Fenugreek leaves recipes: ರುಚಿಕರವಾಗಿ ಮೆಂತ್ಯ ಸೊಪ್ಪಿನ ಕಡುಬು ಮಾಡುವುದು ಹೇಗೆ? ಇಲ್ಲಿದೆ ರುಚಿಕರ ಕಡುಬು ರೆಸಿಪಿ
Oct 23, 2022 07:00 AM IST
Fenugreek leaves recipes: ರುಚಿಕರವಾಗಿ ಮೆಂತ್ಯ ಸೊಪ್ಪಿನ ಕಡುಬು ಮಾಡುವುದು ಹೇಗೆ?
- Fenugreek leaves recipes:ಮೆಂತ್ಯ ಸೊಪ್ಪು ತನ್ನ ಆರೋಗ್ಯಕಾರಿ ಗುಣಗಳಿಂದ ಜನಪ್ರಿಯತೆ ಪಡೆದಿದೆ. ವಿಶೇಷವಾಗಿ, ಮೆಂತ್ಯ ಸೊಪ್ಪಿನ ಆಹಾರಗಳು ದೇಹಕ್ಕೂ ಒಳ್ಳೆಯದು. ಆರೋಗ್ಯಸ್ನೇಹಿ ಆಹಾರವನ್ನು ಬಯಸುವವರ ಅಚ್ಚುಮೆಚ್ಚಿನ ಆಯ್ಕೆಯೂ ಇದಾಗಿದೆ. ಇಂದು ನಾವು ರುಚಿಕರವಾಗಿ ಮೆಂತ್ಯ ಸೊಪ್ಪಿನ ಕಡುಬು ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಕಡುಬು ಎಲ್ಲರಿಗೂ ಇಷ್ಟ. ಕಡುಬು ಎನ್ನುವುದು ಬೇಯಿಸಿದ ಅಕ್ಕಿಯ ಉಂಡೆ. ಆದರೆ, ಇದನ್ನು ವಿವಿಧ ವಿಧಾನಗಳ ಮೂಲಕ ರುಚಿಕರವಾಗಿ, ವೈವಿದ್ಯವಾಗಿ ಮಾಡಬಹುದು. ಅಕ್ಕಿ ಕಡುಬಿಗೆ ತೆಂಗಿನಕಾಯಿ ಹಾಕಿ ಮಾಡಿದರೆ ರುಚಿಕರವಾಗಿರುತ್ತದೆ. ಏನೂ ಹಾಕದೆ ಕೇವಲ ಒಗ್ಗರಣೆ ಹಾಕಿ ರಚಿಸಿದ ಕಡುಬು ಕೂಡ ಉತ್ತಮವಾಗಿರುತ್ತದೆ. ಆದರೆ, ಮೆಂತ್ಯ ಸೊಪ್ಪು ಹಾಕಿದರೆ ಕಡುಬು ಹೇಗಿರುತ್ತದೆ? ಎಂದು ತಿಳಿದಿದೆಯೇ? ಮೆಂತ್ಯ ಸೊಪ್ಪು ಕಹಿ ಇರುತ್ತದೆ, ಹೀಗಾಗಿ ಕಡಬು ಕೂಡ ಕಹಿಯಾಗಿರಬಹುದು ಎಂದುಕೊಂಡರೆ ತಪ್ಪಾಗುತ್ತದೆ. ಮೆಂತ್ಯ ಸೊಪ್ಪು ಕಡುಬು ತುಂಬಾ ಟೇಸ್ಟಿ.
ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ. ಇದರ ಸಾರು, ಸಾಂಬಾರು, ಪಲ್ಯ ಕೂಡ ಮಾಡಬಹುದು. ಇದರಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂಗಳಿವೆ. ಇದು ಚರ್ಮ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಲವರು ಮೆಂತ್ಯ ಸೊಪ್ಪು ಕಹಿ ಎಂದು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದಕಾರಣ ಮೆಂತ್ಯ ಸೊಪ್ಪು ಎಂದಾಕ್ಷಣ ದೂರ ಓಡಿ ಹೋಗುವವರಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ. ಒಂದು ಸಾರಿ ತಿಂದರೆ ಮತ್ತೆ ಮತ್ತೆ ಮಾಡಿಕೊಂಡು ಸವಿಯುತ್ತೀರಿ. ಈ ದೀಪಾವಳಿ ಹಬ್ಬದ ಸಮಯದಲ್ಲಿಯೂ ಮೆಂತ್ಯದ ಕಡುಬು ಮಾಡಿ ಸವಿಯಬಹುದು.
ಮೆಂತ್ಯ ಕಡುಬು ಮಾಡುವುದು ಹೇಗೆ?
ಮೊದಲಿಗೆ ಮೆಂತ್ಯ ಕಡುಬು ಮಾಡಲು ಯಾವೆಲ್ಲ ಸಾಮಾಗ್ರಿಗಳು ಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು
- 2 ದೊಡ್ಡ ಕಪ್ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ
- 2 ಟೇಬಲ್ ಸ್ಪೂನ್ ಓಂಕಾಳು
- 2 ಟೇಬಲ್ ಸ್ಪೂನ್ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು,
- ಸಣ್ಣದಾಗಿ ಹೆಚ್ಚಿದ ಈರುಳ್ಳಿ 1/2 ಕಪ್
- ½ ಕಪ್ ಮೆಂತ್ಯಸೊಪ್ಪು
- 2 ಹಸಿಮೆಣಸಿನಕಾಯಿ
- ಒಗ್ಗರಣೆಗೆ-ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ,ಅರಿಶಿಣ, ಕರಿಬೇವು ಇರಲಿ.
ಮೆಂತ್ಯಸೊಪ್ಪಿನ ಕಡುಬು ತಯಾರಿಸುವ ವಿಧಾನ
ಮೇಲೆ ತಿಳಿಸಿದ ರೆಸಿಪಿ ಸಾಮಾಗ್ರಿ ಸಿದ್ಧವಾಗಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ ಓಂಕಾಳು, 2 ಟೇಬಲ್ ಸ್ಪೂನ್ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಣ್ಣೀರು ಹಾಕಿಕೊಂಡು ಚೆನ್ನಾಗಿ ಮೆದುವಾಗುವವರೆಗೂ ಕಳೆಸಿ.
ಅದರ ಮೇಲೆ ಎಣ್ಣೆ ಸವರಿ ನಂತರ ಕೈಗೂ ಸ್ವಲ್ಪ ಎಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಅದನ್ನು ಎಣ್ಣೆ ಸವರಿದ ಪಾತ್ರೆಯೊಂದರಲ್ಲಿ ಹಾಕಿಕೊಳ್ಳಿ. ಅದನ್ನು ಕುಕ್ಕರಿನಲ್ಲಿಟ್ಟು 2 ವಿಷಲ್ ಹೊಡಿಸಿ ಅಥವಾ ಇಡ್ಲಿ ಪಾತ್ರೆಯಲ್ಲಾದರೆ 25-30 ನಿಮಿಷ ಬೇಯಿಸಿರಿ.
ಇನ್ನೊಂದು ಕಡೆ ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು ಹಾಕಿ, ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಮೆಂತ್ಯಸೊಪ್ಪು, ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.( ನೀರು ಹಾಕಲೇಬಾರದು) ಮುಕ್ಕಾಲು ಬೆಂದ ಮೇಲೆ ಅದಕ್ಕೆ ಬೇಯಿಸಿದ ಹಿಟ್ಟಿನ ಉಂಡೆಗಳನ್ನು ಬಿಡಿ ಬಿಡಿಯಾಗಿ ಬಿಡಿಸಿ ಹಾಕಿ ಚೆನ್ನಾಗಿ ಕೈಯಾಡಿಸಿರಿ. ಸ್ವಲ್ಪ ಹೊತ್ತು ಮುಚ್ಚಿಡಿ. ನಂತರ ಆಫ್ ಮಾಡಿ.
ಈಗ ಮೆಂತೆ ಕಡುಬು ತಿನ್ನಲು ರೆಡಿ. ಇದನ್ನು ಬಿಸಿ ಬಿಸಿಯಾಗಿ ತಿಂದರೆ ಚೆನ್ನಾಗಿರುತ್ತದೆ. ಗಟ್ಟಿ ಮೊಸರಿನ ಜೊತೆಗೂ ತಿಂದರೆ ತುಂಬಾ ರುಚಿಯಾಗಿರುತ್ತದೆ.
ವಿಭಾಗ