ದೀಪಾವಳಿ ಹಬ್ಬಕ್ಕೆ ಸುಂದರವಾಗಿ ಕಾಣಿಸಿಕೊಳ್ಳಬೇಕಾ: ತಲೆಗೂದಲು, ಚರ್ಮದ ಆರೈಕೆ ಈ ರೀತಿ ಇರಲಿ
Oct 31, 2024 04:47 PM IST
ದೀಪಾವಳಿ ಹಬ್ಬಕ್ಕೆ ಸುಂದರವಾಗಿ ಕಾಣಿಸಿಕೊಳ್ಳಬೇಕಾ: ತಲೆಗೂದಲು, ಚರ್ಮದ ಆರೈಕೆ ಈ ರೀತಿ ಇರಲಿ
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹೂವು, ಹಣತೆಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಅದಕ್ಕಾಗಿ ಮಹಿಳೆಯರು ವಾರದ ಮೊದಲೇ ತಯಾರಿ ನಡೆಸುತ್ತಾರೆ. ಆದರೆ ಕೂದಲು ಹಾಗೂ ತ್ವಚೆಯ ಕಾಳಜಿಯನ್ನು ಮಾಡಿಕೊಳ್ಳುವುದನ್ನು ಮರೆಯುತ್ತಾರೆ. ಅದಕ್ಕಾಗಿ ಇಲ್ಲಿ ಕೆಲವು ಟಿಪ್ಸ್ ಕೊಡಲಾಗಿದೆ. ನಿಮ್ಮ ಕೂದಲು ಮತ್ತು ತ್ವಚೆಯ ಆರೈಕೆಯನ್ನು ಹೀಗೆ ಮಾಡಿ.
ಕತ್ತಲೆಯನ್ನು ಹೋಗಲಾಡಿಸುವ ಬೆಳಕಿನ ಹಬ್ಬ ದೀಪಾವಳಿ. ಇದು ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಹಬ್ಬದ ತಯಾರಿ ವಾರದ ಮೊದಲೇ ಪ್ರಾರಂಭವಾಗುತ್ತದೆ. ಮನೆಯ ಸ್ವಚ್ಛತೆಯಿಂದ ಹಿಡಿದು ಸಿಹಿ ಮತ್ತು ಕರಿದ ತಿಂಡಿಗಳ ತಯಾರಿ ಬಹಳ ಜೋರಾಗಿಯೇ ಇರುತ್ತದೆ. ಹೆಣ್ಣುಮಕ್ಕಳು ವಾರದ ಮೊದಲೇ ಈ ತಯಾರಿಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಕೂದಲು ಮತ್ತು ತ್ವಚೆ ಶುಷ್ಕವಾಗಿ ಕಾಂತಿ ಕಳೆದುಕೊಳ್ಳುತ್ತದೆ. ಮೊಡವೆ, ಒಣ ತ್ವಚೆಯಂತಹ ಸಮಸ್ಯೆಗಳು ಎದುರಾಗಬಹುದು. ಮನೆಯ ಜವಾಬ್ದಾರಿಗಳನ್ನು ಹೊತ್ತು ತಯಾರಿ ನಡೆಸುವ ಮಹಿಳೆಯರು ಹಬ್ಬದಂದು ಚೆನ್ನಾಗಿ ಕಾಣಿಸದಿದ್ದರೆ ಹೇಗೆ? ಕೂದಲು ಮತ್ತು ತ್ವಚೆಗೆ ಆರೈಕೆ ಮಾಡಲು ಸಮಯ ಸಿಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ದೀಪಾವಳಿಗೆ ಸುಂದರವಾಗಿ ಕಾಣಿಸಲು ಕೆಲವು ಸರಳ ಆರೈಕೆಗಳನ್ನು ಮಾಡಿಕೊಳ್ಳುವುದು ಹೇಗೆ ಎಂದು ಆಹಾರ ತಜ್ಞರಾದ ಮುಂಬೈನ ಮೆಡಿಕೋವರ್ ಆಸ್ಪತ್ರೆಯ ಡಯೆಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಶ್ವರಿ ಪಾಂಡಾ ಅವರು ಸಲಹೆ ನೀಡಿದ್ದಾರೆ.
ದೀಪಾವಳಿಗೆ ತ್ವಚೆಯ ಆರೈಕೆ ಹೀಗಿರಲಿ
ದೀಪಾವಳಿಯ ದಿನ ಹೊಸ ಬಟ್ಟೆ ಧರಿಸಿ ಎಲ್ಲರ ಮೆಚ್ಚುಗೆಗಳಿಸಬೇಕೆಂಬುದು ಹಲವರ ಬಯಕೆಯಾಗಿರುತ್ತದೆ. ತ್ವಚೆಯ ಆರೈಕೆ ಬಹಳ ಮುಖ್ಯ. ಅದಕ್ಕಾಗಿ ಹೀಗೆ ಮಾಡಿ.
ಹೈಡ್ರೇಟ್ ಆಗಿರಿ: ಚರ್ಮವು ಶುಷ್ಕವಾದರೆ ಕಳೆಗುಂದಿದಂತೆ ಕಾಣಿಸುತ್ತದೆ. ಹಾಗಾಗಿ ನಿಮ್ಮ ಚರ್ಮವನ್ನು ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ಈ ಹಬ್ಬದ ತಯಾರಿಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.
ಪೌಷ್ಟಿಕಾಂಶ ಭರಿತ ಆಹಾರ ಸೇವಿಸಿ: ಹಣ್ಣುಗಳು, ತರಕಾರಿಗಳು ಮತ್ತು ಡ್ರೈಫ್ರೂಟ್ಸ್‌ಗಳನ್ನು ಸೇವಿಸಿ. ಅವು ಉತ್ಕರ್ಷಣ ನಿರೋಧಕಗಳಾಗಿದ್ದು, ಫ್ರೀ ರ್‍ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಮಿತವಾಗಿ ಸಕ್ಕರೆ ತಿನ್ನಿ: ಅತಿಯಾದ ಸಕ್ಕರೆ ಸೇವನೆಯಿಂದ ಚರ್ಮವು ವಯಸ್ಸಾದಂತೆ ಕಾಣಬಹುದು ಮತ್ತು ಮೊಡವೆಗಳಿಗೆ ಕಾರಣವಾಗಬಹುದು. ಸಕ್ಕರೆಯ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಮಿತವಾಗಿ ಸೇವನೆ ಮಾಡಿ.
ಸೂರ್ಯನ ರಕ್ಷಣೆ ಪಡೆಯಿರಿ: ಇದು ಚಳಿಗಾಲವಾದರೂ ಕೂಡ, ಸೂರ್ಯನ ಕಿರಣಗಳು ನಿಮ್ಮ ತ್ವಚೆಗೆ ಹಾನಿಯುಂಟುಮಾಡಬಹುದು. ಹಾಗಾಗಿ ದೀಪಾವಳಿ ಖರೀದಿ ಅಥವಾ ಪಾರ್ಟಿಗೆ ಹೊರಗಡೆ ಹೊರಟಾಗ ಮರೆಯದೆ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಬಳಸಿ.
ಸೌಮ್ಯವಾದ ಕ್ಲೆನ್ಸರ್ ಬಳಸಿ: ಚರ್ಮವು ಶುಷ್ಕವಾಗದಂತೆ ತಡೆಯಲು ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ. ಕಠಿಣ ಸೋಪು ಮತ್ತು ಸ್ಕ್ರಬ್‌ಗಳ ಬಳಕೆಯನ್ನು ತಪ್ಪಿಸಿ.
ದೀಪಾವಳಿಯ ನಂತರದ ಆರೈಕೆ: ಬೆಳಕಿನ ಹಬ್ಬದ ಆಚರಣೆಯ ನಂತರ, ಮೇಕಪ್ ಮತ್ತು ಪಟಾಕಿಯ ಮಾಲಿನ್ಯದಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ತ್ವಚೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಚರ್ಮಕ್ಕೆ ತಾಜಾತನವನ್ನು ನೀಡಲು ಫೇಸ್ ಮಾಸ್ಕ್‌ಗಳನ್ನು ಬಳಸಿ.
ಕೂದಲಿಗೆ ಈ ರೀತಿಯಾಗಿ ಆರೈಕೆ ಮಾಡಿ
ಕೇಶವಿನ್ಯಾಸ: ನೀವು ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರೆ, ಪಟಾಕಿಯ ಹೊಗೆ, ಮಾಲಿನ್ಯಗಳಿಂದ ಕೂದಲು ಹಾಳಾಗುವುದನ್ನು ತಪ್ಪಿಸಲು ಸರಿಯಾದ ಕೇಶವಿನ್ಯಾಸ ಮಾಡಿಕೊಳ್ಳಿ. ಫ್ರೀ ಸ್ಟೈಲ್ ಕೇಶವಿನ್ಯಾಸ ಮಾಡಿಕೊಳ್ಳುವ ಮೊದಲು ಕೂದಲಿಗೆ ಸಾಕಷ್ಟು ಆರೈಕೆ ಮಾಡಿ.
ಸೌಮ್ಯವಾದ ಶ್ಯಾಂಪೂ ಬಳಸಿ: ನಿಮ್ಮ ಕೂದಲಿನ ಪ್ರಕಾರಕ್ಕೆ ಸೂಕ್ತವಾಗುವಂತಹ ಶಾಂಪೂ ಮತ್ತು ಕಂಡೀಷನರ್ ಗಳನ್ನೇ ಬಳಸಿ. ಅದು ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುವುದಿಲ್ಲ. ಇದರಿಂದ ಹೇರ್ ಡ್ಯಾಮೇಜ್ ಆಗುವ ಸಾಧ್ಯತೆ ಕಡಿಮೆಯಿರುತ್ತದೆ.
ಡೀಪ್ ಕಂಡೀಷನಿಂಗ್: ದೀಪಾವಳಿಯ ವಾತಾವರಣ ಶುಷ್ಕವಾಗಿರುತ್ತದೆ. ಕೂದಲ ಹಾನಿಯನ್ನು ತಡೆಗಟ್ಟಲು ಡೀಪ್ ಕಂಡೀಷನಿಂಗ್ ಮಾಡಿ. ಉತ್ತಮ ಕಂಡೀಷನರ್ ಅನ್ನು ಬಳಸಿ, ಕೂದಲಿಗೆ ಆರೈಕೆ ಮಾಡಿ.
ಹೇರ್ ಡ್ರೈಯರ್‌ಗಳ ಬಳಕೆ ಮಿತವಾಗಿಸಿ: ಹೇರ್ ಡ್ರೈಯರ್‌ಗಳು ಮತ್ತು ಸ್ಟ್ರೈಟ್‌ನರ್‌ಗಳಂತಹ ಹೀಟ್ ಸ್ಟೈಲಿಂಗ್ ಉಪಕರಣಗಳ ಬಳಕೆಯನ್ನು ಮಿತಿಗೊಳಿಸಿ. ಏಕೆಂದರೆ ಅತಿಯಾದ ಶಾಖದಿಂದ ನಿಮ್ಮ ಕೂದಲು ಹಾನಿಗೊಳಗಾಗುತ್ತದೆ. ಆದ್ದರಿಂದ ಅವುಗಳ ಬಳಕೆಯನ್ನು ಮಿತವಾಗಿ ಮಾಡಿ.