Davanagere News: ಬಾಯಲ್ಲಿ ನೀರೂರಿಸುವ ದಾವಣಗೆರೆ ಬೆಣ್ಣೆದೋಸೆ ಈಗ ವಿದೇಶದಲ್ಲೂ ಫೇಮಸ್ಸ್; ಬೆಣ್ಣೆದೋಸೆಯ ಹುಟ್ಟಿನ ಆಸಕ್ತಿಕರ ಕಥೆ ಇಲ್ಲಿದೆ
Jun 18, 2023 11:00 AM IST
ದಾವಣಗೆರೆ ಬೆಣ್ಣೆದೋಸೆ
- Davanagere Shantappa Hotel: ದಾವಣಗೆರೆ ಬೆಣ್ಣೆದೋಸೆ ಈಗ ರಾಜ್ಯ, ದೇಶ ಮಾತ್ರವಲ್ಲ, ವಿದೇಶದಲ್ಲೂ ಫೇಮಸ್ಸ್. ಸ್ವಾತಂತ್ರ್ಯಕ್ಕೂ ಮೊದಲು ಹುಟ್ಟಿಕೊಂಡ ಶಾಂತಪ್ಪ ಹೋಟೆಲ್‌ನಲ್ಲಿ ರಾಗಿಹಿಟ್ಟಿನಿಂದ ಬೆಣ್ಣೆದೋಸೆ ತಯಾರಿಯಾಗಿತ್ತು, ಅಲ್ಲಿಂದ ಸಾಗಿ ಬಂದ ಬೆಣ್ಣೆದೋಸೆಯ ಕಥೆಯನ್ನು ನೀವೆ ಓದಿ.
ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆ ಬಹುಶಃ ಈ ಹೆಸರು ಕೇಳದವರು, ಬೆಣ್ಣೆದೋಸೆ ತಿನ್ನದವರು ಕಡಿಮೆ ಅಂತಲೇ ಹೇಳಬಹುದು. ಬೆಣ್ಣೆದೋಸೆ ಯಾರಿಗೆಲ್ಲಾ ಇಷ್ಟವಿಲ್ಲ ಹೇಳಿ..? ನೋ ಚಾನ್ಸ್ ಅಟ್ ಆಲ್.. ಇಷ್ಟವಿಲ್ಲ ಎಂದು ಹೇಳುವ ಯಾರೊಬ್ಬರು ಸಿಗಲಿಕ್ಕಿಲ್ಲ. ಯಾಕೆಂದರೆ ದಾವಣಗೆರೆಗೆ ಬಂದವರು ಬೆಣ್ಣೆದೋಸೆ ಸವಿಯದೆ ಹೋದ ಇತಿಹಾಸವೇ ಇಲ್ಲ.
ಮಧ್ಯಕರ್ನಾಟಕದ ದಾವಣಗೆರೆಗೆ ‘ಬೆಣ್ಣೆನಗರಿ’ ಎಂದು ಹೆಸರು ಬಂದಿದ್ದೇ ಬೆಣ್ಣೆದೋಸೆಯ ಕಾರಣಕ್ಕೆ. ಇಲ್ಲಿನ ಜನರು ಬೆಣ್ಣೆದೋಸೆ ಸವಿಯಲು ತುದಿಗಾಲ ಮೇಲೆ ನಿಂತಿರುತ್ತಾರೆ. ವಾರಾಂತ್ಯದ ದಿನಗಳಲ್ಲಂತೂ ಪರ ಊರಿನ ಜನರಿಂದಲೇ ಬೆಣ್ಣೆದೋಸೆ ಹೋಟೆಲ್‌ಗಳು ತುಂಬಿ ತುಳುಕಾಡುತ್ತಿರುತ್ತವೆ.
ದಾವಣಗೆರೆಯ ಬೆಣ್ಣೆದೋಸೆ ಅದೆಷ್ಟು ಫೇಮಸ್ ಎಂದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ, ಊರುಗಳಲ್ಲೂ ‘ದಾವಣಗೆರೆ ಬೆಣ್ಣೆದೋಸೆ’ ಎಂಬ ಹೆಸರಿನಡಿ ಹೊಟೆಲ್‌ಗಳಿರುತ್ತವೆ. ರಾಜ್ಯದ ಇತರೆ ಜಿಲ್ಲೆಗಳ ಜನರು ದಾವಣಗೆರೆಗೆ ಬಂದು ಬೆಣ್ಣೆದೋಸೆ ತಿನ್ನಬೇಕಾಗುತ್ತದೆ. ಇಲ್ಲವಾದರೆ ಅವರಿಗೆ ಅದರ ಸವಿ ಸವಿಯಲು ಅವರಿಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿನವರು ಹೋಗಿ ಒಂದೊಂದು ಬೆಣ್ಣೆದೋಸೆ ಹೊಟೆಲ್‌ಗಳ ಬ್ರಾಂಚ್‌ಗಳನ್ನು ಅಲ್ಲಲ್ಲಿ ತೆರೆದಿರುವುದನ್ನು ಕಾಣಬಹುದು. ಹಾಗಾದರೆ ಈ ಬೆಣ್ಣೆದೋಸೆ ಹುಟ್ಟಿದ್ದು ಹೇಗೆ, ಏನಿದರ ಇತಿಹಾಸ? ಇಲ್ಲಿದೆ ನೋಡಿ ಬೆಣ್ಣೆದೋಸೆ ಬೆಣ್ಣೆಯಂತಹ ಕಥೆ.
ಬೆಣ್ಣೆದೋಸೆ ಹುಟ್ಟಿದ್ದು ಹೀಗೆ...
ದಾವಣಗೆರೆಯಲ್ಲಿ ಬೆಣ್ಣೆದೋಸೆಗೆ ಬುನಾದಿ ಹಾಕಿದ್ದು ನಗರದ ಗಡಿಯಾರದ ಕಂಬದ ಬಳಿ ಇರುವ ಶಾಂತಪ್ಪ ಹೋಟೆಲ್. ಇದು ಇಲ್ಲಿನ ಬೆಣ್ಣೆದೋಸೆ ಹೊಟೆಲ್‌ಗಳ ತಾಯಿಬೇರು. ಈ ಹೋಟೆಲ್ ಸ್ವಾತಂತ್ರ‍್ಯ ಪೂರ್ವದ 1944ರಲ್ಲಿ ಸ್ಥಾಪನೆಯಾಗಿದ್ದು, ಅಮೃತ ಮಹೋತ್ಸವ ಆಚರಿಸಿಕೊಂಡು ಈಗ ವಜ್ರಮಹೋತ್ಸವದತ್ತಲೂ ಅಡಿಯಿಡುತ್ತಿದೆ.
ದಾವಣಗೆರೆಯ ಎಲ್ಲಾ ಬೆಣ್ಣೆದೋಸೆ ಹೋಟೆಲ್‌ಗಳಿಗಿಂತ ಇಲ್ಲಿ ಹೆಚ್ಚು ಜನರು ಬೆಣ್ಣೆದೋಸೆ ತಿನ್ನಲು ಮುಗಿ ಬಿದ್ದಿರುತ್ತಾರೆ. ಯಾಕೆಂದರೆ 75 ವರ್ಷಗಳ ನಂತರವೂ ಇಲ್ಲಿನ ಶುಚಿ ರುಚಿಯಲ್ಲಿ ಕೊಂಚವೂ ವ್ಯತ್ಯಾಸವಿಲ್ಲ ಎಂಬುದು ಇಲ್ಲಿ ದೋಸೆ ತಿನ್ನುವವರು ಅಭಿಪ್ರಾಯ.
ಶಾಂತಪ್ಪ ಹೋಟೆಲ್ ಇತಿಹಾಸ
1928ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೀಡ್ಕಿ ಗ್ರಾಮದ ಒಂದು ಕುಟುಂಬ ದಾವಣಗೆರೆಗೆ ವಲಸೆ ಬಂದು ಪ್ರಾರಂಭ ಮಾಡಿದ ಹೋಟೆಲ್ ಹೆಸರೇ ʼಶಾಂತಪ್ಪ ಹೋಟೆಲ್ʼ. ಈ ಕುಟುಂಬದ ಯಜಮಾನಿ ಚೆನ್ನಮ್ಮ ಹೋಟೆಲ್‌ನ ವಾರೀಸುದಾರರು. ದಾವಣಗೆರೆಯಲ್ಲಿ ಈಗಿರುವ ವಸಂತ ಚಿತ್ರಮಂದಿರ ಈ ಹಿಂದೆ ಸಾವಳಗಿ ಡ್ರಾಮಾ ಕಂಪನಿಗೆ ಸೇರಿತ್ತು. ಆ ಡ್ರಾಮಾ ಕಂಪನಿಗೆ ಬರುತ್ತಿದ್ದ ಜನರಿಗೆ ಚೆನ್ನಮ್ಮ ಕುಟುಂಬ ಮಿರ್ಚಿ, ಮಂಡಕ್ಕಿ, ನರ್ಗಿಸ್, ಅಂಟಿನ ಉಂಡೆ ಮಾರಿ ಜೀವನ ಕಟ್ಟಿಕೊಂಡಿತ್ತು.
ರಾಗಿಹಿಟ್ಟಲ್ಲಿ ಬೆಣ್ಣೆದೋಸೆ
ಮೊದಲು ಬೆಣ್ಣೆದೋಸೆ ತಯಾರಾಗಿದ್ದು ರಾಗಿಹಿಟ್ಟಲ್ಲಿ..! ಚೆನ್ನಮ್ಮ ಅವರು ರಾಗಿಹಿಟ್ಟಲ್ಲಿ ಬೆಳಗಿನ ಹೊತ್ತಲ್ಲಿ ತುಪ್ಪದ ದೋಸೆಯನ್ನು ಮಾಡಿ ಮಾರುತ್ತಿದ್ದರು. ಕ್ರಮೇಣ ಬದಲಾದದ್ದು ಅಕ್ಕಿಹಿಟ್ಟಲ್ಲಿ ಮಾಡುವ ತುಪ್ಪದದೋಸೆ.
ರಾಗಿ ಹಿಟ್ಟಿನಿಂದ ಶುರುವಾದ ದೋಸೆ ಕಾಲಕ್ರಮೇಣ ಅಕ್ಕಿ, ಮಂಡಕ್ಕಿ, ಉದ್ದಿನಬೇಳೆ ಎಲ್ಲವನ್ನೂ ಬಳಸಿಕೊಂಡು ದೋಸೆ ಮಾಡುವ ಹಂತಕ್ಕೆ ಬಂದು ತಲುಪಿತು. ಬೆಣ್ಣೆಯಿಂದ ಮಾಡಿದ ಆ ದೋಸೆ, ನಂತರದ ದಿನಗಳಲ್ಲಿ ದಾವಣಗೆರೆ ಬೆಣ್ಣೆ ದೋಸೆಯಾಗಿ ಖ್ಯಾತಿ ಪಡೆಯಿತು. ಚೆನ್ನಮ್ಮನ ನಾಲ್ಕು ಜನ ಮಕ್ಕಳಾದ ಬಸವಂತಪ್ಪ, ಶಂಕ್ರಪ್ಪ, ಶಾಂತಪ್ಪ ಮತ್ತು ಮಹಾದೇವಪ್ಪ ಇದರಲ್ಲಿ ಬಸವಂತಪ್ಪ ಶಂಕ್ರಪ್ಪ, ಹಳ್ಳಿಗೆ ಮರಳಿದರು. ಆದರೆ, ಶಾಂತಪ್ಪ ಮತ್ತು ಮಹಾದೇವಪ್ಪ ಮಾತ್ರ ಬೆಣ್ಣೆ ದೋಸೆ ಹೋಟೆಲ್ ಆರಂಭಿಸಿದರು. ಶಾಂತಪ್ಪ ಕಾಯಿಪೇಟೆ ಬಳಿ ಬೆಣ್ಣೆದೋಸೆ ಹೋಟೆಲ್ ಆರಂಭಿಸಿದರು. ಈ ವ್ಯಾಪಾರದಲ್ಲಿ ಹೆಸರು ಕೂಡ ಸಂಪಾದಿಸಿದರು.
ಆರಂಭದಲ್ಲಿ ಬೆಳಗಿನ ಜಾವ ಮಾತ್ರ ಬೆಣ್ಣೆದೋಸೆ ಮಾರಾಟ ಮಾಡುತ್ತಿದ್ದರು ಸಹೋದರರು. ನಂತರದ ದಿನಗಳಲ್ಲಿ ಸ್ವಾದಿಷ್ಟ ಬೆಣ್ಣೆದೋಸೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ದೊಡ್ಡ ಬ್ಯುಸಿನೆಸ್ ಮಾಡಿಕೊಂಡರು. ಹೀಗಾಗಿ ಬೆಳಗಿನ ಜಾವದ ಕಾಲಮಿತಿಗೆ ಸೀಮಿತವಾಗಿದ್ದ ದೋಸೆಯನ್ನು ಬೆಳಿಗ್ಗೆ 11ರವರೆಗೆ ವಿಸ್ತರಿಸಿದರು.
ದಾವಣಗೆರೆಯ ಪ್ರಮುಖ ರಸ್ತೆಗಳಲ್ಲಿ ಎರಡ್ಮೂರು ಬೆಣ್ಣೆದೋಸೆ ಹೋಟೆಲ್‌ಗಳನ್ನು ಕಾಣಬಹುದು.
ಅದರಲ್ಲಿ ಸಾಗರ್ ಬೆಣ್ಣೆದೋಸೆ ಹೋಟೆಲ್, ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೊಟೆಲ್, ರವಿ ಬೆಣ್ಣೆದೋಸೆ ಹೋಟೆಲ್ ಇವೆಲ್ಲಾ ಪ್ರಮುಖವಾದವು.
ಲೇಖನ: ಅದಿತಿ ದಾವಣಗೆರೆ
ವಿಭಾಗ