ಹಿಡಿದವನ ಕೈ ಬೆರಳಿಗೆ ಕಚ್ಚಿತು ಕಾಳಿಂಗ ಸರ್ಪ, ಮೃತಪಟ್ಟದ್ದು ವ್ಯಕ್ತಿಯಲ್ಲ, ಹಾವು; ಮಧ್ಯಪ್ರದೇಶದಲ್ಲೊಂದು ವಿಲಕ್ಷಣ ಘಟನೆ
ಮಧ್ಯಪ್ರದೇಶದ ಬುಂದಲೇಖಂಡದ ಸಾಗರಕ್ಕೆ ಸಮೀಪದ ನರಯಾವಳಿ ಎಂಬಲ್ಲಿ ರಕ್ಷಣೆಗಾಗಿ ಹಿಡಿದವನ ಕೈ ಬೆರಳಿಗೆ ಕಚ್ಚಿತು ಕಾಳಿಂಗ ಸರ್ಪ. ಆದರೆ ಮೃತಪಟ್ಟದ್ದು ವ್ಯಕ್ತಿಯಲ್ಲ. ಅದೇ ಹಾವು!. ಈ ವಿಲಕ್ಷಣ ಘಟನೆಯ ವಿವರ ಇಲ್ಲಿದೆ.
ಭೋಪಾಲ: ಕಾಳಿಂಗ ಸರ್ಪ ಅತ್ಯಂತ ವಿಷಕಾರಿ ಹಾವು. ಅದು ಯಾರಿಗಾದರೂ ಕಚ್ಚಿದರೆ ಅಂಥವರು ಬದುಕಿ ಉಳಿಯುವುದು ಕಷ್ಟ ಎನ್ನುತ್ತಾರೆ. ಆದರೆ, ಇಲ್ಲೊಂದು ವಿಚಿತ್ರ ವಿದ್ಯಮಾನ ಗಮನಸೆಳೆದಿದೆ. ಹಿಡಿದಾತನ ಕೈ ಬೆರಳಿಗೆ ಕಾಳಿಂಗ ಸರ್ಪ ಕಚ್ಚಿತು. ಆದರೆ ಮೃತಪಟ್ಟದ್ದು ವ್ಯಕ್ತಿಯಲ್ಲ. ಹಾವು!
ಮಧ್ಯಪ್ರದೇಶದ ಬುಂದೇಲ್‌ಖಂಡ್ ಭಾಗದಲ್ಲಿರುವ ಸಾಗರದ ನರಯಾವಳಿ ಎಂಬಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿದೆ. ಕಾಳಿಂಗ ಸರ್ಪ ಕಚ್ಚಿದ ಬಳಿಕವೂ ಸಾಯದೇ ಬದುಕಿ ಉಳಿದ ವ್ಯಕ್ತಿಯ ಹೆಸರು ಚಂದ್ರಕುಮಾರ್ ಅಹಿರ್‌ವಾರ್.
ಎರಡು ಬಾರಿ ಕಚ್ಚಿದ ಕಾಳಿಂಗ ಸರ್ಪ; ಚಿಕಿತ್ಸೆ ಪಡೆದು ಬದುಕಿದ ಚಂದ್ರಕುಮಾರ್
ನರಯಾವಳಿಯ ಮುಖ್ಯರಸ್ತೆಯ ತಡೆಗೋಡೆ ಬಳಿ ಕಾಳಿಂಗ ಸರ್ಪ ಕಂಡುಬಂದಿತ್ತು. ಸ್ಥಳೀಯರು ಕೂಡಲೇ ಹಾವು ಹಿಡಿಯುವ ಚಂದ್ರಕುಮಾರ್ ಅಹಿರ್‌ವಾರ್ ಅವರಿಗೆ ಮಾಹಿತಿ ನೀಡಿದರು.
ಚಂದ್ರ ಕುಮಾರ್ ಸ್ಥಳಕ್ಕಾಗಮಿಸಿ ಹಾವು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗೆ ಆ ಕಾರ್ಯದಲ್ಲಿದ್ದಾಗ ಆ ಹಾವನ್ನು ಅವರು ಹಿಡಿದುಕೊಂಡರು. ಆಗ ಅದು ಎರಡೂ ಕೈಗಳ ಹೆಬ್ಬೆರಳಿಗೆ ಕಚ್ಚಿದೆ. ಕೂಡಲೇ ಅವರನ್ನು ಸ್ಥಳೀಯ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಗೆ ದಾಖಲಿಸಿದಾಗ ಅದು ಮೆಡಿಕೋ ಲೀಗಲ್ ಕೇಸ್ ಆದ ಕಾರಣ ಅವರು ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಪೊಲೀಸರು ಚಂದ್ರ ಕುಮಾರ್ ಮತ್ತು ಸ್ಥಳೀಯರ ವಿಚಾರಣೆ ನಡೆಸಿದ್ದರು.
ಎರಡು ಬಾರಿ ವ್ಯಕ್ತಿಯನ್ನು ಕಚ್ಚಿ ಮೃತಪಟ್ಟ ಹಾವು
ಪೊಲೀಸರ ವಿಚಾರಣೆ ವೇಳೆ, ಹಾವು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು. ನರಯಾವಳಿಯಲ್ಲಿ ಜುಲೈ 18ರಂದು ಈ ಘಟನೆ ನಡೆದಿತ್ತು. ಹಾವು ಕಚ್ಚಿದ ವ್ಯಕ್ತಿ ಚಂದ್ರ ಕುಮಾರ್ ಅಹಿರ್‌ವಾರ್ (22). ಕಾಳಿಂಗ ಸರ್ಪ 5 ಅಡಿ ಉದ್ದ ಇತ್ತು. ಅದನ್ನು ಹಿಡಿದ ಕೂಡಲೇ ಅದು ಎರಡು ಬಾರಿ ಎರಡೂ ಕೈಗಳ ಹೆಬ್ಬೆರಳಿಗೆ ಕಚ್ಚಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಒದಗಿಸಲಾಗಿದೆ. ಆದರೆ, ಆ ಹಾವು ಮೃತಪಟ್ಟಿತ್ತು ಎಂದು ಸ್ಥಳೀಯರು ತಿಳಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಇದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎರಡೂ ಹೆಬ್ಬೆರಳಿಗೆ ಹಾವು ಕಚ್ಚಿದ ಕಾರಣ ಎರಡೂ ಕೈಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಚರ್ಮ ಎದ್ದು ಹೋಗತೊಡಗಿದ್ದು, ಚಂದ್ರ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಛತ್ತೀಸ್‌ಗಡದ ಬಿಲಾಸ್‌ಪುರದ ಮಹಿಳೆಯೊಬ್ಬರು ಯಾವುದೇ ಭಯವಿಲ್ಲದೆ ಬರಿ ಕೈಗಳಿಂದ ಹಾವನ್ನು ಹಿಡಿದು ನಗುನಗುತ್ತಾ ಗೋಣಿ ಹಾಕುತ್ತ ಹೋಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹಾವು ರಕ್ಷಕ ಅಜಿತಾ ಪಾಂಡೆ ಕಳೆದ ವಾರ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ನಂತರ ಅನೇಕ ಜನರು ಅದನ್ನು ಮರು ಪೋಸ್ಟ್ ಮಾಡಿದ್ದಾರೆ ಮತ್ತು ಈಗ ಅದು ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೇನೇ ತಲೆ ಕೆಡಿಸಿಕೊಳ್ಳುತ್ತಾರೆ. ಅದನ್ನು ಕಂಡರೆ ಓಡಿಹೋಗುವುದೇ ಸೂಕ್ತ ಪರಿಹಾರವೆಂದುಕೊಳ್ಳುತ್ತಾರೆ. ಇಂತಹವರ ನಡುವೆ ಮಹಿಳೆಯೊಬ್ಬರು ಹಾವನ್ನು ಹಿಡಿಯಲು ಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಅವಳು ಆಟಿಕೆ ಹಿಡಿದಿರುವಂತೆ ಅದನ್ನು ಸಾಂದರ್ಭಿಕ ರೀತಿಯಲ್ಲಿ ಹಿಡಿದಿಟ್ಟುಕೊಂಡಿರುವುದು ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ಈಗಾಗಲೇ 2.7 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 7600ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದ್ದು, ವೈರಲ್ ಆಗಿದೆ.