ಬೆಳೆ ವಿವರವನ್ನು ಕೃಷಿ ಇಲಾಖೆಗೆ ಒದಗಿಸಿದ್ದೀರಾ, ಬೆಳೆದರ್ಶಕ್ 2024 ಆ್ಯಪ್ ನಲ್ಲಿ ಅಪ್ಲೋಡ್ ಮಾಡಿ, ನವೆಂಬರ್ 30 ಕೊನೆ ದಿನ
Nov 28, 2024 02:07 PM IST
ಕೃಷಿ ಇಲಾಖೆಯು ಬೆಳೆದರ್ಶಕ್ ಆ್ಯಪ್ ಬಳಸಿ ಬೆಳೆಗಳ ಮಾಹಿತಿಯನ್ನು ರೈತರು ನೀಡುವಂತೆ ಸೂಚಿಸಿದೆ.
- Agriculture crop Details Upload: ಬೆಳೆ ವಿಮೆ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಕೃಷಿಕರು ತಾವು ಬೆಳೆದ ಬೆಳೆಗಳ ವಿವರಗಳನ್ನು ಬೆಳೆ ಬೆಳೆದರ್ಶಕ್ 2024 ಆ್ಯಪ್ ಮೂಲಕ ಒದಗಿಸುವಂತೆ ಕೋರಿದೆ.
Agriculture crop Details Upload:ಕರ್ನಾಟಕ ರಾಜ್ಯ ವಿವಿಧ ಜಿಲ್ಲೆ, ತಾಲ್ಲೂಕುಗಳ ವ್ಯಾಪ್ತಿಯಲ್ಲಿ ರೈತರು 2024ರ ಮುಂಗಾರು ಹಂಗಾಮಿನಲ್ಲಿ ಬೆಳೆದಂತಹ ಬೆಳೆಗಳ ವಿವರಗಳನ್ನು ಫೋಟೋ ಸಹಿತ ಖಾಸಗಿ ನಿವಾಸಿಗಳ ಮುಖಾಂತರ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ. ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬೆಳೆದರ್ಶಕ್ 2024 ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ವಿವಿಧ ಪಹಣಿಯಲ್ಲಿ ಯಾವ ಬೆಳೆಯನ್ನು ಬೆಳೆಯಲಾಗಿದೆ ಹಾಗೂ ಯಾವ ಬೆಳೆ ಹೆಸರು ನಮೂದಾಗಿದೆ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ತಾವು ಬೆಳೆದಿರುವ ಬೆಳೆಗೂ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಗೂ ವ್ಯತ್ಯಾಸವಿದ್ದಲ್ಲಿ ಅಥವಾ ಯಾವುದೇ ಬೆಳೆ ಸಮೀಕ್ಷೆಯನ್ನು ಮಾಡದೆ ಇದ್ದಲ್ಲಿ ತಾವುಗಳು ಬೆಳೆ ಸಮೀಕ್ಷೆ ಆಪ್ ಮುಖಾಂತರ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.
ಏನಿದೆ ಸೂಚನೆ
ಈ ಆಕ್ಷೇಪಣೆಯನ್ನು ನವೆಂಬರ್, 30 ರೊಳಗೆ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ಆಕ್ಷೇಪಣೆ ಮಾಡದಿದ್ದಲ್ಲಿ ಪ್ರಸ್ತುತ ಸಮೀಕ್ಷೆ ಆಗಿರುವ ಬೆಳೆಯೇ ನಿಮ್ಮ ಪಹಣಿಯಲ್ಲಿ ನಮೂದಾಗುತ್ತದೆ ಅಥವಾ ಯಾವುದೇ ಬೆಳೆ ಸಮೀಕ್ಷೆ ಆಗದೆ ಇದ್ದಲ್ಲಿ ನಿಮ್ಮ ಪಹಣಿಯಲ್ಲಿ ಯಾವುದೇ ಬೆಳೆಯ ವಿವರ ನಮೂದಾಗುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಬಂದಲ್ಲಿ ತಮಗೆ ತೊಂದರೆಯಾಗುತ್ತದೆ ಅಥವಾ ಯಾವುದೇ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಸರ್ಕಾರದಿಂದ ಯಾವುದೇ ಪರಿಹಾರ ಧನ ಲಭ್ಯವಾಗುವುದಿಲ್ಲ ಎಂಬ ಅಂಶವನ್ನು ಎಲ್ಲಾ ರೈತ ಬಾಂಧವರ ಗಮನಕ್ಕೆ ತರಲಾಗಿದೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹೋಬಳಿ ಮಟ್ಟದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಯಂತ್ರೋಪಕರಣಗಳು ರಿಯಾಯಿತಿ ದರದಲ್ಲಿ ಲಭ್ಯ
ಪ್ರಸಕ್ತ (2024-25) ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಿರುತ್ತವೆ.
ಆಸಕ್ತ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯೊಂದಿಗೆ ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್‍ನ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಒಂದು ಭಾವಚಿತ್ರ ರೂ.100ರ ಛಾಪಾ ಕಾಗದ ದಾಖಲಾತಿಗಳನ್ನು ಸಲ್ಲಿಸಿ ಇಲಾಖೆಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದೆ.
ಕೃಷಿ ಉಪಕರಣಗಳಾದ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕಲ್ಟಿವೇಟರ್, ರೋಟವೇಟರ್, ಎಂ.ಬಿ.ಪ್ಲೂ, ಡಿಸ್ಕ್ ಪ್ಲೋ, ಕಳೆಕೊಚ್ಚುವ ಯಂತ್ರ, ಕಳೆ ತೆಗೆಯುವ ಯಂತ್ರ, ಡಿಸೇಲ್ ಪಂಪ್ ಸೆಟ್, ಪವರ್ ಸ್ಪ್ರೇಯರ್, ಮೇವು ಕತ್ತರಿಸುವ ಯಂತ್ರ, ಭತ್ತದ ಒಕ್ಕಣೆ ಯಂತ್ರ, ಭತ್ತ ಕಟಾವು ಯಂತ್ರ, ಮುಸುಕಿನ ಜೋಳ ಒಕ್ಕಣೆ ಯಂತ್ರ, ಕೃಷಿ ಉತ್ಪನ್ನಗಳ ಸಂಸ್ಕರಣೆ ಯಂತ್ರಗಳಾದ, ರಾಗಿ ಕ್ಲೀನಿಂಗ್ ಯಂತ್ರ, ಹಿಟ್ಟು ಮಾಡುವ ಯಂತ್ರ, ಮೆಣಸಿನ ಕಾಯಿ ಪುಡಿ ಮಾಡುವ ಯಂತ್ರ ಹಾಗೂ ವಿವಿಧ ಬಗೆಯ ಎಣ್ಣೆ ಗಾಣಗಳನ್ನು ಶೇ.50 ರ ಸಹಾಯಧನದಲ್ಲಿ ಕರ್ನಾಟಕದ ಎಲ್ಲಾ ತಾಲ್ಲೂಕಿನ ರೈತರು ಪಡೆದುಕೊಳ್ಳುವಂತೆ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ವಿಭಾಗ