ಹೂಡಿಕೆದಾರರಿಗೆ ಖುಷಿ ಸುದ್ದಿ, ಇನ್ನು ಈ ವಹಿವಾಟಿಗೂ ಸಿಗುತ್ತೆ ಯುಪಿಐ ಫಂಡ್ ಬ್ಲಾಕಿಂಗ್ ಸೌಲಭ್ಯ
Oct 03, 2024 10:33 AM IST
ಷೇರುಪೇಟೆಯಲ್ಲಿ ಸೆಕೆಂಡರಿ ಮಾರುಕಟ್ಟೆ ವಹಿವಾಟಿಗೂ ಸಿಗುತ್ತೆ ಯುಪಿಐ ಫಂಡ್ ಬ್ಲಾಕಿಂಗ್ ಸೌಲಭ್ಯ. (ಸಾಂಕೇತಿಕ ಚಿತ್ರ)
ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಒಂದು ಖುಷಿ ಸುದ್ದಿ. ಹೂಡಿಕೆದಾರರು ಇನ್ಮೇಲೆ ಯುಪಿಐ ಮೂಲಕವೂ ಫಂಡ್ ಬ್ಲಾಕಿಂಗ್ ಸೌಲಭ್ಯ ಬಳಸಬಹುದು. ಅಥವಾ ಅರ್ಹ ಸ್ಟಾಕ್ ಬ್ರೋಕರ್‌ಗಳು ಸೆಕೆಂಡರಿ ಮಾರ್ಕೆಟ್ ವಹಿವಾಟಿಗೆ ತ್ರೀ ಇನ್ ಒನ್ ಸೌಲಭ್ಯ ಒದಗಿಸಲಿದ್ದಾರೆ. ಏನಿದು ಹೊಸ ಸೌಲಭ್ಯ- ಇಲ್ಲಿದೆ ವಿವರ.
ನವದೆಹಲಿ: ಅರ್ಹ ಸ್ಟಾಕ್ ಬ್ರೋಕರ್‌ಗಳು ತಮ್ಮ ಗ್ರಾಹಕರಿಗೆ ಫೆಬ್ರವರಿ 1 ರಿಂದ ಷೇರುಗಳ ಖರೀದಿ ಮತ್ತು ಮಾರಾಟಕ್ಕಾಗಿ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಆಧಾರಿತ 'ಫಂಡ್ ಬ್ಲಾಕ್' ವ್ಯವಸ್ಥೆಯನ್ನು ಬಳಸಲು ಅನುಮತಿಸಲಿದ್ದಾರೆ. ಈ ಹೊಸ ವ್ಯವಸ್ಥೆಯು ಈಗಾಗಲೇ ಚಾಲ್ತಿಯಲ್ಲಿರುವ ಎಎಸ್‌ಬಿಎ (ಅಪ್ಲಿಕೇಶನ್ ಸಪೋರ್ಟೆಡ್ ಬೈ ಬ್ಯಾಂಕ್ ಅಕೌಂಟ್) ಸೌಲಭ್ಯದ ಮಾದರಿಯಲ್ಲೇ ಇರಲಿದೆ. ಅಥವಾ ಅರ್ಹ ಸ್ಟಾಕ್ ಬ್ರೋಕರ್‌ಗಳು ತಮ್ಮ ಗ್ರಾಹಕರಿಗೆ ಒಂದು ವ್ಯಾಪಾರ ಖಾತೆಯಲ್ಲಿ 3 ವೈಶಿಷ್ಟ್ಯಗಳನ್ನು ಒದಗಿಸಬೇಕು. ಈ ಹೊಸ ಫೀಚರ್ ಹೂಡಿಕೆದಾರರ ಹೂಡಿಕೆ ಪ್ರಕ್ರಿಯೆಗೆ ಬಲ ತುಂಬುವ ನಿರೀಕ್ಷೆ ಇದೆ. ಇದಕ್ಕಾಗಿ ಅರ್ಹ ಸ್ಟಾಕ್ ಬ್ರೋಕರ್‌ಗಳು ಈಗಾಗಲೇ ಅಸ್ತಿತ್ವದಲ್ಲಿರುವ ವ್ಯಾಪಾರದ ಮಾದರಿಗೆ ಹೆಚ್ಚುವರಿಯಾಗಿ ಈ ಎರಡು ಆಯ್ಕೆಗಳಲ್ಲಿ ಒಂದನ್ನು ಗ್ರಾಹಕರಿಗೆ ಒದಗಿಸಬೇಕಾಗುತ್ತದೆ.
ಹೂಡಿಕೆದಾರರಿಗೆ ಸಿಗುವ 2 ಆಯ್ಕೆಗಳು
ಉಳಿತಾಯ ಖಾತೆ, ಡಿಮ್ಯಾಟ್ ಖಾತೆ ಮತ್ತು ವ್ಯಾಪಾರ ಖಾತೆಯ ಸೌಲಭ್ಯಗಳನ್ನು ( ಈ ಮೂರು ಸೌಲಭ್ಯಗಳನ್ನು) ಒಟ್ಟಿಗೆ ವ್ಯಾಪಾರ ಖಾತೆಯಲ್ಲಿ ಒದಗಿಸಲಾಗುತ್ತದೆ. ಇಂತಹ ಖಾತೆಯಲ್ಲಿರುವ ಹಣಕ್ಕೆ ಗ್ರಾಹಕರು ಉಳಿತಾಯ ಖಾತೆಯಲ್ಲಿ ಪಡೆಯುವಂತೆ ಬಡ್ಡಿಯನ್ನು ಗಳಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಟಿಟಿ ಡೇಟಾ ಪೇಮೆಂಟ್ ಸರ್ವೀಸಸ್ ಇಂಡಿಯಾ ಸಿಎಫ್‌ಒ ರಾಹುಲ್ ಜೈನ್, “ಯುಪಿಐ ಪಾವತಿಗಳು ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವ ಸಮಯದಲ್ಲಿ ಈ ಉಪಕ್ರಮವು ಹೂಡಿಕೆದಾರರಿಗೆ ಉತ್ತಮ ಪಾರದರ್ಶಕತೆ, ಬಡ್ಡಿ ಆದಾಯ ಮತ್ತು ಬಲವಾದ ಭದ್ರತೆಯ ಜೊತೆಗೆ ಪಾವತಿಗಳ ಸುಲಭತೆಯನ್ನು ನೀಡುತ್ತದೆ. ಈ ಹಂತವು ಫಂಡ್ ನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಹೂಡಿಕೆದಾರರಿಗೆ ಅನುಕೂಲವನ್ನು ಹೆಚ್ಚಿಸುತ್ತದೆ. ತಮ್ಮ ಹಣವನ್ನು ದುರುಪಯೋಗದಿಂದ ರಕ್ಷಿಸುವ ಮೂಲಕ ಖಾತೆಗೆ ಹಣವನ್ನು 'ನಿರ್ಬಂಧಿಸುವ' ಮೂಲಕ ವ್ಯವಹಾರಗಳಿಗೆ ಪಾವತಿಗಳನ್ನು ಮಾಡಲು ಇದು ಗ್ರಾಹಕರಿಗೆ ಅವಕಾಶ ನೀಡುತ್ತದೆ” ಎಂದು ವಿವರಿಸಿದ್ದಾರೆ.
ಸೋಮವಾರ ಸಿಕ್ಕಿತ್ತು ಸೆಬಿ ಅನುಮೋದನೆ: ಸೆಬಿಯ ನಿರ್ದೇಶಕರ ಮಂಡಳಿ ಸೋಮವಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದರ ಪ್ರಕಾರ, ಅರ್ಹ ಸ್ಟಾಕ್ ಬ್ರೋಕರ್‌ಗಳು ಮುಂದಿನ ವರ್ಷ ಫೆಬ್ರವರಿ 1 ರಿಂದ ತಮ್ಮ ಗ್ರಾಹಕರಿಗೆ ಯುಪಿಐ ಆಧಾರಿತ 'ಬ್ಲಾಕ್' ವ್ಯವಸ್ಥೆಯನ್ನು ಸೆಕಂಡರಿ ಮಾರುಕಟ್ಟೆಯಲ್ಲಿ (ನಗದು ವರ್ಗ) ಬಳಸಲು ಅನುಮತಿಸಬೇಕಾಗುತ್ತದೆ ಅಥವಾ ಅವರು ವ್ಯಾಪಾರ ಖಾತೆಯಲ್ಲಿ ಮೂರು ಸೌಲಭ್ಯಗಳನ್ನು ನೀಡುತ್ತಾರೆ. ಯುಪಿಐ ಆಧಾರಿತ ಬ್ಲಾಕ್ ಸಿಸ್ಟಮ್ ಈಗಾಗಲೇ ಚಾಲ್ತಿಯಲ್ಲಿರುವ ಎಎಸ್‌ಬಿಎ (ಅಪ್ಲಿಕೇಶನ್ ಸಪೋರ್ಟೆಡ್ ಬೈ ಬ್ಯಾಂಕ್ ಅಕೌಂಟ್) ನಂತೆ ಇರಲಿದೆ.
ಮುಂಚಿತವಾಗಿ ಹಣ ಪಾವತಿಸುವ ಅಗತ್ಯವಿಲ್ಲ
ಯುಪಿಐ ಫಂಡ್ ಬ್ಲಾಕ್ ವ್ಯವಸ್ಥೆಯಲ್ಲಿ, ಹೂಡಿಕೆದಾರರು ಮುಂಚಿತವಾಗಿ ಬ್ರೋಕರ್‌ಗೆ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಅವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನಿರ್ಬಂಧಿಸಲಾದ ಹಣವನ್ನು ಆಧರಿಸಿ ಸೆಕೆಂಡರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಹುದು. ಅರ್ಹ ಸ್ಟಾಕ್ ಬ್ರೋಕರ್‌ಗಳ ಗ್ರಾಹಕರು ಟ್ರೇಡಿಂಗ್ ಸದಸ್ಯರಿಗೆ ಹಣವನ್ನು ವರ್ಗಾಯಿಸುವ ಮೂಲಕ ಅಸ್ತಿತ್ವದಲ್ಲಿರುವ ವ್ಯಾಪಾರ ಸೌಲಭ್ಯವನ್ನು ಮುಂದುವರಿಸಲು ಅಥವಾ ಹೊಸ ಸೌಲಭ್ಯವನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ವ್ಯಾಪಾರದ ಸದಸ್ಯರನ್ನು ಗಾತ್ರ ಮತ್ತು ಕಾರ್ಯಾಚರಣೆಗಳ ಪ್ರಮಾಣದ ಆಧಾರದ ಮೇಲೆ ಅರ್ಹ ಸ್ಟಾಕ್ ಬ್ರೋಕರ್‌ಗಳಾಗಿ ವರ್ಗೀಕರಿಸಲಾಗಿದೆ.
ಐಪಿಓ ಖರೀದಿಗೆ 2019ರಲ್ಲಿ ಅನ್ವಯ: ಸೆಬಿಯು 2019ರ ಜನವರಿ ತಿಂಗಳಿಂದ ಐಪಿಒಗಳಿಗೆ ಮಧ್ಯವರ್ತಿಗಳ ಮೂಲಕ ಸಲ್ಲಿಸಿದ ರಿಟೇಲ್ ಹೂಡಿಕೆದಾರರ ಅರ್ಜಿಗಳ ಪಾವತಿ ಕಾರ್ಯವಿಧಾನವಾಗಿ ಖಾತೆಯಲ್ಲಿ ಹಣವನ್ನು ನಿರ್ಬಂಧಿಸುವ ಸೌಲಭ್ಯವನ್ನು ಪರಿಚಯಿಸಿತ್ತು. ಯುಪಿಐ ಬಳಕೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿದ ಬಳಿಕ ಸೆಬಿ ಈ ಅನುಮೋದನೆ ನೀಡಿತ್ತು.
'ಬ್ಲಾಕ್' ಕಾರ್ಯವಿಧಾನದ ಮೂಲಕ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಬೀಟಾ ಆವೃತ್ತಿಯನ್ನು 2024ರ ಜನವರಿ 1 ರಿಂದ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಬಳಕೆಗೆ ಒದಗಿಸಲಾಗಿದೆ. ಇದು ನಗದು ವಹಿವಾಟಿಗೆ ಮಾತ್ರ ಅನ್ವಯ. ಪ್ರಸ್ತುತ, ಈ ಫೀಚರ್ ಬಳಸುವುದು ಅಥವಾ ಬಳಸದೇ ಇರುವುದು ಹೂಡಿಕೆದಾರರ ಇಚ್ಛೆಗೆ ಬಿಡಲಾಗಿದೆ.