logo
ಕನ್ನಡ ಸುದ್ದಿ  /  ಜೀವನಶೈಲಿ  /  ಖಂಡಾಂತರ ಮಾಡುವುದರಿಂದ ಕತ್ತೆ ಎಂದಿಗೂ ಕುದುರೆಯಾಗುವುದಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

ಖಂಡಾಂತರ ಮಾಡುವುದರಿಂದ ಕತ್ತೆ ಎಂದಿಗೂ ಕುದುರೆಯಾಗುವುದಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

Reshma HT Kannada

Mar 01, 2024 09:47 PM IST

google News

ರಂಗಸ್ವಾಮಿ ಮೂಕನಹಳ್ಳಿ (ಬಲಚಿತ್ರ)

    • ವಿದೇಶಕ್ಕೆ ಹೋದವರಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲಾಗದೆ ವಾಪಸ್ಸು ಬರುವರ ಸಂಖ್ಯೆ 60 ಪ್ರತಿಶತ. ಉಳಿದ 40ರಲ್ಲಿ ಬದುಕಿನ ಬಂಡಿ ಎಳೆಯಲು ಸಿಕ್ಕ ಕೆಲಸ ಮಾಡಿಕೊಂಡು ಹೇಗೋ ಬದುಕುವರ ಸಂಖ್ಯೆ ಅಸಂಖ್ಯ. ಇಲ್ಲಿನ ಜನರಿಗೆ ನಿಜ ಹೇಳದೆ ಸುಳ್ಳಿನ ಸೌಧದಲ್ಲಿ ಬದುಕುವವರು ಬಹಳ. ವಿದೇಶಕ್ಕೆ ಓದಲು ಹೋಗುವವರ ಕುರಿತ ರಂಗಸ್ವಾಮಿ ಮೂಕನಹಳ್ಳಿ ಬರಹ.
ರಂಗಸ್ವಾಮಿ ಮೂಕನಹಳ್ಳಿ (ಬಲಚಿತ್ರ)
ರಂಗಸ್ವಾಮಿ ಮೂಕನಹಳ್ಳಿ (ಬಲಚಿತ್ರ)

ಇತ್ತೀಚಿನ ದಿನಗಳಲ್ಲಿ ಪೋಷಕರಲ್ಲಿ ತಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಎಂಬ ಬಯಕೆ ಹೆಚ್ಚುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ವಿದೇಶಕ್ಕೆ ಓದಲು ಕಳುಹಿಸುತ್ತಿದ್ದಾರೆ. ವರ್ಷಕ್ಕೆ ಅಂದಾಜು 18 ಸಾವಿರ ಕೋಟಿ ರೂಪಾಯಿ ಹಣ ನಮ್ಮ ದೇಶದಿಂದ ಒಟ್ಟಾರೆ 73 ದೇಶಗಳಿಗೆ ಹರಿದು ಹೋಗುತ್ತಿದೆ, ಅದು ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಓದಲು ಹೋಗುವ ಕಾರಣದಿಂದ. ಈ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಇಲ್ಲಿದೆ. ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಆಳ-ಅಗಲವನ್ನು ಇವರು ಬಿಚ್ಚಿಟ್ಟಿದ್ದು ಹೀಗೆ.

ರಂಗಸ್ವಾಮಿ ಮೂಕನಹಳ್ಳಿ ಬರಹ

ವಿದೇಶಕ್ಕೆ ಮಕ್ಕಳನ್ನು ಓದಲು ಕಳಿಸಬೇಕು ಎನ್ನುವುದು ಪ್ರತಿ ಭಾರತೀಯ ಮಧ್ಯಮವರ್ಗದ ಜನರ ಕನಸು. ಈ ಹಿಂದೆ ಹೆಚ್ಚಿನ ವ್ಯಾಸಂಗಕ್ಕೆ ಅಂದರೆ ಮಾಸ್ಟರ್ಸ್ ಅಥವಾ ಪಿಎಚ್‌ಡಿಗೆ ಈ ರೀತಿ ಹೋಗುತ್ತಿದ್ದರು. ಇತ್ತೀಚೆಗೆ ಪದವಿಗೂ ವಿದೇಶಕ್ಕೆ ಹೋಗುವ ಪರಿಪಾಠ ಹೆಚ್ಚಾಗುತ್ತಿದೆ. ಹೀಗೇಕೆ ಆಗುತ್ತಿದೆ ಎನ್ನುವುದಕ್ಕೆ ಮುಂಚೆ ಒಂದಷ್ಟು ಲೆಕ್ಕಾಚಾರ, ಅಂಕಿ-ಅಂಶ ಹೇಳಿಬಿಡುತ್ತೇನೆ.

2021ರವರೆಗೆ ಎರಡೂವರೆಯಿಂದ ಮೂರು ಲಕ್ಷ ಹುಡುಗರು ಬೇರೆ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದರು. ಅದು ಪದವಿ, ಮಾಸ್ಟರ್ಸ್, ಪಿಎಚ್‌ಡಿ ಯಾವುದೇ ಇರಲಿ ಮತ್ತು ಒಟ್ಟಾರೆ ಯಾವುದೇ ದೇಶಕ್ಕೆ ಹೋಗಿರಲಿ, ಒಟ್ಟಿನಲ್ಲಿ ಭಾರತದಿಂದ ಹೊರ ಹೋದ ವಿದ್ಯಾರ್ಥಿಗಳ ಸಂಖ್ಯೆ ಅಷ್ಟಿತ್ತು. 2022ರಲ್ಲಿ ಅದು 60 ಪ್ರತಿಶತಕ್ಕೂ ಹೆಚ್ಚಾಗಿದೆ ಎನ್ನುತ್ತದೆ ಅಂಕಿ-ಅಂಶ. 2023 ರಲ್ಲಿ ಏಳೂವರೆ ಲಕ್ಷ ವಿದ್ಯಾರ್ಥಿಗಳು ಹೊರ ಹೋಗಿದ್ದಾರೆ. ಈ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವ ಪ್ರಶ್ನೆಯೇ ಇಲ್ಲ. ಈಗ ಲೆಕ್ಕಾಚಾರಕ್ಕೆ ಬರೋಣ.

ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಫೀಸು, ಪುಸ್ತಕ, ಮನೆ, ಊಟ, ಬಟ್ಟೆ, ಓಡಾಟ, ಜೊತೆಗೆ ಭಾರತದಿಂದ ನೋಡಲು ಹೋಗುವ ಅಪ್ಪ ಅಮ್ಮ, ಇತ್ಯಾದಿಗಳನ್ನು ಲೆಕ್ಕ ಹಾಕಿದರೆ ಸುಲಭವಾಗಿ 24 ಲಕ್ಷ ರೂಪಾಯಿ ಬೇಕು. ಗಮನಿಸಿ ಈ ಲೆಕ್ಕಾಚಾರದಲ್ಲಿ ಐಷಾರಾಮಕ್ಕೆ ಜಾಗವಿಲ್ಲ. ಟೈಟ್ ಬಜೆಟ್‌ನಲ್ಲಿ ಸಭ್ಯತೆಯಿಂದ ಬದುಕಲು ಇಷ್ಟು ಬೇಕು. ನೀವು ಪಬ್, ಕ್ಲಬ್ ಎಂದರೆ ಅದರ ಲೆಕ್ಕಾಚಾರ ಬೇರೆಯಾದೀತು. ಈ ಸಂಖ್ಯೆ ದೇಶದಿಂದ ದೇಶಕ್ಕೆ, ಓದುವ ಕೋರ್ಸ್ ಇದರ ಮೇಲೂ ನಿರ್ಧಾರವಾಗುತ್ತದೆ. ಇಲ್ಲಿ ಅವೆರೆಜ್ ತೆಗೆದುಕೊಂಡಿದ್ದೇನೆ. ಈಗ ಲೆಕ್ಕ ಹಾಕಿ 7.5 ಲಕ್ಷವನ್ನು 24 ಲಕ್ಷದಿಂದ ಗುಣಿಸಿ, ಇದು ನಿಮಗೆ ನೀಡುವ ಸಂಖ್ಯೆ 18 ಸಾವಿರ ಕೋಟಿ! ಇದು ಎಷ್ಟು ದೊಡ್ಡ ದುಡ್ಡು ಎಂದು ಅರಿವಾಗಬೇಕಾದರೆ ಜಗತ್ತಿನ ಬಡ ದೇಶಗಳ ಪಟ್ಟಿಯನ್ನು ನೋಡಿ, ಆ ದೇಶದ ಜಿಡಿಪಿ ಕೂಡ ಇಷ್ಟಿರುವುದಿಲ್ಲ. ನಮ್ಮ ದೇಶದಿಂದ ಇಷ್ಟು ಹಣ ಒಟ್ಟಾರೆ 73 ದೇಶಗಳಿಗೆ ಹರಿದು ಹೋಗುತ್ತಿದೆ. ಇದರಲ್ಲಿ ಸಿಂಹಪಾಲು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ ದೇಶಗಳು ಪಡೆದುಕೊಳ್ಳುತ್ತಿವೆ.

ಹೀಗೇಕೆ ಆಗುತ್ತಿದೆ?

ಇಂದಿನ ಕಾಲಘಟ್ಟದಲ್ಲಿ ನಿಮಗೆ ಟೀನೇಜ್ ಮಕ್ಕಳಿದ್ದರೆ ಈಗ ನಾನು ಹೇಳುವುದು ಅರ್ಥವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಅದ್ಯಾವ ಮಟ್ಟದಲ್ಲಿ ಕುಸಿತ ಕಂಡಿದೆ ಎಂದರೆ ಅದನ್ನು ವಿವರಿಸಲು ಪದಗಳು ಸಾಲುವುದಿಲ್ಲ. ಸ್ಟೇಟ್ ಸಿಲಬಸ್ ಕೊಡಿಸಿದರೆ ಮಕ್ಕಳ ಸಾಮಾನ್ಯಜ್ಞಾನ ಕೂಡ ಹೆಚ್ಚುವುದಿಲ್ಲ, ಇನ್ನು ಸಿಬಿಎಸ್‌ಇ ಅದೆಷ್ಟು ಪ್ರಯೋಗಗಳನ್ನು ಮಾಡುತ್ತಿದೆ ಎಂದರೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ಇಲ್ಲಿ ನೋ ಮರ್ಸಿ, ನೀವು ಆನೆಯೋ, ಕುದುರೆಯೋ, ಮಂಗವೋ, ಜಿಂಕೆಯೋ ಕೊನೆಗೆ ಅಮೆಯೋ ಗೊತ್ತಿಲ್ಲ ಒಟ್ಟಿನಲ್ಲಿ 55 ಸಕೆಂಡಿನಲ್ಲಿ 100 ಮೀಟರ್ ಓಡಿದವರಿಗೆ ಮಾತ್ರ ಸೀಟು! ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಹೇಳುತ್ತಾ ಹೋದರೆ ಅದೇ ಒಂದು ಗ್ರಂಥವಾದೀತು. ಇನ್ನು ಶಿಕ್ಷಕರ ಗುಣಮಟ್ಟದ ಬಗ್ಗೆ ಹೇಳುವುದು ಬೇಡ. ಶಾಲೆಗೂ ಫೀಸ್ ಮತ್ತೆ ಟ್ಯೂಷನ್‌ಗೂ ಫೀಸ್. ಇವತ್ತು ಟ್ಯೂಷನ್ ಇಲ್ಲದೆ ಮಕ್ಕಳು ಪಾಸಾಗಲು ಸಾಧ್ಯವಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಪಾಸಾಗುವ ಮಕ್ಕಳಿಗೆ ಮಾತ್ರ ಟ್ಯೂಷನ್ ಎನ್ನುವುದು ಭ್ರಮೆ. ಇವತ್ತು ಟ್ಯೂಷನ್ ಎಲ್ಲರಿಗೂ ಬೇಕು ಎನ್ನುವಂತಾಗಿದೆ.

ದೇಶದಾದ್ಯಂತ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರದಿದ್ದರೆ ಮಕ್ಕಳ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗುತ್ತದೆ. ಒಂದು ಶಾಲೆ ಇನ್ನೊಂದು ಶಾಲೆಯಲ್ಲಿ ಬಳಸುವ ಪುಸ್ತಕ, ಮೆಟೀರಿಯಲ್ ಬಳಸುತ್ತಿಲ್ಲ. ಪೂರ್ಣ ಶಿಕ್ಷಣ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಎಲ್ಲರಿಗೂ ದುಡ್ಡು ಮಾಡುವ ಆತುರ. ಇನ್ನಷ್ಟು, ಮತ್ತಷ್ಟು ದುಡ್ಡು ಮಾಡಬಹುದು, ವ್ಯವಸ್ಥೆ ಸರಿಮಾಡಿಕೊಳ್ಳಿ ಎಂದರೂ ಕಿವುಡು ವ್ಯವಸ್ಥೆಯಿದು.

ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಕನಿಷ್ಠ 18 ಸಾವಿರ ಕೋಟಿ ರೂಪಾಯಿ ಜಿಡಿಪಿ ಚಿಟಿಕೆಯಲ್ಲಿ ಏರಿಸಿಕೊಳ್ಳಬಹುದು. ವಿದ್ಯೆ ಎನ್ನುವುದು ಜ್ಞಾನಕ್ಕಾಗಿ, ಕಲಿಕೆಗಾಗಿ ಎನ್ನುವುದು ಮಂತ್ರವಾಗಲಿ, ದರಿದ್ರ ಓಟಕ್ಕೆ ಬಿದ್ದು ಮಕ್ಕಳ ಜೀವಕ್ಕೆ ಘಾತವಾಗದಿರಲಿ. ಸದ್ಯದ ಮಟ್ಟಿಗೆ ವಿದೇಶಕ್ಕೆ ಓಡುವುದೊಂದೇ ಭಾರತೀಯ ಪೋಷಕರ ಮುಂದಿರುವ ದಾರಿ, ಶುಭವಾಗಲಿ.

ಅಂದ ಹಾಗೆ ಹೀಗೆ ವಿದೇಶಕ್ಕೆ ಹೋದವರೆಲ್ಲಾ ಉತ್ತಮ ಬದುಕು ಕಟ್ಟಿಕೊಳ್ಳಲಾಗದೆ ವಾಪಸ್ಸು ಬರುವರ ಸಂಖ್ಯೆ 60 ಪ್ರತಿಶತ. ಉಳಿದ 40 ರಲ್ಲಿ ಬದುಕಿನ ಬಂಡಿ ಎಳೆಯಲು ಸಿಕ್ಕ ಕೆಲಸ ಮಾಡಿಕೊಂಡು ಹೇಗೋ ಬದುಕುವರ ಸಂಖ್ಯೆ ಅಸಂಖ್ಯ. ಇಲ್ಲಿನ ಜನರಿಗೆ ನಿಜ ಹೇಳದೆ ಸುಳ್ಳಿನ ಸೌಧದಲ್ಲಿ ಬದುಕುವವರು ಬಹಳ. ಎಲ್ಲಿದ್ದೀರಿ ಎನ್ನುವುದು ಮುಖ್ಯವಲ್ಲ ಹೇಗಿದ್ದೀರಿ ಎನ್ನುವುದು ಮುಖ್ಯ. ಖಂಡಾಂತರ ಮಾಡುವುದರಿಂದ ಕತ್ತೆ ಎಂದಿಗೂ ಕುದುರೆಯಾಗುವುದಿಲ್ಲ .

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ