Year in Review: 2024ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹುಡುಕಿದ ಟಾಪ್ 10 ಖಾದ್ಯಗಳಿವು; ಮಾವಿನ ಮಿಡಿ ಉಪ್ಪಿನಕಾಯಿಯಿಂದ ಶಂಕರಪೋಳಿವರೆಗೆ
ಪ್ರತಿ ವರ್ಷಾಂತ್ಯದ ಸಮಯದಲ್ಲಿ ಗೂಗಲ್ ಈ ವರ್ಷ ಜನರು ಏನೆಲ್ಲಾ ಸರ್ಚ್ ಮಾಡಿದ್ದಾರೆ, ಯಾವ ವಿಭಾಗದಲ್ಲಿ ಯಾವುದನ್ನು ಹೆಚ್ಚು ಹುಡುಕಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2024ರಲ್ಲಿ ಭಾರತೀಯರು ಹೆಚ್ಚು ಸರ್ಚ್ ಮಾಡಿದ ಖಾದ್ಯಗಳ ಒಂದು ಇಂದು ತಿಳಿಯೋಣ. ಇದರಲ್ಲಿ ನಿಮ್ಮ ಫೇವರಿಟ್ ತಿನಿಸು ಯಾವುದು ನೋಡಿ.
ಭಾರತೀಯರು ಆಹಾರ ಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಾವಿರಾರು ಬಗೆಯ ಖಾದ್ಯಗಳನ್ನ ತಯಾರಿಸುತ್ತಾರೆ. ಅದರಲ್ಲಿ ಕೆಲವೊಂದು ಭಾರತೀಯರಿಗೆ ತುಂಬಾ ಅಚ್ಚುಮೆಚ್ಚಿನದ್ದಾಗಿರುತ್ತದೆ. ಇಂದಿನ ಲೇಖನದಲ್ಲಿ ಭಾರತೀಯರು 2024ರಲ್ಲಿ ಹೆಚ್ಚು ಸರ್ಚ್ ಮಾಡಿದ ಆಹಾರ ಖಾದ್ಯಗಳು ಯಾವುದು ಎಂಬುದನ್ನು ತಿಳಿಯೋಣ.
ಪೋರ್ನ್‌ಸ್ಟಾರ್ ಮಾರ್ಟಿನಿ
ಲಂಡನ್‌ನ ಲ್ಯಾಬ್ ಬಾರ್‌ಗಾಗಿ ಡೌಗ್ಲಾಸ್ ಆಂಕ್ರಾಹ್ ಈ ಟರ್ನ್-ಆಫ್-ಮಿಲೇನಿಯಮ್ ಕಾಕ್‌ಟೈಲ್ ಭಾರತೀಯರು ಹುಡುಕಿದ ಆಹಾರ ಖಾದ್ಯಗಳ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದಿದೆ. ವೆನಿಲ್ಲಾ ವೋಡ್ಕಾ, ಪ್ಯಾಶನ್ ಫ್ರೂಟ್ ಮದ್ಯ, ವೆನಿಲ್ಲಾ ಸಕ್ಕರೆ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. 1999ರಲ್ಲಿ ಮೊದಲ ಬಾರಿ ಇದನ್ನು ತಯಾರಿಸಲಾಯಿತು.
ಮಾವಿನ ಉಪ್ಪಿನಕಾಯಿ
ದಕ್ಷಿಣ ಭಾರತದ ಪ್ರಸಿದ್ಧ ಮಾವಿನ ಉಪ್ಪಿನಕಾಯಿಯನ್ನು ಭಾರತದಲ್ಲಿ ಈ ವರ್ಷ ಹೆಚ್ಚು ಹುಡುಕಿದ್ದಾರೆ. ಉಪ್ಪಿನಕಾಯಿ ಇಲ್ಲದೇ ಭಾರತೀಯರ ಊಟ ಪರಿಪೂರ್ಣವಾಗುವುದಿಲ್ಲ. ಬಹುತೇಕರ ಫೇವರಿಟ್ ಆಗಿರುವ ಮಾವಿನಕಾಯಿ ಉಪ್ಪಿನಕಾಯಿ ಈ ವರ್ಷ ಟಾಪ್ ಸರ್ಚ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಧನಿಯಾ ಪಂಜಿರಿ
ಪಂಜಿರಿ ಎಂಬ ಖಾದ್ಯವನ್ನು ಹಲವು ವಿಧಗಳಲ್ಲಿ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ ತಯಾರಿಸುವ ಖಾದ್ಯವಿದು. 'ಪಂಚ' ಅಂದರೆ ಐದು ಮತ್ತು 'ಜಿರಕ', ಅಂದರೆ ಆಯುರ್ವೇದದಲ್ಲಿ ಗಿಡಮೂಲಿಕೆ ಪದಾರ್ಥಗಳು ಎಂದರ್ಥ. ಧನಿಯಾ ಪಂಜಿರಿ ಸಾಮಾನ್ಯವಾಗಿ ಜನ್ಮಾಷ್ಟಮಿ ಪ್ರಸಾದವಾಗಿ ನೀಡುತ್ತಾರೆ. ಇದನ್ನು ಕೊತ್ತಂಬರಿ ಹಾಗೂ ತುಪ್ಪವನ್ನು ಸೇರಿಸಿ ಮಾಡಲಾಗುತ್ತದೆ.
ಯುಗಾದಿ ಪಚಡಿ
ಯುಗಾದಿ ಹಬ್ಬದ ಸಂದರ್ಭದಲ್ಲಿ ನೈವೇದ್ಯ ರೂಪದಲ್ಲಿ ಮಾಡುವ ಪಚಡಿ ಕೂಡ 2024ರಲ್ಲಿ ಹೆಚ್ಚು ಜನರು ಗೂಗಲ್‌ನಲ್ಲಿ ಸರ್ಚ್ ಮಾಡಿದ ಖಾದ್ಯವಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕ ಕೆಲವು ಭಾಗಗಳಲ್ಲಿ ಇದನ್ನು ತಯಾರಿಸುತ್ತಾರೆ. ಮಾವಿನಕಾಯಿ, ಹುಣಸೆಹಣ್ಣು, ಬೆಲ್ಲ, ಹಸಿಮೆಣಸು, ಕಹಿಬೇವು ಹಾಕಿ ತಯಾರಿಸುವ ಖಾದ್ಯ ಇದಾಗಿದೆ.
ಪಂಚಾಮೃತ
ಭಾರತವು ಹಿಂದೂ ರಾಷ್ಟ್ರ. ಹಿಂದೂ ದೇವರುಗಳಿಗೆ ನೈವೇದ್ಯ ರೂಪದಲ್ಲಿ ಪಂಚಾಮೃತವನ್ನು ಇಡಲಾಗುತ್ತದೆ. ಬಾಳೆಹಣ್ಣು, ಜೇನುತುಪ್ಪ, ತುಪ್ಪ, ಹಾಲು, ಮೊಸರಿನ ಮಿಶ್ರಣದ ಪಂಚಾಮೃತಕ್ಕೆ ಆಯುರ್ವೇದದಲ್ಲೂ ವಿಶೇಷ ಮಹತ್ವವಿದೆ.
ಎಮಾ ದತ್ಶಿ
ಭೂತಾನ್ ಮೂಲದ ರಾಷ್ಟ್ರೀಯ ಖಾದ್ಯ ಕೂಡ ಭಾರತೀಯರು ಹುಡುಕಿದ ಆಹಾರ ಖಾದ್ಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ಆಲೂಗೆಡ್ಡೆಯನ್ನು ಬೇರೆ ಬೇರೆ ಖಾದ್ಯಗಳೊಂದಿಗೆ ಸೇರಿಸಿ ತಯಾರಿಸಲಾಗುತ್ತದೆ.
ಫ್ಲ್ಯಾಟ್ ವೈಟ್
ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ನಲ್ಲಿ ಮೂಲದ ಇದು ಕಾಫಿ. ಕ್ಯಾಪಚಿನೊದಂತೆ ಕಾಣುವ ಈ ಕಾಫಿ ಅದಕ್ಕಿಂತ ಕೊಂಚ ಭಿನ್ನವಾಗಿರುತ್ತದೆ.
ಕಾಂಜಿ
ಇದು ಕೂಡ ಭಾರತೀಯ ಮೂಲದ ಪಾನೀಯ. , ಇದನ್ನು ಹೋಳಿ ಸಮಯದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ನೀರು, ಕಪ್ಪು ಕ್ಯಾರೆಟ್, ಬೀಟ್ರೂಟ್, ಸಾಸಿವೆ, ಇಂಗು ಹಾಕಿ ಇದನ್ನು ತಯಾರಿಸಲಾಗುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಇದು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ.
ಶಂಕರಪೊಳಿ
ಮೈದಾಹಿಟ್ಟಿನಿಂದ ತಯಾರಿಸುವ ಈ ಕುರಕಲು ತಿಂಡಿ ಕೂಡ ಭಾರತೀಯರು ಹೆಚ್ಚು ಹುಡುಕಿದ ತಿನಿಸುಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ಇದು ಭಾರತ ದಕ್ಷಿಣ ಹಾಗೂ ಉತ್ತರ ಭಾಗದಲ್ಲಿ ಬೇರೆ ಬೇರೆ ರುಚಿಯಲ್ಲಿ ತಯಾರಿಸುವ ತಿನಿಸಾಗಿದೆ. ಇದು ಸಿಹಿ, ಖಾರ ಹಾಗೂ ಉಪ್ಪಿನ ರುಚಿ ಹೊಂದಿರುತ್ತದೆ.
ಚಮ್ಮಂತಿ
ಇದು ತೆಂಗಿನತುರಿಯಿಂದ ತಯಾರಿಸುವ ಖಾದ್ಯ. ಚಟ್ನಿಪುಡಿಯಂತೆ ಕಾಣಿಸುತ್ತದೆ. ಇದನ್ನು ಹೆಚ್ಚಾಗಿ ಆಂಧ್ರಪ್ರದೇಶದ ಭಾಗದಲ್ಲಿ ತಯಾರಿಸುತ್ತಾರೆ. ತುರಿದ ತೆಂಗಿನಕಾಯಿ, ಒಣಗಿದ ಕೆಂಪು ಮೆಣಸಿನಕಾಯಿಗಳು, ಈರುಳ್ಳಿ, ಹುಣಸೆಹಣ್ಣು ಮತ್ತು ಉಪ್ಪನ್ನು ಸೇರಿಸಿ ನೀರಿಲ್ಲದೇ ರುಬ್ಬಿ ಮಾಡುವ ಖಾದ್ಯವಿದು. ಕರ್ನಾಟಕದ ಕರಾವಳಿ ಭಾಗದಲ್ಲೂ ಇದನ್ನು ತಯಾರಿಸುತ್ತಾರೆ. ಇದನ್ನು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ.