ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ
ಕನ್ನಡ ಸುದ್ದಿ  /  ಕರ್ನಾಟಕ  /  ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ

ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ

ಕಬ್ಬಿನಾಲೆ ಎನ್‌ಕೌಂಟರ್‌: ಕರ್ನಾಟಕದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ನಕ್ಸಲ್‌ ಚಟುವಟಿಕೆಗೆ ಭಾರಿ ಹಿನ್ನಡೆಯಾಗುವ ವಿದ್ಯಮಾನ ಸೋಮವಾರ ತಡರಾತ್ರಿ ನಡೆಯಿತು. ಉಡುಪಿ ಜಿಲ್ಲೆ ಕಬ್ಬಿನಾಲೆ ಸಮೀಪ ಎನ್‌ಕೌಂಟರ್‌ನಲ್ಲಿ ಪ್ರಮುಖ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ಧಾನೆ. ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬ ವಿವರ ಇಲ್ಲಿದೆ.

ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬುದರ ವಿವರ ಇಲ್ಲಿದೆ.
ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬುದರ ವಿವರ ಇಲ್ಲಿದೆ.

ಮಂಗಳೂರು: ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ಸೋಮವಾರ (ನವೆಂಬರ್ 18) ತಡರಾತ್ರಿ ನಕ್ಸಲ್ ನಿಗ್ರಹ ಪಡೆಯೊಂದಿಗೆ ಮುಖಾಮುಖಿ ನಡೆದ ಘರ್ಷಣೆಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತನಾಗಿದ್ದಾನೆ. ಈತನ ಜತೆಗಿದ್ದ ಸಹಚರರು ಸ್ಥಳದಿಂದ ಪರಾರಿಯಾಗಿದ್ದು ನಕ್ಸಲ್ ನಿಗ್ರಹ ಪಡೆ ಅವರ ಪತ್ತೆಗಾಗಿ ಶೋಧ ಮುಂದುವರಿಸಿದೆ. ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿ ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾದ ಬಳಿಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಿಗೆ, ಕಳೆದ ಕೆಲವು ದಿನಗಳಿಂದ ಕರ್ನಾಟಕದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಭಾಗದಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಂಡಿತ್ತು. ಕೇರಳದಲ್ಲಿ ನಕ್ಸಲ್‌ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡ ಕಾರಣ ನಕ್ಸಲರ ಗುಂಪು ಕರ್ನಾಟಕದಲ್ಲಿ ಚಟುವಟಿಕೆಯಲ್ಲಿ ತೊಡಗಿತ್ತು ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲೂ ನಕ್ಸಲ್ ನಿಗ್ರಹ ಪಡೆ ತನ್ನ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಸೋಮವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಾಟಕದ ಪ್ರಮುಖ ನಕ್ಸಲ್‌ ನಾಯಕ ವಿಕ್ರಂ ಗೌಡ ಹತನಾದ.

ಕಬ್ಬಿನಾಲೆ ಎನ್‌ಕೌಂಟರ್‌ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು

ಉಡುಪಿಯ ಹೆಬ್ರಿ ತಾಲೂಕಿನ ಕೂಡ್ಲು ಬಳಿ ಇರುವ ನಾಡ್ಪಾಲು ಗ್ರಾಮದ ನಿವಾಸಿ ಈ ವಿಕ್ರಮ್ ಗೌಡ. ನಾಲ್ಕನೇ ತರಗತಿ ಓದಿದ್ದ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ ಹೆಬ್ರಿಯಲ್ಲಿ ಹೋಟೆಲ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದ. ಈತ ಕಾರ್ಮಿಕ ಸಂಘಟನೆಯ ಮೂಲಕ ನಕ್ಸಲ್ ಚಳವಳಿಗೆ ಸೇರಿಕೊಂಡಿದ್ದು, ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡು ಭಾಗದಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಸುಮಾರು 20 ಪ್ರಕರಣಗಳಲ್ಲಿ ದಿ ಮೋಸ್ಟ್‌ ವಾಂಟೆಂಡ್‌ ಆಗಿದ್ದ ವಿಕ್ರಮ್ ಗೌಡ ಕಳೆದ 20 ವರ್ಷಗಳಿಂದ ಕರ್ನಾಟಕದ ಪ್ರಮುಖ ನಕ್ಸಲ್‌ ನಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದ. ಈತನ ತಲೆಗೆ 5 ಲಕ್ಷ ರೂಪಾಯಿ ಇನಾಮು ಘೋಷಣೆಯಾಗಿತ್ತು.

ಸಾಕೇತ ರಾಜನ್ ಕರ್ನಾಟಕದಲ್ಲಿ ನಕ್ಸಲ್‌ ಚಳವಳಿಯ ನಾಯಕನಾಗಿದ್ದ ವೇಳೆ ಆತನ ಜೊತೆಗೆ ನಕ್ಸಲ್ ಚಳವಳಿ ಬಲಪಡಿಸುವಲ್ಲಿ ಕೆಲಸ ಮಾಡಿದ್ದ. ಆಗ ನಕ್ಸಲ್ ಚಟುವಟಿಕೆ ಉತ್ತುಂಗದಲ್ಲಿತ್ತು. 2005ರ ಫೆಬ್ರವರಿ 5 ರಂದು ಮೆಣಸಿನ ಹಾಡ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಿಗ್ರಹ ಪಡೆ ಸಾಕೇತ್ ರಾಜನ್‌ನನ್ನು ಹತ್ಯೆ ಮಾಡಿತ್ತು. ಆಗ ಅಲ್ಲಿಂದ ವಿಕ್ರಂ ಗೌಡ ಪರಾರಿಯಾಗಿದ್ದ. ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ನಕ್ಸಲ್ ಚಳವಳಿಯ ನೇತೃತ್ವವನ್ನು ವಹಿಸಿಕೊಂಡಿದ್ದ. ನಾಯಕ ಸಾಕೇತ್ ರಾಜನ್ ಸಾವಿಗೆ ಪ್ರತೀಕಾರ ತೀರಿಸುವುದಾಗಿ ಹೇಳಿಕೊಂಡಿದ್ದ. ಆ ಸಂದರ್ಭದಲ್ಲಿ ಪೊಲೀಸರು ವಿಕ್ರಂ ಗೌಡನ ಮನೆಗೆ ಹೋಗಿ ವಿಚಾರಣೆ ನಡೆಸಿದ್ದರು. ಆಗ ವಿಕ್ರಂ ಗೌಡನ ತಾಯಿ ಗುಲಾಬಿ ಗೌಡ ಮಗ ನಕ್ಸಲ್‌ ಚಳವಳಿಯಲ್ಲಿ ಪಾಲ್ಗೊಂಡಿದ್ದಾನೆ ಎಂದು ತಿಳಿದು ಕಣ್ಣೀರಾಗಿದ್ದರು. ಸಹೋದರ ಸುರೇಶ್ ಗೌಡ ಕೂಡ ಕಂಗಾಲಾಗಿದ್ದರು. ವಾಸ್ತವದಲ್ಲಿ ಸಾಕೇತ್ ರಾಜನ್ ಹತ್ಯೆ ಬಳಿಕ ಬಿ ಜಿ ಕೃಷ್ಣಮೂರ್ತಿ 2006 ರಿಂದ 2011ರ ತನಕ ನಕ್ಸಲ್ ಚಳವಳಿಯ ನಾಯಕತ್ವ ವಹಿಸಿದ್ದ. ಅದಾದ ಬಳಿಕ ವಿಕ್ರಂ ಗೌಡ ನಾಯಕತ್ವ ವಹಿಸಿಕೊಂಡ.

ಕರಾವಳಿ ಭಾಗದಲ್ಲಿ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ ವಿಕ್ರಂ ಗೌಡ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ. ಆಗಲೇ ನಕ್ಸಲ್‌ ಚಳವಳಿಗೆ ಧುಮುಕಿದ್ದ. ಬಳಿಕ ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾದ. ಇದೇ ವೇಳೆ, ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ನೇತೃತ್ವದ ಇನ್ನೊಂದು ತಂಡ ಸಕ್ರಿಯವಾಗಿತ್ತು.

ಕರ್ನಾಟಕ ಪೊಲೀಸರಿಂದ ಮೂರು ಬಾರಿ ತಪ್ಪಿಸಿಕೊಂಡಿದ್ದ ವಿಕ್ರಂ ಗೌಡ

ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವವನ್ನು ತಮಿಳುನಾಡು ಮೂಲದ ಕುಪ್ಪುಸ್ವಾಮಿ ಹೆಗಲಮೇಲಿದೆ. ಕರ್ನಾಟಕದಲ್ಲಿ ನಾಯಕತ್ವದ ಹೊಣೆಗಾರಿಕೆ ವಿಕ್ರಂ ಗೌಡ ಮೇಲಿತ್ತು. ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡು ಬಳಿಕ ನಕ್ಸಲ್ ಚಳವಳಿಗೆ ಇಳಿದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಎನ್‌ಕೌಂಟರ್‌ನಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೂ ವಿಕ್ರಂ ಗೌಡ ವಿರೋಧ ವ್ಯಕ್ತಪಡಿಸಿದ್ದ. ಇದೇ ಯೋಜನೆ ಜಾರಿಗೊಳಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಕ್ಕೆ ಗೌರಿ ಲಂಕೇಶ್‌ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನೂ ಕೂಡ ಹಂಚಿದ್ದ. ಇದಾದ ಬಳಿಕ ಗೌರಿ ಲಂಕೇಶ್ ಹತ್ಯೆ ನಡೆದಾಗ ಅದರ ಹಿಂದೆ ವಿಕ್ರಂ ಗೌಡ ಪಾತ್ರ ಇದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಕೇರಳದ ನಿಲಂಬೂರು ಅರಣ್ಯದಲ್ಲಿ 2016ರಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ನಕ್ಸಲರು ಹತರಾಗಿದ್ದರು. ಆಗಲೂ ವಿಕ್ರಂ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕೇರಳದಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸ ತೀವ್ರಗೊಂಡ ಕಾರಣ ವಿಕ್ರಂ ಗೌಡ ಕರ್ನಾಟಕಕ್ಕೆ ಬಂದಿದ್ದ. ಅದಾಗಿ, ತನ್ನ ಹುಟ್ಟೂರಿನ ಸುತ್ತಮುತ್ತ ಆತನ ಓಡಾಟ ಹೆಚ್ಚಾಗಿತ್ತು.

Whats_app_banner