logo
ಕನ್ನಡ ಸುದ್ದಿ  /  ಜೀವನಶೈಲಿ  /  ಓದು ಅಂದ್ರೆ ನಿಮ್ಮ ಮಗು ತೂಕಡಿಸುತ್ತಾ? ಈ 5 ಟಿಪ್ಸ್ ಅನುಸರಿಸಿ ನೋಡಿ, ಫಲಿತಾಂಶ ನಿಮಗೇ ಗೊತ್ತಾಗುತ್ತೆ

ಓದು ಅಂದ್ರೆ ನಿಮ್ಮ ಮಗು ತೂಕಡಿಸುತ್ತಾ? ಈ 5 ಟಿಪ್ಸ್ ಅನುಸರಿಸಿ ನೋಡಿ, ಫಲಿತಾಂಶ ನಿಮಗೇ ಗೊತ್ತಾಗುತ್ತೆ

Jayaraj HT Kannada

Oct 14, 2024 09:01 PM IST

google News

ಓದು ಅಂದ್ರೆ ಮಗು ತೂಕಡಿಸುತ್ತಾ? ಈ ಟಿಪ್ಸ್ ಅನುಸರಿಸಿ ನೋಡಿ, ಫಲಿತಾಂಶ ನಿಮಗೇ ಗೊತ್ತಾಗುತ್ತೆ

    • ಮಕ್ಕಳು ಚೆನ್ನಾಗಿ ಓದಬೇಕೆಂದರೆ ಅವರ ದೇಹ ಅದಕ್ಕೆ ಬೆಂಬಲಿಸಬೇಕು. ಉತ್ತಮ ಅಧ್ಯಯನಕ್ಕೆ ದೀರ್ಘಕಾಲದ ಏಕಾಗ್ರತೆಯ ಅಗತ್ಯವಿದೆ. ಮಕ್ಕಳ ಚಂಚಲ ಮನಸ್ಸು ಅದಕ್ಕೆ ಬೆಂಬಲಿಸುವುದಿಲ್ಲ. ಹೀಗಾಗಿ ಮಕ್ಕಳ ದಿನಚರಿಯನ್ನು ರೂಪಿಸುವ ಕೆಲಸ ಪೋಷಕರ ಮೇಲಿದೆ. ಆಗ ಮಕ್ಕಳು ಓದುವ ಮಧ್ಯೆ ಮಲಗುವುದನ್ನು ತಪ್ಪಿಸಬಹುದು.
ಓದು ಅಂದ್ರೆ ಮಗು ತೂಕಡಿಸುತ್ತಾ? ಈ ಟಿಪ್ಸ್ ಅನುಸರಿಸಿ ನೋಡಿ, ಫಲಿತಾಂಶ ನಿಮಗೇ ಗೊತ್ತಾಗುತ್ತೆ
ಓದು ಅಂದ್ರೆ ಮಗು ತೂಕಡಿಸುತ್ತಾ? ಈ ಟಿಪ್ಸ್ ಅನುಸರಿಸಿ ನೋಡಿ, ಫಲಿತಾಂಶ ನಿಮಗೇ ಗೊತ್ತಾಗುತ್ತೆ (shutterstock)

ಪರೀಕ್ಷೆಯ ಸಮಯದಲ್ಲಿ ಓದಲು ಕುಳಿತಾಗ ಮಕ್ಕಳು ತೂಕಡಿಸುತ್ತಾರೆ. ಕಣ್ಣುಗಳಲ್ಲಿ ನಿದ್ರೆ ತುಂಬುತ್ತದೆ. ಇದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುವುದು ಮಾತ್ರವಲ್ಲದೆ, ಪೋಷಕರಿಗೂ ಚಿಂತೆ ಹೆಚ್ಚಾಗುತ್ತದೆ. ಗಂಟೆಗಟ್ಟಲೆ ಕಣ್ಣು ಮಿಟುಕಿಸದೆ ಟಿವಿ ಅಥವಾ ಮೊಬೈಲ್ ಫೋನ್‌ ನೋಡುತ್ತಾ ಕುಳಿತುಕೊಳ್ಳುವ ಮಕ್ಕಳು ಕೂಡಾ ಪುಸ್ತಕ ನೋಡಿದ ಕೂಡಲೇ ನಿದ್ರೆಯತ್ತ ಆಕರ್ಷಿತರಾಗುತ್ತಾರೆ. ಅಂಥಾ ಸಂದರ್ಭದಲ್ಲಿ ಹೆಚ್ಚಿನ ಪೋಷಕರು ಮಕ್ಕಳಿಗೆ ಬೈದು ಬುದ್ಧಿ ಹೇಳುತ್ತಾರೆ. ಇನ್ಮುಂದೆ ಮಕ್ಕಳನ್ನು ಬೈಯದೆ ಅವರನ್ನು ಓದುವಂತೆ ಮಾಡಬಹುದು. ಪೋಷಕರು ಕೆಲವೊಂದು ಸಲಹೆಗಳನ್ನು ಅನುಸರಿಸುವ ಮೂಲಕ ಮಕ್ಕಳು ತೂಕಡಿಸದೆ ಆಸಕ್ತಿಯಿಂದ ಓದುವಂತೆ ಮಾಡಬಹುದು.

ನಿಮಗೆ ಅರಿವಿರುವಂತೆ ಮಕ್ಕಳ ಮನಸ್ಸು ತುಂಬಾ ಚಂಚಲ. ಅವರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಖುಷಿಯಿಂದ ಮಾಡುತ್ತಾರೆ. ಆಗ ಅವರಿಗೆ ನಿದ್ದೆ ಕಾಡುವುದಿಲ್ಲ. ಹೀಗಾಗಿ ಓದುವ ಆಸಕ್ತಿ ಇಲ್ಲವಾದಾಗ, ನಿದ್ದೆ ಅವರನ್ನು ಎಳೆಯುತ್ತದೆ. ಅಲ್ಲದೆ ಓದುವ ಸಮಯದಲ್ಲಿ ಪದೇ ಪದೇ ಎದ್ದೇಳುವುದು, ಗಮನವನ್ನು ಬೇರೆಡೆಗೆ ಸೆಳೆಯುವುದು ಮಕ್ಕಳ ಸಹಜ ಸ್ವಭಾವ. ಹೀಗಾಗಿ ಉತ್ತಮ ಅಧ್ಯಯನಕ್ಕಾಗಿ ಅವರಿಗೆ ಏಕಾಗ್ರತೆಯ ಅಗತ್ಯವಿದೆ.

ಪೋಷಕರ ಯಾವ ರೀತಿಯಲ್ಲಿ ತಮ್ಮ ಮಕ್ಕಳು ಓದುವಾಗ ತೂಕಡಿಸದಂತೆ ನೋಡಿಕೊಳ್ಳಬಹುದು ಎಂಬುದನ್ನು ನೋಡೋಣ.

ನಿದ್ರೆಗೆ ವೇಳಾಪಟ್ಟಿ ರಚಿಸಿ

ಮಕ್ಕಳಿಗೆ ಮೊದಲು ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ರಚಿಸಿ. ಬೆಳಗ್ಗೆ ಎದ್ದೇಳಲು ಮತ್ತು ರಾತ್ರಿ ಮಲಗಲು ಸೂಕ್ತ ಹಾಗೂ ನಿಗದಿತ ಸಮಯವನ್ನು ಅಭ್ಯಾಸ ಮಾಡಿಸಿ. ರಾತ್ರಿ ಹೆಚ್ಚು ಹೊತ್ತು ಮೊಬೈಲ್‌ ಹಿಡಿದು ಕೂರದಂತೆ ತಡೆದು ಮಲಗಲು ಹೇಳಿ. ಆಗ ಮಗುವಿನ ದೇಹವು ಆಂತರಿಕವಾಗಿ ನಿದ್ದೆ ಮತ್ತು ವಿದ್ಯಾಭ್ಯಾಸಕ್ಕೆ ಹೊಂದಿಕೊಳ್ಳುತ್ತದೆ. ಮಗುವಿನ ನಿದ್ರೆಯ ಗುಣಮಟ್ಟ ಸುಧಾರಣೆಯಾಗುತ್ತದೆ. ದೇಹಕ್ಕೆ ಸೂಕ್ತ ವಿಶ್ರಾಂತಿ ಸಿಕ್ಕರೆ, ಓದುವ ಸಮಯದಲ್ಲಿ ಏಕಾಗ್ರತೆ ಇರುತ್ತದೆ.

ಓದಿನ ನಡುವೆ ವಿರಾಮ

ನಿರಂತರವಾಗಿ ಓದುವುದು ಮಗುವಿಗೆ ಮಾನಸಿಕ ಆಯಾಸ ಉಂಟುಮಾಡಬಹುದು. ಇದರಿಂದ ಮಗು ನಿದ್ರೆಗೆ ಜಾರುತ್ತದೆ. ಹೀಗಾಗಿ ಮಗುವಿಗೆ ಆಗಾಗ ವಿರಾಮ ತೆಗೆದುಕೊಳ್ಳಲು ಸಲಹೆ ನೀಡಿ. 25 ನಿಮಿಷಗಳ ಕಾಲ ಅಧ್ಯಯನ ಮಾಡಿದ ನಂತರ, 5 ನಿಮಿಷಗಳ ವಿರಾಮ ತೆಗೆದುಕೊಳ್ಳಲಿ. ವಿರಾಮದ ಸಮಯದಲ್ಲಿ ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು, ಒಂದು ಸುತ್ತು ನಡಿಗೆ, ಸರಳ ವ್ಯಾಯಾಮ ಮಾಡಿದರೆ ಒಳ್ಳೆಯದು.

ಓದಿಗೆ ವೇಳಾಪಟ್ಟಿ

ಅಧ್ಯಯನ ಮಾಡುವಾಗ ನಿದ್ರೆ ಬರದಂತೆ ಮಾಡಲು ಮಕ್ಕಳು ಒಂದು ಗುರಿ ಇಟ್ಟುಕೊಳ್ಳಬೇಕು. ಅಧ್ಯಯನಕ್ಕೆ ಸಂಬಂಧಿಸಿದ ಪಾಠಗಳನ್ನು ಮತ್ತು ಅವುಗಳನ್ನು ಕಂಠಪಾಠ ಮಾಡಲು ಸಮಯವನ್ನು ವಿಭಜಿಸಿ. ನಿಗದಿತ ದಿನದಲ್ಲಿ ಇಷ್ಟು ಓದು ಪೂರ್ತಿಗೊಳಿಸಬೇಕು ಹಾಗೂ ಇಷ್ಟು ಸಮಯ ಓದಬೇಕು ಎಂಬುದನ್ನು ಮೊದಲೇ ನಿರ್ಧರಿಸಿ.

ಆರೋಗ್ಯಕರ ಆಹಾರ ಸೇವನೆ

ದೇಹದಲ್ಲಿ ನೀರಿನ ಕೊರತೆ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಮಗುವಿಗೆ ಆಯಾಸವಾಗಬಹುದು. ಹೀಗಾಗಿ ಅಧ್ಯಯನ ಮಾಡುವಾಗ ನಡುವೆ ಸಾಕಷ್ಟು ನೀರು ಕುಡಿಯಲಿ. ಹಣ್ಣು, ಡ್ರೈಫ್ರುಟ್ಸ್‌ ಅಥವಾ ಮೊಸರು ತಿನ್ನಲು ಕೊಡಿ. ಓದುವ ಮೊದಲು ಹೊಟ್ಟೆತುಂಬಾ ತಿನ್ನುವುದು ಬೇಡ. ಅದರಿಂದ ಆಲಸ್ಯ ಹೆಚ್ಚಾಗಿ ನಿದ್ರೆ ಬರಬಹುದು.

ಕುಳಿತುಕೊಳ್ಳುವ ಸ್ಥಳ ಮತ್ತು ಭಂಗಿ

ಓದಲು ಮೆತ್ತನೆಯ ಪೀಠೋಪಕರಣದ ಮೇಲೆ ಕುಳಿತುಕೊಳ್ಳುವುದು ಬೇಡ. ಮರದ ಅಥವಾ ಗಟ್ಟಿ ನೆಲದ ಮೇಲೆ ಕುಳಿತುಕೊಳ್ಳಬೇಕು. ಸರಿಯಾದ ಭಂಗಿಯಲ್ಲಿ ನೇರವಾಗಿ ಕುಳಿತು ಓದಲು ಪ್ರಯತ್ನಿಸಿ. ಸೋಫಾ ಅಥವಾ ಬೆಡ್ ಮೇಲೆ ಕುಳಿತರೆ ನಿದ್ದೆ ಸೆಳೆಯಬಹುದು. ಅದನ್ನು ಆದಷ್ಟು ತಪ್ಪಿಸಿ.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ