logo
ಕನ್ನಡ ಸುದ್ದಿ  /  ಕರ್ನಾಟಕ  /  New Year 2025: ನಿಮ್ಮ ಗೆಳೆಯನಿಗೆ ಹೊಸ ವರ್ಷದ ಶುಭಾಶಯ ಹೇಗೆ ಕೋರಬಹುದು, ಹೊಸ ಸಂಕಲ್ಪ ಮಾಡುವ ಕ್ಷಣಕ್ಕೆ ಹೀಗಿರಲಿ ಪ್ರೀತಿಯ ಪತ್ರ

New year 2025: ನಿಮ್ಮ ಗೆಳೆಯನಿಗೆ ಹೊಸ ವರ್ಷದ ಶುಭಾಶಯ ಹೇಗೆ ಕೋರಬಹುದು, ಹೊಸ ಸಂಕಲ್ಪ ಮಾಡುವ ಕ್ಷಣಕ್ಕೆ ಹೀಗಿರಲಿ ಪ್ರೀತಿಯ ಪತ್ರ

Umesha Bhatta P H HT Kannada

Dec 12, 2024 08:26 PM IST

google News

ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಿ ಪ್ರೀತಿಯ ಪತ್ರ ಹೀಗಿದ್ದರೆ ಚನ್ನ.

  • New year 2025: ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಬಾಲ್ಯದ ಗೆಳೆಯ, ಸ್ನೇಹಿತರಿಗೆ ಪತ್ರ ಹೇಗೆ ಬರೆಯಬಹುದು. ಅವರೊಂದಿಗಿನ ಒಡನಾಟ, ಈಗಿನ ಸಂದರ್ಭವನ್ನು ಆಧರಿಸಿ ಪತ್ರದಲ್ಲಿ ಒಕ್ಕಣೆ ಹೇಗಿರಬೇಕು. ಇಲ್ಲಿದೆ ಮಾದರಿ

ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಿ  ಪ್ರೀತಿಯ ಪತ್ರ ಹೀಗಿದ್ದರೆ ಚನ್ನ.
ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಿ ಪ್ರೀತಿಯ ಪತ್ರ ಹೀಗಿದ್ದರೆ ಚನ್ನ. (bold sky)

ಪ್ರೀತಿಯ ಗೆಳಯ

ಹೇಗಿದ್ದೀಯಾ. ಬಹಳ ದಿನಗಳಿಂದ ನಿನ್ನನ್ನು ಮುಖತಃ ಭೇಟಿ ಮಾಡಲು ಆಗಲಿಲ್ಲ. ವಾಟ್ಸ್‌ ಆಪ್‌ ಎನ್ನುವ ಆಧುನಿಕ ಸೇತುಬಂಧವೇ ನಮ್ಮಿಬ್ಬರು ಹಾಗು ಇತರೆ ಗೆಳೆಯರನ್ನು ಇತ್ತೀಚಿನ ದಿನಗಳಲ್ಲಿ ಬೆಸೆದಿದೆ.

ಶಾಲಾ ದಿನಗಳಲ್ಲಿ ಕಳೆದ ಆ ಕ್ಷಣಗಳನ್ನು ಎಂದಿಗೂ ಮರೆಯಲು ಆಗುವುದಿಲ್ಲ. ಏಕೆಂದರೆ ಅವೇ ನಮ್ಮ ಅಮೂಲ್ಯ ಸಮಯ. ನಮ್ಮನ್ನು ಈಗಲೂ ಶಕ್ತಿಯುತ ಬಂಧದೊಂದಿಗೆ ಗಟ್ಟಿಗೊಳಿಸಿರುವುದು ಆ ದಿನಗಳೇ. ಏಕೆಂದರೆ ನಮಗೆ ಆಗ ಜಾತಿ, ಧರ್ಮ, ಮತದ ವ್ಯತ್ಯಾಸವೇ ಗೊತ್ತಿರಲಿಲ್ಲ. ಪ್ರೀತಿ, ಸಂತಸ ಎನ್ನುವುದೇ ನಮ್ಮ ಬದುಕಿನ ಭಾಗಗಳಾಗಿದ್ದವು. ನಿರ್ವ್ಯಾಜ್ಯ ಪ್ರೀತಿಯಿಂದಲೇ ನಾವೆಲ್ಲರೂ ಹತ್ತಿರವಾಗಿದ್ದೆವು. ಅದೇ ನೆನಪುಗಳು, ಬಾಂಧವ್ಯ ಗಟ್ಟಿಯಾಗಿದೆ.

ಕಾಲೇಜು ದಿನಗಳ ನಂತರ ನನ್ನ ನಿನ್ನ ಬದುಕಿನ ಹಾದಿ ಬೇರೆ ಬೇರೆಯಾಯಿತು. ನಾನು ಒಂದು ಊರು ಸೇರಿಕೊಂಡೆ. ನೀನೂ ಒಂದು ಊರಿನಲ್ಲಿ ಬದುಕು ರೂಪಿಸಿಕೊಂಡೆ. ವೃತ್ತಿಯ ಅನಿವಾರ್ಯತೆಗಳಿವು. ಹೀಗೆಂದು ದೂರವಿದ್ದರೂ ಹಿಂದಿನ ಅಭಿಮಾನ, ಸ್ನೇಹದ ಬಂಧುತ್ವಕ್ಕೆ ಕೊರತೆಯೇನೂ ಆಗಿಲ್ಲ. ದಶಕವೇ ಕಳೆದರೂ ಅದೇ ವಿಶ್ವಾಸ ಉಳಿದುಕೊಂಡು ಬಂದಿದೆ.

ಇದರ ನಡುವೆ ಶಿಕ್ಷಕ ವೃತ್ತಿ ಮಾಡಿಕೊಳ್ಳುತ್ತಲೇ ಒಂದು ಖಾಸಗಿ ಶಾಲೆಯ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಜತೆಗೆ ಮನೆಯವರ ಸಹಕಾರದಿಂದ ವಹಿವಾಟಿನಲ್ಲೂ ತೊಡಗಿಸಿಕೊಂಡೆ.ಎರಡು ದೋಣಿಯ ಮೇಲೆ ಕಾಲು ಎನ್ನುವ ಹಾಗೆ. ಆದರೆ ಶಿಕ್ಷಕ ವೃತ್ತಿಯ ಜತೆ ಜತೆಯಲ್ಲಿ ವಹಿವಾಟು ಕೂಡ ನಿನ್ನ ಕೈ ಹಿಡಿದಿದೆ.

ನಾನು ಇಂತಹ ಪ್ರಯತ್ನ ಮಾಡದೇ ಬರೀ ಸಂಬಳದಲ್ಲಿಯೇ ನನ್ನ ಬದುಕು ನಡೆಸಿಕೊಂಡು ಬಂದೆ. ವಹಿವಾಟು ನಡೆಸುವಾಗ ಸಣ್ಣ ಪುಟ್ಟ ಆರ್ಥಿಕ ವ್ಯತ್ಯಾಸಗಳು ಆಗುವ ಬಗ್ಗೆ ಆಗಾಗ ನನ್ನೊಂದಿಗೆ ಉಲ್ಲೇಖಿಸುತ್ತಲೇ ಇದ್ದೆ. ಹಾಗೆಂದು ಭಾರೀ ನಷ್ಟಕ್ಕೂ ಅವಕಾಶ ಮಾಡಿಕೊಡದೇ ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸಿಕೊಂಡು ಬಂದಿದ್ದೀಯಾ. ಭವಿಷ್ಯದ ದೃಷ್ಟಿಯಿಂದ ಈ ರೀತಿಯ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೀಯಾ. ಬದುಕು ಎನ್ನುವುದು ಸುಲಭವಲ್ಲವೇ ಅಲ್ಲ. ನಮ್ಮ ಜೀವನದ ಬಂಡಿಯನ್ನು ನಾವೇ ಎಳೆಯಬೇಕು ಎನ್ನುವ ಆಶಯದೊಂದಿಗೆ ನಿನ್ನ ಆ ಪ್ರಯತ್ನ ಮುಂದುವರಿದಿದೆ.

ಹೀಗಿದ್ದರೂ ಎಚ್ಚರಿಕೆ ಎನ್ನುವುದು ಬೇಕೇ ಬೇಕು. ಈಗಾಗಲೇ ಮಕ್ಕಳು ಕೂಡ ಕೈಗೆ ಬರುತ್ತಿದ್ದಾರೆ. ಇನ್ನು ನಾಲ್ಕೈದು ವರ್ಷ ಆದರೆ ಅವರೂ ವೃತ್ತಿಯನ್ನು ಆರಂಭಿಸುವ ಹಂತಕ್ಕೆ ಹೋಗುವುದರಿಂದ ಜವಾಬ್ದಾರಿಯೂ ಮುಗಿಯಲಿದೆ. ಇದರಿಂದ ಇದನ್ನು ನಿರ್ವಹಿಸುವ ಶಕ್ತಿ ನಿನಗೆ ಬರಲಿ. ಕೌಶಲ್ಯಗಳು ನಿನ್ನಲ್ಲಿ ಇಲ್ಲ ಅಂದೇನು ಇಲ್ಲ.

ನಮಗೆ ಆಗ ಸಿಕ್ಕ ಶಿಕ್ಷಣ ಹಾಗೂ ಆತ್ಮವಿಶ್ವಾಸ ತುಂಬಿದ ಶಿಕ್ಷಕರಿಂದಾಗಿ ಜೀವನವನ್ನು ಹೇಗೆ ನಿರ್ವಹಿಸಬೇಕು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮತೋಲನದಿಂದ ತೆಗೆದುಕೊಂಡು ಹೋಗುವ ಛಾತಿಯಂತೂ ಇದೆ. ಇದು ಮುಖ್ಯ ಕೂಡ. ಇದರಿಂದಲೇ ಎಂತಹ ಕಷ್ಟದ ಕ್ಷಣಗಳಿಂದ ನಮ್ಮನ್ನು ಪಾರು ಮಾಡಿಕೊಳ್ಳುವ ಶಕ್ತಿಯಿದೆ.

ವರ್ಷಗಳು ಉರುಳಿ ನೆನಪುಗಳನ್ನು ನಮ್ಮಲ್ಲಿ ಉಳಿಸಿ ಹೋಗುತ್ತವೆ. ಕೆಲವು ಸಿಹಿ ಘಟನೆಗಳು, ಖುಷಿ ಕೊಡುವ ಸಂಗತಿಗಳು ಪ್ರತಿ ವರ್ಷ ನಮ್ಮ ಬದುಕಿನಲ್ಲಿ ಘಟಿಸಬಹುದು. ಅದೇ ಕಹಿ ಕೊಡುವ ಸನ್ನಿವೇಶಗಳು, ಬೇಸರದಾಯಕ ಕ್ಷಣ ಸೃಷ್ಟಿಸಿದ ಪ್ರಸಂಗವೂ ಇದ್ದೇ ಇರುತ್ತದೆ. ಎರಡೂ ಇದ್ದರೆ ಮಾತ್ರವೇ ಅದು ಸಮರಸದ ಜೀವನ. 2024ರ ವರ್ಷ ಮುಗಿದು 2025ಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಕಷ್ಟಗಳು ಕರಗಿ ಖುಷಿ ಸಂಗತಿಗಳು ಹೊಸ ವರ್ಷದಲ್ಲಿ ಮತ್ತಷ್ಟು ನಿನ್ನ ಬದುಕಿನ ಭಾಗವಾಗಲಿ ಎಂದು ಮನಃಪೂರ್ವಕವಾಗಿ ಹಾರೈಸುವೆ. ಹೊಸ ಸಂಕಲ್ಪದೊಂದಿಗೆ ಮುಂದೆ ಹೋಗೋಣ.

ಹಿಂದಿನ ಕೆಲವು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವ ಇಲ್ಲವೇ ಕಾರ್ಯಕ್ರಮಗಳ ನೆಪದಲ್ಲಿ ಸ್ನೇಹಿತರೆಲ್ಲೂ ಭೇಟಿಯಾಗಿ ಒಂದಷ್ಟು ಖುಷಿ ಹಂಚಿಕೊಳ್ಳುತ್ತಿದ್ದೆವು. ಈಗ ಅದೂ ಆಗಿಲ್ಲ. ಕೋವಿಡ್‌ ಕಾಲಘಟ್ಟದ ನಂತರದಲ್ಲಿ ಎಲ್ಲವೂ ಆನ್‌ ಲೈನ್‌ ಆಗಿ ಹೀಗೆ ಭೇಟಿಯ ಸನ್ನಿವೇಶಗಳೂ ಕಡಿಮೆಯಾಗಿವೆ. 2025ರ ವರ್ಷದಲ್ಲಿ ನಾವೆಲ್ಲರೂ ಸ್ನೇಹಿತರು ಒಂದುಗೂಡುವ ಕ್ಷಣವೂ ಬರಲಿ ಎನ್ನುವ ಬಯಕೆ ನನಗಂತೂ ಇದೆ. ನಿನಗೂ ಇದ್ದೇ ಇರುತ್ತದೆ. ಇತರೆ ಸ್ನೇಹಿತರೊಂದಿಗೆ ಸೇರಿಕೊಂಡು ಶಾಲಾ ದಿನಗಳನ್ನು ಈ ವರ್ಷದಲ್ಲಾದರೂ ಮೆಲಕು ಹಾಕಿ ಒಂದಷ್ಟು ಹಗುರಾಗೋಣ. ನಮ್ಮೆಲ್ಲರ ಬದುಕಿನ ಹಾಯಿ ದೋಣಿ ಸುಸೂತ್ರವಾಗಿ ಮುಂದೆ ಹೋಗುವಂತೆ ಮಾಡಿಕೊಳ್ಳೋಣ.

ಹೊಸ ವರ್ಷದಲ್ಲಿ ನಮ್ಮೆಲ್ಲರ ಮುಖಾಮುಖಿ ಭೇಟಿಯಾಗುವ ವಿಶ್ವಾಸದೊಂದಿಗೆ.

ನಿನ್ನ ಸ್ನೇಹಿತ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ