್‌ಗಳನ್ನು ತಯಾರಿಸುತ್ತದೆ. ಇದನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗುತ್ತದೆ. ಹೀಗಾಗಿ ICF ಕೋಚ್‌ಗಳಿಗೆ ಹೋಲಿಸಿದರೆ ಇವು ಹೆಚ್ಚು ಬಾಳಿಕೆ ಬರುತ್ತದೆ. ಅಲ್ಲದೆ ಆಧುನಿಕ ಲುಕ್‌ ಹೊಂದಿದೆ. ಇದರ ಆಕರ್ಷಕ ಹೊರಭಾಗ ಮತ್ತು ದೊಡ್ಡ ಕಿಟಕಿಗಳನ್ನು ನೋಡಿದರೆ ಕೋಚ್‌ ಯಾವುದೆಂದು ಗೊತ್ತಾಗುತ್ತದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ

ಈ ಎರಡೂ ಕೋಚ್‌ಗಳು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯಕ್ಕೆ ಆದ್ಯತೆ ನೀಡುತ್ತವೆ. ಆದರೂ, LHB ಕೋಚ್‌ ಈ ವಿಚಾರದಲ್ಲೂ ಇನ್ನೂ ಸುಧಾರಿತ ಸೌಕರ್ಯ ನೀಡುತ್ತದೆ. ಎಲ್‌ಎಚ್‌ಬಿ ಕೋಚ್‌ಗಳು ಆಂಟಿ-ಕ್ಲೈಂಬಿಂಗ್ ವೈಶಿಷ್ಟ್ಯ ಹೊಂದಿದೆ. ಅಂದರೆ, ಅಪಘಾತದ ಸಮಯದಲ್ಲಿ ಕೋಚ್‌ಗಳು ಒಂದರ ಮೇಲೆ ಒಂದು ಹತ್ತುವುದನ್ನು ತಡೆಯುತ್ತದೆ. ಇದರ ಸುಧಾರಿತ ವ್ಯವಸ್ಥೆ ಸುಗಮ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ದಿನಪೂರ್ತಿ ಅಥವಾ ಸುದೀರ್ಘ ಪ್ರಯಾಣದ ಸಮಯದಲ್ಲಿ ಆಯಾಸ ಕಡಿಮೆ ಮಾಡುತ್ತದೆ.

ವೇಗ ಮತ್ತು ಸ್ಥಿರತೆ

ಐಸಿಎಫ್ ಕೋಚ್‌ಗಳಿಗೆ ಹೋಲಿಸಿದರೆ LHB ಕೋಚ್‌ ಹೆಚ್ಚಿನ ವೇಗದ‌ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದರ ವೈಜ್ಞಾನಿಕ ವಿನ್ಯಾಸವು ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರೈಲು ವೇಗದಲ್ಲಿ ಸ್ಥಿರತೆ ಕಾಪಾಡಿಕೊಂಡು ಹೆಚ್ಚಿನ ವೇಗ ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಎಕ್ಸ್‌ಪ್ರೆಸ್ ರೈಲು ಸೇರಿದಂತೆ ವೇಗದ ರೈಲುಗಳಿಗೆ LHB ಕೋಚ್‌ ಸೂಕ್ತ.

ನಿರ್ವಹಣೆ ವೆಚ್ಚ‌

ICF ಕೋಚ್‌ಗಳಿಗೆ ಹೋಲಿಸಿದರೆ LHB ಕೋಚ್‌ಗಳ ನಿರ್ವಹಣೆ ವೆಚ್ಚ ಕಡಿಮೆ. ಸ್ಟೇನ್‌ಲೆಸ್ ಸ್ಟೀಲ್ ನಿರ್ಮಾಣದಿಂದಾಗಿ ಆಗಾಗ ರಿಪೇರಿಗೆ ಬರುವುದಿಲ್ಲ. ತುಕ್ಕು ನಿರೋಧಕವಾಗಿರುವುದರಿಂದ LHB ಕೋಚ್‌ಗಳ ಜೀವಿತಾವಧಿ ಕೂಡಾ ಹೆಚ್ಚು. ಅಲ್ಲದೆ ನಿರ್ವಹಣೆ ಮತ್ತು ದುರಸ್ತಿ ವೆಚ್ಚ ಕೂಡಾ ಕಡಿಮೆ. ಆದರೆ, ICF ಕೋಚ್‌ಗಳಿಗೆ ಹೋಲಿಸಿದರೆ, LHB ಕೋಚ್‌ಗಳ ಉತ್ಪಾದನಾ ವೆಚ್ಚ ಹೆಚ್ಚು.

Whats_app_banner