ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕ ಕಡಿತ; ಸಂಸದರ ಬೇಡಿಕೆ ಈಡೇರಿಕೆ, ಕೂಡಲೇ ವಿಶೇಷ ರೈಲು ಸಂಚಾರ ಶುರು, ಜುಲೈ 24ರ ತನಕದ ವೇಳಾಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕ ಕಡಿತ; ಸಂಸದರ ಬೇಡಿಕೆ ಈಡೇರಿಕೆ, ಕೂಡಲೇ ವಿಶೇಷ ರೈಲು ಸಂಚಾರ ಶುರು, ಜುಲೈ 24ರ ತನಕದ ವೇಳಾಪಟ್ಟಿ ಹೀಗಿದೆ

ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕ ಕಡಿತ; ಸಂಸದರ ಬೇಡಿಕೆ ಈಡೇರಿಕೆ, ಕೂಡಲೇ ವಿಶೇಷ ರೈಲು ಸಂಚಾರ ಶುರು, ಜುಲೈ 24ರ ತನಕದ ವೇಳಾಪಟ್ಟಿ ಹೀಗಿದೆ

ದಕ್ಷಿಣ ಕನ್ನಡ, ಹಾಸನ, ಕೊಡಗು ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಹೆದ್ದಾರಿಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಬೆಂಗಳೂರು – ಮಂಗಳೂರಿಗೆ ವಿಶೇಷ ರೈಲು ಸಂಚಾರ ಬೇಕು ಎಂಬ ಸಂಸದರ ಬೇಡಿಕೆಗೆ ಕ್ಷಿಪ್ರ ಸ್ಪಂದಿಸಿದ ರೈಲ್ವೆ ಇಲಾಖೆ, ಜುಲೈ 24 ರ ತನಕ ವಿಶೇಷ ರೈಲು ಸಂಚಾರ ಶುರುಮಾಡಿದೆ.(ವರದಿ- ಹರೀಶ ಮಾಂಬಾಡಿ, ಮಂಗಳೂರು)

ಮಳೆಗಾಲದ ಭೂಕುಸಿತ ಕಾರಣ ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕ ಕಡಿತವಾಗಿದೆ. ಸಂಸದ ಬ್ರಿಜೇಶ್ ಚೌಟರ ಬೇಡಿಕೆಗೆ ಕ್ಷಿಪ್ರ ಸ್ಪಂದಿಸಿದ ನೈಋತ್ಯ ರೈಲ್ವೆ, ಕೂಡಲೇ ವಿಶೇಷ ರೈಲು ಸಂಚಾರ ಶುರು ಮಾಡಿತು.
ಮಳೆಗಾಲದ ಭೂಕುಸಿತ ಕಾರಣ ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕ ಕಡಿತವಾಗಿದೆ. ಸಂಸದ ಬ್ರಿಜೇಶ್ ಚೌಟರ ಬೇಡಿಕೆಗೆ ಕ್ಷಿಪ್ರ ಸ್ಪಂದಿಸಿದ ನೈಋತ್ಯ ರೈಲ್ವೆ, ಕೂಡಲೇ ವಿಶೇಷ ರೈಲು ಸಂಚಾರ ಶುರು ಮಾಡಿತು.

ಮಂಗಳೂರು: ಕರಾವಳಿಯಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳೆಲ್ಲವೂ ಭೂಕುಸಿತದಿಂದ ಹಾನಿಗೀಡಾಗಿರುವ ಕಾರಣ ಬಸ್ಸುಗಳು ಯಾವ್ಯಾವುದೋ ಮಾರ್ಗದಲ್ಲಿ ಸಂಚರಿಸುತ್ತಿವೆ. ಕಾರುಗಳಲ್ಲಿ ಮಂಗಳೂರು ಬೆಂಗಳೂರು ತಲುಪಲು ಕನಿಷ್ಠ 10 ಗಂಟೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಅನ್ಯಮಾರ್ಗ ಕಾಣದೆ ತುರ್ತು ಸಂದರ್ಭ ಸಂಚಾರ ಮಾಡಬೇಕಾದ ಹಿನ್ನೆಲೆಯಲ್ಲಿ ವಿಮಾನಗಳನ್ನು ಆಶ್ರಯಿಸುತ್ತಿದ್ದಾರೆ. ಒಂದೂವರೆ, ಎರಡು ಸಾವಿರ ರೂ ಇದ್ದ ವಿಮಾನಯಾನ ದರ ಈಗ ಒಂಭತ್ತು ಸಾವಿರದವರೆಗೆ ಬಂದಿದೆ.

ಇಷ್ಟೆಲ್ಲ ಸಮಸ್ಯೆಗಳಿರುವ ಕಾರಣ, ಸೀಮಿತ ಸಂಚಾರ ಇರುವ ಮಂಗಳೂರು ಬೆಂಗಳೂರು ರೈಲು ಮಾರ್ಗಕ್ಕೆ ಹೆಚ್ಚುವರಿ ರೈಲುಗಳನ್ನು ಹಾಕಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದಿದ್ದು, ಇದಕ್ಕೆ ಸ್ಪಂದನೆ ದೊರಕಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು.

ಕ್ಯಾ. ಬ್ರಿಜೇಶ್ ಚೌಟ ಪತ್ರದಲ್ಲೇನಿದೆ?

ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಪತ್ರ ಬರೆದು ವಿನಂತಿಸಿದ್ದರು.

ಹೆಚ್ಚಿನ ಸಂಖ್ಯೆಯ ಜನರು ಮಂಗಳೂರು- ಬೆಂಗಳೂರು ನಗರಗಳ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣದಿಂದ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯತೆಯಿದ್ದು. ಶೀಘ್ರದಲ್ಲಿ ಹೆಚ್ಚುವರಿ ರೈಲ್ವೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿನಂತಿಸಿದ್ದಾರೆ.

ತುರ್ತು ಸ್ಪಂದಿಸಿದ ಇಲಾಖೆ ರೈಲ್ವೆ ಓಡಾಟ ಹೀಗಿದೆ

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ಹಾಗು ಬೆಂಗಳೂರು ನಗರಗಳನ್ನು ಸಂಪರ್ಕಿಸುವ ಘಾಟ್ಸ್ ರಸ್ತೆಗಳಲ್ಲಿ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ನಿಟ್ಟಿನಲ್ಲಿ ಮಂಗಳೂರು ಹಾಗು ಬೆಂಗಳೂರು ನಡುವೆ ವಿಶೇಷ ರೈಲು ಸೇವೆ ಒದಗಿಸಲು ನೈರುತ್ಯ ರೈಲ್ವೆ ವಲಯಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮನವಿ ಮಾಡಿದ್ದರು. ಸಂಸದರ ಮನವಿಗೆ ತಕ್ಷಣ ಸ್ಪಂದಿಸಿದ ನೈರುತ್ಯ ರೈಲ್ವೆ ವಲಯಜುಲೈ 19ರಿಂದ 22ರ ತನಕ ವಿಶೇಷ ರೈಲುಗಳನ್ನು ಓಡಿಸಲು ಆರಂಭಿಸಿದೆ. ಆರಂಭಿಗ ರೈಲು ಮಂಗಳೂರನ್ನು ತಲುಪಿದೆ.

ರೈಲು ಸಂಖ್ಯೆ 06547 ಕ್ರಾ.ಸಂ.ರಾ ಬೆಂಗಳೂರು-ಮಂಗಳೂರು ಜಂಕ್ಷನ್ ವಿಶೇಷ ರೈಲು ಕ್ರಾ.ಸಂ.ರಾ ಬೆಂಗಳೂರು ರೈಲು ನಿಲ್ದಾಣದಿಂದ ದಿನಾಂಕ 19ರಂದು ರಾತ್ರಿ 11 ಗಂಟೆಗೆ ಹೊರಟು ಸರ್. ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಚಿಕ್ಕ ಬಾಣಾವರ ಜಂಕ್ಷನ್,ಕುಣಿಗಲ್ ಮಾರ್ಗವಾಗಿ ದಿನಾಂಕ 20ರಂದು ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ದಿನ ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಮಧ್ಯಾಹ್ನ 1:40ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಹೊರಟು ಕುಣಿಗಲ್ ಮಾರ್ಗವಾಗಿ ರಾತ್ರಿ 11:15ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪುತ್ತದೆ.

ಈ ರೈಲಿಗೆ ಕ್ರಾ.ಸಂ.ರಾ ಬೆಂಗಳೂರು ಹೊರತುಪಡಿಸಿ(ಮಂಗಳೂರಿಗೆ ಹೋಗುವಾಗ ಮಾತ್ರ), ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್(ಮಂಗಳೂರಿಗೆ ಹೋಗುವಾಗ ಮಾತ್ರ),ಚಿಕ್ಕ ಬಾಣಾವರ ಜಂಕ್ಷನ್,ನೆಲಮಂಗಲ,ಚನ್ನರಾಯಪಟ್ಟಣ,ಹಾಸನ ಜಂಕ್ಷನ್,ಸಕಲೇಶಪುರ,ಸುಬ್ರಹ್ಮಣ್ಯ ರೋಡ್,ಕಬಕ ಪುತ್ತೂರು,ಬಂಟ್ವಾಳ,ಮಂಗಳೂರು ಜಂಕ್ಷನ್,ಯಶವಂತಪುರ ಜಂಕ್ಷನ್(ಬೆಂಗಳೂರಿಗೆ ಹೋಗುವಾಗ ಮಾತ್ರ) ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ರೈಲು ಸಂಖ್ಯೆ 06549 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಕ್ರಾ.ಸಂ.ರಾ ಬೆಂಗಳೂರು ರೈಲು ನಿಲ್ದಾಣದಿಂದ ದಿನಾಂಕ 21 ಹಾಗು 22ರಂದು ರಾತ್ರಿ 11 ಗಂಟೆಗೆ ಹೊರಟು ಚಿಕ್ಕ ಬಾಣಾವರ ಜಂಕ್ಷನ್,ಕುಣಿಗಲ್ ಮಾರ್ಗವಾಗಿ ದಿನಾಂಕ 23 ಹಾಗು 24ರಂದು ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ದಿನ ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಮಧ್ಯಾಹ್ನ 1:40ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಹೊರಟು ಕುಣಿಗಲ್ ಮಾರ್ಗವಾಗಿ ರಾತ್ರಿ 11:15ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.

ಈ ರೈಲಿಗೆ ಯಶವಂತಪುರ ಜಂಕ್ಷನ್ ಹೊರತುಪಡಿಸಿ ಚಿಕ್ಕ ಬಾಣಾವರ ಜಂಕ್ಷನ್,ನೆಲಮಂಗಲ,ಚನ್ನರಾಯಪಟ್ಟಣ,ಹಾಸನ ಜಂಕ್ಷನ್,ಸಕಲೇಶಪುರ,ಸುಬ್ರಹ್ಮಣ್ಯ ರೋಡ್,ಕಬಕ ಪುತ್ತೂರು,ಬಂಟ್ವಾಳ,ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಮಂಗಳೂರು ಹಾಗು ಬೆಂಗಳೂರು ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಉಂಟಾಗದಂತೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಂಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ನಮ್ಮ ಸಮಿತಿ ಹಾಗು ರೈಲು ಬಳಕೆದಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಬಳಕೆದಾರರು ಹೇಳಿದ್ದಾರೆ. ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ವಿಶೇಷ ರೈಲು ಸೇವೆಯನ್ನು ಒದಗಿಸಲು ಕ್ರಮಕೈಗೊಂಡ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೂ ಧನ್ಯವಾದಗಳನ್ನು ರೈಲ್ವೆ ಬಳಕೆದಾರರು ನೀಡಿದ್ದಾರೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

Whats_app_banner