ಕನ್ನಡ ರಾಜ್ಯೋತ್ಸವ 2024:ಯಕ್ಷಗಾನ ರಂಗಸ್ಥಳದಲ್ಲಿ ಹಾಸ್ಯದ ಹೊನಲು ಹರಿಸುವ ಆಯ್ದ 10ಹಾಸ್ಯಗಾರರು; ಇವರ ಹಾಸ್ಯ ಪ್ರಸಂಗಗಳ ವಿಡಿಯೋ ಇಲ್ಲಿದೆ ನೋಡಿ
Oct 31, 2024 11:21 AM IST
ಯಕ್ಷಗಾನ ರಂಗಸ್ಥಳದಲ್ಲಿ ಹಾಸ್ಯದ ಹೊನಲು ಹರಿಸುವ ಆಯ್ದ 10 ಹಾಸ್ಯಗಾರರು ಇವರು: ಮಿಜಾರು ತಿಮ್ಮಪ್ಪ ಪ್ರಜ್ವಲ್ ಗುರುವಾಯನಕೆರೆ, ರವಿಶಂಕರ ವಳಕ್ಕುಂಜ, ಮಹೇಶ್ ಮಣಿಯಾಣಿ ದೊಡ್ಡತೋಟ, ಮೂರೂರು ರಮೇಶ ಭಂಡಾರಿ, ಹಳ್ಳಾಡಿ ಜಯರಾಮ ಶೆಟ್ಟಿ, ರವೀಂದ್ರ ದೇವಾಡಿಗ ಕಮಲಶಿಲೆ, ಸೀತಾರಾಮ ಕುಮಾರ್ ಕಟೀಲು, ಚಪ್ಪರಮನೆ ಶ್ರೀಧರ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ.
ಕನ್ನಡ ರಾಜ್ಯೋತ್ಸವ: ಯಕ್ಷರಂಗದ ಮಟ್ಟಿಗೆ ನವೆಂಬರ್ ಬಹುವಿಶೇಷ. ಯಕ್ಷಗಾನ ತಿರುಗಾಟ ಶುರುವಾಗುವ ತಿಂಗಳಿದು. ಯಕ್ಷಗಾನ ಅಂದರೆ ಅದು ಮನರಂಜನೆಯೂ ಹೌದು. ಅದನ್ನು ಒದಗಿಸುವವರು ಹಾಸ್ಯಗಾರರು. ರಾಜ್ಯೋತ್ಸವದ ನಿಮಿತ್ತ ಅಂತಹ ಆಯ್ದ 10 ಹಾಸ್ಯಗಾರರ ಪರಿಚಯ ಮಾಡಿಕೊಟ್ಟಿದ್ದಾರೆ ಮಂಗಳೂರಿನ ಪತ್ರಕರ್ತ ಹರೀಶ್ ಮಾಂಬಾಡಿ. ಹಾಸ್ಯ ಪ್ರಸಂಗಗಳ ವಿಡಿಯೋ ಕೂಡ ಜತೆಗಿದೆ.
ಕರಾವಳಿ ಗಂಡುಕಲೆ ಎಂದು ಹೇಳಲಾಗುವ ಯಕ್ಷಗಾನದಲ್ಲಿ ಹಾಸ್ಯ ಅವಿಭಾಜ್ಯ. ಹಾಸ್ಯಗಾರರೆಂದರೆ ರಂಗಸ್ಥಳದ ಎರಡನೇ ನಿರ್ದೇಶಕ ಎನ್ನುತ್ತಾರೆ. ಅಗತ್ಯ ಬಿದ್ದರೆ ಯಾವುದೇ ಪಾತ್ರ ನಿಭಾಯಿಸುವ ಶಕ್ತಿ ಉಳ್ಳವರು. ಈಗಿನ ಹಾಸ್ಯಗಾರರೆಂದೇ ನಿಗದಿಪಡಿಸುವವರ ಜೊತೆಗೆ ಪ್ರಮುಖ ಕಲಾವಿದರೂ ಪಾತ್ರಾಭಿನಯ ವೇಳೆ ಪ್ರೇಕ್ಷಕರಲ್ಲಿ ನಗೆಯುಕ್ಕಿಸಿಬಿಡುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಇರುವ ಸುಮಾರು ಇಪ್ಪತ್ತಕ್ಕೂ ಅಧಿಕ ಮೇಳಗಳಲ್ಲಿ ನಲ್ವತ್ತಕ್ಕೂ ಅಧಿಕ ಹಾಸ್ಯಗಾರರಿದ್ದು, ಇವರಲ್ಲಿ ಸಾಂಕೇತಿಕವಾಗಿ ಹತ್ತು ಮಂದಿಯ ವಿವರವನ್ನಷ್ಟೇ ನೀಡಲಾಗಿದೆ. ಈ ಪಟ್ಟಿ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ನಮೂದಿಸಿದ ವಿವರಗಳೂ ವಿವಿಧ ಮೂಲಗಳಿಂದ ಸಂಗ್ರಹಿತವಾಗಿದ್ದು, ಇವುಗಳು ಸಾರಾಂಶವಷ್ಟೇ. ಕಲಾವಿದರ ಸಾಧನೆ ಅಪಾರ.
ಸೀತಾರಾಮ ಕುಮಾರ್ ಕಟೀಲು
ತೆಂಕು ಬಡಗು ತಿಟ್ಟುಗಳೆರಡರಲ್ಲೂ ಪಳಗಿರುವ ಚಾರ್ಲಿ ಚಾಪ್ಲಿನ್ ಎಂದು ಹೇಳಲಾಗುವ ಸೀತಾರಾಮ ಕುಮಾರ್ ಕಟೀಲು ಅಗ್ರಮಾನ್ಯ ಹಾಸ್ಯಗಾರರು. ಯಾವ ಪಾತ್ರವನ್ನೂ ಸಲೀಸಾಗಿ ನಿಭಾಯಿಸಬಲ್ಲ ಸೀತಾರಾಮ ಕುಮಾರ್ ಪ್ರೇತದ ಹಾಸ್ಯ ಈಗಿನ ತಲೆಮಾರಿನ ಪ್ರೇಕ್ಷಕರಲ್ಲಿ ಜನಪ್ರಿಯ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಕಟೀಲಿನಲ್ಲಿ ಜನಿಸಿದ ಸೀತಾರಾಮ್ ಓದಿದ್ದು ಕೇವಲ ಐದನೇ ತರಗತಿ ಮಾತ್ರ, ಕಡುಬಡತನ ದುಡಿಮೆಗಾಗಿ ಮುಂಬಯಿಗೆ ದೂಡಿತ್ತು. ಅಪರಿಚಿತ ನಗರಿಯಲ್ಲಿ ಆಕಸ್ಮಿಕವಾಗಿ ಯಕ್ಷಗಾನದ ಸೆಳೆತಕ್ಕೆ ಸಿಲುಕಿಮುಂಬಯಿನ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಆರಂಭಿಕ ತರಬೇತಿ. ಕದ್ರಿ ಮೇಳ, ಪೆರ್ಡೂರು ಮೇಳ, ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಮಧೂರು ಮೇಳಗಳಲ್ಲಿ ನಿರಂತರ ಸೇವೆ. ಇದೀಗ ಹನುಮಗಿರಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರು.
ಸೀತಾರಾಮ ಕುಮಾರ್ ಕಟೀಲು ಇವರ ಹಾಸ್ಯ ಪ್ರಸಂಗದ ವಿಡಿಯೋ ಇಲ್ಲಿದೆ ನೋಡಿ-
ರವಿಶಂಕರ ವಳಕ್ಕುಂಜ
ಕಟೀಲು ಮೇಳದ ಹಿರಿಯ ಹಾಸ್ಯಗಾರ , ಸದಭಿರುಚಿಯ ಮಾತುಗಾರ, ಹಾಸ್ಯಕ್ಕಾಗಿ ಅಪಹಾಸ್ಯ, ನಿಂದನೆ, ಭರ್ತ್ಸನೆ, ರಾಜಕೀಯ ವಿಡಂಬನೆ ಮಾಡದ, ಪುರಾಣದ ಚೌಕಟ್ಟಿನಲ್ಲಿ ಹಾಸ್ಯ ರಸ ಪ್ರತಿಪಾದಿಸುವ ಹಾಸ್ಯಗಾರ ಎಂದೇ ಅಭಿಮಾನಿಗಳ ಗೌರವ ಪಡೆದ ರವಿಶಂಕರ ವಳಕ್ಕುಂಜ ಹಲವು ವರ್ಷಗಳ ಕಾಲ ಯಕ್ಷಗಾನ ಮೇಳದಲ್ಲಿ ವ್ಯವಸಾಯ ಮಾಡುತ್ತಾ ಹಾಸ್ಯ ಪಾತ್ರ ನಿರ್ವಹಣೆ ಮಾಡುವುದಷ್ಟೇ ಅಲ್ಲ, ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ಬರೆದಿದ್ದಾರೆ. "ಯಕ್ಷಗಾನ ಪ್ರಸಂಗ ದೃಶ್ಯಾವಳೀ" ಹಾಗೂ "ಯಕ್ಷಗಾನ ವಾಚಿಕ ಸಮಾರಾಧನೆ" ಇವುಗಳಲ್ಲಿ ಪ್ರಮುಖವಾದುದು. ಯಕ್ಷದೀಪ ಎಂಬ ಪತ್ರಿಕೆ ಮುದ್ರಣ ಮತ್ತು ಅಂತರ್ಜಾಲದಲ್ಲಿ ಹೊರಬರುತ್ತಿದ್ದು, ಇದರಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಅಮೂಲ್ಯ ವಿಚಾರಗಳಿವೆ.
ರವಿಶಂಕರ ವಳಕ್ಕುಂಜ ಅವರ ಹಾಸ್ಯದ ಮೋಡಿ ನೋಡಲು ಈ ವಿಡಿಯೋ ನೋಡಿ-
ಮವ್ವಾರು ಬಾಲಕೃಷ್ಣ ಮಣಿಯಾಣಿ
ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ರಲ್ಲಿ ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ನಾಲ್ಕನೇ ತರಗತಿ ಓದಿದ ಇವರು, ಚಿಕ್ಕಪ್ಪ ಅಪ್ಪಯ್ಯ ಮಣಿಯಾಣಿಯವರಲ್ಲಿ ನಾಟ್ಯ ಕಲಿತದ್ದಲ್ಲದೆ, ಶ್ರೀ ಧರ್ಮಸ್ಥಳ ಕೇಂದ್ರದಲ್ಲಿ ಅಭ್ಯಾಸ ಮುಂದುವರಿಸಿದರು. ಬಳಿಕ ಕಟೀಲು ಮೇಳ, ಆದಿಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳ, ಎಡನೀರು ಹೀಗೆ ಹಲವು ಮೇಳಗಳಲ್ಲಿ ವ್ಯವಸಾಯ ನಡೆಸಿದ್ದಾರೆ. ಈಗ ಪಾವಂಜೆ ಮೇಳದಲ್ಲಿದ್ದಾರೆ.
ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರ ಜಬರ್‌ದಸ್ತ್ ಹಾಸ್ಯ ಹೀಗಿದೆ - ಈ ವಿಡಿಯೋ ನೋಡಿ
ಮಹೇಶ್ ಮಣಿಯಾಣಿ ದೊಡ್ಡತೋಟ
ಧರ್ಮಸ್ಥಳ ಮೇಳದ ಪ್ರಧಾನ ಹಾಸ್ಯಗಾರರಾಗಿರುವ ಇವರು, ಹಲವು ವರ್ಷಗಳಿಂದ ಮೇಳದಲ್ಲಿ ಪರಂಪರೆಯ ಹಾಸ್ಯವನ್ನು ನೀಡುತ್ತಿದ್ದಾರೆ. 1974ರಂದು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ದೊಡ್ಡತೋಟ ದಲ್ಲಿ ಜನಿಸಿದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಪಾತ್ರ ಮಾಡುತ್ತಿದ್ದರು. ಬಳಿಕ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ನಾಟ್ಯ ಕಲಿಕೆ ನಂತರ ಬಪ್ಪನಾಡು ಮೇಳದಲ್ಲಿ ರಂಗಪ್ರವೇಶ ಮಾಡಿದರು. ನಂತರ ಕಟೀಲು ಮೇಳಕ್ಕೆ ಸೇರಿ ಬಾಲಗೋಪಾಲರಾಗಿ ಬಳಿಕ ಹಂತಹಂತವಾಗಿ ಪುಂಡುವೇಷಗಳನ್ನು ಮಾಡಲಾರಂಭಿಸಿದರು.ಹಲವು ಹಿರಿಯ ಕಲಾವಿದರ ಸಂಪರ್ಕ ಆಗ ದೊರೆಯಿತು.ಕಟೀಲು ಮೇಳದ ಹಾಸ್ಯಗಾರರೊಬ್ಬರು ಅಸೌಖ್ಯದ ಕಾರಣ ಬಾರದೇ ಇದ್ದಾಗ, ಬಲಿಪ ಭಾಗವತರು, ಆ ಪಾತ್ರ ನಿರ್ವಹಣೆಗೆ ಮಹೇಶ್ ಮಣಿಯಾಣಿ ಅವರದ್ದು ಆಯ್ಕೆ ಮಾಡಿದರು. ಹಾಸ್ಯಪಾತ್ರದಲ್ಲಿ ಯಶಸ್ವಿಯಾದ ಅವರು ಬಳಿಕ ಹಾಸ್ಯಗಾರರಾಗಿ ಕಾಯಂ ಆದರು. ಕಟೀಲು ಮೇಳದ ಬಳಿಕ ಧರ್ಮಸ್ಥಳ ಮೇಳಕ್ಕೆ ನಯನಕುಮಾರ ಅವರ ನಂತರ ಮಹೇಶ್ ಮಣಿಯಾಣಿಯವರೇ ಹಾಸ್ಯಗಾರರಾಗಿ ಮಿಂಚಿದರು. ಈಗಲೂ ಧರ್ಮಸ್ಥಳ ಮೇಳದಲ್ಲಿ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಹೇಶ್ ಮಣಿಯಾಣಿ ದೊಡ್ಡತೋಟ ಇವರ ನವಿರು ಹಾಸ್ಯದ ಅಲೆಯಲ್ಲಿ ತೇಲುವಿರಾದರೆ ಈ ವಿಡಿಯೋ ನೋಡಿ-
ಮಿಜಾರು ತಿಮ್ಮಪ್ಪ
ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿ 1963ನೇ ಇಸವಿ ಯಲ್ಲಿ ಹೊನ್ನಯ್ಯ ಶೆಟ್ಟಿಗಾರ್ ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದ ಮಿಜಾರು ತಿಮ್ಮಪ್ಪನವರು ಮುಚ್ಚೂರು ಹರೀಶ ಶೆಟ್ಟಿಗಾರರಿಂದ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ ರಂಗವೇರಿದರು. ಪುತ್ತೂರು ಮೇಳದಲ್ಲಿ. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ಜತೆ ಸಹ ವಿದೂಷಕನಾಗಿ ತಿರುಗಾಟ ಆರಂಭಿಸಿದ ಮಿಜಾರು ತಿಮ್ಮಪ್ಪನವರು ಬಳಿಕ ಅಳದಂಗಡಿ ಮೇಳದಲ್ಲಿ ಬಳಿಕ ಬಪ್ಪನಾಡು ಮೇಳಕ್ಕೆ ಸೇರಿದರು. ಪುರಾಣ ಮತ್ತು ತುಳು ಸಾಮಾಜಿಕ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ಮಿಜಾರು ತಿಮ್ಮಪ್ಪನವರದ್ದು ಸಹಜ ಹಾಸ್ಯ. ಕರ್ನಾಟಕ ಮೇಳದಲ್ಲಿ ಹೆಸರಾಂತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪನವರ ಜತೆ ಕೆಲಸ ಮಾಡಿದರು.ಕರ್ನಾಟಕ, ಕುಂಟಾರು, ಕಟೀಲು, ಎಡನೀರು, ಸುಂಕದಕಟ್ಟೆ, ಮಂಗಳಾದೇವಿ ಸಹಿತ ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ ಖ್ಯಾತಿ ಅವರಿಗಿದೆ.
ಮಿಜಾರು ತಿಮ್ಮಪ್ಪನವರ ಸಹಜ ಹಾಸ್ಯ ತುಳುಭಾಷಿಕರಿಗೆ ಅಚ್ಚುಮೆಚ್ಚು- ಇಲ್ಲಿದೆ ಒಂದು ಉದಾಹರಣೆ-
ಚಪ್ಪರಮನೆ ಶ್ರೀಧರ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ ಚಪ್ಪರಮನೆ ಎಂಬಲ್ಲಿ 1965ರಲ್ಲಿ ಜನಿಸಿದ ಶ್ರೀಧರ ಹೆಗಡೆ ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯಗಾರರು. ತಂದೆ ನಾರಾಯಣ ವೆಂಕಪ್ಪ ಹೆಗಡೆಯವರು ವೇಷಧಾರಿಯಾಗಿದ್ದರು. ಚಿಕ್ಕಪ್ಪ ಕೃಷ್ಣ ಹೆಗಡೆಯವರೂ ಭಾಗವತರು. ಹೀಗಾಗಿ ಯಕ್ಷಗಾನದ ಆಸಕ್ತಿಯನ್ನು ಬಾಲ್ಯದಲ್ಲೇ ಮೈಗೂಡಿಸಿಕೊಂಡ ಶ್ರೀಧರ ಹೆಗಡೆ, ಎಂಟನೇ ತರಗತಿವರೆಗೆ ಓದಿದ್ದು, ಯಕ್ಷಗಾನದತ್ತ ಸಾಗಿದರು. 1992ರಲ್ಲಿ ಅವರು ಸಾಲಿಗ್ರಾಮದಲ್ಲಿ ತಿರುಗಾಟ ಆರಂಭಿಸಿದ್ದು, ಶಿರಸಿ ಮೇಳದಲ್ಲೂ ವ್ಯವಸಾಯ ಮಾಡಿದರು. ಕುಂಜಾಲು ರಾಮಕೃಷ್ಣ ಅವರ ಗರಡಿಯಲ್ಲಿ ಪಳಗಿದ ಚಪ್ಪರಮನೆಯವರು, ಪೌರಾಣಿಕ ಪ್ರಸಂಗಗಳ ಹಾಸ್ಯ ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಪ್ರಸಿದ್ಧರು. ಮಂಥರೆ, ವೃದ್ಧ ಬ್ರಾಹ್ಮಣ, ಬೇಹಿನ ಚರ, ಕಾಶೀಮಾಣಿ, ಚಂದಗೋಪ ಮೊದಲಾದ ಪಾತ್ರಗಳು ಪ್ರಮುಖ. ಕೊಂಡದಕುಳಿಯವರು ಪೂರ್ಣಚಂದ್ರ ತಂಡದಲ್ಲಿ ಕಲಾವಿದರಾಗಿ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ.
ಚಪ್ಪರಮನೆ ಶ್ರೀಧರ ಹೆಗಡೆ ಹಾಸ್ಯಗಾರರ ಪರಿಚಯ ಮಾಡಿಕೊಳ್ಳಿ- ಇಲ್ಲಿದೆ ವಿಡಿಯೋ-
ರವೀಂದ್ರ ದೇವಾಡಿಗ ಕಮಲಶಿಲೆ
ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಲ್ಲಿ ಒಬ್ಬರು ರವೀಂದ್ರ ದೇವಾಡಿಗ ಕಮಲಶಿಲೆ. ವೃತ್ತಿಕಲಾವಿದನಾಗಿ ಕಳೆದ ಮೂವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಬಾಲಗೋಪಾಲನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಅವರು, ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರಾಗಿ ಮಿಂಚುತ್ತಿದ್ದಾರೆ.
1983ರಲ್ಲಿ ಜನಸಿದ ರವೀಂದ್ರ ದೇವಾಡಿಗ, ಕಮಲಶಿಲೆ ಮೇಳಕ್ಕೆ ಸೇರಿಕೊಂಡು ಯಕ್ಷಗಾನ ಕಲಿತರು. ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿ, ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ ಮಾಡಿದರು. ರವೀಂದ್ರ ದೇವಾಡಿಗರು ಕಮಲಶಿಲೆ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿ ಬಳಿಕ ಪೆರ್ಡೂರು ಮೇಳವನ್ನು ಸೇರಿಕೊಂಡರು. ಹಿರಿಯ ಅನುಭವಿ ಹಾಸ್ಯಗಾರರ ಒಡನಾಡದೊಂದಿಗೆ ಅವರು ಕಲಿತು, ಅಮೃತೇಶ್ವರೀ ಮೇಳ ದಲ್ಲೂ ವ್ಯವಸಾಯ ಮಾಡಿ ಬಳಿಕ ಪೆರ್ಡೂರು ಮೇಳದಲ್ಲಿ ಹಾಸ್ಯಗಾರರಾಗಿದ್ದಾರೆ. ಇವರಿಗೆ ಹಲವು ಸನ್ಮಾನಗಳು ಸಂದಿವೆ.
ಉತ್ತರ ಕರ್ನಾಟಕ ಭಾಷೆಯ ಮೋಡಿಯಲ್ಲಿ ರವೀಂದ್ರ ದೇವಾಡಿಗರ ಹಾಸ್ಯದ ವಿಡಿಯೋ ಇಲ್ಲಿದೆ ನೋಡಿ
ಹಳ್ಳಾಡಿ ಜಯರಾಮ ಶೆಟ್ಟಿ
ಕುಂದಾಪುರ ತಾಲೂಕಿನ ಹಳ್ಳಾಡಿ ಅಣ್ಣಪ್ಪ ಶೆಟ್ಟಿ, ಅಕ್ಕಮ್ಮ ದಂಪತಿಗೆ 1955ರಲ್ಲಿ ಜನಿಸಿದ ಬಡಗುತಿಟ್ಟಿನ ಜನಪ್ರಿಯ ಹಾಸ್ಯಗಾರ ಜಯರಾಮ ಶೆಟ್ಟಿಯವರು ಬಡಗು ತಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹಾಸ್ಯ ಕಲಾವಿದರಾಗಿದ್ದಾರೆ. ಇವರು ಕಮಲಶಿಲೆ, ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮವಲ್ಲದದೇ ತೆಂಕಿನ ಕುಂಬಳೆ ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 55 ವರ್ಷಗಳ ತಿರುಗಾಟ ಮಾಡಿದ್ದಾರೆ. ಸಾಲಿಗ್ರಾಮ ಮೇಳವೊಂದರಲ್ಲೇ 25 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ದಾರುಕ, ಬಾಹುಕ, ಚಂದಗೋಪ, ಮಂಥರೆ, ಕಂದರ, ಕೈರವ, ಕೋಳಿಪಡಿ ಕುಷ್ಠ, ಸಂಧ್ಯಾ ಸಾವೇರಿಯ ಸುಂದರ ಅವರಿಗೆ ಹೆಸರು ತಂದ ಪಾತ್ರಗಳು. ಭೀಮ, ವಲಲ, ಮದನ, ಕೃಷ್ಣ, ಯಮ ಮೊದಲಾದ ಸಂಕೀರ್ಣ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸಾಂಪ್ರದಾಯಿಕ ಹೂವಿನ ಕೋಲು, ಪೀಠಿಕೆ ಸ್ತ್ರೀ ವೇಷ, ಚೆಂಡೆ ಮದ್ದಳೆ ವಾದನಗಳಲ್ಲೂ ಪರಿಶ್ರಮವಿದೆ.
ಮಾತಿನ ಜೊತೆಗೆ ಹಾವ ಭಾವವೂ ಹಾಸ್ಯ ಬಿಂಬಿಸುವಂಥ ಹಳ್ಳಾಡಿ ಜಯರಾಮ ಶೆಟ್ಟಿ ಅವರ ಶಂಕ್ರಿ ಪಾತ್ರದ ವಿಡಿಯೋ -
ಮೂರೂರು ರಮೇಶ ಭಂಡಾರಿ
ಸೃಜನಾತ್ಮಕ ಸದಭಿರುಚಿಯ ಹಾಸ್ಯಗಾರಿಕೆಯಲ್ಲಿ ಮೂರೂರು ರಮೇಶ ಭಂಡಾರಿ ಅವರದ್ದು ದೊಡ್ಡ ಹೆಸರು. ಕುಮಟಾ (ಉತ್ತರ ಕನ್ನಡ ಜಿಲ್ಲೆ) ತಾಲೂಕಿನ ಮೂರೂರು ಎಂಬಲ್ಲಿ ಜಯರಾಮ ಭಂಡಾರಿ ಸುಬ್ಬಿ ದಂಪತಿಗೆ 1967ರಲ್ಲಿ ಜನಿಸಿದ ರಮೇಶ್ ಭಂಡಾರಿ, 9ನೇ ತರಗತಿ ಬಳಿಕ ಯಕ್ಷಗಾನಕ್ಕೆ ಹೆಜ್ಜೆ ಹಾಕಿದವರು. ಮೂಲ್ಕಿ ಮೇಳದಲ್ಲಿ 2, ಶಿರಸಿ ಮೇಳದಲ್ಲಿ 2 ವರ್ಷ ಮಾಡಿ 24 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ದುಡಿದವರು. ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿರುವ ಅವರು ಮೂರು ದಶಕಗಳಷ್ಟು ಕಾಲ ಯಕ್ಷಗಾನ ತಿರುಗಾಟ ಮಾಡಿದ ಅನುಭವಿ.
ಭಾಗವತ ಕೊಳಗಿ ಕೇಶವ ಹೆಗಡೆಯವರೊಂದಿಗೆ ಮೂರೂರು ರಮೇಶ ಭಂಡಾರಿ ಹಾಸ್ಯದ ಜುಗಲ್‌ಬಂದಿ ವಿಡಿಯೋ ನೋಡಿ-
ಪ್ರಜ್ವಲ್ ಗುರುವಾಯನಕೆರೆ
ಇವರು ಹಾಸ್ಯಗಾರರ ಪಟ್ಟಿಗೆ ಸೇರುವುದಿಲ್ಲ. ಆದರೆ ಹಾಸ್ಯಗಾರರಲ್ಲ ಎನ್ನಲೂ ಸಾಧ್ಯವಿಲ್ಲ. ಇತ್ತೀಚೆಗೆ ನಿಧನರಾದ ಬಂಟ್ವಾಳ ಜಯರಾಮ ಆಚಾರ್ಯರ ಪ್ರಭಾವ ಅವರಿಗಿದೆ. ಹೀಗಾಗಿ ಯಕ್ಷಗಾನದ ಸವ್ಯಸಾಚಿಗಳಲ್ಲಿ ಒಬ್ಬರಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ಕೊಡುವ ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ನಿಭಾಯಿಸಬಲ್ಲವರು. ಹಾಸ್ಯ ಪಾತ್ರಗಳಷ್ಟೇ ಅಲ್ಲ, ಇತರ ಪಾತ್ರಗಳನ್ನು ನೀಡಿದಾಗಲೂ ಅದರಲ್ಲಿ ಹಾಸ್ಯದ ಲೇಪನದೊಂದಿಗೆ ಗಂಭೀರ ವಿಷಯಮಂಡನೆ ಮಾಡಬಲ್ಲ ಚತುರ ಕಲಾವಿದರು. ಪ್ರಸ್ತುತ ಹನುಮಗಿರಿ ಮೇಳದಲ್ಲಿ ಕಲಾವಿದರಾಗಿರುವ ಪ್ರಜ್ವಲ್, ಸಂದರ್ಭಕ್ಕೆ ತಕ್ಕಂತೆ ಒದಗುವ ಪಾತ್ರಗಳನ್ನು ನಿಭಾಯಿಸಬಲ್ಲವರಾದರೂ ಹಾಸ್ಯಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀಗಾಗಿ ಅವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 1987ರಲ್ಲಿ ಜನಿಸಿದ ಪ್ರಜ್ವಲ್, ಧರ್ಮಸ್ಥಳ ಲಲಿತಕಲಾ ಕೇಂದ್ರದ ವಿದ್ಯಾರ್ಥಿ. ಯಕ್ಷಗಾನದ ಹೆಜ್ಜೆಗಾರಿಕೆ ಸಹಿತ ಸರ್ವಾಂಗಗಳನ್ನೂ ಅಭ್ಯಸಿಸಿ ಧರ್ಮಸ್ಥಳ, ಕಟೀಲು, ಕುಂಟಾರು, ಎಡನೀರು, ಹೊಸನಗರ, ಈಗ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಪ್ರಜ್ವಲ್ ಗುರುವಾಯನಕೆರೆ ಅವರ ಹಾಸ್ಯದ ವಿಡಿಯೋ ಇಲ್ಲಿದೆ-
(ಲೇಖನ- ಹರೀಶ್ ಮಾಂಬಾಡಿ, ಮಂಗಳೂರು)