logo
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು

ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು

Umesh Kumar S HT Kannada

Jul 20, 2024 12:08 PM IST

google News

ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು

  • ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿಯ ಖಾದ್ಯ ಲಭ್ಯವಿದೆ. ಈ ಜಿಲ್ಲೆಯ ಆಹಾರ ಪದ್ಧತಿಗೆ ಅನುಗುಣವಾಗಿ ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಅನ್ನು ಗ್ರಾಹಕರು ಸವಿಯುತ್ತಿದ್ದಾರೆ. ಆದಾಗ್ಯೂ ಈ ಕ್ಯಾಂಟೀನ್ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು) 

ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು
ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು (HSM)

ಮಂಗಳೂರು: ಇದೀಗ ಇಂದಿರಾ ಕ್ಯಾಂಟೀನ್ ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರಾನ್ನ, ಪುಳಿಯೋಗರೆ, ರೈಸ್ ಬಾತ್ ಗಳಿಗಿಂತ ನೀರ್ ದೋಸೆ, ಪುಂಡಿಗಸಿಗಳಿಗೆ ಖಾಯಸು ಜಾಸ್ತಿ. ಹೀಗಾಗಿ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಈ ಪ್ರಯೋಗವನ್ನು ಜುಲೈ 1ರಿಂದ ಅಳವಡಿಸಿಕೊಂಡು ಯಶಸ್ವಿಯಾಗಿದೆ. ಕಡಿಮೆ ಹಣದಲ್ಲಿ ಉತ್ತಮ, ಅದೂ ಲೋಕಲ್ ಸಿಕ್ಕಿದರೆ, ಬೇರೇನು ಬೇಕು?

ಇದು ಜಿಲ್ಲೆಯ ಇತರ ಭಾಗಗಳಲ್ಲಿರುವ ಕ್ಯಾಂಟೀನ್ ಗಳಲ್ಲೂ ಅನ್ವಯವಾಗುತ್ತಿದೆ. ಆದರೆ ಆರಂಭಗೊಳಿಸಿದ ಖ್ಯಾತಿ ಬಂಟ್ವಾಳಕ್ಕೆ ಸಲ್ಲುತ್ತದೆ. ಬಿ.ಸಿ.ರೋಡ್ ತಾಲೂಕು ಆಡಳಿತ ಸೌಧದ ಪಕ್ಕ ಕಳೆದ ನಾಲ್ಕು ವರ್ಷಗಳ ಹಿಂದೆ ಇಂದಿರಾ ಕ್ಯಾಂಟೀನ್ ಆರಂಭಗೊಂಡಾಗ ಸಾಕಷ್ಟು ರಾಜಕೀಯ ಮೇಲಾಟಗಳು ನಡೆದಿದ್ದವು. ಉದ್ಘಾಟನೆ ವೇಳೆ ಪೆಟ್ಟು ಮಾಡಿಕೊಳ್ಳುವ ಮಟ್ಟಕ್ಕೆ ಹೋಯಿತು. ತಳ್ಳಾಟ, ಗೌಜಿ ಗದ್ದಲಗಳ ನಡುವೆ ಸದ್ದು ಮಾಡಿದ ಕ್ಯಾಂಟೀನ್ ಬಳಿಕ ತನ್ನ ಪಾಡಿಗೆ ಕೆಲಸ ಮಾಡಿಕೊಂಡಿತ್ತು. ಇಲ್ಲಿನ ಕಾರ್ಮಿಕರು ಆಗಾಗ್ಗೆ ತಮ್ಮ ವೇತನ ಬರುತ್ತಿಲ್ಲ ಎಂದು ಗುತ್ತಿಗೆ ವಹಿಸಿಕೊಂಡವರ ಬಳಿ ಮನವಿ ಮಾಡುವುದು, ಜನಪ್ರತಿನಿಧಿಗಳ ಬಳಿ ಅಳಲು ತೋಡಿಕೊಳ್ಳುವುದನ್ನು ಮಾಡುತ್ತಿದ್ದರು. ಇಂದಿಗೂ ಅದು ಪರಿಹಾರವಾಗಿಲ್ಲ.

ಕಳೆದ ಐದಾರು ವರ್ಷಗಳಿಂದಲೂ ಕೇವಲ ನಾಲ್ಕು ಮಂದಿ ಸಿಬ್ಬಂದಿ ಮಾತ್ರ ಇದ್ದೇವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ರಜೆ ಹಾಕದೆ ನಿಷ್ಠೆಯಿಂದ ದುಡಿದಿದ್ದೇವೆ. ಇದೀಗ ಗ್ರಾಹಕರು ಹೆಚ್ಚಾದಂತೆ ಸಿಬ್ಬಂದಿ ಹೆಚ್ಚಳವೂ ಅಗತ್ಯವಿದೆ. ಇಲ್ಲಿನ ಫ್ರಿಜ್ ಕೆಟ್ಟು ಎರಡು ವರ್ಷ ಕಳೆದರೂ ದುರಸ್ತಿಗೊಳಿಸಿಲ್ಲ. ನಮಗೆ ವೇತನ ಹೆಚ್ಚಳದ ಜೊತೆಗೆ ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಈಚೆಗಷ್ಟೇ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಜಯ ಪೂಜಾರಿ ಮತ್ತು ಚಂದ್ರಾವತಿ ತಿಳಿಸಿದ್ದಾರೆ.

ವೇತನ ಸರಿಯಾಗಿ ಬರುತ್ತಿಲ್ಲ, ಸೌಲಭ್ಯ ಸಿಗುತ್ತಿಲ್ಲ ಎಂದು ಸಿಬಂದಿ ಗ್ರಾಹಕರಿಗೆ ಯಾವುದೇ ಕೊರತೆ ಮಾಡುತ್ತಿಲ್ಲ. ನಗುಮೊಗದ ಸೇವೆ ನೀಡುತ್ತಿದ್ದಾರೆ. ಹೀಗಾಗಿ ಸದ್ದಿಲ್ಲದೆ ಕ್ಯಾಂಟೀನ್ ಜನಾಕರ್ಷಣೆ ಪಡೆದಿದೆ. ಕೊರೊನಾ ಕಾಲದಲ್ಲಂತೂ ಹಸಿದ ಹೊಟ್ಟೆಗೆ ಆಶ್ರಯ ನೀಡುವ ತಾಣವಾಯಿತು. ಇದೀಗ ಕ್ಯಾಂಟೀನ್ ನಲ್ಲಿ ಹೊಸ ಮೆನು ಇದೆ. ನೀರು ದೋಸೆ ಸವಿಯಲು ಕಾಯಂ ಗ್ರಾಹಕರಷ್ಟೇ ಅಲ್ಲ, ಹೊಸಬರೂ ಲಗ್ಗೆ ಇಡುತ್ತಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಬಿ.ಸಿ.ರೋಡಿನಲ್ಲಿ ಜನಪ್ರಿಯವಾಗುತ್ತಿದೆ.

ಹೊಸ ಮೆನುವಿನಲ್ಲಿ ಏನೇನಿದೆ

ಕೇವಲ 5 ರೂಪಾಯಿಗೆ ಬೆಳಿಗ್ಗೆ ಮತ್ತು ಸಂಜೆ ಉಪಾಹಾರ, 10 ರೂಪಾಯಿಗೆ ಮಧ್ಯಾಹ್ನ ಅನ್ನ ಸಾಂಬಾರ್ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಜುಲೈ 1ರಿಂದ 'ಹೊಸ ಮೆನು’ ಜಾರಿಗೊಂಡಿದೆ. ಸೋಮವಾರದ ಮೆನು ನೀರು ದೋಸೆ ಚಟ್ನಿ ಮತ್ತು ಇಡ್ಲಿ ಸಾಂಬಾರ್ ಇದ್ದರೆ, ಮಂಗಳವಾರಕ್ಕೆ ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ –ಅವಲಕ್ಕಿ ದೊರಕುತ್ತದೆ. ಈ ಪ್ರದೇಶದಲ್ಲಿ ಸಜ್ಜಿಗೆ ಅವಲಕ್ಕಿ ಎನ್ನುವುದು ಬೆಳಗಿನ ಸುಪ್ರಭಾತದ ಜೊತೆಗೆ ಸೇವಿಸುವಂಥ ಆಹಾರ. ಕೆಲವೊಮ್ಮೆ ಗ್ರಾಹಕರು, ಪದೆಂಜಿ ಬಜಿಲ್ ಉಂಟಾ ಎಂದು ಕೇಳುತ್ತಾರೆ. ಪದೆಂಜಿ ಎಂದರೆ ನೆನೆಸಿಟ್ಟ ಹೆಸರುಕಾಳು. ಆರೋಗ್ಯಕ್ಕೂ ಇದು ಒಳ್ಳೆಯದು. ತಳ್ಳುಗಾಡಿ ಕ್ಯಾಂಟೀನ್ ಗಳಲ್ಲಿ ಈಗಲೂ ಕರಾವಳಿ ಭಾಗದಲ್ಲಿ ಪದೆಂಜಿ ಬಜಿಲ್ ಫೇಮಸ್. ಸದ್ಯ ಇಂದಿರಾ ಕ್ಯಾಂಟೀನ್ ನಲ್ಲಿ ಪದೆಂಜಿ ಇಲ್ಲವಾದರೂ ಸಜ್ಜಿಗೆ ಬಜಿಲ್ (ಅವಲಕ್ಕಿ) ಇದೆ.

ಬುಧವಾರಕ್ಕೆ ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ ಇದೆ. ಪುಂಡಿ ಗಸಿ ತುಳುನಾಡಿದ ಫೇಮಸ್ ಖಾದ್ಯ. ಅಕ್ಕಿಯ ಉಂಡೆಗೆ ಗಸಿಯನ್ನು ಹಾಕಿ ಸವಿದರೆ ಬೇರೇನೂ ಬೇಡ!! ಗುರುವಾರಕ್ಕೆ ಇಡ್ಲಿ ಸಾಂಬಾರು ಮತ್ತು ಪಲಾವ್, ಶುಕ್ರವಾರಕ್ಕೆ ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ, ಶನಿವಾರಕ್ಕೆ ಇಡ್ಲಿ ಸಾಂಬಾರು ಮತ್ತು ಬನ್ಸ್, ಭಾನುವಾರಕ್ಕೆ ಇಡ್ಲಿ ಸಾಂಬಾರು ಮತ್ತು ಶೀರಾ ಸಿಗುತ್ತಿದೆ. ಬೆಳಿಗ್ಗೆ ಗಂಟೆ 7 ರಿಂದ 10 ಗಂಟೆ ವರೆಗೆ ಮತ್ತು ಸಂಜೆ ಗಂಟೆ 5ರಿಂದ 7 ಗಂಟೆತನಕ ಬಿಸಿ ಬಿಸಿ ತಿಂಡಿ ಕೇವಲ ರೂ 5 ರೂಪಾಯಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ದೊರಕುವುದು ಇಲ್ಲಿನ ವೈಶಿಷ್ಟ್ಯ.

ಮಧ್ಯಾಹ್ನ ಗಂಟೆ 12.30ರಿಂದ 3 ಗಂಟೆ ತನಕ ಚಪಾತಿ ಸಹಿತ ಊಟ ಸಿಗುತ್ತಿದೆ. ಈ ಹಿಂದೆ 10 ರೂಪಾಯಿಗೆ ಕುಚಲಕ್ಕಿ ಅನ್ನ ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಪಲ್ಯ ಸಿಗುತ್ತಿತ್ತು. ಇದೀಗ ರೂ 10 ರೂಪಾಯಿ ಊಟದ ಜೊತೆಗೆ ಹೆಚ್ಚುವರಿ ರೂ 10 ಪಾವತಿಸಿದರೆ ಎರಡು ಚಪಾತಿ ಮತ್ತು ಬಟಾಟೆ ಬಾಜಿಯೂ ಸಿಗುತ್ತಿದೆ. ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜೊತೆಗೆ ಪಾಯಸವೂ ಸಿಗುತ್ತಿರುವುದು ಪ್ಲಸ್ ಪಾಯಿಂಟ್.

ದಿನಕ್ಕೆ 300 ಮಂದಿ ಬರ್ತಾರೆ

ಕಳೆದ ಐದಾರು ವರ್ಷಗಳಲ್ಲಿ ಕೇವಲ 200 ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದು, ಈ ಪೈಕಿ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರು ಗರಿಷ್ಟ ಸಂಖ್ಯೆಯಲ್ಲಿದ್ದರು. ಜು.1ರಿಂದ 250ರಿಂದ 300 ಮಂದಿ ಬರುತ್ತಿದ್ದಾರೆ. ಇದರಿಂದಾಗಿ ಚಪಾತಿ ಬೇಗನೆ ಖಾಲಿಯಾಗುತ್ತಿದೆ. ಇದೀಗ ವಿವಿಧ ಇಲಾಖೆಗಳಿಗೆ ಬರುವ ಗ್ರಾಮೀಣ ಜನರು ಮಾತ್ರವಲ್ಲದೆ ಅಲ್ಲಿನ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕೂಡಾ ಬರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಆನಂದ ಪೂಜಾರಿ ಮತ್ತು ಅಬ್ದುಲ್ ರಝಾಕ್.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ