ಬೆಂಗಳೂರಿನಲ್ಲಿ 11 ಇಂದಿರಾ ಕ್ಯಾಂಟೀನ್ ಬಂದ್ ಪ್ರಸಂಗ; ವಿದ್ಯುತ್, ನೀರಿನ ಬಿಲ್ ಪಾವತಿ ಗೊಂದಲ, ಬಿಬಿಎಂಪಿ ಸ್ಪಷ್ಟೀಕರಣ
ಬೆಂಗಳೂರಿನಲ್ಲಿ 11 ಇಂದಿರಾ ಕ್ಯಾಂಟೀನ್ ಬಂದ್ ಪ್ರಸಂಗ ರಾಜಕೀಯವಾಗಿ ಗಮನಸೆಳೆಯಿತು. ವಿದ್ಯುತ್, ನೀರಿನ ಬಿಲ್ ಪಾವತಿ ಗೊಂದಲ ಮತ್ತು ಬಾಕಿ ಬಿಲ್ ಪಾವತಿಗೆ ವಿಳಂಬವಾಗಿರುವುದು ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿತ್ತು. ಇದಾಗುತ್ತಲೇ ಎಚ್ಚೆತ್ತುಕೊಂಡು ಬಿಬಿಎಂಪಿ, ತುರ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಮುಂದಾಯಿತಲ್ಲದೆ, ಈ ಕುರಿತು ಸ್ಪಷ್ಟೀಕರಣ ನೀಡಿತು.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 11 ಇಂದಿರಾ ಕ್ಯಾಂಟೀನ್‌ಗಳು ಬಿಲ್ ಪಾವತಿಯಾಗದೆ ಸ್ಥಗಿತಗೊಂಡಿರುವ ವರದಿ ಗಮನಸೆಳೆದಿತ್ತು. ಈ ಕ್ಯಾಂಟೀನ್‌ಗಳು ಮತ್ತೆ ಕಾರ್ಯನಿರ್ವಹಿಸತೊಡಗಿವೆ ಎಂದು ಬಿಬಿಎಂಪಿ ಶುಕ್ರವಾರ (ಜುಲೈ 19) ಸ್ಪಷ್ಟಪಡಿಸಿದೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ವಲಯಗಳಲ್ಲಿ 2017ರಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಂಬಂಧಪಟ್ಟ ಸಂಸ್ಥೆಯವರು ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರಗಳಲ್ಲಿ ಒದಗಿಸುತ್ತಿದ್ದಾರೆ. ಆದರೆ, ಗುತ್ತಿಗೆ ಪಡೆದ ಸಂಸ್ಥೆ ಸಲ್ಲಿಸಿದ ಬಿಲ್ಲುಗಳಲ್ಲಿ 40 ಕೋಟಿ ರೂಪಾಯಿಗೂ ಅಧಿಕ ಮೊತ್ತ ಪಾವತಿಯಾಗಿರಲಿಲ್ಲ. ಇದಲ್ಲದೆ, ಕ್ಯಾಂಟೀನ್‌ನ ಅಡುಗೆ ಕೋಣೆಯ ನೀರು ಮತ್ತು ವಿದ್ಯುತ್ ಬಿಲ್ ಪಾವತಿಸದ ಕಾರಣ ಅವುಗಳನ್ನು ಜುಲೈ 18ರಂದು ಸ್ಥಗಿತಗೊಳಿಸಲಾಗಿತ್ತು ಎಂದು ಬಿಬಿಎಂಪಿ ಹೇಳಿದೆ.
ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಆಹಾರದ ಗುಣಮಟ್ಟ, ಪ್ರಮಾಣವನ್ನು ಪರಿಶೀಲಿಸಲು ಪ್ರತಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಷ್ಲ್‌ಗಳನ್ನು ನಿಯೋಜಿಸಲಾಗಿದೆ. ಸದರಿ ಮಾರ್ಷಲ್‌ಗಳು ಪ್ರತಿ ನಿತ್ಯ ಖರ್ಚಾಗುವ ಊಟದ ಪ್ರಮಾಣದ ವರದಿ ಅನ್ವಯ 2021ರ ನವೆಂಬರ್ ತಿಂಗಳಿಂದ ಇದುವರೆಗೆ ಸಂಬಂಧಪಟ್ಟ ಸಂಸ್ಥೆಯವರಿಗೆ ಅನುದಾನವನ್ನು ಪಾವತಿ ಮಾಡಲಾಗಿರುತ್ತದೆ. ಆದರೆ, ದಕ್ಷಿಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಗರೀಕರಿಗೆ ಒದಗಿಸಿರುವ ಆಹಾರಕ್ಕಿಂತ ಹೆಚ್ಚಿನ ಮಟ್ಟದ ಬಿಲ್‌ನ್ನು ಸಲ್ಲಿಸಿರುವುದರಿಂದ ಅನುದಾನವನ್ನು ಕಡಿತಗೊಳಿಸಲಾಗಿರುತ್ತದೆ ಎಂದು ಬಿಬಿಎಂಪಿ ಹೇಳಿದೆ.
ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ ಗೊಂದಲ
ಗುತ್ತಿಗೆದಾರರ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ನೀರು ಮತ್ತು ವಿದ್ಯುತ್ ಬಿಲ್‌ನ್ನು ಸಂಬಂಧಪಟ್ಟ ಸಂಸ್ಥೆಯವರೇ ಪಾವತಿಸಬೇಕಾಗಿರುತ್ತದೆ. ಈ ಬಗ್ಗೆ ಜುಲೈ 17 ರಂದು ಮುಖ್ಯ ಆರೋಗ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಂಸ್ಥೆಯವರ ಪ್ರತಿನಿಧಿ, ದಕ್ಷಿಣ ವಲಯ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಯಿತು.ಅಲ್ಲಿ ಎಲ್ಲಾ ವಿಷಯಗಳ ಕುರಿತು ಸಂಸ್ಥೆಯ ಪ್ರತಿನಿಧಿಗಳಿಗೆ ವಿವರಿಸಿ, ತುರ್ತಾಗಿ ಸ್ಥಗಿತಗೊಂಡಿರುವ 11 ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ವಿವರಿಸಿದೆ.
ದಕ್ಷಿಣ ವಲಯದಲ್ಲಿ ಮುಚ್ಚಿದ್ದ 11 ಇಂದಿರಾ ಕ್ಯಾಂಟೀನ್‌ಗಳು ಜುಲೈ 19 ರಂದು ಮತ್ತೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಪುನರಾವರ್ತನೆಗೊಂಡಲ್ಲಿ ಕಾನೂನು ರೀತಿ ಕ್ರಮಕೈಗೊಂಡು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟ ಸಂಸ್ಥೆಯವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಟ್ವೀಟ್
ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಿದ ವಿಚಾರವಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.
"ಹಿಂದಿನ ಸರ್ಕಾರದಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಗಳನ್ನು ತೆರೆದಿರುವ ಬಗ್ಗೆ ಹೆಮ್ಮೆಪಟ್ಟು ಕೊಂಡಿದ್ದ ಕಾಂಗ್ರೆಸ್ಸಿಗರೇ, ಕಳೆದ ಬಾರಿಯ ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಕ್ಯಾಂಟೀನ್ ಗಳನ್ನು ನಾವು ಮುಚ್ಚಿಸಲು ಹೊರಟಿದ್ದೇವೆ ಎಂದು ಅಪಪ್ರಚಾರ ನಡೆಸಿದಿರಿ. ಆದರೆ ಈಗೇನಾಗುತ್ತಿದೆ ?
ಬಡವರು ಹಾಗೂ ಶ್ರಮಿಕ ವರ್ಗದವರಿಗೆ ಹಸಿವು ನೀಗಿಸುತ್ತಿದ್ದ ನಿಮ್ಮದೇ ಯೋಜನೆಯ ಇಂದಿರಾ ಕ್ಯಾಂಟೀನ್ ಮುಚ್ಚಿಸುತ್ತಿದ್ದೀರಿ. ಬಡವರ ಬಗ್ಗೆ, ಹಸಿದವರ ಬಗ್ಗೆ, ನಿಮಗೆ ಪ್ರಾಮಾಣಿಕ ಕಾಳಜಿ ಇದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ಗ್ಯಾರಂಟಿ ಯೋಜನೆಗಳನ್ನು ಮಾತ್ರ ಕೇಂದ್ರೀಕರಿಸಿರುವ ನೀವು ಅದನ್ನೂ ಪರಿಪೂರ್ಣವಾಗಿ ನಿಭಾಯಿಸಲಾಗದೆ, ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗದೆ, ರಾಜ್ಯದ ಬೊಕ್ಕಸ ಬರಿದು ಮಾಡಿ ಹಿಂದುಳಿದವರು, ದಲಿತರ ಕಲ್ಯಾಣ ಕಾರ್ಯಗಳನ್ನು ಮೂಲೆಗೊತ್ತಿ ಇದೀಗ ಬೀದಿಬದಿ ವ್ಯಾಪಾರ ಮಾಡಿ ಜೀವನ ಸಾಗಿಸುವ ಶ್ರಮಿಕ ವರ್ಗ ಹಾಗೂ ಬಡವರಿಗೆ ಹಸಿವು ನೀಗಿಸುವ ತಾಣವಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ನಿಮ್ಮ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿಸಲು ಹೊರಟಿದ್ದೀರಿ.
ನಿಮ್ಮ ಸರ್ಕಾರದ ಕಾರ್ಯವೈಖರಿ ನೋಡಿದರೆ ಕರ್ನಾಟಕದ ಚಲನಶೀಲತೆಗೆ ತುಕ್ಕು ಹಿಡಿಸಲು ಹೊರಟಂತಿದೆ. ಇಂದಿರಾ ಕ್ಯಾಂಟೀನ್ ಗೆ ಆಗುತ್ತಿರುವ ಗತಿಯೇ ಬಡವರ ಇತರ ಯೋಜನೆಗಳಿಗೂ ಆಗುವುದು ನಿಶ್ಚಿತ ಎಂಬುದು ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದರೆ ವೇದ್ಯವಾಗುತ್ತದೆ" ಎಂದು ವಿಜಯೇಂದ್ರ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.