Talacauvery Theerthodbhava 2024: ಕೊಡಗಲ್ಲಿ ದಸರಾ ಮುಗಿಯಿತು, ಗುರುವಾರ ಬೆಳಿಗ್ಗೆ ತಲಕಾವೇರಿ ತೀರ್ಥೋದ್ಭವದ ಸಡಗರ, ಸಿದ್ದತೆ ಚುರುಕು
Oct 15, 2024 02:51 PM IST
ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಸಿದ್ದತೆಗಳು ನಡೆದಿವೆ.
- ಕೊಡಗಿನ ಪ್ರಮುಖ ಹಬ್ಬವಾದ ಕಾವೇರಿ ತೀರ್ಥೋದ್ಭವಕ್ಕೆ ಅಂತಿಮ ಕ್ಷಣದ ಸಿದ್ದತೆಗಳು ನಡೆದಿವೆ. ಈ ಬಾರಿ ಗುರುವಾರ ಬೆಳಿಗ್ಗೆ ತೀರ್ಥೋದ್ಭವಕ್ಕೆ ಕಾವೇರಿ ಮೂಲ ತಾಣ ಅಣಿಯಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯವರ ಜತೆಗೆ ಕಾವೇರಿ ನದಿಯಿಂದಲೇ ಬದುಕು ಕಟ್ಟಿಕೊಂಡಿರುವ ಮಂಡ್ಯ, ಮೈಸೂರು ಜಿಲ್ಲೆಯವರಿಗೂ ಕಾವೇರಿ ಮಾತೆಯ ಬಗ್ಗೆ ಅಪಾರ ಗೌರವ. ಅದರಲ್ಲೂ ಕಾವೇರಿ ಮೂಲ ಸ್ಥಾನವಾದ ತಲಕಾವೇರಿಯಲ್ಲಿನ ಕಾವೇರಿ ಉಗಮ ಸ್ಥಾನದಲ್ಲಿ ನಡೆಯುವ ವಾರ್ಷಿಕ ಉತ್ಸವ ತೀರ್ಥೋದ್ಭವಕ್ಕೆ ಕೊಡಗು, ಮಂಡ್ಯ, ಮೈಸೂರು, ಮಂಗಳೂರು ಮಾತ್ರವಲ್ಲದೇ ನಾನಾ ಭಾಗದಿಂದಲೂ ಕೊಡಗಿನ ವಾಸಿಗಳು, ಇತರರು ಆಗಮಿಸುತ್ತಾರೆ. ಈ ಬಾರಿಯೂ ಕಾವೇರಿ ತೀರ್ಥೋದ್ಭವದ ಕ್ಷಣ ಅಕ್ಟೋಬರ್ 17ರಂದೇ ನಿಗದಿಯಾಗಿದ್ದು, ಬೆಳಿಗ್ಗೆ 7.40 ಕ್ಕೆ ಕಾವೇರಿ ತಾಯಿ ಕುಂಡಿಕೆಯಿಂದ ಅವಿರ್ಭವಿಸಲಿದ್ದಾಳೆ. ಇದಕ್ಕಾಗಿ ತಲಕಾವೇರಿ ಕ್ಷೇತ್ರದಲ್ಲಿ ಸಿದ್ದತೆಯೂ ಕೊನೆಯ ಹಂತದಲ್ಲಿದೆ. ದಸರಾ ಮುಗಿದ ನಾಲ್ಕು ದಿನಗಳಲ್ಲಿಯೇ ತಲಕಾವೇರಿ ತೀರ್ಥೋದ್ಭವವೂ ಬಂದಿರುವುದರಿಂದ ತಯಾರಿಯನ್ನು ಭರದಿಂದಲೇ ಮಾಡಿಕೊಳ್ಳಲಾಗುತ್ತಿದೆ.
ತಲಕಾವೇರಿಯ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಅಕ್ಟೋಬರ್ 17ರಂದು ಬೆಳಿಗ್ಗೆ 7.40ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ನಡೆಯಲಿದೆ. ಅಕ್ಟೋಬರ್ 4ರಂದು ಬೆಳಿಗ್ಗೆ 10.21ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ‘ಆಜ್ಞಾ ಮುಹೂರ್ತ’ ನಡೆಯಲಿದೆ. ಅಕ್ಟೋಬರ್ 14ರಂದು ಬೆಳಿಗ್ಗೆ 11.35ಕ್ಕೆ ಸಲ್ಲುವ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುತ್ತದೆ. ಅಂದು ಸಂಜೆ 4.15ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸಲಾಗುತ್ತದೆ ಎಂದು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಮಾಹಿತಿ ನೀಡಿದೆ.
ಕೊಡಗಿನವರಿಗೆ ಕಾವೇರಿ ಆರಾಧ್ಯದೈವ
ತುಲಾ ಮಾಸದ ಮೊದಲ ದಿನವಾದ ತುಲಾ ಸಂಕ್ರಮಣದಂದು ಪ್ರತಿ ವರ್ಷ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪವಿತ್ರ ಕ್ಷೇತ್ರ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ತೀರ್ಥೋದ್ಭವದ ಈ ವಿಸ್ಮಯ ನೋಡಲು ಜನರು ಗಂಟೆಗಳಿಗೂ ಮುಂಚೆ ಬಂದು ಕಾದುನಿಲ್ಲುತ್ತಾರೆ. ಈ ಬಾರಿ ಬೆಳಿಗ್ಗೆಯೇ ತೀರ್ಥೋದ್ಭ ಆಗುವುದರಿಂದ ರಾತ್ರಿಯಿಂದಲೇ ಭಕ್ತರು ತಲಕಾವೇರಿಗೆ ಆಗಮಿಸುವ ಕಾರಣಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ತಲಕಾವೇರಿ ಉತ್ಸವ ಈ ಬಾರಿ ಬೆಳಿಗ್ಗೆ ಬಂದಿರುವುದರಿಂದ ರಾತ್ರಿಯಿಂದಲೇ ಭಕ್ತರು ಆಗಮಿಸುವ ಸಾಧ್ಯತೆ ಅಧಿಕ. ಇದಕ್ಕಾಗಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಗೊಂದಲಕ್ಕೆ ಅವಕಾಶವಿಲ್ಲದ ರೀತಿ ಉತ್ಸವ ನಡೆಸಲು ಕೊಡಗು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಮುಂದಾಗಿವೆ. ಸಾರಿಗೆ ಬಸ್‌ಗಳ ಸೇವೆ, ಸಂಗೀತ ಕಾರ್ಯಕ್ರಮಗಳೂ ಇರಲಿವೆ.
ತೀಥೋದ್ಭವ ದಿನ ಒಂದೇ, ಸಮಯ ಬದಲು
ಶತಮಾನದಿಂದಲೂ ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೊದ್ಭವವು ಅಕ್ಟೋಬರ್ 17 ರಂದೇ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಆರು ಗಂಟೆಯ ಲೆಕ್ಕದಲ್ಲಿ ನಡೆಯುತ್ತದೆ. ಎರಡು ವರ್ಷದ ಹಿಂದೆ ಸಂಜೆ ನಡೆದಿದ್ದರೆ, ಹೋದ ವರ್ಷ ಮಧ್ಯರಾತ್ರಿ ನಡೆದಿತ್ತು. ಈ ವರ್ಷ ಬೆಳಗಿನ ಜಾವ. ನಂತರದ ವರ್ಷದಲ್ಲಿ ಮಧ್ಯಾಹ್ನ ತೀರ್ಥೋದ್ಭವವು ನಡೆಯುತ್ತದೆ. ಹೀಗೆ ಪ್ರತಿ ವರ್ಷ ಆರು ಗಂಟೆಯಲ್ಲಿ ಮುಹೂರ್ತ ಬದಲಾಗುತ್ತಾ ಹೋಗುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಇದು ಬದಲಾಗಲಿದೆ. ಈ ಬಾರಿ ಮಹೂರ್ತದಂತೆ ಬೆಳಿಗ್ಗೆ ಕಾವೇರಿ ತೀರ್ಥೋದ್ಭವ ಆಗಲಿದೆ.
ಕಾವೇರಿ ಕೊಡಗಿನ ಆರಾಧ್ಯದೈವ. ಪ್ರತಿ ಮನೆಯವರೂ ತಲಕಾವೇರಿಗೆ ಹೋಗಿ ಕೊಡಗನ್ನು ಸುಭಿಕ್ಷೆಯಲ್ಲಿಡು ಎಂದು ಪ್ರಾರ್ಥಿಸಿ ಬರುತ್ತಾರೆ. ಅದರಲ್ಲೂ ಕಾವೇರಿ ತೀರ್ಥೋದ್ಭವದ ವೇಳೆಯಲ್ಲಂತೂ ಪ್ರತಿಯೊಬ್ಬರೂ ತಲಕಾವೇರಿಗೆ ತೆರಳಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಬರುತ್ತಾರೆ. ದೂರದ ಊರಿನಲ್ಲಿದ್ದರೂ ಬಂದು ಹೋಗುತ್ತಾರೆ. ಕಾವೇರಿ ದೇವಿಯ ಬಗ್ಗೆ ಕೊಡಗಿನವರಿಗೆ ಅಷ್ಟು ಮಟ್ಟದ ಗೌರವ ಹಗೂ ಅಭಿಮಾನ. ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗಲಿ. ಶತಮಾನಗಳಿಂದ ಕಾವೇರಿ ತಾಯಿಯೇ ನಮ್ಮನ್ನು ಸಲಹಿದ್ದಾಳೆ ಎನ್ನುವುದು ಕೊಡಗಿನ ಅಪಾರ ನಂಬಿಕೆ.
ತೀರ್ಥೋದ್ಭವದ ನಂತರ ಹತ್ತು ದಿನಗಳ ಕಾಲ ಅತ್ಯಂತ ಪವಿತ್ರ ದಿನ. ಕುಟುಂಬದವರೊಂದಿಗೆ ಕೊಡಗಿನವರು ತಲಕಾವೇರಿಗೆ ಆಗಮಿಸಿ ಇಲ್ಲಿ ಸ್ನಾನದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿಂದಲೇ ಕಾವೇರಿ ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ. ಮರು ದಿನ ತಮ್ಮ ಮನೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಹತ್ತನೆ ದಿನ ಹಿರಿಯರನ್ನು ಸ್ಮರಿಸುವ ಹಾಗೂ ಅವರಿಗೆ 'ಮೀದಿ' (ಎಡೆ) ಇಡುವ ಕಾರ್ಯಕ್ರಮವನ್ನೂ ಐನ್‌ಮನೆಗಳಲ್ಲಿ ಮಾಡುತ್ತಾರೆ. ಕಾಯಿಲೆ ಅಥವಾ ಇನ್ನಿತರ ಸಮಸ್ಯೆ ಕಂಡು ಬಂದಾಗ ತೀರ್ಥ ಸೇವಿಸಿದರೆ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯೂ ಗಾಢವಾಗಿರುವುದರಿಂದ ತೀರ್ಥೋದ್ಭವವನ್ನು ಯಾರೂ ತಪ್ಪಿಸಿಕೊಳ್ಳುವುದಿಲ್ಲ ಎಂದು ಕೊಡಗಿನ ಹಿರಿಯರು ಹೇಳುತ್ತಾರೆ.