ಸಬ್ಬಸಿಗೆ ಸೊಪ್ಪಿನ ಪಲಾವ್ ರೆಸಿಪಿ ಇಲ್ಲಿದೆ; ಬೆಳಗ್ಗಿನ ಉಪಹಾರಕ್ಕೂ ಆಯ್ತು, ಮಧ್ಯಾಹ್ನದ ಊಟಕ್ಕೂ ಆಯ್ತು
Oct 06, 2023 03:28 PM IST
ಸಬ್ಬಸಿಗೆ ಸೊಪ್ಪಿನ ಪಲಾವ್ (twitter/@DrBpatel)
- Sabbasige Soppu Palav Recipe in Kannada: ರುಚಿಕರವಾದ ಸಬ್ಬಸಿಗೆ ಸೊಪ್ಪಿನ ಪಲಾವ್ ಅಥವಾ ಸಬ್ಬಸಿಗೆ ಸೊಪ್ಪಿನ ಬಾತ್ ತಯಾರಿಸುವ ಸರಳ ವಿಧಾನ ಇಲ್ಲಿದೆ..
ಪಲಾವ್ ಅಥವಾ ಪುಲಾವ್, ಭಾರತೀಯ ಮನೆಗಳಲ್ಲಿ ಮಾಡುವ ಜನಪ್ರಿಯ ತಿನಿಸು. ಇದನ್ನು ಬೆಳಗ್ಗಿನ ಉಪಹಾರಕ್ಕೆ, ಕೆಲವರು ಮಧ್ಯಾಹ್ನದ ಊಟಕ್ಕೂ ತಯಾರಿಸುತ್ತಾರೆ. ಪಲಾವ್ನಲ್ಲಿ ಸಾಕಷ್ಟು ಬಗೆಗಳಿವೆ. ಬೀನ್ಸ್-ಕ್ಯಾರೆಟ್-ಆಲೂ ಪಲಾವ್, ಮೆಂತೆ ಸೊಪ್ಪಿನ ಪಲಾವ್, ಸಬ್ಬಸಿಗೆ ಸೊಪ್ಪಿನ ಪಲಾವ್, ಪಾಲಕ್ ಸೊಪ್ಪಿನ ಪಲಾವ್ ಹೀಗೆ ನಾನಾ ರೀತಿಯಲ್ಲಿ ಪಲಾವ್ ಮಾಡಲಾಗುತ್ತದೆ. ನಾವಿಲ್ಲಿ ನಿಮಗೆ ಸಬ್ಬಸಿಗೆ ಸೊಪ್ಪಿನ ಪಲಾವ್ ಮಾಡುವ ಸುಲಭ ವಿಧಾನ ಹೇಳುತ್ತಿದ್ದೇವೆ.. ಇದನ್ನು ಸಬ್ಬಸಿಗೆ ಸೊಪ್ಪಿನ ಬಾತ್ ಎಂದೂ ಕರೆಯಲಾಗುತ್ತದೆ.
ಸಬ್ಬಸಿಗೆ ಸೊಪ್ಪಿನ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
ಸಬ್ಬಸಿಗೆ ಸೊಪ್ಪು
ತೆಂಗಿನ ಕಾಯಿ
ಚಕ್ಕೆ-ಲವಂಗ
ಕಾಳು ಮೆಣಸಿನ ಪುಡಿ
ಶುಂಠಿ- ಬೆಳ್ಳುಳ್ಳಿ
ಎಣ್ಣೆ-ತುಪ್ಪ
ಗೋಡಂಬಿ
ಜೀರಿಗೆ
ಪಲಾವ್/ಬಿರಿಯಾನಿ ಎಲೆ
ಈರುಳ್ಳಿ
ಅಕ್ಕಿ
ಹಸಿ ಬಟಾಣಿ
ಉಪ್ಪು
ನಿಂಬೆ ಹಣ್ಣು
ನೀರು
ಸಬ್ಬಸಿಗೆ ಸೊಪ್ಪಿನ ಪಲಾವ್ ಮಾಡುವ ವಿಧಾನ
ಸಬ್ಬಸ್ಸಿಗೆ ಸೊಪ್ಪಿನ ದಂಟನ್ನು ತಗೆದು ಹಾಕಿ. ಸೊಪನ್ನು ಮಾತ್ರ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಮಿಕ್ಸಿ ಜಾರ್ಗೆ ಹೆಚ್ಚಿಟ್ಟುಕೊಂಡ ಸೊಪ್ಪಿನಲ್ಲಿ ಅರ್ಧದಷ್ಟು ಹಾಕಿ, ಅದಕ್ಕೆ ಕಾಲು ಕಪ್ ತೆಂಗಿನ ತುರಿ, 2 ಲವಂಗ, ಚಕ್ಕೆ, ಗೋಡಂಬಿ, 4 ಹಸಿ ಮೆಣಸು, ಕಾಲು ಟೀಸ್ಪೂನ್ ಕಾಳು ಮೆಣಸಿನ ಪುಡಿ, ಸ್ವಲ್ಪವೇ ಸ್ವಲ್ಪ ಪ್ರಮಾಣದಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತೆಂಗಿನ ಕಾಯಿ ಹಾಕದಿದ್ದರೂ ನಡೆಯುತ್ತದೆ.
ಈಗ ಕುಕ್ಕರ್ ಅನ್ನು ಸ್ಟವ್ ಮೇಲೆ ಇಟ್ಟು ಅದಕ್ಕೆ 2 ಚಮಚ ತುಪ್ಪ ಹಾಗೂ 1 ಚಮಚ ವಳ್ಳೆಣ್ಣೆ ಹಾಕಿ ಅದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ, ಪಲಾವ್/ಬಿರಿಯಾನಿ ಎಲೆ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. (ತುಪ್ಪ ಇಲ್ಲದಿದ್ದಲ್ಲಿ ಅಡುಗೆ ಎಣ್ಣೆಯೇ ಹಾಕಿ ಸಾಕು). ಈರುಳ್ಳಿ ಫ್ರೈ ಆದಮೇಲೆ ರುಬ್ಬಿಟ್ಟಿರುವ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 1 ನಿಮಿಷದ ಬಳಿಕ ಹೆಚ್ಚಿಟ್ಟುಕೊಂಡಿದ್ದರಲ್ಲಿ ಅರ್ಧದಷ್ಟು ಸೊಪ್ಪು ಉಳಿದಿತ್ತು ಅಲ್ವಾ ಅದನ್ನು ಹಾಕಿ. ಇದನ್ನು ಕೂಡ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ದೊಡ್ಡ ಲೋಟದಲ್ಲಿ ಒಂದು ಲೋಟ ಅಕ್ಕಿಯನ್ನು ತೊಳೆದು ಹಾಕಿ ಒಂದು ನಿಮಿಷದವರೆಗೆ ಕಲಸಿ. ಎಷ್ಟು ಪ್ರಮಾಣದ ಅಕ್ಕಿ ತೆಗೆದುಕೊಂಡಿದ್ದಾರೆ ಅದರ ಡಬಲ್ ಅಂದರೆ 2 ಲೋಟ ನೀರು ಹಾಕಿ. ನಂತರ ಒಂದು ಕಪ್ ಹಸಿ ಬಟಾಣಿ ಹಾಕಿ. ಹಸಿ ಬಟಾಳಿ ಇಲ್ಲದಿದ್ದಲ್ಲಿ ರಾತ್ರಿಯೇ ಬಟಾಣಿ ನೆನೆಸಿಟ್ಟಿದ್ದರೆ ಒಳಿತು, ಅದನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ನಿಂಬೆ ಹಣ್ಣನ್ನು ಹಿಂಡಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ನಿಮಿಷ ಕುದಿಸಿ ಮತ್ತೆ ಮಿಕ್ಸ್ ಮಾಡಿ ಕುಕ್ಕರದ ಮುಚ್ಚುಳ ಮುಚ್ಚಿ ವಿಸಲ್ ಹೊಡೆಸಿ ಸ್ವಲ್ಪ ಸಮಯದ ಬಳಿಕ ಮುಚ್ಚುಳ ತೆಗೆದು ಚೆನ್ನಾಗಿ ಕಲಸಿ. ಈಗ ಸಬ್ಬಸಿಗೆ ಸೊಪ್ಪಿನ ಪಲಾವ್ ಸಿದ್ಧ.
ವಿಭಾಗ