logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿಯಲ್ಲಿ ಹಿಂಸಾರೂಪಕ್ಕೆ ತಿರುಗಿತು ಪಂಚಮಸಾಲಿ 2ಎ ಮೀಸಲಾತಿ ಹೋರಾಟ; ಗಮನಸೆಳೆದ 5 ಮುಖ್ಯ ಅಂಶಗಳು

ಬೆಳಗಾವಿಯಲ್ಲಿ ಹಿಂಸಾರೂಪಕ್ಕೆ ತಿರುಗಿತು ಪಂಚಮಸಾಲಿ 2ಎ ಮೀಸಲಾತಿ ಹೋರಾಟ; ಗಮನಸೆಳೆದ 5 ಮುಖ್ಯ ಅಂಶಗಳು

Umesh Kumar S HT Kannada

Dec 11, 2024 08:17 PM IST

google News

ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿಂಸಾರೂಪಕ್ಕೆ ತಿರುಗಿತು. ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡರು.

  • Panchamasali: ಪಂಚಮಸಾಲಿ 2 ಮೀಸಲಾತಿ ಹೋರಾಟ ಮಂಗಳವಾರ ಹಿಂಸಾರೂಪಕ್ಕೆ ತಿರುಗಿತು. ಬೆಳಗಾವಿಯಲ್ಲಿ ಸದ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಅಲ್ಲೇ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲೆತ್ನಿಸಿದಾಗ ಹಿಂಸಾಚಾರ ನಡೆಯಿತು. ಈ ವಿದ್ಯಮಾನದ ನಡುವೆ ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ. 

ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿಂಸಾರೂಪಕ್ಕೆ ತಿರುಗಿತು. ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡರು.
ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿಂಸಾರೂಪಕ್ಕೆ ತಿರುಗಿತು. ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡರು.

Panchamasali: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಪ್ರತಿಭಟನಾಕಾರರು ಮಂಗಳವಾರ ವಿಧಾನಸಭೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ಪೊಲೀಸರು ತಡೆಯೊಡ್ಡಿದರು. ಕೊಂಡಸಕೊಪ್ಪ ಪ್ರತಿಭಟನಾ ಮೈದಾನದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಶಾಂತಿಯುತವಾಗಿ ಸಾಗಿದ್ದ ಮೆರವಣಿಗೆ ಕೊಂಡಸಕೊಪ್ಪ ಕ್ರಾಸ್‌ ಬಳಿ ಕಿಡಿಗೇಡಿಯೊಬ್ಬರು ಕಲ್ಲು ಎಸೆದ ಕಾರಣ ವಿಕೋಪಕ್ಕೆ ತಿರುಗಿತು. ಬಳಿಕ ಕಲ್ಲುತೂರಾಟ ಹೆಚ್ಚಾದ ಕಾರಣ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಹಲವು ಪ್ರತಿಭಟನಾಕಾರರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿವೆ. ಇದಾದ ಬಳಿಕ ಹೋರಾಟ ಕೈಬಿಡುವಂತೆ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಮನವೊಲಿಸಲು ಪೊಲೀಸರು ಪ್ರಯತ್ನಿಸಿದರು. ಆದರೆ ಅದಕ್ಕೆ ಅವರು ಒಪ್ಪದ ಕಾರಣ, ಅವರನ್ನು ಪೊಲೀಸ್ ಉನ್ನತಾಧಿಕಾರಿಯೊಬ್ಬರು ಕಾರಿನಲ್ಲಿ ಕೂರಿಸಿ ಕರೆದೊಯ್ದರು. ಇದೇ ವೇಳೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್‌, ಅರವಿಂದ ಬೆಲ್ಲದ ಮುಂತಾದವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ಬೇರೆಡೆಗೆ ಸ್ಥಳಾಂತರಿಸಿದರು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಹಿಂಸಾರೂಪ; ಗಮನಸೆಳೆದ 5 ಅಂಶ

1) ಪಂಚಮಸಾಲಿ ಲಿಂಗಾಯಿತರಿಗೆ 2ಎ ಪ್ರಕಾರ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಕಳೆದ ನಾಲ್ಕೈದು ವರ್ಷದಿಂದ ಹೋರಾಟ ನಡೆಯುತ್ತಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯತ್ತಿದ್ದು, ಹೋರಾಟ ತೀವ್ರಗೊಳಿಸುವುದಾಗಿ ಅವರು ಕರೆ ನೀಡಿದ್ದರು.

2) ಬೆಳಗ್ಗೆ 10.30ರ ಸುಮಾರಿಗೆ ಸುವರ್ಣ ವಿಧಾನಸೌಧದ ಎದುರು ಕೊಂಡಸಕೊಪ್ಪ ಮೈದಾನದಲ್ಲಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಹೋರಾಟ ಆರಂಭಗೊಂಡಿತು. ಶಾಸಕ ಯತ್ನಾಳ, ಈರಣ್ಣ ಕಡಾಡಿ, ಶಾಸಕ ಬೆಲ್ಲದ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಪ್ರಮುಖ ನಾಯಕರು ಹೋರಾಟದ ಸ್ಥಳಕ್ಕೆ ಆಗಮಿಸಿದರು. ಈ ಪ್ರತಿಭಟನಾ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿನಿಧಿಯಾಗಿ ಆಗಮಿಸಿದ ಸಚಿವರಾದ ಡಾ.ಎಚ್‌.ಎಸ್‌. ಮಹಾದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ, ಪಶುಸಂಗೋಪನಾ ಸಚಿವ ವೆಂಕಟೇಶ್ ಅವರು, ಪ್ರತಿಭಟನಾಕಾರ ಮನವೊಲಿಕೆಗೆ ಪ್ರಯತ್ನಿಸಿದರು. ಆಗ, ಮುಖ್ಯಮಂತ್ರಿಯವರೇ ಇಲ್ಲಿಗೆ ಬರಬೇಕು ಮಾತನಾಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸದ್ಯ ಅವಕಾಶ ಇಲ್ಲ ಎಂದು ಪೊಲೀಸ್ ಉನ್ನತಾಧಿಕಾರಿಗಳು ಸ್ಪಷ್ಟಪಡಿಸಿದರು.

3) ಆದರೆ, ಸಚಿವರ ಮನವೊಲಿಕೆಗೆ ಒಪ್ಪದ ಸ್ವಾಮೀಜಿಯವರು, ಸ್ವತ: ಸಿಎಂ ಹೋರಾಟದ ವೇದಿಕೆಗೆ ಆಗಮಿಸುವಂತೆ ಪಟ್ಟು ಹಿಡಿದರು. ಅಲ್ಲದೆ, ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಹೋರಾಟಗಾರರಿಗೆ ಕರೆ ನೀಡಿದರು. ನಾವೇ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮೂಲಕ ಸುವರ್ಣ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಮೆರವಣಿಗೆ ಹೊರಟರು. ಸ್ವಲ್ಪ ದೂರ ತನಕ ಪ್ರತಿಭಟನಾ ಮೆರವಣಿಗೆ ಸಹಜವಾಗಿ ಶಾಂತಿಯುತವಾಗಿ ಸಾಗಿತ್ತು.

4) ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನ ಶ್ರೀಗಳ ಘೋಷಣೆಯಂತೆ ಏಕಾಏಕಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬರು ಕಲ್ಲು ತೂರಾಟ ನಡೆಸಿದರು. ಇದಾಗುತ್ತಿದ್ದಂತೆ ಇನ್ನೂ ಹಲವರು ಕಲ್ಲು ತೂರಾಟ ನಡೆಸಿದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡರು.

5) ಹೋರಾಟಗಾರರು ಲಾಠಿ ಪ್ರಹಾರಕ್ಕೆ ಇಳಿದ ಪೊಲೀಸರತ್ತಲೇ ಚಪ್ಪಲಿ, ಕಲ್ಲು ತೂರಾಟ ನಡೆಸಿದರು. ಪೊಲೀಸ್‌ ಜೀಪು, ವಾಹನಗಳ ಮೇಲೂ ದಾಳಿ ನಡೆಸಿದರು. ಇದರಿಂದ 20ಕ್ಕೂ ಅಧಿಕ ಪೊಲೀಸರು, ಹೋರಾಟಗಾರರು ಗಾಯ ಗೊಂಡರು. ಇದೇ ವೇಳೆ, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ಗೆ ಕಲ್ಲೇಟು ತಗಲಿ ಗಾಯಗೊಂಡ ಘಟನೆ ನಡೆದಿದೆ. ಆದರೆ ಈ ಕಲ್ಲುತೂರಾಟವನ್ನು ನಡೆಸಿದ್ದು ಸಿವಿಲ್ ಉಡುಪಿನಲ್ಲಿದ್ದ ಪೊಲೀಸರು ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ.

ಬಿಜೆಪಿ ಸರ್ಕಾರ ಇದ್ದಾಗಲೇ ಶುರುವಾದ ಹೋರಾಟ, ಕಾಂಗ್ರೆಸ್ ಸರ್ಕಾರದ ಸ್ಪಂದನೆ ಹೇಗಿದೆ

ಪಂಚಮಸಾಲಿ ಲಿಂಗಾಯಿತರಿಗೆ ಪ್ರವರ್ಗ 2 ಎ ಪ್ರಕಾರ ಮೀಸಲಾತಿ ನೀಡಬೇಕು ಎಂಬ ಆಗ್ರಹದ ಹೋರಾಟ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಶುರುವಾಗಿತ್ತು. 2023ರ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಗೆದ್ದು ಆಡಳಿತ ನಡೆಸಿದೆ. ಅಂದಿನಿಂದ ಈ ಮೀಸಲಾತಿ ವಿಚಾರವಾಗಿ ಕಾನೂನು ಪರಿಹಾರ ಒದಗಿಸುವುದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸಮಯಾವಕಾಶ ಕೇಳುತ್ತಲೇ ಇದೆ. ಅಸ್ತಿತ್ವದಲ್ಲಿರುವ ಎ ವರ್ಗದ ಒಬಿಸಿ ಸಮುದಾಯಗಳ ಬೆಂಬಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾಂಗ್ರೆಸ್, ಎಲ್ಲಾ ಲಿಂಗಾಯತರನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಸಮತೋಲನ ನಡೆಯನ್ನು ಶಿಫಾರಸು ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ನೇರವಾಗಿ ಮಾತುಕತೆ ನಡೆಯದ ಕಾರಣ ಪಂಚಮಸಾಲಿ ಸಮುದಾಯದವರನ್ನು ಸಮಾಧಾನಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ