ಭೀಮನ ಅಮಾವಾಸ್ಯೆ ರಾತ್ರಿಯೇ ಪತ್ನಿಯ ಕತ್ತು ಸೀಳಿದ ಪತಿಯ ವಿಲಕ್ಷಣ ನರ್ತನ, ಆತನ ಆವೇಶ ಇಳಿಸಲು ಅಗ್ನಿಶಾಮಕದಳದಿಂದ ಒಂದೂವರೆ ಗಂಟೆ ಕಾರ್ಯಾಚರಣೆ
Aug 04, 2024 08:07 PM IST
ಕುಂದಾಪುರ ತಾಲೂಕಿನ ಬಸ್ರೂರು ಕಾಶಿ ಮಠದ ವಸತಿ ಪ್ರದೇಶದಲ್ಲಿ ಭೀಮನ ಅಮಾವಾಸ್ಯೆ ರಾತ್ರಿಯೇ ಪತ್ನಿಯ ಕತ್ತು ಸೀಳಿದ ಪತಿಯ ವಿಲಕ್ಷಣ ನರ್ತನದ ವಿಡಿಯೋ ವೈರಲ್ ಆಗಿದೆ. ಆತನ ಆವೇಶ ಇಳಿಸಲು ಅಗ್ನಿಶಾಮಕದಳದಿಂದ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದ ದೃಶ್ಯವೂ ಅದರಲ್ಲಿ. (ಸಾಂಕೇತಿಕ ಚಿತ್ರ)
ಭೀಮನ ಅಮಾವಾಸ್ಯೆ ರಾತ್ರಿಯೇ ಪತ್ನಿಯ ಕತ್ತು ಸೀಳಿದ ಪತಿಯ ವಿಲಕ್ಷಣ ನರ್ತನದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಕಾಶಿ ಮಠದ ವಸತಿ ಪ್ರದೇಶದಲ್ಲಿ ನಿನ್ನೆ (ಆಗಸ್ಟ್ 3) ತಡ ರಾತ್ರಿ ನಡೆದಿದೆ. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ. ಪತಿಯ ಆವೇಶ ಇಳಿಸಲು ಅಗ್ನಿಶಾಮಕದಳದಿಂದ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಯಿತು.
ಕುಂದಾಪುರ: ಭೀಮನ ಅಮಾವಾಸ್ಯೆಯಂದೇ ರಾತ್ರಿ ಪತಿಯ ಕ್ರೌರ್ಯಕ್ಕೆ ಪತ್ನಿ ಬಲಿಯಾಗಿದ್ದು, ಪತಿಯ ವಿಲಕ್ಷಣ ವರ್ತನೆ ಈಗ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬಸ್ರೂರು ಕಾಶಿ ಮಠದ ತೋಟದ ಕೆಲಸಕ್ಕಾಗಿ ಸೊರಬ ತಾಲೂಕಿನಿಂದ ಬಂದ ದಂಪತಿ ಇವರು.
ಬಸ್ರೂರು ಕಾಶಿ ಮಠದ ವಸತಿ ಪ್ರದೇಶದಲ್ಲಿರುವ ಮನೆಯಲ್ಲಿ ಈ ದುಷ್ಕೃತ್ಯ ನಡೆದಿತ್ತು. ಮೃತ ಮಹಿಳೆಯ ಹೆಸರು ಅನಿತಾ (38). ಆಕೆಯ ಪತಿಯೇ ಕೊಲೆ ಆರೋಪಿಯಾಗಿದ್ದು ಆತನ ಹೆಸರು ಲಕ್ಷ್ಮಣ (40). ಪೊಲೀಸರು ಈ ಕುರಿತು ಕೇಸ್ ದಾಖಲಿಸಿಕೊಂಡಿದ್ದು, ಲಕ್ಷ್ಮಣನನ್ನು ಬಂಧಿಸಿದ್ದಾರೆ.
ಭೀಮನ ಅಮಾವಾಸ್ಯೆ ರಾತ್ರಿಯೇ ಪತಿಯ ಕ್ರೌರ್ಯಕ್ಕೆ ಪತ್ನಿ ಕಂಗಾಲು
ಕುಂದಾಪುರ ತಾಲೂಕು ಬಸ್ರೂರು ಕಾಶಿ ಮಠದ ತೋಟ ನೋಡಿಕೊಳ್ಳುವುದಕ್ಕಾಗಿ ಸೊರಬದಿಂದ ನಾಲ್ಕು ತಿಂಗಳ ಹಿಂದಷ್ಟೆ ಬಂದವರು ಈ ಅನಿತಾ ಮತ್ತು ಲಕ್ಷ್ಮಣ ದಂಪತಿ. ಲಕ್ಷ್ಮಣನಿಗೆ ಕುಡಿಯುವ ಚಟವಿತ್ತು. ನಿನ್ನೆ ಕೂಡ ಮದ್ಯಪಾನ ಮಾಡಿ ಬಂದಿದ್ದ ಲಕ್ಷ್ಮಣ, ತಡ ರಾತ್ರಿ ವಿಚಿತ್ರವಾಗಿ ಆಡುತ್ತಿದ್ದ. ಬಳಿಕ ಕತ್ತಿ ಹಿಡಿದು ಪತ್ನಿಯ ಮೇಲೆ ಹಲ್ಲೆ ನಡೆಸಿದ. ಅಡುಗೆ ಮನೆಯಲ್ಲಿ ರಕ್ತ ಮಡುವಿನಲ್ಲಿ ಅನಿತಾ ಬಿದ್ದಿರಬೇಕಾದರೆ, ಹಾಲ್‌ಗೆ ಬಂದು ಒಳಗಿನಿಂದ ಬಾಗಿಲು ಚಿಲಕ ಹಾಕಿ ಭದ್ರಪಡಿಸಿಕೊಂಡ. ನಂತರ ಪತ್ನಿಯ ಕತ್ತು ಕಡಿದು ಕುಣಿದಾಡಿದ ಎಂದು ಸ್ಥಳೀಯರು ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಕೆಯ ಚೀರಾಟ ಕೇಳಿ ನೆರೆಮನೆಯವರೆಲ್ಲ ಅಲ್ಲಿಗೆ ಧಾವಿಸಿದ್ದರು. ಕಿಟಕಿ ಮೂಲಕ ಮನೆಯ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದರು. ಹಾಲ್‌ನಲ್ಲಿ ಪತಿ ಕತ್ತಿ ಹಿಡಿದು ವಿಚಿತ್ರವಾಗಿ ನರ್ತಿಸುತ್ತಿದ್ದು ಕಂಡುಬಂದಿತ್ತು. ಕೆಲವರು ಅದರ ವಿಡಿಯೋ ಮಾಡಿದ್ದು ಅದು ಈಗ ವೈರಲ್ ಆಗಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಒಂದೂವರೆ ಗಂಟೆ ಕಾರ್ಯಾಚರಣೆ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾ ಅವರನ್ನು ರಕ್ಷಿಸವುದಕ್ಕಾಗಿ ಸ್ಥಳೀಯರು ಪ್ರಯತ್ನಿಸಿ ಯಶಸ್ವಿಯಾಗಿದ್ದು, ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಕತ್ತು ಸೀಳಿದ ಕಾರಣ ತುಂಬಾ ರಕ್ತಸ್ರಾವಕ್ಕೆ ಒಳಗಾಗಿದ್ದ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಲಕ್ಷ್ಮಣನನ್ನು ಹಿಡಿಯುವ ಸ್ಥಳೀಯರ ಪ್ರಯತ್ನ ಸಾಕಾರವಾಗಿರಲಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಲಕ್ಷ್ಮಣನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಹೋಗಿದ್ದು, ಬಳಿಕ ಬಂಧನ ದಾಖಲಿಸಿದರು.
ನಿನ್ನೆ ರಾತ್ರಿ ಈ ನಾಟಕೀಯ ವಿದ್ಯಮಾನ ನಡೆಯುತ್ತಿದ್ದಾಗ ಲಕ್ಷ್ಮಣ ಮತ್ತು ಅನಿತಾ ಅವರ ಮನೆಯ ಸುತ್ತ ನೂರಾರು ಜನ ಸೇರಿದ್ದರು. ಈ ನಡುವೆ ಆತ ಪತ್ನಿಗೆ ಕತ್ತಿ ಬೀಸಿ ಹಲ್ಲೆ ನಡೆಸುತ್ತಿದ್ದಾಗ ಹೊರಗೆ ಇದ್ದ ಜನ, “ಕತ್ತಿ ಕೆಳಗಿಡಲೇ” ಎಂದು ಕಿರುಚಿ ಹೇಳುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಅಗ್ನಿಶಾಮಕ ಸೇವೆ ಸಿಬ್ಬಂದಿ ಬಂದ ಬಳಿಕ ಆವೇಶ ಭರಿತ ಪತಿಯ ಹಿಡಿತದಿಂದ ಪತ್ನಿಯನ್ನು ರಕ್ಷಿಸುವ ಕಾರ್ಯಾಚರಣೆಗೆ ವೇಗ ಸಿಕ್ಕಿತು.
ಆತ ಪತ್ನಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಹಾಲ್‌ಗೆ ಹೋಗಿದ್ದು ಅಲ್ಲಿ ವಿಲಕ್ಷಣವಾಗಿ ನರ್ತನ ಮಾಡುತ್ತಿದ್ದ. ಇದೇ ವೇಳೆ, ಅಡುಗೆ ಕೋಣೆ ಸಮೀಪದ ಕಿಟಕಿಯ ಗ್ರಿಲ್ ತೆಗೆದು ಒಳಗೆ ಹೋದ ಅಗ್ನಿಶಾಮಕ ಸಿಬ್ಬಂದಿ ಆ ಮಹಿಳೆಯನ್ನು ಸುರಕ್ಷಿತವಾಗಿ ಅಲ್ಲಿಂದ ಹೊರ ಕರೆ ತಂದಿದ್ದರು. ಕೂಡಲೇ ಆಕೆಯನ್ನು ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿದೆ.
ಆದರೆ, ಆವೇಶಕ್ಕೊಳಗಾಗಿದ್ದ ಲಕ್ಷ್ಮಣನನ್ನು ಬಂಧಿಸಲು ಮತ್ತೂ ಸ್ವಲ್ಪ ಹೊತ್ತು ಕಾಯಬೇಕಾಯಿತು. ಅಗ್ನಿ ಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಆತನ ಆವೇಶ ತಣಿಸಿದ ಪೊಲೀಸರು ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.