logo
ಕನ್ನಡ ಸುದ್ದಿ  /  ಜೀವನಶೈಲಿ  /  Teachers Day Speach: ಸನ್ಮಾನ್ಯ ಅಧ್ಯಕ್ಷರೇ, ಗೌರವಾನ್ವಿತ ಗುರುಗಳೇ.... ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶಿಕ್ಷಕರ ದಿನದ ಮಾದರಿ ಕನ್ನಡ ಭಾಷಣ

Teachers Day Speach: ಸನ್ಮಾನ್ಯ ಅಧ್ಯಕ್ಷರೇ, ಗೌರವಾನ್ವಿತ ಗುರುಗಳೇ.... ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶಿಕ್ಷಕರ ದಿನದ ಮಾದರಿ ಕನ್ನಡ ಭಾಷಣ

Praveen Chandra B HT Kannada

Sep 04, 2024 03:10 PM IST

google News

ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶಿಕ್ಷಕರ ದಿನದ ಮಾದರಿ ಕನ್ನಡ ಭಾಷಣ

    • Teachers Day Speach in Kannada: ಸೆಪ್ಟೆಂಬರ್‌ 5 ಶಿಕ್ಷಕರ ದಿನ. ಶಾಲಾ ವಿದ್ಯಾರ್ಥಿಗಳು ಕನ್ನಡದಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಭಾಷಣ ಮಾಡಲು ಉದ್ದೇಶಿಸಿರಬಹುದು. ಶಿಕ್ಷಕರ ದಿನದ ಭಾಷಣದ ಕನ್ನಡ ಮಾದರಿ ಹುಡುಕುವವರಿಗೆ ಇಲ್ಲಿ ಶಿಕ್ಷಕರ ದಿನದ ಭಾಷಣ ನೀಡಲಾಗಿದೆ.
ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶಿಕ್ಷಕರ ದಿನದ ಮಾದರಿ ಕನ್ನಡ ಭಾಷಣ
ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶಿಕ್ಷಕರ ದಿನದ ಮಾದರಿ ಕನ್ನಡ ಭಾಷಣ

ಸೆಪ್ಟೆಂಬರ್‌ 5ರಂದು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಹೇಳಿದ್ದರು. ಅವರ ಜನ್ಮದಿನವನ್ನು ಈಗಲೂ ಅತ್ಯಂತ ಸಡಗರದಿಂದ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

ಶಿಕ್ಷಕರ ದಿನದ ಭಾಷಣ ಮಾಡುವಾಗ ಈ 5 ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ

  1. ವಿದ್ಯಾರ್ಥಿಗಳೇ ಕನ್ನಡದಲ್ಲಿ ಶಿಕ್ಷಕರ ಭಾಷಣ ಮಾಡುವುದು ತುಂಬಾ ಖುಷಿ ಕೊಡುವ ಸಂಗತಿ. ಸಾಧ್ಯವಿರುವಷ್ಟು ನೀವು ಸ್ವತಃ ಭಾಷಣ ಸಿದ್ಧಪಡಿಸಲು ಪ್ರಯತ್ನಿಸಿ. ನಿಮ್ಮದೇ ಶೈಲಿ ಇರಲಿ. ಇಂದೇ ನೀವು ಕನ್ನಡಿ ಮುಂದೆ ನಿಂತು ಒಮ್ಮೆ ಭಾಷಣ ಮಾಡಿ ನೋಡಿ. ಮನೆಯಲ್ಲಿ ಹೆತ್ತವರನ್ನು, ಸಹೋದರ ಸಹೋದರಿಯರನ್ನು ಎದುರು ಕುಳಿತುಕೊಳ್ಳಲು ತಿಳಿಸಿ ಅವರ ಮುಂದೆ ಭಾಷಣ ಮಾಡಿ. ಇದು ನಾಳೆ ನಿಮಗೆ ಶಾಲೆಯಲ್ಲಿ ಭಾಷಣ ಮಾಡುವಾಗ ಧೈರ್ಯ ತರುತ್ತದೆ.
  2. ನೆನಪಿಡಿ, ಭಾಷಣ ಮಾಡುವಾಗ ಪಾಠ ಓದುವಂತೆ ವೇಗವಾಗಿ ಹೇಳುತ್ತ ಹೋಗಬೇಡಿ. ಎಲ್ಲರಿಗೂ ನೀವು ಹೇಳುವ ವಿಷಯ ಮನದಟ್ಟಾಗುವಂತೆ ಭಾಷಣ ಮಾಡಿ. ಎಲ್ಲೆಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತ, ಎಲ್ಲಿ ಧ್ವನಿಯಲ್ಲಿ ಏರಿಳಿತ ಮಾಡಬೇಕು ಎಂದು ಅರಿತುಕೊಂಡು ಭಾಷಣ ಮಾಡಿ.
  3. ನಿಮ್ಮ ಭಾಷಣದಲ್ಲಿ "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.. " ಎಂಬ ಮಂತ್ರವಿದ್ದರೆ ಭಾಷಣದ ತೂಕ ಹೆಚ್ಚುತ್ತದೆ. ಭಾಷಣದ ಆರಂಭದಲ್ಲಿಯೇ ಇದನ್ನು ಹೇಳಲು ಮರೆಯಬೇಡಿ.
  4. ಭಾಷಣ ಮಾಡುವಾಗ ಒಂದಿಷ್ಟು ಹಾವಭಾವ, ಆಂಗೀಕ ಅಭಿನಯಗಳ ಕುರಿತೂ ಗಮನ ನೀಡಿ. ಹಾಗಂತ, ರಾಜಕಾರಣಿಗಳ ರೀತಿ ತೋಳು ಏರಿಸಿ ಭಾಷಣ ಮಾಡಬೇಡಿ.
  5. ನಿಮಗೆ ಅಂಕ ನೀಡುವವರಿಗೆ ಅನುಕೂಲವಾಗುವಂತೆ, ನಗುಮುಖದಿಂದ, ಹಿತವಾದ ಭಾವದಲ್ಲಿ ಭಾಷಣ ಮಾಡಿ. ಬಿಗಿಮುಖದಿಂದ, ಭಯದಿಂದ ಭಾಷಣ ಮಾಡಬೇಡಿ. ಈ ರೀತಿ ನೀವು ಧೈರ್ಯವಾಗಿ ಭಾಷಣ ಮಾಡಲು ಕಲಿತರೆ ಮುಂದೆ ಉಪಯೋಗಕ್ಕೆ ಬರುತ್ತದೆ. ಇದರಿಂದ ನಿಮ್ಮ ವ್ಯಕ್ತಿತ್ವವೂ ಸುಧಾರಿಸುತ್ತದೆ.

ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಓದುಗರಿಗಾಗಿ ಇಲ್ಲಿ ಶಿಕ್ಷಕರ ದಿನದ ಭಾಷಣದ ಮಾದರಿಯೊಂದನ್ನು ನೀಡಿದೆ. ಇದನ್ನು ನಿಮಗೆ ಬೇಕಾದಂತೆ ಬದಲಾಯಿಸಿಕೊಂಡು ಭಾಷಣ ಮಾಡಬಹುದು.

"ಸನ್ಮಾನ್ಯ ಸಭಾಧ್ಯಕ್ಷರೇ, ವೇದಿಕೆಯ ಮೇಲಿರುವ ಗಣ್ಯರೇ, ನನ್ನ ಪ್ರೀತಿಯ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ನಮಸ್ಕರಿಸುತ್ತ ನನ್ನ ಇಂದಿನ ಶಿಕ್ಷಕರ ದಿನದ ಭಾಷಣವನ್ನು ನಿಮ್ಮ ಮುಂದಿಡುತ್ತೇನೆ. (ಮಾತನಾಡುವಾಗ ವೇದಿಕೆಯಲ್ಲಿರುವ ಗಣ್ಯರ ಮುಖ ನೋಡಿ ನಮಸ್ಕರಿಸಿ).

ಮೊದಲಾಕ್ಷರ ಕಲಿಸಿದ ಗುರುಗಳಿಂದ ಹಿಡಿದು ಶಾಲೆಯಲ್ಲಿ ನಮ್ಮನ್ನು ತಿದ್ದಿತೀಡಿ ಬೆಳೆಸುವ ಶಿಕ್ಷಕರಿಗೆ ನನ್ನ ನಮನಗಳು. ನಿಮ್ಮ ಕೊಡುಗೆ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇಂದು ಶಿಕ್ಷಕರ ದಿನ. ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಜನ್ಮದಿನ. ನನ್ನ ಹೆಸರಿನಲ್ಲಿ ಹುಟ್ಟುಹಬ್ಬ ಮಾಡಬೇಡಿ, ನನ್ನ ಹುಟ್ಟುಹಬ್ಬವನ್ನು ಎಲ್ಲರೂ ಶಿಕ್ಷಕರ ದಿನವಾಗಿ ಆಚರಿಸಿ ಎಂದು ಕರೆ ನೀಡಿದವರು ಸರ್ವಪಳ್ಳಿ ರಾಧಾಕೃಷ್ಣನ್‌. ಅಂದಿನಿಂದ ಇವರ ಜನ್ಮದಿನವಾದ ಸೆಪ್ಟೆಂಬರ್‌ 5ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

ಹಾಗಂತ ಇದು ಭಾರತದಲ್ಲಿ ಮಾತ್ರ ಇರುವ ಶಿಕ್ಷಕರ ದಿನವಲ್ಲ. ಕೆಲವೊಂದು ದೇಶಗಳು ಬೇರೆ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿರಬಹುದು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿವರ್ಷ ಅಕ್ಟೋಬರ್‌ 5ರಂದು ವಿಶ್ವಶಿಕ್ಷಕರ ದಿನವನ್ನು ಆಚರಿಸಬೇಕೆಂದು ಯುನೆಸ್ಕೊ ಕರೆ ನೀಡಿದೆ. 1966 ಅಕ್ಟೋಬರ್‌ 5ರಂದು ಯುನೆಸ್ಕೊ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ಅಕ್ಟೋಬರ್‌ 5ರಿಂದ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಇದು ನಮಗೆ ಹೆಮ್ಮೆ ತರುವ ಸಂಗತಿ.

ಸ್ನೇಹಿತರೇ, ಈ ಸಂದರ್ಭದಲ್ಲಿ ನಾವು ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ರಾಧಾಕೃಷ್ಣನ್‌ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್‌ 5, 1888 ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್‌ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ , ತಾಯಿ ಸೀತಮ್ಮ ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಅಂದರೆ, ನಮ್ಮೆಲ್ಲರ ರೀತಿಯಲ್ಲಿ ಕಷ್ಟದಲ್ಲಿಯೇ ಜೀವನ ಆರಂಭಿಸಿದ್ದರು. ಸ್ಕಾಲರ್‌ಶಿಪ್‌ ಹಣದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷ ಣವನ್ನು ಮುಗಿಸಿದ ರಾಧಾಕೃಷ್ಣನ್‌ ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್‌ ಕಾಲೇಜ್‌ನಲ್ಲಿ ತತ್ವಜ್ಞಾನ ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿ ಮಾಡಿದರು. ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್‌ ಮಂಡಿಸಿದ ಪ್ರಬಂಧ ದಿ ಎಥಿಕ್ಸ್‌ ಆಫ್‌ ವೇದಾಂತ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು.

ಗೆಳೆಯರೇ, ರಾಧಾಕೃಷ್ಣನ್‌ ಅವರಿಗೆ ಮೈಸೂರಿನ ನಂಟಿದೆ. ನಮ್ಮ ಕರ್ನಾಟಕದಲ್ಲಿ ಅವರು ಮೊದಲ ಬಾರಿಗೆ ಉಪನ್ಯಾಸಕರಾಗಿ ಆಯ್ಕೆಯಾಗಿದ್ದರು ಎನ್ನುವುದು ಖುಷಿಯ ಸಂಗತಿ.

1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದಿ ಫಿಲಾಸಫಿ ಆಫ್‌ ರವೀಂದ್ರನಾಥ್‌ ಠ್ಯಾಗೋರ್‌ ಎಂಬ ಮೊದಲ ಪುಸ್ತಕ ಬರೆದರು.ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು ರಾಧಾಕ್ರಿಶ್ಣಯ್ಯ ಎಂದು ಹಾಕುತಿದ್ದರು. ಸ್ನೇಹಿತರೇ, ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.

1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್‌ , ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷ ಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. 1939 ರಲ್ಲಿ ಬನಾರಸ್‌ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ , 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷ ಣ ಆಯೋಗದ ಮುಖ್ಯಸ್ಥರಾಗಿ, 1949 ರಲ್ಲಿ ಸೋವಿಯತ್‌ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್‌ , ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

1952 ರಲ್ಲಿ ಭಾರತದ ಶಿಕ್ಷ ಕನೊಬ್ಬ ಮೊತ್ತಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ರಾಧಾಕೃಷ್ಣನ್‌ , ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಗಮನ ಸೆಳೆಯುತ್ತಿದ್ದರು. ಇವರಿಗೆ ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.

ನನ್ನ ಗೆಳೆಯರೇ, ಗೆಳತಿಯರೇ, ನಾವು ಎಂದಿಗೂ ಶಿಕ್ಷಕರಿಗೆ ಅಗೌರವ ನೀಡಬಾರದು. ಅವರು ನಮ್ಮ ಬದುಕಿಗೆ ಹೊಸ ಅರ್ಥ ಕಲ್ಪಿಸುವ ದೇವರು. ನಾವು ಇಲ್ಲಿ ಕಲಿತು ಮುಂದೊಂದು ದಿನ ಪ್ರಮುಖ ವ್ಯಕ್ತಿಗಳಾಗಿ, ಪ್ರಮುಖ ಹುದ್ದೆಗಳನ್ನು ಪಡೆಯಬಹುದು. ಇಸ್ರೋದಲ್ಲಿ ಉದ್ಯೋಗ ಪಡೆದು ಚಂದ್ರಯಾನ, ಸೂರ್ಯಯಾನ ಕೈಗೊಳ್ಳಬಹುದು. ಆದರೆ, ನಮ್ಮ ಅಂತಹ ಯಶಸ್ಸಿನ ಹಿಂದೆ ಇರುವ ಶಿಕ್ಷಕರು ಇಲ್ಲೇ ಇರುತ್ತಾರೆ. ನಮ್ಮಂತಹ ಪ್ರತಿಭೆಗಳನ್ನು ಹುಟ್ಟುಹಾಕುತ್ತ ತಮ್ಮ ಬದುಕನ್ನು ವಿದ್ಯಾರ್ಥಿಗಳ ಯಶಸ್ಸಿಗಾಗಿ ಮುಡಿಪಾಗಿಡುತ್ತಾರೆ. ಹೀಗಾಗಿ ಎಲ್ಲರೂ ಶಿಕ್ಷಕರನ್ನು ಗೌರವದಿಂದ, ಭಕ್ತಿಯಿಂದ ಕಾಣಬೇಕು ಎನ್ನುವುದು ನನ್ನ ಅಭಿಪ್ರಾಯ.

ಈ ಶಿಕ್ಷಕರ ದಿನದಂದು ನಮ್ಮ ಯಶಸ್ಸಿಗೆ ಪ್ರೋತ್ಸಾಹಿಸುವ ಗುರುಗಳಿಗೆ ನಮಸ್ಕರಿಸುತ್ತ ನನ್ನ ಈ ಪುಟ್ಟ ಭಾಷಣ ಮುಗಿಸುತ್ತೇನೆ. ಎಲ್ಲರಿಗೂ ಧನ್ಯವಾದ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ