ಪ್ರಗತಿಯಲ್ಲಿದೆ ಬೆಂಗಳೂರು ಉಪನಗರ ರೈಲ್ವೆ ಯೋಜನೆ; ಕನಕನಗರ ಲೆವೆಲ್ ಕ್ರಾಸಿಂಗ್ ಕಾಮಗಾರಿ ವಿಳಂಬ ಪರಿಶೀಲಿಸಿದ ಸರ್ಕಾರ
Oct 30, 2024 02:36 PM IST
ಬೆಂಗಳೂರು ಉಪನಗರ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಆದಾಗ್ಯೂ, ಕನಕನಗರ ಲೆವೆಲ್ ಕ್ರಾಸಿಂಗ್ ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂದು ಪರಿಶೀಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕೆ ರೈಡ್ ಅಧಿಕಾರಿಗಳು.
ಬೆಂಗಳೂರು ಉಪನಗರ ರೈಲ್ವೆ ಯೋಜನೆ ಪ್ರಗತಿಯಲ್ಲಿದ್ದು, ಕನಕನಗರ ಲೆವೆಲ್ ಕ್ರಾಸಿಂಗ್ ಕಾಮಗಾರಿ ವಿಳಂಬವಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅರಿಯಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆ-ರೈಡ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದರ ವಿವರ ಇಲ್ಲಿದೆ.
ಬೆಂಗಳೂರು: ಮಹತ್ವಾಕಾಂಕ್ಷೆಯ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕಾಮಗಾರಿ ಪ್ರಗತಿಯಲ್ಲಿದೆ. ಅದರೂ ಕನಕನಗರ ಲೆವೆಲ್ ಕ್ರಾಸಿಂಗ್ ಕಾಮಗಾರಿ ವಿಳಂಬವಾಗಿದೆ. ಈ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಕರ್ನಾಟಕ ಸರ್ಕಾರ ಪರಿಶೀಲಿಸಿದ್ದು, ಕಾಮಗಾರಿ ತ್ವರಿತಗೊಳಿಸಲು ಮುಂದಾಗಿದೆ. ಕನಕನಗರದಲ್ಲಿ ನಡೆಯುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಯನ್ನು ಕರ್ನಾಟಕ ಸರ್ಕಾರದ ಅಧಿಕಾರಿಗಳ ತಂಡ ಮಂಗಳವಾರ ಪರಿಶೀಲಿಸಿತು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಎನ್ ಮತ್ತು ಕೆ-ರೈಡ್‌ನ ಇತರ ಹಿರಿಯ ಅಧಿಕಾರಿಗಳು ಕಾರಿಡಾರ್ 2 ರ ಕನಕನಗರ, ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಉದ್ದಕ್ಕೂ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.
ಕನಕನಗರ ಲೆವೆಲ್ ಕ್ರಾಸಿಂಗ್ ಕಾಮಗಾರಿ ವಿಳಂಬ ಪರಿಶೀಲನೆ
"ಬೆಂಗಳೂರು ಉಪನಗರ ರೈಲ್ವೆ ಯೋಜನೆಯು ಹೆಚ್ಚಿನ ಪ್ರಯಾಣಿಕ ದಟ್ಟಣೆಯ ನಗರ ಪ್ರದೇಶಗಳಿಗೆ ಮೂಲಸೌಕರ್ಯ ಪ್ರಗತಿಗೆ ಉದಾಹರಣೆಯಾಗಿದೆ. ಸ್ಥಳಾವಕಾಶದ ನಿರ್ಬಂಧಗಳು ಸಾಂಪ್ರದಾಯಿಕ ವ್ಯವಸ್ಥೆಯನ್ನು ಅಪ್ರಾಯೋಗಿಕವಾಗಿಸಿವೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಯು ಹೊಸ ಅವಕಾಶಗಳನ್ನು ತೆರೆದಿಟ್ಟುತ್ತಿದ್ದು, ಒಂದು ಮಾದರಿಯಾಗಿ ರೂಪುಗೊಳ್ಳಲಿದೆ. ಇದರಲ್ಲಿ ನಾವೀನ್ಯತೆ, ಸಮಾಜಕ್ಕೆ ಸೇವೆ ಸಲ್ಲಿಸುವ ಬದ್ಧತೆ ಹಾಗೂ ಬೆಂಗಳೂರು ನಿವಾಸಿಗಳಿಗೆ ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಬಿಎಸ್‌ಆರ್‌ಪಿ ಕಾಮಗಾರಿ ನಡೆಯುತ್ತಿರುವ ಕನಕನಗರ ಲೆವೆಲ್ ಕ್ರಾಸಿಂಗ್‌ನ ಕಾಮಗಾರಿ ವೀಕ್ಷಿಸಿದ ಶಾಲಿನಿ ರಜನೀಶ್ ಅವರು, ‘ಕಾಮಗಾರಿ ವಿಳಂಬಕ್ಕೆ ಕಾರಣವೇನು? ಏನಾದರೂ ಸಮಸ್ಯೆ ಆಗುತ್ತಿದೆಯೇ’ ಎಂದು ಗುತ್ತಿಗೆದಾರರಾಗಿರುವ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರ್‌ಗಳು ಹಾಗೂ ಕೆ- ರೈಡ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಇದಕ್ಕೆ ಸೂಕ್ತ ಉತ್ತರ ಸಿಗಲಿಲ್ಲ. ಮಾತು ಮುಂದುವರಿಸಿದ ಶಾಲಿನಿ ರಜನೀಶ್ ಅವರು, ‘ನಾವು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿರುವುದು. ಆದರೆ, ನಿಮ್ಮಿಂದ ಉತ್ತರ ಬರದಿದ್ದರೆ ಸಮಸ್ಯೆ ಬಗೆಹರಿಸುವುದಾದರೂ ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರೈಲ್ವೆ ಇಲಾಖೆಯ ಜಮೀನು ಒತ್ತುವರಿ ಆಗಿರುವುದರಿಂದ ಮಲ್ಲಿಗೆ ಮಾರ್ಗದ ಕಾಮಗಾರಿ ವಿಳಂಬವಾಗಿದೆ. ಒತ್ತುವರಿಗೆ ತೆರವಿಗೆ ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೆಗೆ ತಿಳಿಸಲಾಗಿದೆ’ ಎಂದು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾ ವಿವರಿಸಿದರು.
ಲೆವೆಲ್ ಕ್ರಾಸಿಂಗ್ ತಪ್ಪಿಸಲಿದೆ ಕನಕನಗರ- ಹೆಬ್ಬಾಳ ಕಾರಿಡಾರ್
ಕೆ-ರೈಡ್ ಲಿಮಿಟೆಡ್ ಪ್ರಕಾರ, ಕನಕನಗರದಿಂದ ಹೆಬ್ಬಾಳದವರೆಗಿನ ಕಾರಿಡಾರ್ 2 ರ ಉದ್ದಕ್ಕೂ ಇರುವ ಸಂಪೂರ್ಣ ವಿಭಾಗವು ಜನನಿಬಿಡ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್‌ಗಳ ಸಮಸ್ಯೆಗಳನ್ನು ನಿವಾರಿಸಲು ನವೀನ ಪರಿಹಾರವನ್ನು ಒಳಗೊಂಡಿರುತ್ತದೆ. ಅಲ್ಲಿ ಹೆಚ್ಚಿನ ನಗರ ಸಾಂದ್ರತೆಯಿಂದಾಗಿ ರಸ್ತೆ ಓವರ್ ಬ್ರಿಡ್ಜ್ ಅನ್ನು ನಿರ್ಮಿಸುವುದು ಕಾರ್ಯಸಾಧ್ಯವಲ್ಲದ ಕಾರಣ ಹೊಸ ಮಾದರಿಯನ್ನು ಅನುಸರಿಸಲಾಗುತ್ತಿದೆ.
"ಇಲ್ಲಿ ರೈಲ್ವೆ ಮಾರ್ಗವನ್ನು ಎತ್ತರಿಸಲಾಗುತ್ತಿದ್ದು, ಸುತ್ತಮುತ್ತಲಿನ ಸಮುದಾಯ ಮತ್ತು ಪ್ರದೇಶಗಳ ಮೇಲೆ ಪರಿಣಾಮ ಬೀರದಂತೆ ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಿದೆ. ಈ ತಂತ್ರವು ದೇಶದಲ್ಲಿ ಮೊದಲನೆಯದು ಮತ್ತು ರೈಲು ಸಾರಿಗೆಯ ಪರಿಣಾಮಕಾರಿತ್ವವನ್ನು ಮತ್ತಷ್ಟು ಕ್ರಾಂತಿಗೊಳಿಸಲು ಭರವಸೆ ನೀಡುತ್ತದೆ ಎಂದು ಕೆ ರೈಡ್ ವಿವರಿಸಿದೆ.
ಮೊದಲು, ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಜೊತೆಗೆ ಲೆವೆಲ್ ಕ್ರಾಸಿಂಗ್ ನಿವಾರಿಸುವ ಕಾರ್ಯವೂ ಶುರುವಾಗಲಿದೆ. ಬಿಎಸ್‌ಆರ್‌ಪಿ ವಿಭಾಗ ಸಿದ್ಧವಾದ ನಂತರ, ಭಾರತೀಯ ರೈಲ್ವೆಯ ರೈಲುಗಳನ್ನು ತಾತ್ಕಾಲಿಕವಾಗಿ ಈ ಹೊಸ ಟ್ರ್ಯಾಕ್‌ಗಳಿಗೆ ತಿರುಗಿಸಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಐಆರ್ ಟ್ರ್ಯಾಕ್‌ಗಳನ್ನು ಅಡೆತಡೆಯಿಲ್ಲದೆ ಎತ್ತರಿಸಲು ಮತ್ತು ಪುನರ್ರಚಿಸಲು ಅನುವು ಮಾಡಿಕೊಡುತ್ತದೆ. ಪೂರ್ಣಗೊಂಡ ನಂತರ, ಬಿಎಸ್‌ಆರ್‌ಪಿ ಮತ್ತು ಐಆರ್ ಸ್ವತಂತ್ರವಾಗಿ ತಮ್ಮ ಮೀಸಲಾದ ಟ್ರ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ" ಎಂದು ಕೆ ರೈಡ್ ವಿವರಿಸಿದೆ.