Royal Enfield: ಸೆಪ್ಟೆಂಬರ್ 1ರಂದು ರಸ್ತೆಗಿಳಿಯಲಿದೆ ಹೊಸ ರಾಯಲ್ ಎನ್‌ಫೀಲ್ಡ್ 350 ಬುಲೆಟ್, ದರ ಕೇವಲ 1.5 ಲಕ್ಷ ರೂಪಾಯಿ
Jan 09, 2024 07:32 PM IST
2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350
- 2023 Royal Enfield Bullet 350: ಸೆಪ್ಟೆಂಬರ್ 1ರಂದು ರಾಐಲ್ ಎನ್‌ಫೀಲ್ಡ್ ಕಂಪನಿಯ ನೂತನ ಬುಲೆಟ್ ಬೈಕೊಂದು ರಸ್ತೆಗಿಳಿಯಲಿದೆ. 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ನ ಎಕ್ಸ್‌ಶೋರೂಂ ದರ 1.5 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ನೂತನ ತಲೆಮಾರಿನ 350 ಬುಲೆಟ್ ಅನ್ನು ಪರಿಚಯಿಸುವ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದೆ. ಸೆಪ್ಟೆಂಬರ್ 1ರಂದು ರಸ್ತೆಗಿಳಿಯಲಿರುವ ರಾಯಲ್ ಎನ್‌ಫೀಲ್ಡ್ 350 ಬುಲೆಟ್ ಕಂಪನಿಯ ಅಗ್ಗದ ಬೈಕಾಗಿರಲಿದೆ. ಇದು ಹಂಟರ್ 350 ಮತ್ತು ಕ್ಲಾಸಿಕ್ 350 ನಡುವಿನ ಆವೃತ್ತಿಯಾಗಿರುವ ನಿರೀಕ್ಷೆಯಿದೆ. ಸದ್ಯ ಹಂಟರ್ 350 ಬೈಕ್ ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಕಡಿಮೆ ದರದ ಬೈಕಾಗಿದೆ. ಇದೀಗ ಈ ಶ್ರೇಣಿಯಲ್ಲಿಯೇ ನೂತನ ಬುಲೆಟ್ ಆಗಮಿಸಲಿದೆ. ನ್ಯೂ ಜೆನ್ ರಾಯಲ್ ಎನ್‌ಪೀಲ್ಡ್ ಬುಲೆಟ್‌ನ ಆರಂಭಿಕ ಎಕ್ಸ್‌ಶೋರೂಂ ದರ 1.5 ಲಕ್ಷ ರೂಪಾಯಿ ಇರಲಿದೆ.
2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ವಿನ್ಯಾಸ ಹೇಗಿರಲಿದೆ?
ಕಂಪನಿಯು ನೂತನ ಬುಲೆಟ್‌ನ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಮಾಡುವ ನಿರೀಕ್ಷೆಗಳಿಲ್ಲ. ಈ ವಿನ್ಯಾಸ ಈಗಾಗಲೇ ಐಕಾನಿಕ್ ಆಗಿದ್ದು, ಜನಪ್ರಿಯತೆ ಪಡೆದಿದೆ. ಕೆಲವೊಂದು ಬಾಡಿ ಪ್ಯಾನೆಲ್‌ಗಳು ಹೊಸತಾಗಿರಬಹುದು. ಆದರೆ, ಲುಕ್ ಮೊದಲಿನಂತೆ ಇರಲಿದೆ. ಅಂದರೆ, ಕ್ಲಾಸಿಕ್ 350ಯಂತೆ ಇರಲಿದೆ. ಇದರಲ್ಲಿ ಸಿಂಗಲ್ ಸೀಟ್ ಇರಲಿದೆ. ವೃತ್ತಾಕಾರಾದ ಹಾಲೋಜೆನ್ ಹೆಡ್‌ಲ್ಯಾಂಪ್ ಇರಲಿದೆ. ಈ ಹಿಂದೆ ಕಂಪನಿಯು ಟೀಸರ್‌ನಲ್ಲಿ ತೋರಿಸಿದ ಈ ಆವೃತ್ತಿಯಲ್ಲಿ ಪಿನ್‌ಸ್ಟ್ರಿಪ್ ಫ್ಯೂಯೆಲ್ ಟ್ಯಾಂಕ್ ಕಾಣಿಸಿತ್ತು. ಹೊಸ ಟೇಲ್ ಲ್ಯಾಂಪ್ ಇರಲಿದೆ.
ಛಾಸಿ ಹೇಗಿರಲಿದೆ?
2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350ನಲ್ಲಿ ಕ್ಲಾಸಿಕ್ 350ಯಲ್ಲಿದ್ದ ಛಾಸಿ ಮುಂದುವರೆಯುವ ಸೂಚನೆಯಿದೆ. ಇದೇ ರೀತಿ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಮ್ ಕೂಡ ಅದೇ ಇರಲಿದೆ. ಮುಂಭಾಗದಲ್ಲಿ ಸಸ್ಪೆನ್ಷನ್ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕಸ್ ಮತ್ತು ಹಿಂಬದಿಗೆ ಟ್ವಿನ್ ಶಾಕ್ ಅಬ್ಸಾರ್ಬರ್ ಇರಲಿದೆ. ಇದು ಆರು ಹಂತದ ಹೊಂದಾಣಿಕೆ ಹೊಂದಿರಲಿದೆ.
ಎಂಜಿನ್ ಮಾಹಿತಿ
ನೂತನ ಬುಲೆಟ್‌ನಲ್ಲಿ ಹೊಸ ಜೆ ಸರಣಿಯ ಎಂಜಿನ್ ಇರಲಿದೆ. ಇದು 349 ಸಿಸಿಯ ಲಾಂಗ್ ಸ್ಟ್ರೋಕ್ ಎಂಜಿನ್ ಆಗಿರಲಿದೆ. ಇದು ಏರ್ ಆಯಿಲ್ ಕೂಲ್ಡ್ ಎಂಜಿನ್ ಆಗಿರಲಿದೆ. 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350ನ ಎಂಜಿನ್ ಸುಮಾರು 20 ಬಿಎಚ್‌ಪಿ ಗರಿಷ್ಠ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಒದಗಿಸಲಿದೆ. ಇದರಲ್ಲಿ ಐದು ಸ್ಪೀಡ್‌ನ ಗಿಯರ್‌ಬಾಕ್ಸ್ ಇರಲಿದೆ. ಈ ಎಂಜಿನ್‌ನ ಲಕ್ಷಣಗಳು ಕ್ಲಾಸಿಕ್ 350, ಹಂಟರ್ 350 ಮತ್ತು ಮೀಟರ್ 350ನಲ್ಲಿರುವಂತಹದ್ದೇ ಇರಬಹುದು. ಆದರೆ, ಟ್ಯೂನಿಂಗ್ ವಿಷಯದಲ್ಲಿ ಈ ಮೂರು ಬುಲೆಟ್‌ಗಳ ಎಂಜಿನ್‌ಗಳಲ್ಲಿ ವ್ಯತ್ಯಾಸಗಳು ಇರಬಹುದು. ಇದು ಬಿಎಸ್6 ಎಂಜಿನ್ ಆಗಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯ ಹಲವು ಬೈಕ್‌ಗಳು ರಸ್ತೆಗಿಳಿಯಲು ಸಜ್ಜಾಗಿವೆ. ಮುಂದಿನ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450, ರಾಯಲ್ ಎನ್‌ಫೀಲ್ಡ್ ಶೂಟ್‌ಗನ್ 650, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೂಬ್ಬರ್ 350 ಸೇರಿದಂತೆ ಹಲವು ಬುಲೆಟ್‌ಗಳು ರಸ್ತೆಗಿಳಿಯಲಿವೆ.