logo
ಕನ್ನಡ ಸುದ್ದಿ  /  ಕರ್ನಾಟಕ  /  ನಕ್ಸಲ್ ನಾಯಕ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು: ಡಿಜಿಪಿ ಪ್ರಣಬ್‌ ಮೊಹಂತಿ

ನಕ್ಸಲ್ ನಾಯಕ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು: ಡಿಜಿಪಿ ಪ್ರಣಬ್‌ ಮೊಹಂತಿ

Umesh Kumar S HT Kannada

Nov 21, 2024 03:01 PM IST

google News

ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ (ಎಡ ಚಿತ್ರದಲ್ಲಿ ಮೈಕ್ ಹಿಡಿದವರು) ಹೇಳಿದರು.

  • ನಕ್ಸಲ್ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು. ಯೋಜನೆ ರೂಪಿಸಿ ಎನ್‌ಕೌಂಟರ್ ಮಾಡಿದ್ದಲ್ಲ. ನಮ್ಮ ಗಮನ ಏನಿದ್ದರೂ ನಕ್ಸಲರ ಶರಣಾಗತಿ ಕಡೆಗೇ ಇದೆ ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ ತಿಳಿಸಿದ್ಧಾರೆ. ಆ ವಿವರ ಇಲ್ಲಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ (ಎಡ ಚಿತ್ರದಲ್ಲಿ ಮೈಕ್ ಹಿಡಿದವರು) ಹೇಳಿದರು.
ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ (ಎಡ ಚಿತ್ರದಲ್ಲಿ ಮೈಕ್ ಹಿಡಿದವರು) ಹೇಳಿದರು.

ಬೆಂಗಳೂರು: ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಕುರಿತು ವದಂತಿ ಹರಡುವ ಅಗತ್ಯವಿಲ್ಲ. ಆತನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಆತ ಅದಕ್ಕೊಪ್ಪದೆ ಇದ್ದಾಗ ಗುಂಡಿನ ಚಕಮಕಿ ನಡೆಯಿತು. ಅದರಲ್ಲಿ ಆತ ಮೃತಪಟ್ಟ. ನಾವು ಯಾವುದೇ ಪ್ಲಾನ್ ಮಾಡಿ ಆತನ ಹತ್ಯೆ ಮಾಡಿರುವುದಲ್ಲ ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಬುಧವಾರ (ನವೆಂಬರ್ 20) ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ನವೆಂಬರ್ 10 ರಿಂದ ನಿರಂತರ ಕೂಂಬಿಂಗ್‌ ಕಾರ್ಯಾಚರಣೆ ನಡೆದಿತ್ತು. ಆತ ಅಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬಳಿಕ ನಾಡ್ಪಾಲು ಗ್ರಾಮದ ಪೀತಬೈಲ್‌ನಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಗುಂಪು ಮುಖಾಮುಖಿಯಾಗಿದೆ. ಅಲ್ಲಿ ಗುಂಡಿನ ಚಕಮಕಿ ನಡೆದು ವಿಕ್ರಂ ಗೌಡ ಮೃತಪಟ್ಟಿದ್ದಾನೆ. ಆತನ ಮೂವರು ಸಹಚರರು ಪರಾರಿಯಾಗಿದ್ಧಾರೆ ಎಂದು ಪ್ರಣಬ್ ಮೊಹಂತಿ ತಿಳಿಸಿದ್ದಾರೆ.

ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್‌ ಸೇರಿ 3 ಶಸ್ತ್ರಗಳು ಪತ್ತೆ

ಗುಂಡಿನ ಚಕಮಕಿ ಬಳಿಕ ಸ್ಥಳದಲ್ಲಿ ವಿಕ್ರಂ ಗೌಡ ಮೃತದೇಹ ಮತ್ತು 9 ಎಂಎಂ ಕಾರ್ಬೈನ್ ಗನ್‌ ಸೇರಿ ಮೂರು ಆಯುಧ ಗಳಿದ್ದವು. ಒಂದು ಬಾರಿ ಟ್ರಿಗರ್ ಮಾಡಿದರೆ 50- 60 ಬುಲೆಟ್ ಸಿಡಿಯುವ ಗನ್, 3 ಎಂಎಂ ಪಿಸ್ತೂಲ್ ಅನ್ನು ವಶಪಡಿಸಲಾಗಿದೆ. ನಕ್ಸಲ್ ನಿಗ್ರಹ ಪಡೆ ಹಾರಿಸಿದ ಗುಂಡು ವಿಕ್ರಂ ಗೌಡ ಎದೆಗೆ ಹೊಕ್ಕಿತ್ತು. ಹೀಗಾಗಿ ಸ್ಥಳದಲ್ಲೇ ಕುಸಿದು ಆತ ಮೃತಪಟ್ಟಿದ್ದ. ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದ.ಕ., ಕೇರಳ ನಡುವೆ ನಕ್ಸಲ್‌ ಮೂವ್‌ಮೆಂಟ್ ಇದೆ. ನಕ್ಸಲ್ ಪ್ರತಿದಾಳಿ ಬಗ್ಗೆ ಅಲರ್ಟ್ ಇದ್ದೇವೆ. ನಕ್ಸಲರ ಶರಣಾಗತಿಯ ಕಡೆಗೆ ನಾವು ಗಮನ ಕೇಂದ್ರೀಕರಿಸುತ್ತೇವೆ. ಎನ್‌ಕೌಂಟರ್ ಮಾಡುವುದರ ಕಡೆಗೆ ಗಮನಹರಿಸುವುದಿಲ್ಲ. ಕೇರಳ ಜತೆ ನಮ್ಮ ರಾಜ್ಯದ ಎಎನ್‌ಎಫ್‌ ಸಂಬಂಧ ಚೆನ್ನಾಗಿದೆ ಎಂದು ಡಿಜಿಪಿ ಪ್ರಣಬ್ ಮೊಹಂತಿ ಹೇಳಿದರು.

ಕಾರ್ಕಳ, ಹೆಬ್ರಿ ವಲಯದ ಅರಣ್ಯದಲ್ಲಿ ಇತ್ತೀಚೆಗೆ ಸಿಪಿಐ (ಮಾವೋವಾದಿ) ಸಂಘಟನೆ ಸದಸ್ಯರ ಚಲನವಲನ ಕಂಡುಬಂದಿತ್ತು. ಎಎನ್‌ಎಫ್ ಅಧಿಕಾರಿ ಮತ್ತು ಸಿಬ್ಬಂದಿ ವಾರದಿಂದ ಕಬ್ಬಿನಾಲೆ, ನಾಡ್ಪಾಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್‌ ನಡೆಸುತ್ತಿದ್ದರು. ಸೋಮವಾರ ಸಂಜೆ 6ಕ್ಕೆ ವಿಕ್ರಂ ಸಹಿತ ನಾಲ್ವರು ಬಂದೂಕುಧಾರಿಗಳು ಪೀತಬೈಲ್ ಕಾಡಿನಲ್ಲಿ ಮುಖಾಮುಖಿಯಾಗಿದ್ದರು. ಎಎನ್‌ಎಫ್ ಅಧಿಕಾರಿಗಳು ಶರಣಾಗುವಂತೆ ಅನೇಕ ಬಾರಿ ಮನವಿ ಮಾಡಿದರೂ, ವಿಕ್ರಂ ಸಹಿತ ಸಹಚರರು ಧಿಕ್ಕರಿಸಿ ಗುಂಡಿನ ದಾಳಿ ಆರಂಭಿಸಿದ್ದರು. ಪರಿಣಾಮ ಪ್ರತಿದಾಳಿಗೆ ವಿಕ್ರಂ ಗೌಡ ಮೃತಪಟ್ಟ ಎಂದು ಪ್ರಣಬ್ ಮೊಹಂತಿ ವಿವರಿಸಿದರು.

ವಿಕ್ರಂ ಗೌಡ ವಿರುದ್ಧ 64 ಪ್ರಕರಣ, ಕರ್ನಾಟಕದಿಂದ 5 ಲಕ್ಷ ರೂ, ಕೇರಳದಿಂದ 25 ಲಕ್ಷ ರೂ ಬಹುಮಾನ

ನಕ್ಸಲ್ ನಾಯಕ ವಿಕ್ರಂ ಗೌಡನ ವಿರುದ್ಧ ಕೇರಳ, ತಮಿಳುನಾಡು ಹಾಗೂ ಕರ್ನಾಟಕಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ಕೊಲೆ, ಕೊಲೆಯತ್ನ, ಅಪಹರಣ, ಸುಲಿಗೆ, ಬೆದರಿಕೆ ಮೊದಲಾದ 64 ಪ್ರಕರಣ ದಾಖಲಾಗಿವೆ. ಈ ಪೈಕಿ ಉಡುಪಿ ಜಿಲ್ಲೆಯಲ್ಲೇ 34 ಪ್ರಕರಣಗಳಿವೆ. ತಲೆಮರೆಸಿಕೊಂಡಿದ್ದ ಆತನ ಮಾಹಿತಿ ನೀಡಿದವರಿಗೆ ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಇನ್ನೊಂದೆಡೆ ಕೇರಳ ಸರ್ಕಾರ 25 ಲಕ್ಷ ರೂಪಾಯಿ ಇನಾಮು ಘೋಷಿಸಿತ್ತು ಎಂದು ಕರ್ನಾಟಕ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ