ಫೋಟೋದಲ್ಲಿ ಚೆನ್ನಾಗಿ ಕಾಣಿಸಬೇಕಂದ್ರೆ ಈ ಟಿಪ್ಸ್ ಫಾಲೊ ಮಾಡಿ; ಸಿಂಪಲ್ ಹ್ಯಾಕ್ಸ್‌ನಿಂದ ಪೋಸ್ ಕೊಡೋ ಯೋಚನೆ ಇರಲ್ಲ
Oct 23, 2024 09:19 PM IST
ಫೋಟೋದಲ್ಲಿ ಚೆನ್ನಾಗಿ ಕಾಣಿಸಬೇಕಾಂದ್ರೆ ಈ ಟಿಪ್ಸ್ ಫಾಲೊ ಮಾಡಿ; ಪೋಸ್ ಕೊಡೋ ಯೋಚನೆ ಇರಲ್ಲ
- Photography Tips: ಫೋಟೋದಲ್ಲಿ ಚೆನ್ನಾಗಿ ಕಾಣಿಸಬೇಕೆಂಬುದು ಎಲ್ಲರ ಆಸೆ. ಆದರೆ ಚೆನ್ನಾಗಿ ಪೋಸ್ ಕೊಡೋದು ಹೇಗೆ ಎಂಬ ಐಡಿಯಾ ಎಲ್ಲರಿಗೂ ಇರುವುದಿಲ್ಲ. ಅಲ್ಲದೆ ಸ್ಮೈಲ್ ಕೊಡೋದು ಹೇಗೆ ಎಂಬ ಗೊಂದಲ ಇರುತ್ತದೆ. ನಿಮ್ಮ ಗೊಂದಲಗಳಿಗೆ ಈ ಸುದ್ದಿಯಲ್ಲಿ ಉತ್ತರವಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೆಲವೊಬ್ಬರು ರಾಶಿ ರಾಶಿ ಫೋಟೋ ಹಾಕ್ತಾರೆ. ಅವರ ಮುಖ ಹಾಗೂ ಫೋಟೊಗೆ ಕೊಡುವ ಪೋಸ್ ಕೂಡಾ ಫೋಟೊಜೆನಿಕ್ ಆಗಿರುತ್ತವೆ. ಫೋಟೋದಲ್ಲಿ ನೋಡಲು ಸುಂದರವಾಗಿ ಕಾಣುತ್ತಾರೆ. ಹಾಗಂತಾ, ಫೋಟೋಜೆನಿಕ್ ಮುಖ ಇರುವವರು ಮಾತ್ರವೇ ಚೆನ್ನಾಗಿ ಕಾಣಿಸಬೇಕೆಂದೇನೂ ಇಲ್ಲ. ಯಾರೇ ಆದರೂ ಫೋಟೋದಲ್ಲಿ ಚೆನ್ನಾಗಿ ಕಾಣಿಸಬಹುದು. ಆದರೆ ಫೋಟೊ ತೆಗೆಯುವಾಗ ಒಂದಿಷ್ಟು ಟಿಪ್ಸ್ ಪಾಲಿಸಿದರೆ ಸಾಕು. ನಿಜಜೀವನದಲ್ಲಿ ಹೇಗಿರುತ್ತೀರೋ ಅದಕ್ಕೆ ತಕ್ಕನಾಗಿ ಯಾರು ಬೇಕಾದರೂ ಫೋಟೋಗಳಲ್ಲಿ ಚೆನ್ನಾಗಿ ಕಾಣಿಸಬಹುದು. ಅದಕ್ಕಿಂತಲೂ ಚೆನ್ನಾಗಿ ಫೋಟೊದಲ್ಲಿ ಬರಬೇಕೆಂದರೆ ಈ ಸರಳ ಟಿಪ್ಸ್ ಅನುಸರಿಸಿ.
ಮೊದಲಿಗೆ, ಇಲ್ಲಿಯವರೆಗೆ ಕ್ಲಿಕ್ ಮಾಡಿದ ನಿಮ್ಮ ಎಲ್ಲಾ ಫೋಟೋಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಅದರಲ್ಲಿ ನಿಮಗೆ ಇಷ್ಟವಾಗುವ ಕೆಲವೊಂದು ಫೋಟೋಗಳಾದರೂ ಇರಬಹುದು. ನೀವು ಯಾವ ಫೋಟೋದಲ್ಲಿ ಚೆನ್ನಾಗಿ ಕಾಣುತ್ತೀರಿ, ಯಾವ ಆಂಗಲ್‌ನಲ್ಲಿ ನಿಂತು ಅಥವಾ ಕುಳಿದ ಫೋಟೋದಲ್ಲಿ ಚೆನ್ನಾಗಿ ಬಂದಿದ್ದೀರಿ, ಯಾವ ರೀತಿಯ ಪೋಸ್ ಒಳ್ಳೆಯ ಲುಕ್ ಕೊಟ್ಟಿದೆ, ಯಾವ ಬಟ್ಟೆಗಳು ನಿಮಗೆ ಚೆನ್ನಾಗಿ ಕಾಣುತ್ತವೆ, ಹೇಗೆ ಸ್ಮೈಲ್ ಕೊಟ್ಟರೆ ನಿಮ್ಮ ಮುಖಕ್ಕೆ ಹೊಂದಿಕೆಯಾಗುತ್ತದೆ... ಹೀಗೆ ಎಲ್ಲವನ್ನೂ ಗಮನಿಸಿ. ಫೋಟೋ ಚೆನ್ನಾಗಿ ಕಾಣಿಸಬೇಕೆಂದರೆ, ನಿಮ್ಮನ್ನು ನೀವು ಹೇಗೆ ಇಷ್ಟಪಡುತ್ತೀರಿ ಎಂಬುದು ಕೂಡಾ ಮುಖ್ಯ. ಈ ಎಲ್ಲಾ ಅಂಶಗಳನ್ನು ನೀವು ಗಮನಿಸಿದರೆ ನಿಮ್ಮ ಫೋಟೋಗಳನ್ನು ಹೇಗೆ ಕ್ಲಿಕ್ ಮಾಡಬಹುದು ಎಂಬುದು ನಿಮಗೆ ಸ್ಪಷ್ಟವಾಗುತ್ತದೆ.
ಫೋಟೊ ಚೆನ್ನಾಗಿ ಬರಬೇಕೆಂದರೆ, ಅದರಲ್ಲಿ ನೀವು ಖುಷಿಯಾಗಿರುವುದು ಕಾಣಬೇಕು. ಅದಕ್ಕೆ ನಿಮ್ಮ ನಗು ಮುಖ್ಯ. ಹಾಗಿದ್ದರೆ ಫೋಟೋದಲ್ಲಿ ಹೇಗೆ ನಗಬೇಕು? ಸ್ಮೈಲ್ ಹೇಗಿರಬೇಕು ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಿ.
ಫೋಟೋದಲ್ಲಿ ನಿಮ್ಮ ನಗು ಸಹಜವಾಗಿರಬೇಕು. ಒತ್ತಾಯದಿಂದ ಹೆಚ್ಚುವರಿ ನಗುವನ್ನು ಮುಖದ ಮೇಲೆ ಹೇರುವುದು ಬೇಡ. ಫೋಟೋಶೂಟ್ ಮಾಡುವಾಗ, ಸಹಜವಾದ ನಗುವಿಗಾಗಿ, ನಿಮಗೆ ಸಂತೋಷವನ್ನುಂಟುಮಾಡುವ ಯಾವುದನ್ನಾದರೂ ಯೋಚಿಸಿ. ನಿಮ್ಮ ಮುಂದೆ ಫೋಟೋಗ್ರಾಫರ್ ನಿಂತಿರುವುದನ್ನು ಮರೆತುಬಿಡಿ.
ಮೂಡ್ ಚೆನ್ನಾಗಿರಲಿ
ಫೋಟೋಶೂಟ್ ಮಾಡಿಸುವಾಗ ನಿಮ್ಮ ಮೂಡ್ ಚೆನ್ನಾಗಿರಬೇಕು. ಯಾವುದೋ ಬೇಸರ ಅಥವಾ ಒತ್ತಡದಲ್ಲಿದ್ದರೆ, ಆ ದಿನ ಫೋಟೋಶೂಟ್ ಮಾಡಿಸುವುದು ಬೇಡ. ನೀವು ಖುಷಿಯಲ್ಲಿದ್ದ ಸಮಯದಲ್ಲಿ ಸಹಜವಾಗಿ ಖುಷಿಯ ಫೋಟೋ ಬರುತ್ತದೆ.
ಕನ್ನಡಿಯ ಮುಂದೆ ಪೋಸ್ ಕೊಡಿ
ಕನ್ನಡಿಯ ಮುಂದೆ ನಿಂತು ನಿಮ್ಮ ಪೋಸ್ ಹಾಗೂ ಸ್ಮೈಲ್ ಹೇಗಿರಬೇಕು ಎಂಬುದನ್ನು ಮುಂಚಿತವಾಗಿ ಅಭ್ಯಾಸ ಮಾಡುವುದು ಒಳ್ಳೆಯದು. ಕನ್ನಡಿ ನಿಮ್ಮ ಪ್ರತಿಬಿಂಬವಾಗಿರುವುದರಿಂದ, ನಿಮಗೆ ಬೇಕಾದಂತೆ ಪೋಸ್ ಕೊಟ್ಟು ನೋಡಲು ಅವಕಾಶ ನೀಡುತ್ತದೆ. ಫೋಟೋದಲ್ಲಿ ನಗುವುದು ಹೇಗೆ ಎಂದು ನಿಮಗೆ ತಿಳಿಯುತ್ತದೆ. ತುಟಿಗಳನ್ನು ಹೆಚ್ಚು ಅಗಲವಾಗಿ ತೆರೆಯದೆ ನಕ್ಕರೆ ಸುಂದರವಾಗಿ ಕಾಣುತ್ತದೆ.
ಮುಖಕ್ಕೆ ಹೊಂದಿಕೆಯಾಗುವಂತೆ ನಗಿ
ಕೆಲವರು ಹಲ್ಲುಗಳು ಕಾಣುವಂತೆ ನಗಲು ಇಷ್ಟಪಟ್ಟರೆ, ಇನ್ನೂ ಕೆಲವರು ತುಟಿಯನ್ನು ಮುಚ್ಚಿಕೊಂಡು ಮುಗುಳ್ನಗಲು ಇಷ್ಟಪಡುತ್ತಾರೆ. ನಿಮಗೆ ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲವಿದ್ದರೆ, ಕನ್ನಡಿಯ ಮುಂದೆ ಪ್ರಯತ್ನಿಸಿ ನೋಡಿ. ನಿಮ್ಮದೇ ಹಳೆಯ ಫೋಟೋಗಳನ್ನು ಕೂಡ ಹೋಲಿಕೆ ಮಾಡಿ ನೋಡಬಹುದು.
ಲಿಪ್‌ಸ್ಟಿಕ್ ಹಚ್ಚುವುದು ನಿಮ್ಮ ಫೋಟೋ ಮೇಲೆ ಪರಿಣಾಮಕಾರಿಯಾಗುತ್ತದೆ. ಡಾರ್ಕ್ ಲಿಪ್‌ಸ್ಟಿಕ್ ಹಚ್ಚುವುದರಿಂದ ನಿಮ್ಮ ತುಟಿಗಳು ಚಿಕ್ಕದಾಗಿ ಕಾಣುತ್ತವೆ. ಗಾಢವಾದ ಬಣ್ಣಗಳು ನಿಮ್ಮ ನಗುವಿಗೆ ಹೆಚ್ಚುವರು ಸೌಂದರ್ಯವನ್ನು ಸೇರಿಸುತ್ತದೆ.
ಫೋಟೋಗೆ ಹೇಗೆ ಪೋಸ್ ಕೊಡಬೇಕು?
ಕ್ಯಾಮೆರಾ ಕಡೆಗೆ ನೇರವಾಗಿ ನೋಡುವ ಬದಲಿಗೆ, 45 ಡಿಗ್ರಿ ಕೋನದಲ್ಲಿ ನಿಮ್ಮ ಭುಜಗಳನ್ನು ಸ್ವಲ್ಪ ಬದಿಗೆ ತಿರುಗಿಸಿ ಪೋಸ್ ಕೊಡಿ. ನೀವೇನಾದರೂ ದಪ್ಪಗಿರುವ ಭಾವನೆ ಇದ್ದರೆ, ಈ ಪೋಸ್ ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ. ಎಲ್ಲಾ ಫೋಟೋಗಳಿಗೂ ಪೋಸ್ ಕೊಟ್ಟಂತೆ ನಿಲ್ಲುವ ಬದಲಿಗೆ, ಕ್ಯಾಂಡಿಡ್ ಆಗಿ ಬರಲಿ.
ಫೋಟೋ ತೆಗೆಯುವಾಗ ಕೈಗಳಲ್ಲಿ ಏನು ಹಿಡಿಯಬೇಕು ಅಥವಾ ಹೇಗೆ ಆಕ್ಷನ್ ಮಾಡಬೇಕು ಎನ್ನುವ ಗೊಂದಲ ಇದ್ದರೆ, ಅದಕ್ಕೂ ಐಡಿಯಾಗಳಿವೆ. ಕೈಗಳಿಂದ ಕೂದಲನ್ನು ಸರಿಪಡಿಸವಂತೆ ಮಾಡುವುದು, ಮನೆಯಲ್ಲಿದ್ದಾಗ ಕಾಫಿ ಕಪ್ ಹಿಡಿದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಹೋಗಿದ್ದಾಗ ಕೈಯಲ್ಲಿ ಹ್ಯಾಂಡ್‌ಬ್ಯಾಗ್ ಅಥವಾ ಸರಳವಾಗಿ ಮೊಬೈಲ್ ಫೋನ್ ಹಿಡಿಯಬಹುದು.
ಫೋಟೋ ಚೆನ್ನಾಗಿ ಕಾಣಲು ಹೇರ್ ಸ್ಟೈಲ್ ಕೂಡ ಮುಖ್ಯ. ಉದ್ದನೆಯ ಕೂದಲು ನಿಮ್ಮದಾಗಿದ್ದರೆ, ಅದನ್ನು ಹೆಣೆದು ಅಥವಾ ಸಂಪೂರ್ಣವಾಗಿ ಫ್ರೀಹೇರ್ ಮಾಡಿ ಪೋಸ್ ಕೊಟ್ಟು ನೋಡಿ. ಹಿಂದಕ್ಕೆ ಎಳೆದು ಬಿಟ್ಟರೂ ಚೆನ್ನಾಗಿ ಕಾಣುತ್ತದೆ. ಶಾರ್ಟ್ ಹೇರ್ ಆಗಿದ್ದರೆ ಅದನ್ನೂ ಫ್ರೀಯಾಗಿ ಬಿಟ್ಟರೆ ಆಕರ್ಷಕವಾಗಿರುತ್ತದೆ.