logo
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು: ಎಷ್ಟೆಲ್ಲಾ ವಿನ್ಯಾಸಗಳು ಲಭ್ಯವಿದೆ, ಇಲ್ಲಿ ತಿಳಿದುಕೊಳ್ಳಿ

ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು: ಎಷ್ಟೆಲ್ಲಾ ವಿನ್ಯಾಸಗಳು ಲಭ್ಯವಿದೆ, ಇಲ್ಲಿ ತಿಳಿದುಕೊಳ್ಳಿ

Priyanka Gowda HT Kannada

Oct 30, 2024 11:42 AM IST

google News

ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?

  • ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಬೆಳಕಿನ ಹಬ್ಬ ಅಂದರೆ ನೆನಪಾಗುವುದು ದೀಪಗಳು. ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುವ ದೀಪಗಳು, ವಿಶೇಷವಾಗಿ ದೀಪಾವಳಿಯಲ್ಲಿ ಹೆಚ್ಚು ಮಹತ್ವ ಪಡೆದಿದೆ. ಯಾವೆಲ್ಲಾ ದೀಪವನ್ನು ಬೆಳಗಿಸಬಹುದು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?
ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? (PC: Canva)

ದೀಪಾವಳಿಗೆ ಯಾವೆಲ್ಲಾ ಹಣತೆಗಳನ್ನು ಬೆಳಗಿಸಬಹುದು. ದೀಪಗಳಿಲ್ಲದೆ ದೀಪಾವಳಿ ಆಚರಣೆ ಪರಿಪೂರ್ಣವಾಗುವುದಿಲ್ಲ. ದೀಪಾವಳಿ ಅಂದ್ರೆ ಅದು ಬೆಳಕಿನ ಹಬ್ಬ. ಇದು ಮನೆ-ಮನಗಳನ್ನು ಬೆಳಗಿಸುವ ಹಬ್ಬ. ಸರಿಯಾದ ದೀಪವನ್ನು ಆರಿಸುವುದರಿಂದ ಹಬ್ಬದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಬಹುದು. ಕೆಲವರು ಮಣ್ಣಿನ ಹಣತೆಯನ್ನು ಬಳಸಿದರೆ ಇನ್ನೂ ಕೆಲವರು ತನಗಿಷ್ಟವಾದ ಹಣತೆಯನ್ನು ಹಾಗೆಯೇ ತಾವೇ ತಮ್ಮ ಕೈಯಾರೆ ಮಾಡಿದ ಹಣತೆಗೆ ಎಣ್ಣೆ ಹಚ್ಚಿ ದೀಪ ಬೆಳಗಿಸುತ್ತಾರೆ. ಸಾಂಪ್ರದಾಯಿಕ ಎಣ್ಣೆ ದೀಪಗಳಿಂದ ಆಧುನಿಕ ಎಲ್ಇಡಿ ದೀಪಗಳವರೆಗೆ, ಪ್ರತಿಯೊಂದು ಕೂಡ ವಿಭಿನ್ನ ಶೈಲಿ, ಅಲಂಕಾರವನ್ನು ಹೊಂದಿರುತ್ತದೆ. ಹಾಗಿದ್ದರೆ, ಯಾವೆಲ್ಲಾ ಹಣತೆಯನ್ನು ಹಚ್ಚಬಹುದು ಅಥವಾ ಯಾವುದು ಉತ್ತಮ ಎಂಬ ಬಗ್ಗೆ ಇಲ್ಲಿ ತಿಳಿಯೋಣ.

ಮೊದಲೇ ಹೇಳಿದಂತೆ ಬೆಳಕಿನ ಹಬ್ಬ ಅಂದರೆ ನೆನಪಾಗುವುದು ದೀಪಗಳು. ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುವ ದೀಪಗಳು, ವಿಶೇಷವಾಗಿ ದೀಪಾವಳಿಯಲ್ಲಿ ಹೆಚ್ಚು ಮಹತ್ವ ಪಡೆದಿದೆ. ದೀಪದ ಜ್ಯೋತಿ ಅಥವಾ ಬೆಳಕು ಇಡೀ ಮನೆಯನ್ನು ಬೆಳಗಿಸುತ್ತದೆ. ಇದು ನಕಾರತ್ಮಕತೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಸಾಂಪ್ರದಾಯಿಕವಾಗಿಯೂ ದೀಪವನ್ನು ಬೆಳಗಿಸುವುದು ಕತ್ತಲೆಯಿಂದ ಬೆಳಕಿನೆಡೆಗೆ ವಿಜಯದ ಸಂಕೇತವನ್ನು ಸೂಚಿಸುತ್ತದೆ. ಹೀಗಾಗಿ ಯಾವೆಲ್ಲಾ ದೀಪವನ್ನು ಬೆಳಗಿಸಬಹುದು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಹಿತ್ತಾಳೆ: ದೀಪಾವಳಿಗೆ ಉತ್ತಮವಾದ ಹಿತ್ತಾಳೆ ಲೋಹ ಉತ್ತಮ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬಹುತೇಕರ ಮನೆಯ ದೇವರಕೋಣೆಯಲ್ಲಿ ಹಿತ್ತಾಳೆಯ ದೀಪವಿರುತ್ತದೆ. ದೀಪಾವಳಿಗೂ ಕೂಡ ಹಿತ್ತಾಳೆಯ ದೀಪವನ್ನು ಹಚ್ಚಬಹುದು. ಇದು ಗಟ್ಟಿಮುಟ್ಟಾಗಿರುತ್ತದೆ, ದೀರ್ಘಕಾಲ ಬಾಳಿಕೆ ಬರುತ್ತದೆ, ಅಷ್ಟು ಬೇಗ ತುಕ್ಕು ಹಿಡಿಯುವುದಿಲ್ಲ. ಇದರಲ್ಲಿ ಕಪ್ಪು ಕಲೆಯಾದರೆ ಸ್ವಚ್ಛಗೊಳಿಸುವುದು ಕೂಡ ತುಂಬಾನೇ ಸುಲಭ. ಇದು ಧನಾತ್ಮಕತೆಯನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ಹಿತ್ತಾಳೆಯು ಚಿನ್ನದ ಬಣ್ಣದಲ್ಲಿರುವುದರಿಂದ ಜ್ಯೋತಿಯನ್ನು ಮತ್ತಷ್ಟು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಹಿತ್ತಾಳೆಯ ದೀಪವು ಮನೆಗೆ ಸಮೃದ್ಧಿ, ಸಂಪತ್ತು ಮತ್ತು ಆರೋಗ್ಯವನ್ನು ತರುತ್ತದೆ ಎಂದು ನಂಬಲಾಗಿದೆ.

ಬೆಳ್ಳಿ ದೀಪ: ದೀಪಗಳಲ್ಲಿ ಬೆಳ್ಳಿ ದೀಪ ಕೂಡ ಬಹಳ ಜನಪ್ರಿಯವಾಗಿದೆ. ಭಾರತದಲ್ಲಿ ಬೆಳ್ಳಿಯನ್ನು ಅಮೂಲ್ಯ, ಪವಿತ್ರ ಮತ್ತು ಶುದ್ಧತೆ ಹಾಗೂ ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಬೆಳ್ಳಿಯ ದೀಪಗಳ ಹೊಳಪು ದೀಪಾವಳಿಗೆ ವಿಶೇಷ ಮೆರುಗು ನೀಡುತ್ತದೆ. ಬೆಳ್ಳಿಯ ದೀಪವನ್ನು ಬೆಳಗಿಸುವುದರಿಂದ ಮನೆಗಳಿಗೆ ಶಾಂತತೆ, ಶಾಂತಿ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.

ತಾಮ್ರದ ದೀಪ: ಹಿಂದಿನಿಂದಲೂ ತಾಮ್ರಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ಮನೆಯ ಶಕ್ತಿಯನ್ನು ಧನಾತ್ಮಕವಾಗಿ ಇರಿಸಲು ಇದು ಸಹಾಯ ಮಾಡುತ್ತದೆ. ಹಾಗೆಯೇ ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸುತ್ತದೆ ಎಂದು ನಂಬಲಾಗಿದೆ. ಆದರೆ, ತಾಮ್ರವು ಸುಲಭವಾಗಿ ತುಕ್ಕು ಹಿಡಿಯುತ್ತದೆ. ಅದನ್ನು ಆಗಾಗ ಚೆನ್ನಾಗಿ ಸ್ವಚ್ಛಗೊಳಿಸಬೇಕು.

ಮಣ್ಣಿನ ಹಣತೆ: ಲೋಹಗಳ ದೀಪಗಳನ್ನು ಪಕ್ಕಕ್ಕೆ ಇರಿಸಿ, ದೀಪಗಳಲ್ಲಿ ಸಾಂಪ್ರದಾಯಿಕ ಮಣ್ಣಿನಿಂದ ತಯಾರಿಸುವ ಹಣತೆಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ಮಣ್ಣಿನ ಹಣತೆಯು ದೀಪಾವಳಿ ಹಬ್ಬಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಹಿತವಾದ ಪರಿಮಳವನ್ನು ನೀಡುವ ಇವು, ಪರಿಸರ ಸ್ನೇಹಿ, ಜೈವಿಕ ವಿಘಟನೀಯ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಜೇಡಿಮಣ್ಣಿನ ದೀಪವನ್ನು ಬೆಳಗಿಸುವುದರಿಂದ ಸುಖ-ಶಾಂತಿ, ನೆಮ್ಮದಿ ತರಬಲ್ಲದು.

ಹಣತೆಗಳ ವಿನ್ಯಾಸಗಳು

ಮಾರುಕಟ್ಟೆಯಲ್ಲಿ ಇಂದು ಬಗೆ-ಬಗೆಯ ವಿಭಿನ್ನ ಹಣತೆಗಳು ಲಭ್ಯವಿದೆ. ವಿಭಿನ್ನ ವಿನ್ಯಾಸಗಳು ಗ್ರಾಹಕರನ್ನು ಸೆಳೆಯುತ್ತಿದೆ. ಮಣ್ಣಿವ ಹಣತೆಗಳು ಮಾತ್ರವಲ್ಲದೆ ಬೇರೆ-ಬೇರೆ ರೀತಿಯ ಹಣತೆಗಳು ಕೂಡ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ನೀಡಿರುವ ವಿನ್ಯಾಸಗಳ ಹಣತೆಯನ್ನು ಕೂಡ ನೀವು ಆರಿಸಬಹುದು. ಕೆಲವು ಜನಪ್ರಿಯ ವಿನ್ಯಾಸಗಳು ಇಲ್ಲಿವೆ:

ಸಾಂಪ್ರದಾಯಿಕ ಮಣ್ಣಿನ ದೀಪಗಳು: ಜೇಡಿಮಣ್ಣಿನಿಂದ ತಯಾರಿಸಲಾಗುವ ಈ ಮಣ್ಣಿನ ದೀಪಗಳು ಬಹಳ ಸರಳವಾಗಿದ್ದು, ಪರಿಸರ ಸ್ನೇಹಿಯಾಗಿದೆ. ನೈಸರ್ಗಿಕ ಲಕ್ಷಣಗಳಿಂದ ಇದನ್ನು ಅಲಂಕರಿಸಲಾಗುತ್ತದೆ. ದೀಪಾವಳಿ ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅಲಂಕಾರಿಕ ಲೋಹದ ದೀಪಗಳು: ಹಿತ್ತಾಳೆ ಅಥವಾ ತಾಮ್ರದಿಂದ ಮಾಡಲಾಗುವ ಈ ದೀಪಗಳು ಅಲಂಕೃತವಾಗಿರಬಹುದು. ಅಲಂಕಾರಕ್ಕೆ ಸೊಬಗಿನ ಸ್ಪರ್ಶವನ್ನು ಇವು ನೀಡಬಹುದು.

ರಂಗೋಲಿ ದೀಪಗಳು: ರಂಗೋಲಿ ಮಾದರಿಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಲಾದ ಈ ದೀಪಗಳು ವಿವಿಧ ಆಕಾರಗಳು ಮತ್ತು ಬಣ್ಣಗಳಲ್ಲಿ ಸಿಗುತ್ತವೆ. ಬಹಳ ಸಂಕೀರ್ಣವಾದ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.

ಬಹು-ಶ್ರೇಣಿಯ ದೀಪಗಳು: ಈ ವಿಶಿಷ್ಟ ವಿನ್ಯಾಸದ ಬಹು-ಶ್ರೇಣಿಯ ದೀಪಗಳು ಬಹು ಪದರವನ್ನು ಒಳಗೊಂಡಿರುತ್ತದೆ. ಬೆಳಗಿಸಿದಾಗ ಇದು ಅದ್ಘುತವಾಗಿ ಕಾಣುತ್ತದೆ.

ಗ್ಲಾಸ್ ದೀಪಗಳು: ಇವು ವಿಶಿಷ್ಟವಾದ ಹಾಗೂ ಸುಂದರವಾದ ಬಣ್ಣಗಳಲ್ಲಿರುತ್ತವೆ. ನೋಡಲು ಸುಂದರವಾದ ಮಾದರಿಗಳನ್ನು ಒಳಗೊಂಡಿರುವ ಈ ಗ್ಲಾಸ್ ದೀಪಗಳು, ಪ್ರಕಾಶಮಾನವಾದ ಬೆಳಕನ್ನು ಪ್ರತಿಬಿಂಬಿಸಬಹುದು.

ತೇಲುವ ದೀಪಗಳು: ನೀರಿನಲ್ಲಿ ತೇಲುವ ವಿನ್ಯಾಸವನ್ನು ಹೊಂದಿರುವ ಈ ದೀಪಗಳು ಬಹಳ ವಿಶಿಷ್ಟವಾಗಿದೆ. ಹೂವುಗಳಿಂದ ಅಲಂಕರಿಸಿ ಈ ದೀಪಗಳನ್ನು ನೀರಿನಲ್ಲಿ ತೇಲಲು ಬಿಡಬಹುದು. ಮನೆಮುಂದೆ ಸಣ್ಣ ಕಾರಂಜಿ ಏನಾದರೂ ಇದ್ದರೆ ಬಹಳ ಸುಂದರವಾಗಿ ಕಾಣುತ್ತದೆ.

ವಿಭಿನ್ನ ಶೈಲಿಯ ದೀಪಗಳು: ನವಿಲುಗಳು, ಕಮಲದ ಹೂವುಗಳು ಅಥವಾ ಆನೆಗಳಂತಹ ವಿವಿಧ ಲಕ್ಷಣಗಳನ್ನು ಇದು ಹೊಂದಿರಬಹುದು. ದೀಪಗಳ ಅಲಂಕಾರದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಸಂಯೋಜಿಸುತ್ತದೆ.

ಎಲ್ಇಡಿ ದೀಪ: ಹಣತೆಯ ಬಳಕೆಗೆ ಆಧುನಿಕ ಟ್ವಿಸ್ಟ್ ನೀಡಲಾಗಿದ್ದು, ಈ ಎಲ್‌ಇಡಿ ದೀಪಗಳು ಸುರಕ್ಷಿತವಾಗಿರುತ್ತವೆ ಮತ್ತು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ