ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿ ದೆಹಲಿಯಲ್ಲಿ ಬಂಧನ, ಎನ್‌ಐಎ ಮಹತ್ವದ ಕಾರ್ಯಾಚರಣೆ
Dec 21, 2024 06:09 AM IST
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ದೆಹಲಿಯಲ್ಲಿ ಮತ್ತೋರ್ವ ಆರೋಪಿ ಬಂಧನ
Praveen Nettaru murder case: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮತ್ತೋರ್ವ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎನ್ಐಎ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆ ನಿವಾಸಿ ಮಹಮ್ಮದ್ ಶರೀಫ್ (55) ಬಂಧಿತ ಆರೋಪಿ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ ಎಂದು ಆಪಾದಿಸಲಾಗಿತ್ತು. ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ ಈತನ ಮನೆಗೆ ಎರಡು ಬಾರಿ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 26 ಮಂದಿ ವಿರುದ್ಧ ಚಾರ್ಜ್ ಶೀಟ್
ಪ್ರವೀಣ್ ನೆಟ್ಟಾರು ಕೊಲೆಯಾಗಿ ಎರಡೂವರೆ ವರ್ಷಗಳಾದವು. ಪ್ರಕರಣದಲ್ಲಿ 26 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು, 19 ಮಂದಿಯ ಬಂಧನವಾಗಿದೆ. ಉಳಿದ ಏಳು ಮಂದಿ ಆರೋಪಿಗಳಿಗೆ ಎನ್.ಐ.ಎ. ಹುಡುಕಾಟ ನಡೆಸುತ್ತಿದ್ದು, ಇದೀಗ ಓರ್ವನ ಬಂಧನವಾಗಿದೆ. ಪ್ರಮುಖ ಆರೋಪಿಗಳ ಪೈಕಿ ಇದೀಗ ಆರು ಮಂದಿಯ ಬಂಧನವಾದಂತಾಗಿದೆ. ಬೆಳ್ಳಾರೆಯ ಶಫೀಕ್, ಸವಣೂರಿನ ಝಾಕಿರ್ ನನ್ನು ಕೇರಳದಲ್ಲಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಪ್ರಮುಖ ಆರೋಪಿಗಳಾದ ಶಿಹಾಬುದ್ದೀನ್ ಸುಳ್ಯ, ಬಶೀರ್ ಎಲಿಲೆ, ರಿಯಾಝ್ ಅಂಕತ್ತಡ್ಕ ಅವರನ್ನು ಬಂಧಿಸಲಾಯಿತು. ತುಫೈಲ್ ಎಂಬಾತನನ್ನು ಬೆಂಗಳೂರಿನಲ್ಲಿ, ಮುಸ್ತಫಾ ಪೈಚಾರ್ ನನ್ನು ಸಕಲೇಶಪುರದಲ್ಲಿ ಹಾಗೂ ರಿಯಾಝ್ ಯೂಸುಫ್ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್.ಐ.ಎ. ಬಂಧಿಸಿತು.
ಸುಳ್ಯ ತಾಲೂಕಿನ ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಅಬುಬಕ್ಕರ್ ಸಿದ್ದೀಕ್, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಬ್ದುಲ್ ನಾಸಿರ್ ಕೊಡಗು, ಅಬ್ದುಲ್ ರೆಹಮಾನ್ ಕೊಡಗು, ನೌಷಾದ್ ಬೆಳ್ತಂಗಡಿಯ ಹುಡುಕಾಟದಲ್ಲಿ ತನಿಖಾ ತಂಡವಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ ಕಾರ್ಯಾಚರಣೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಸ್ಥಳಗಳ ಮೇಲೆ ಇತ್ತೀಚೆಗೆ ಎನ್ಐಎ ದಾಳಿ ಮಾಡಿ ದಾಖಲೆಗಳು ಜಪ್ತಿ ಮಾಡಿಕೊಂಡಿತ್ತು. ಕರ್ನಾಟಕ ಸೇರಿ ತಮಿಳುನಾಡಿನ 16 ಕಡೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಹತ್ಯೆಯ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಇಬ್ಬರು ಆರೋಪಿಗಳು ಆಶ್ರಯ ನೀಡಿದ್ದರು ಎಂದು ಆಪಾದಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿರುವ ಆರೋಪಿ ನೌಷದ್ ಮನೆಗೆ ಎನ್ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ದಾಳಿ ವಿಚಾರ ತಿಳಿದು ಮನೆ ಲಾಕ್ ಮಾಡಿ ಕುಟುಂಬ ಪರಾರಿ ಆಗಿತ್ತು. ನೌಷದ್ ಪತ್ತೆಗೂ ಎನ್ಐಎ 2 ಲಕ್ಷ ರೂ. ರಿವಾರ್ಡ್ ಘೋಷಿಸಿತ್ತು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ರಾಜ್ಯವನ್ನು ಬೆಚ್ಚಿಬೀಳಿಸಿದ ಪ್ರಕರಣವಿದು
ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಈ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ನಡೆಸಿಕೊಂಡು ಬಂದಿದ್ದ ಪ್ರವೀಣ್ ನೆಟ್ಟಾರು, 2022ರ ಜುಲೈ 26ರಂದು ರಾತ್ರಿ ಸುಮಾರು 8.30ರ ವೇಳೆ ಅಂಗಡಿ ಬಾಗಿಲು ಹಾಕಿ, ಬೈಕ್ ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದರು. ಈ ಸಂದರ್ಭ ಕಾದು ಕುಳಿತಿದ್ದ ದುಷ್ಕರ್ಮಿಗಳು ಪ್ರವೀಣ್ ಮೇಲೆ ದಾಳಿ ಮಾಡಿದ್ದಾರೆ. ತೀವ್ರ ಗಾಯಗಳಿಂದ ಪ್ರವೀಣ್ ಸಾವಿಗೀಡಾಗಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದಿತ್ತು. ಅಂದು ಜಿಲ್ಲೆಯ ಬಿಜೆಪಿಗೆ ಸೇರಿದ ಪ್ರಮುಖ ಜನಪ್ರತಿನಿಧಿಗಳು ಜನರ ಆಕ್ರೋಶಕ್ಕೆ ತುತ್ತಾಗಿದ್ದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)